ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರತಾ ಕೊಠಡಿ, ಮತ ಎಣಿಕೆ ಕೇಂದ್ರ ಪರಿಶೀಲನೆ

ವಿಧಾನಸಭಾ ಚುನಾವಣೆ: ಮತಯಂತ್ರಗಳ ರಕ್ಷಣೆಗೆ ಆದ್ಯತೆ, ಪರ್ಯಾಯ ಕೊಠಡಿ ಆಯ್ಕೆಗೆ ಜಿಲ್ಲಾಧಿಕಾರಿ ಸೂಚನೆ
Last Updated 3 ಏಪ್ರಿಲ್ 2018, 12:43 IST
ಅಕ್ಷರ ಗಾತ್ರ

ಕೋಲಾರ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಮತಪೆಟ್ಟಿಗೆಗಳ ಭದ್ರತಾ ಕೊಠಡಿ (ಸ್ಟ್ರಾಂಗ್‌ ರೂಂ) ಹಾಗೂ ಮತ ಎಣಿಕೆ ಕೇಂದ್ರವನ್ನು ಜಿಲ್ಲಾಧಿಕಾರಿ ಜಿ.ಸತ್ಯವತಿ ಸೋಮವಾರ ಪರಿಶೀಲಿಸಿದರು.ಮತ ಎಣಿಕೆ ಕೇಂದ್ರಗಳಲ್ಲಿನ ಸ್ಥಳಾವಕಾಶ ಹಾಗೂ ಭದ್ರತಾ ಕೊಠಡಿಯಲ್ಲಿನ ಸುರಕ್ಷತೆ ಬಗ್ಗೆ ಪರಿಶೀಲನೆ ಮಾಡಿದ ಜಿಲ್ಲಾಧಿಕಾರಿಯು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಕಾಲೇಜಿನ ವಿವಿಧ ಬ್ಲಾಕ್‌ಗಳಲ್ಲಿ ಗುರುತಿಸಿರುವ ಕೆಲ ಕೊಠಡಿಗಳಲ್ಲಿ ಮತ ಎಣಿಕೆಗೆ ಸ್ಥಳಾವಕಾಶ ಕಡಿಮೆ ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಯು ಬೇರೆ ಕೊಠಡಿಗಳನ್ನು ಆಯ್ಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.‘ಪ್ರತಿ ಸಾರ್ವತ್ರಿಕ ಚುನಾವಣೆಯಲ್ಲೂ ಈ ಕಾಲೇಜಿನಲ್ಲಿ ಮತ ಭದ್ರತಾ ಕೊಠಡಿ ಮತ್ತು ಮತ ಎಣಿಕೆ ಕೇಂದ್ರ ತೆರೆಯಲಾಗಿದೆ. ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಸಂಗ್ರಹಕ್ಕೆ ಹಾಗೂ ಮತ ಎಣಿಕೆಗೆ ಒಂದೇ ಕಡೆ ಹೆಚ್ಚಿನ ಸ್ಥಳಾವಕಾಶ ಇರುವ ಬ್ಲಾಕ್‌ಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಸತ್ಯವತಿ ತಿಳಿಸಿದರು.

‘ಸುರಕ್ಷತೆ ದೃಷ್ಠಿಯಿಂದ ಈ ಕಾಲೇಜು ಸೂಕ್ತವಾಗಿದೆ. ಸೌಲಭ್ಯಗಳ ಕೊರತೆ ಇದ್ದಲ್ಲಿ ಸರಿಪಡಿಸುವಂತೆ ಅಧಿಕಾರಿಗಳು ಸೂಚಿಸ ಲಾಗಿದೆ. ಚುನಾವಣಾ ನೀತಿಸಂಹಿತೆಯ ಕಟ್ಟುನಿಟ್ಟಿನ ಅನುಷ್ಠಾನಕ್ಕಾಗಿ ಜಿಲ್ಲೆಯ 20 ಕಡೆ ಚೆಕ್‌ಪೋಸ್ಟ್‌ ತೆರೆಯಲಾಗಿದೆ. ಜತೆಗೆ ಮಾದರಿ ನೀತಿಸಂಹಿತೆ ತಂಡಗಳನ್ನು ರಚಿಸಲಾಗಿದೆ’ ಎಂದು ಅವರು ವಿವರಿಸಿದರು.

‘28 ಸಂಚಾರ ದಳಕ್ಕೆ 48 ತಂಡಗಳನ್ನು ರಚಿಸಲಾಗಿದೆ. ತಂಡಗಳು ಎರಡು ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತವೆ. ರಾಷ್ಟ್ರೀಯ ಹೆದ್ದಾರಿ ಯಲ್ಲಿ ಹೆಚ್ಚು ಬ್ಯಾರಿಕೇಡ್‌ಗಳ ಅಗತ್ಯವಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೇಳಿದ್ದಾರೆ. ಚುನಾವಣಾ ನಿಯಂತ್ರಣ ಕೊಠಡಿಯ ಸಹಾಯವಾಣಿ ಸಂಖ್ಯೆಗೆ ಸಾಕಷ್ಟು ದೂರು ಬರುತ್ತಿವೆ. ಆ ದೂರು ಆಧರಿಸಿ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಈ ದೂರುಗಳಲ್ಲಿ ಕೆಲವು ಸುಳ್ಳೆಂದು ಕಂಡುಬಂದಿದೆ’ ಎಂದು ಮಾಹಿತಿ ನೀಡಿದರು.

ಪ್ರಾಂಶುಪಾಲರಿಗೆ ತರಾಟೆ: ‘ಏನ್ರಿ, ಕಾಲೇಜು ಎಷ್ಟೊಂದು ಗಲೀಜಾಗಿದೆ. ಕಾಲೇಜಿಗೆ ಸಾಕಷ್ಟು ಅನುದಾನ ಬಿಡುಗಡೆಯಾಗಿದ್ದರೂ ಕೊಠಡಿಗಳನ್ನು ಸ್ವಚ್ಛವಾಗಿ ಇಟ್ಟುಕೊಂಡಿಲ್ಲ. ಇಂತಹ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಕೂರುವುದಾದರೂ ಹೇಗೆ?’ ಎಂದು ಜಿಲ್ಲಾಧಿಕಾರಿಯು ಕಾಲೇಜಿನ ಪ್ರಾಂಶುಪಾಲೆ ಮಧುಲತಾ ಮೋಸಸ್ ಅವರನ್ನು ತರಾಟೆಗೆ ತೆಗೆದುಕೊಂಡರು.ಇದಕ್ಕೆ ಪ್ರತಿಕ್ರಿಯಿಸಿದ ಮಧುಲತಾ, ‘ಇದು ಹಳೆಯ ಕಟ್ಟಡ. ಇಲ್ಲಿ ತರಗತಿಗಳು ನಡೆಯುತ್ತಿಲ್ಲ. ಹೀಗಾಗಿ ಕೊಠಡಿಗಳನ್ನು ಸ್ವಚ್ಛಗೊಳಿಸಿಲ್ಲ. ಕಾಲೇಜಿನ ಹೊಸ ಕಟ್ಟಡದ ಕೊಠಡಿಗಳಲ್ಲಿ ತರಗತಿಗಳು ನಡೆಯುತ್ತಿವೆ’ ಎಂದರು.

ಪ್ರಾಂಶುಪಾಲರ ಹೇಳಿಕೆಯಿಂದ ಮತ್ತಷ್ಟು ಅಸಮಾಧಾನಗೊಂಡ ಜಿಲ್ಲಾಧಿಕಾರಿ, ‘ಹೊಸ ಕಟ್ಟಡ ಸಹ ಇದೇ ರೀತಿ ಇದೆ. ನಾನು ನೋಡಿದ್ದೇನೆ, ಚುನಾವಣಾ ವೀಕ್ಷಕರು ಕಾಲೇಜಿನ ಕೊಠಡಿಗಳನ್ನು ನೋಡಿದರೆ ನಮ್ಮ ಮರ್ಯಾದೆ ಹೋಗುತ್ತದೆ. ಶೀಘ್ರವೇ ಕೊಠಡಿಗಳನ್ನು ಸ್ವಚ್ಛ ಮಾಡಿಸಿ’ ಎಂದು ಎಚ್ಚರಿಕೆ ನೀಡಿದರು.ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹಿಣಿ ಕಟೋಚ್‌ ಸೆಪಟ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT