ಮಂಗಳವಾರ, ಜೂಲೈ 7, 2020
27 °C

ರಥೋತ್ಸವಕ್ಕೆ ಹುಳಿಮಾವು ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಥೋತ್ಸವಕ್ಕೆ ಹುಳಿಮಾವು ಸಜ್ಜು

ಹುಳಿಮಾವು ಕೋದಂಡರಾಮಸ್ವಾಮಿ ಬ್ರಹ್ಮರಥೋತ್ಸವ ಏ.7ರ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ. ಜಾತ್ರೆಯನ್ನು ಕಣ್ತುಂಬಿಕೊಳ್ಳಲು ರಾಜ್ಯ ಮತ್ತು ನೆರೆರಾಜ್ಯದ ಸಾವಿರಾರು ಭಕ್ತರು ಬರುವುದು ವಾಡಿಕೆ. ಪಲ್ಲಕ್ಕಿ, ಕರಗ ಉತ್ಸವಗಳೂ ಇದೇ ಸಂದರ್ಭ ನಡೆಯಲಿವೆ.

ರಥೋತ್ಸವದಲ್ಲಿ ಭಾಗವಹಿಸುವ ಭಕ್ತರ ಅನುಕೂಲಕ್ಕೆಂದು ಗ್ರಾಮಸ್ಥರು ಹಲವೆಡೆ ಅರವಂಟಿಕೆಗಳನ್ನು ಹಾಕಿ ಅನ್ನದಾನ, ಕುಡಿಯುವ ನೀರು, ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸುತ್ತಾರೆ.

ಧರ್ಮದರ್ಶಿ ಸಿ.ಲಕ್ಷ್ಮೀನಾರಾಯಣ್ ಅವರು ಹೆಲಿಕಾಪ್ಟರ್ ಮೂಲಕ ತೇರಿನ ಮೇಲೆ ಹೂಮಳೆಗರೆಯುತ್ತಾರೆ. ಸಾವಿರಾರು ಭಕ್ತರು ‘ಗೋವಿಂದಾ... ಗೋವಿಂದಾ... ಕೋದಂಡರಾಮ...’ ಎಂದು ಘೋಷಣೆ ಕೂಗಿ ರಥ ಎಳೆದು ಸಂತಸಪಡುತ್ತಾರೆ. ಅರ್ಚಕರಾದ ಯಲ್ದೂರ್ ಶ್ರೀನಿವಾಸಾಚಾರ್ಯ ಮತ್ತು ರಘುನಾಥಚಾರ್ಯರು ಧಾರ್ಮಿಕ ವಿಧಿಗಳನ್ನು ನೆರವೇರಿಸಲಿದ್ದಾರೆ.

ನಂದಿಧ್ವಜ, ಕೀಲುಕುದುರೆ, ಡೊಳ್ಳುಕುಣಿತ, ಬಾಣಬಿರುಸು, ಪಟದ ಕುಣಿತ ಸೇರಿದಂತೆ ಹತ್ತಾರು ಜಾನಪದ ಕಲಾ ತಂಡಗಳು ಪ್ರದರ್ಶನ ನೀಡಲಿವೆ. ಬ್ರಹ್ಮರಥೋತ್ಸವ ಅಂಗವಾಗಿ ರಾತ್ರಿ 8 ಗಂಟೆಯಿಂದ 51 ದೇವರುಗಳ ಮುತ್ತಿನಪಲ್ಲಕ್ಕಿ ಉತ್ಸವ ಏಕಕಾಲಕ್ಕೆ ನಡೆಯಲಿದೆ. ಒಮ್ಮೆಲೆ ಎದುರಾಗುವ ಮುತ್ತಿನಪಲ್ಲಕ್ಕಿಗಳು ಆಕರ್ಷಕ ದೀಪಾಲಂಕಾರಗಳೊಂದಿಗೆ ಕಂಗೊಳಿಸುತ್ತವೆ.

ರಾತ್ರಿ 8 ಗಂಟೆಗೆ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕ ನಡೆಯಲಿದೆ.

ರಾತ್ರಿ 1 ಗಂಟೆಗೆ ಬೆಂಗಳೂರು ಕರಗದ ಮಾದರಿಯಲ್ಲಿಯೇ ರೇಣುಕಾ ಯಲ್ಲಮ್ಮದೇವಿಯ ಹೂವಿನ ಕರಗ ನಡೆಯಲಿದೆ. ದುಂಡುಮಲ್ಲಿಗೆಯಿಂದ ಅಲಂಕರಿಸಿದ ಕರಗವನ್ನು ಸತತ ಆರು ವರ್ಷಗಳಿಂದ ತಿಗಳ ಜನಾಂಗದ ಪಾಪಣ್ಣ ಮತ್ತು ಎಚ್‌.ಪಿ. ಮಂಜುನಾಥ್ ಹೊರುತ್ತಿದ್ದಾರೆ.  ಕೋದಂಡರಾಮಸ್ವಾಮಿ ದೇವಾಲಯದಿಂದ ಪೂಜೆ ಸ್ವೀಕರಿಸಿ ಹುಳಿಮಾವಿನ ಪ್ರಮುಖ ರಸ್ತೆಗಳಲ್ಲಿ ಕರಗ ಸಂಚರಿಸಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.