ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗೊಬ್ಬ ಪರಿಸರ ಪ್ರೇಮಿ

Last Updated 3 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಮಕ್ಕಳನ್ನು ಜೋಪಾನವಾಗಿ ಬೆಳೆಸುವ ಅಪ್ಪ–ಅಮ್ಮ, ತಮ್ಮ ಇಳಿವಯಸ್ಸಿನಲ್ಲಿ ಅವರಿಂದ ಆರೈಕೆ ನಿರೀಕ್ಷಿಸುವುದು ಸಹಜ. ಆದರೆ ಇಲ್ಲೊಬ್ಬರು ನಿತ್ಯ ಒಂದು ಹಣ್ಣಿನಗಿಡ ನೆಟ್ಟು ಅದರಿಂದ ಸಿಗುವ ಫಲ ಜೀವಿಗಳಿಗೆ ಆಹಾರವಾಗಲೆಂದು ಹಾಗೂ ಪರಿಸರದಲ್ಲಿನ ವಾಯುಮಾಲಿನ್ಯ, ಉಷ್ಣಾಂಶ ಕಡಿಮೆಯಾಗಲೆಂದು ಬಯಸುತ್ತಿದ್ದಾರೆ.

ಎಚ್‌ಎಎಲ್‌ನ (ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌) ಹೆಲಿಕಾಪ್ಟರ್ ಫೈನಲ್ ಅಸೆಂಬ್ಲಿ ವಿಭಾಗದಲ್ಲಿ ಟೆಕ್ನೀಷಿಯನ್ ಆಗಿರುವ ಎಚ್‌.ಎನ್‌. ರಮೇಶ್‌ ಅವರು ಪರಿಸರ ಉಳಿಸಲೆಂದು ತಮ್ಮ ಕೈಲಾದಮಟ್ಟಿಗೆ ಶ್ರಮಿಸುತ್ತಿದ್ದಾರೆ. ಆನೇಕಲ್‌ ತಾಲ್ಲೂಕಿನ ಹುಸ್ಕೂರು ಮೂಲದ ಅವರಿಗೆ ಐಟಿಐ ವ್ಯಾಸಂಗದ ನಂತರ ಎಚ್‌ಎಎಲ್‌ನಲ್ಲಿ ಕೆಲಸ ಸಿಕ್ಕಿತು. ಐದು ವರ್ಷಗಳಿಂದ ಹಣ್ಣಿನ ಗಿಡಗಳನ್ನು ಬೆಳೆಸುತ್ತಿದ್ದಾರೆ.

‘ದಿನಕ್ಕೊಂದು ಗಿಡ ನೆಡಬೇಕು ಎನ್ನುವುದು ನನ್ನ ಆಸೆ. ಎಷ್ಟೇ ಕೆಲಸವಿದ್ದರೂ ಸ್ವಲ್ಪ ಬಿಡುವು ಮಾಡಿಕೊಂಡು ಗಿಡ ನೆಡುತ್ತೇನೆ. ಸಾಲುಮರದ ತಿಮ್ಮಕ್ಕ ನನಗೆ ಆದರ್ಶ’ ಎನ್ನುತ್ತಾರೆ ರಮೇಶ್.

‘ನಮ್ಮದು ರೈತ ಕುಟುಂಬ. ಶಾಲೆಗೆ ಹೋಗುವಾಗ ರಸ್ತೆ ಬದಿಯಲ್ಲಿರುವ ಸಣ್ಣ ಗಿಡಗಳನ್ನು ರಕ್ಷಿಸಲು ಮುಳ್ಳಿನ ಪೊದೆಗಳನ್ನು ಕಟ್ಟುತ್ತಿದ್ದೆ. ದೊಡ್ಡವನಾದ ನಂತರ ಅದೇ ಕಾಳಜಿ ದೃಢವಾಗಿ ಬೆಳೆಯಿತು. ನನ್ನಿಂದ ಸಮಾಜಕ್ಕೆ ಏನಾದರೂ ಉಪಯೋಗವಾಗಲಿ ಎಂದು ಈ ಕೆಲಸ ಮಾಡುತ್ತಿದ್ದೇನೆ. ಒಂದು ಲಕ್ಷಕ್ಕೂ ಅಧಿಕ ಗಿಡಗಳನ್ನು ನೆಡಬೇಕೆನ್ನುವ ಆಸೆಯಿದೆ. ದೇವರು ಜೀವನವನ್ನು ಹೀಗೆ ಅಂದವಾಗಿಟ್ಟರೆ ಅದನ್ನು ಪೂರೈಸುತ್ತೇನೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಎಚ್‌ಎಎಲ್‌ ಸುತ್ತ ಸೀತಾಫಲ, ಸಪೋಟ, ಮಾವು, ಪರಂಗಿ, ನಿಂಬೆ, ಹುಣಸೆ, ಸೀಬೆ, ಬಾಳೆ ಹೀಗೆ ಹಲವು ಜಾತಿಯ ಸುಮಾರು ಎರಡು ಸಾವಿರ ಗಿಡಗಳನ್ನು ನೆಟ್ಟಿದ್ದೇನೆ. ಅನೇಕ ಗಿಡಗಳು ಈಗ ಮರಗಳಾಗಿ ಫಲ ನೀಡುತ್ತಿವೆ. ಅಕ್ಕಪಕ್ಕದ ಮನೆಯವರಿಗೆ, ಸ್ನೇಹಿತರಿಗೆ ಗಿಡಗಳನ್ನು ನೀಡುತ್ತಿರುತ್ತೇನೆ. ತೆಂಗು, ಸೀಬೆ, ಮಾವಿನಂಥ ಗಿಡಗಳನ್ನು ಜನರು ಉಳಿಸುತ್ತಿಲ್ಲ. ಶನಿವಾರ ಮತ್ತು ಭಾನುವಾರ ಕಚೇರಿಗೆ ರಜೆ. ಒಂದು ವಾರಕ್ಕೆ ಕನಿಷ್ಠ ಮೂರು ಗಿಡ ನೆಡುತ್ತೇನೆ’ ಎಂದು ಖುಷಿಯಿಂದ ಮಾತನಾಡುತ್ತಾರೆ.

‘ನನ್ನ ಪ್ರಕಾರ ಪರಿಸರ ಸಂರಕ್ಷಣೆ ಎನ್ನುವುದು ಬಾಳುವ ರೀತಿ. ಅದು ಕೇವಲ ಭಾಷಣದ ವಸ್ತುವಲ್ಲ. ನಾನು ಕಚೇರಿಗೆ ಹೋಗಲು ಬೈಕ್‌, ಕಾರು ವಾಹನ ಬಳಸುತ್ತಿಲ್ಲ. ಸಾರ್ವಜನಿಕ ವಾಹನವನ್ನೇ ಬಳಸುತ್ತೇನೆ. ಪ್ಲಾಸ್ಟಿಕ್‌ ಕವರ್‌ ಬಳಕೆ ನಿಲ್ಲಿಸಿದ್ದೇನೆ. ಬಸ್‌ನಲ್ಲಿ ಕೊಟ್ಟ ಟಿಕೆಟ್‌ಗಳನ್ನೂ ಎಲ್ಲಿಯೂ ಬಿಸಾಡುವುದಿಲ್ಲ. ಮನೆಗೆ ವಾಪಸ್ ತಂದು ಗೋಣಿಚೀಲಕ್ಕೆ ಹಾಕಿಡುತ್ತೇನೆ. ಅದು ತುಂಬಿದ ನಂತರ ಹೊಲದ ಮಣ್ಣಿಗೆ ಹಾಕುತ್ತೇನೆ. ಕಂಪನಿಯಲ್ಲಿ ಕೊಡುವ ಪೆಟ್ರೋಲ್‌ ಭತ್ಯೆಯನ್ನು ಪಡೆಯುತ್ತಿಲ್ಲ. ಬಟ್ಟೆ, ಶೂ, ಕೈಗಡಿಯಾರಗಳು ನನಗೆ ಅಗತ್ಯವಿಲ್ಲ. ಹೀಗಾಗಿ ಅಂಥ ವಸ್ತುಗಳನ್ನೂ ವಾಪಸ್ ಕೊಟ್ಟುಬಿಡುತ್ತೇನೆ’ ಎಂದು ನುಡಿಯುತ್ತಾರೆ.

ಎಚ್‌ಎಎಲ್‌ ಕರ್ನಾಟಕ ರಾಜ್ಯೋತ್ಸವ, ಊರಿನಲ್ಲಿ ನಾಟಕಗಳು ನಡೆದಾಗ, ಆರ್‌ಎಸ್‌ಎಸ್‌, ಕೆಲ ಸಂಘ–ಸಂಸ್ಥೆಗಳು ನನ್ನ ಪರಿಶ್ರಮವನ್ನು ಗುರುತಿಸಿ ಗೌರವಿಸಿವೆ ಎನ್ನುವುದು ಅವರ ತೃಪ್ತಿಯ ನುಡಿ.‌

**

ಪ್ರತಿ ತಿಂಗಳು ₹5 ಸಾವಿರ ದೇಣಿಗೆ

ಮಹಾತ್ಮ ಗಾಂಧಿ ಅವರಂತೆ ಮೊದಲಿನಿಂದಲೂ ಸರಳ ಬದುಕು ಕಟ್ಟಿಕೊಂಡಿದ್ದರಿಂದ ದೊಡ್ಡ ಆಸೆಗಳು ಮೂಡಿಲ್ಲ. ಮಗ ಎಸ್‌ಎಸ್‌ಎಲ್‌ಸಿ ಓದುತ್ತಿದ್ದಾನೆ. ಮಗಳು ನಾಲ್ಕನೇ ತರಗತಿಯಲ್ಲಿದ್ದಾಳೆ. ಎರಡು ಎಕರೆ ಜಮೀನಿನಲ್ಲಿ ಭತ್ತ, ರಾಗಿ ಬೆಳೆದು, ಅಲ್ಲಲ್ಲಿ ಹಣ್ಣಿನ ಗಿಡ ಬೆಳೆಸಿದ್ದೇನೆ. ದಿನಕ್ಕೆ ಎರಡು ಬಾರಿ ಸಸ್ಯಾಹಾರ ಊಟ ಮಾಡುತ್ತೇನೆ. 2002ರ ನಂತರ ಯಾವುದೇ ಪ್ರೋತ್ಸಾಹ ಧನ ಬೇಡವೆಂದು ಪತ್ರದ ಮೂಲಕ ತಿಳಿಸಿದ್ದೆ. ಆದರೆ ಮೇಲಧಿಕಾರಿಗಳು, ನಿನಗಲ್ಲದಿದ್ದರೂ ಕುಟುಂಬಕ್ಕಾದರೂ ಇದನ್ನು ಪಡೆಯಲೇಬೇಕು ಎಂದು ಒತ್ತಾಯಿಸಿದರು.

ನಾನು ಎರಡೇ ಜತೆ ಬಟ್ಟೆ ಉಪಯೋಗಿಸುವುದು. ಜೀವನದುದ್ದಕ್ಕೂ ಸಣ್ಣಪುಟ್ಟ ಸಮಾಜ ಸೇವೆಗಳಲ್ಲಿ ತೊಡಗಿಸಿ ಕೊಂಡಿದ್ದೇನೆ. ಪ್ರಧಾನ ಮಂತ್ರಿ ಅವರ ರಾಷ್ಟ್ರೀಯ ಪರಿಹಾರ ನಿಧಿಗೆ 2016 ಡಿಸೆಂಬರ್‌ನಿಂದ ಪ್ರತಿ ತಿಂಗಳು ₹5,000 ದೇಣಿಗೆ ನೀಡುತ್ತಿದ್ದೇನೆ.

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅಪರಾಧ, ಸುಲಿಗೆ, ಮೋಸ, ಭ್ರಷ್ಟಾಚಾರ, ಸ್ವಾರ್ಥ, ವಂಚನೆಗಳು ಕಡಿಮೆಯಾಗಿ ಸ್ವಚ್ಛ ಸ್ವಸ್ಥ ಸಮಾಜ ನಿರ್ಮಾಣವಾಗಲಿ ಎನ್ನುವುದು ನನ್ನ ಕನಸು. ಮುಂದಿನ ದಿನಗಳಲ್ಲಿ ಶಾಲೆಗಳಿಗೆ ಭೇಟಿ ನೀಡಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಸಿದ್ಧತೆ ನಡೆಸಿದ್ದೇನೆ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT