ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕ ಸಂತೃಪ್ತಿಯೇ ಸೇವೆಗೆ ಸಿಗುವ ಅತ್ಯುತ್ತಮ ಅಂಕ

ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಪೊಲೀಸ್‌ ಧ್ವಜ ದಿನಾಚರಣೆ
Last Updated 3 ಏಪ್ರಿಲ್ 2018, 12:05 IST
ಅಕ್ಷರ ಗಾತ್ರ

ಹಾವೇರಿ: ‘ಸಾರ್ವಜನಿಕರ ಸಂತೃಪ್ತಿಯೇ ಪೊಲೀಸರ ಕೆಲಸಕ್ಕೆ ಸಿಗುವ ಮೌಲ್ಯಮಾಪನದ ಅತ್ಯುತ್ತಮ ಅಂಕ ಎಂದು ನಿವೃತ್ತ ಸಬ್‌ ಇನ್‌ಸ್ಪೆಕ್ಟರ್ ಪಿ.ಬಿ.ಹಡಪದ ಹೇಳಿದರು.ಪೊಲೀಸ್‌ ಧ್ವಜ ದಿನಾಚರಣೆ ಅಂಗವಾಗಿ ಸಮೀಪದ ಕೆರಿಮತ್ತಿಹಳ್ಳಿ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಪಥಸಂಚಲನದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.ಸಾರ್ವಜನಿಕ ಸೇವೆಯಲ್ಲಿ ಜನಾಭಿಪ್ರಾಯವೇ ಮುಖ್ಯವಾಗುತ್ತದೆ. ಅದಕ್ಕಾಗಿ ಸಾರ್ವಜನಿಕರ ಸಲಹೆ–ಸೂಚನೆ, ಟೀಕೆ–ಟಿಪ್ಪಣಿಗಳನ್ನು ಸ್ವಾಗತಿಸಬೇಕು. ಅದರಲ್ಲಿ ಉತ್ತಮ ಅಂಶಗಳನ್ನು ಅಳವಡಿಸಿಕೊಂಡು ಪ್ರಬುದ್ಧರಾಗಬೇಕು ಎಂದು ಪೊಲೀಸರಿಗೆ ಕಿವಿಮಾತು ಹೇಳಿದರು.

ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಎಂ.ವಿ. ಮಾತನಾಡಿ, ಸೈನಿಕರು ಹೊರಗಿನ ಶತ್ರುಗಳಿಂದ ದೇಶ ರಕ್ಷಣೆ ಮಾಡಿದರೆ, ಆಂತರಿಕ ಶತ್ರುಗಳಿಂದ ಪೊಲೀಸರು ರಕ್ಷಣೆ ಮಾಡುತ್ತಿದ್ದಾರೆ ಎಂದರು.ತಂತ್ರಜ್ಞಾನ ಬೆಳವಣಿಗೆ ಜೊತೆಗೆ ಅಪರಾಧಗಳು ಹೆಚ್ಚಾಗುತ್ತಿದ್ದು, ಆಧುನಿಕತೆಗೆ ತಕ್ಕಂತೆ ಪೊಲೀಸ್‌ ಕಾರ್ಯವೈಖರಿಯೂ ಬದಲಾದರೆ, ಎಲ್ಲ ರೀತಿಯ ಅಪರಾಧಗಳನ್ನು ಸಮರ್ಥವಾಗಿ ತಡೆಯಬಹುದು ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಂ ಮಾತನಾಡಿ, ಸಾರ್ವಜನಿಕರ ಜೀವ, ಆಸ್ತಿಪಾಸ್ತಿ ರಕ್ಷಣೆಗಾಗಿ ಶ್ರಮಿಸುವ ಪೊಲೀಸ್‌ ಸಿಬ್ಬಂದಿ ನಿವೃತ್ತಿ ಜೀವನ ಉತ್ತಮವಾಗಿರಲಿ ಎಂಬ ಉದ್ದೇಶದಿಂದ ‘ಪೊಲೀಸ್ ಕಲ್ಯಾಣ ನಿಧಿ’ಯನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದರು.ರಾಜ್ಯ ಪೊಲೀಸ್ ಧ್ವಜ ದಿನಾಚರಣೆಯನ್ನು ಪ್ರತಿ ವರ್ಷ ಏಪ್ರಿಲ್ 2ರಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಆಚರಿಸಲಾಗುತ್ತಿದ್ದು, ಇದನ್ನು ಪೊಲೀಸ್ ಅಧಿಕಾರಿಗಳ ಕಲ್ಯಾಣ ದಿನ­ವನ್ನಾಗಿಯೂ ಆಚರಿಸಲಾಗುತ್ತಿದೆ ಎಂದರು.

ಸನ್ಮಾನ: ನಿವೃತ್ತ ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್ ಪಿ.ಬಿ.ಹಡಪದ, ಎಸ್‌.ಜಿ.ದೊಡ್ಡಮನಿ, ಎಸ್‌.ಎನ್.ಸೂರಣಗಿ, ಎಸ್‌.ಎಫ್‌.ಇಟ್ನಾಳ, ದ್ವಿತೀಯ ದರ್ಜೆ ಸಹಾಯಕರಾಗಿದ್ದ ಜಿ.ಎಸ್‌.ಕೋಲ್ಹಾರ ಅವರನ್ನು ಸನ್ಮಾನಿಸಲಾಯಿತು.

ಪಥಸಂಚಲನ: ಪರೇಡ್‌ ಕಮಾಂಡರ್‌ ಆರ್‌ಪಿಐ ಮಾರುತಿ ಹೆಗಡೆ ನೇತೃತ್ವದಲ್ಲಿ ಆಕರ್ಷಕ ಪಥಸಂಚಲನ ನಡೆಯಿತು.ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಎರಡು ತುಕುಡಿಗಳ ನೇತೃತ್ವವನ್ನು ಆರ್‌ಎಸ್‌ಐ ಶಿವಕಾಂತ ಮುರ್ಕವಾವಿ ಹಾಗೂ ಆರ್‌ಎಸ್‌ಐ ಪ್ರಕಾಶ ಕುದರಿಹಾಳ, ಹಾವೇರಿ ನಾಗರಿಕ ಪೊಲೀಸ್‌ ತಂಡದ ನೇತೃತ್ವವನ್ನು ಪಿಎಸ್‌ಐ ಪ್ರಶಾಂತ, ಶಿಗ್ಗಾವಿ ಪೊಲೀಸ್‌ ತಂಡದ ನೇತೃತ್ವವನ್ನು ರಮೇಶ ದೊಡ್ಡಮನಿ, ಮಹಿಳಾ ಪೊಲೀಸ್‌ ತಂಡದ ನೇತೃತ್ವವನ್ನು ನಗರ ಸಂಚಾರ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಪಲ್ಲವಿ, ರಾಣೆಬೆನ್ನೂರು ಪೊಲೀಸ್‌ ತಂಡದ ನೇತೃತ್ವವನ್ನು ಸಬ್‌ಇನ್‌ಸ್ಪೆಕ್ಟರ್ ಸಿದ್ದಾರೂಢ ಬಡಿಗೇರ ವಹಿಸಿದ್ದರು.

ಪ್ರತಿಜ್ಞಾವಿಧಿ ಬೋಧನೆ: ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಟಿ. ಶಿಲ್ಪಾನಾಗ್‌ ಅವರು ಕಡ್ಡಾಯ ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು. ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಪ್ಪ ನಾಯ್ಕ ಇದ್ದರು.

**

ವ್ಯಕ್ತಿತ್ವದಲ್ಲಿ ಸಜ್ಜನಿಕೆ–ಸೌಜನ್ಯ, ಕರ್ತವ್ಯದಲ್ಲಿ ಶಿಸ್ತು–ಬದ್ಧತೆ ಹಾಗೂ ಕಾರ್ಯವೈಖರಿಯಲ್ಲಿ ಪ್ರಾಮಾಣಿಕತೆ–ಪಾರದರ್ಶಕತೆ ಮುಖ್ಯವಾದರೆ ಉತ್ತಮ ಸಾಧನೆ ಮಾಡಬಹುದು – ಪಿ.ಬಿ.ಹಡಪದ,ನಿವೃತ್ತ  ಸಬ್‌ಇನ್‌ಸ್ಪೆಕ್ಟರ್.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT