ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ ಸಿದ್ದರಾಮಯ್ಯ ಪ್ರಚಾರ: ಹತ್ತಿರ ಬಾರದ ಜನತೆ

ನಮ್ಮ ಹಳ್ಳಿಗೆ ಸೌಲಭ್ಯಗಳನ್ನೇ ಕೊಟ್ಟಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು
Last Updated 3 ಏಪ್ರಿಲ್ 2018, 13:20 IST
ಅಕ್ಷರ ಗಾತ್ರ

ಮೈಸೂರು: ನಾಲ್ಕು ದಿನಗಳಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರ ಕೈಗೊಂಡಿದ್ದಾರೆ. ಸೋಮವಾರ ಹಳ್ಳಿಗಳಿಗೆ ಭೇಟಿನೀಡಿದ ಸಮಯದಲ್ಲಿ ಜನರು ಅವರ ಹತ್ತಿರ ಹೆಚ್ಚಾಗಿ ಸುಳಿಯಲಿಲ್ಲ.ಬೆಳಿಗ್ಗೆ 10.30ಕ್ಕೆ ಕೆಲ್ಲಹಳ್ಳಿಗೆ ಭೇಟಿ ಕೊಟ್ಟಾಗ ಜನರು ಸೇರಿರಲಿಲ್ಲ. ಗ್ರಾಮದ ರಸ್ತೆಯಲ್ಲೇ ನಿಂತು ಪ್ರಚಾರ ಭಾಷಣ ಮಾಡಿದರು. ಮುಖ್ಯಮಂತ್ರಿಯ ಸುತ್ತ ಬೆರಳೆಣಿಕೆ ಜನರಷ್ಟೇ ಸೇರಿದ್ದು, ಅವರ ಮುಖದಲ್ಲಿ ಬೇಸರ ಮೂಡಿಸಿತು.

ನಮ್ಮೂರಿಗೆ ಏನು ಮಾಡಿದ್ದೀರಿ?: ‘ಐದು ವರ್ಷ ಮುಖ್ಯಮಂತ್ರಿಯಾಗಿದ್ದೀರಿ. ನಮ್ಮೂರಿಗೆ ಏನು ಮಾಡಿದ್ದೀರಿ? ಇಲ್ಲಿನ ರಸ್ತೆ ಡಾಂಬರು ಕಂಡು 50 ವರ್ಷವಾಯಿತು’ ಎಂದು ದಾರಿಪುರದ ಗ್ರಾಮಸ್ಥರು ಬಹಿರಂಗವಾಗಿ ‍ಪ್ರಶ್ನಿಸಿದ್ದು ಮತ್ತಷ್ಟು ಮುಜುಗರಕ್ಕೆ ಈಡುಮಾಡಿತು. ಪ್ರಶ್ನಿಸುತ್ತಿದ್ದವರನ್ನು ಸುಮ್ಮನಾಗಿಸಲು ಪಕ್ಷದ ಕಾರ್ಯಕರ್ತರು ಮುಂದಾದಾಗ, ಅವರನ್ನು ತಡೆದ ಸಿದ್ದರಾಮಯ್ಯ ‘ಮಾತನಾಡಲಿ ಬಿಡ್ರಿ...’ ಎಂದರು. ‘ದಶಕಗಳ ಕಾಲ ಲಿಂಗಾಯತ, ಒಕ್ಕಲಿಗರೇ ಮುಖ್ಯಮಂತ್ರಿಗಳಾಗಿದ್ದರು. ಕೆಂಪೇಗೌಡ ಜಯಂತಿ ಮಾಡಲಿಲ್ಲ. ಬಸವಣ್ಣನ ಭಾವಚಿತ್ರವನ್ನು ಸರ್ಕಾರಿ ಕಚೇರಿ ಗೋಡೆಗಳಿಗೆ ಹಾಕಿಸಲಿಲ್ಲ. ಈ ಕೆಲಸ ನಾನು ಮಾಡಿದೆ’ ಎಂದು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮಸ್ಥರು, ‘ಆದರೂ, ನಮ್ಮೂರಿಗೆ ರಸ್ತೆಯನ್ನೇ ಮಾಡಿಸಲಿಲ್ವಲ್ಲಾ ಸ್ವಾಮಿ...’ ಎಂದರು. ಬರಡನಪುರಕ್ಕೆ ಬಂದಾಗ ಜನರೇ ಕಾಣಲಿಲ್ಲ. ಮತಯಾಚಿಸದೆ ಮುಖಂಡರೊಬ್ಬರ ಮನೆಗೆ ಭೇಟಿನೀಡಿ ಮುನ್ನಡೆದರು.

ಬಿಕೊ ಎಂದ ಮಾವಿನಹಳ್ಳಿ: ಮಾವಿನಹಳ್ಳಿಗೆ ಸಿದ್ದರಾಮಯ್ಯ ಬಂದಾಗ ಅಕ್ಷರಶಃ ಹಳ್ಳಿ ಜನರಿಲ್ಲದೇ ಬಿಕೊ ಎನ್ನುತ್ತಿತ್ತು. ಗ್ರಾಮದಲ್ಲಿರುವ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಪ್ರಚಾರ ವಾಹನವನ್ನು ಹತ್ತಿ ಭಾಷಣ ಶುರು ಮಾಡಿ, ‘ನಾನೇ ಮುಂದಿನ ಮುಖ್ಯಮಂತ್ರಿ’ ಎಂದು ಪ್ರಕಟಿಸಿದರು. ಅಷ್ಟರಲ್ಲೇ ಗ್ರಾಮಸ್ಥರೊಬ್ಬರು, ಮುಖ್ಯಮಂತ್ರಿಯನ್ನು ಪ್ರಶ್ನಿಸಲು ಹೊರಟಾಗ ಮಾತನಾಡಲು ಬಿಡದೇ ಕಾರ್ಯಕರ್ತರು ತಡೆದರು. ‘ಈಗ ಬೇಡ ಆಮೇಲೆ ಮಾತನಾಡುವೆಯಂತೆ’ ಎಂದು ಸಮಾಧಾನಪಡಿಸಿದರು.ಈ ಭಾಗದ ಪ್ರಮುಖ ನಾಯಕ ಸಿದ್ದೇಗೌಡ ಅವರು ಈಚೆಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಸಿದ್ದೇಗೌಡರ ಸ್ವಗ್ರಾಮ ಮಾವಿನಹಳ್ಳಿಯಲ್ಲೂ ಜನರು ನಾಯಕರತ್ತ ಸುಳಿಯಲಿಲ್ಲ.ಜಯಪುರಕ್ಕೆ ಬಂದಾಗಲೂ ನಿರೀಕ್ಷಿತ ಸಂಖ್ಯೆಯಲ್ಲಿ ಜನರು ಸೇರಲಿಲ್ಲ. ‘ನಾನು ಮತ್ತೆ ಚುನಾವಣಾ ಪ್ರಚಾರಕ್ಕೆ ಇಲ್ಲಿಗೆ ಬರುವುದಿಲ್ಲ. ನಮ್ಮ ಸ್ಥಳೀಯ ನಾಯಕರಾದ ಸತ್ಯನಾರಾಯಣ, ಮಾವಿನಹಳ್ಳಿ ಸಿದ್ದೇಗೌಡ, ರಾಕೇಶ್‌ ಪಾಪಣ್ಣ ಬರುತ್ತಾರೆ. ನನ್ನನ್ನು ಗೆಲ್ಲಿಸಿ‘ ಎಂದು ಹೇಳಿ ಸಿದ್ದರಾಮಯ್ಯ ಮುನ್ನಡೆದರು.

ಧಿಕ್ಕಾರ– ಮುಜುಗರ: ಶನಿವಾರ ರಾತ್ರಿ ಗುಂಗ್ರಾಲ್‌ಛತ್ರದಲ್ಲಿ ಪ್ರಚಾರ ನಡೆಸಿದ ಸಮಯದಲ್ಲಿ ಧಿಕ್ಕಾರ ಎದುರಿಸಿದರು. ಗ್ರಾಮಸ್ಥರೊಬ್ಬರು ‘ನಮ್ಮ ಹಳ್ಳಿಗೆ ಯಾವ ಅಭಿವೃದ್ಧಿ ಕಾರ್ಯವನ್ನೂ ಕೊಟ್ಟಿಲ್ಲ’ ಎಂದು ನೇರವಾಗಿ ಪ್ರಶ್ನಿಸಿದ್ದರು. ‘ಇಲ್ಲಿ ಜಿ.ಟಿ.ದೇವೇಗೌಡ ಶಾಸಕ. ಅವರು ಕೆಲಸ ಮಾಡಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು. ಆದರೂ ಪಟ್ಟುಬಿಡದೆ ‘ನೀವು ಇಲ್ಲಿಗೆ ಅನುದಾನವನ್ನೇ ನೀಡಿಲ್ಲ’ ಎಂದು ಧಿಕ್ಕಾರ ಕೂಗಿದರು. ಯಾಚೇನಹಳ್ಳಿ ಗ್ರಾಮದಲ್ಲಿ ಸಿದ್ದರಾಮಯ್ಯ ಬರುತ್ತಿದ್ದಾಗ ಎಚ್‌.ಡಿ.ಕುಮಾರಸ್ವಾಮಿ, ಜಿ.ಟಿ.ದೇವೇಗೌಡ ಅವರಿಗೆ ಜನರು ಜೈಕಾರ ಹಾಕುತ್ತಿದ್ದರು. ಇದರಿಂದ ಸಿಟ್ಟೆಗೆದ್ದು, ಕಾರಿನಿಂದ ಕೆಳಗಿಳಿಯದೆ ಮುನ್ನಡೆದಿದ್ದರು.

23ಕ್ಕೆ ನಾಮಪತ್ರ ಸಲ್ಲಿಸುತ್ತೇನೆ...

ಮೈಸೂರು: ‘ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧಿಸುತ್ತಿದ್ದು, ಏ. 23ರಂದು ನಾಮಪತ್ರ ಸಲ್ಲಿಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ತಾಲ್ಲೂಕಿನ ಹಾರೋಹಳ್ಳಿಯಲ್ಲಿ ಸೋಮವಾರ ಪ್ರಚಾರ ಸಭೆಯಲ್ಲಿ ಮಾತನಾಡಿ, ‘ಒಟ್ಟು ಏಳು ಬಾರಿ ಸ್ಪರ್ಧಿಸಿ ಐದು ಬಾರಿ ಗೆದ್ದಿದ್ದೇನೆ. ಮುಖ್ಯಮಂತ್ರಿಯಾಗಿ ಈ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದೇನೆ’ ಎಂದು ಹೇಳಿದರು.‘ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಬಿಜೆಪಿ, ಜೆಡಿಎಸ್‌ ಅಪಪ್ರಚಾರ ಮಾಡುತ್ತಿವೆ. ಆದರೆ, ನನ್ನ ಕೊನೆಯ ಚುನಾವಣೆಯನ್ನು ಈ ಕ್ಷೇತ್ರದಿಂದಲೇ ಎದುರಿಸುತ್ತೇನೆ’ ಎಂದರು.

ಮೊದಲು ಎಂಎಲ್‌ಎ ಮಾಡಿ, ಆಮೇಲೆ ಪಿಎಂ: ಜಯಪುರದಲ್ಲಿ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದಾಗ, ಕಾ‌ರ್ಯಕರ್ತರೊಬ್ಬರು ‘ಭವಿಷ್ಯದ ‍ಪ್ರಧಾನಿಗೆ ಜೈ’ ಎಂದು ಜೋರಾಗಿ ಕೂಗಿದರು. ‘ಮೊದಲು ನನ್ನನ್ನು ಎಂಎಲ್‌ಎ ಮಾಡಿ, ಆಮೇಲೆ ಪಿಎಂ ಮಾಡುವಿರಂತೆ’ ಎಂದು ನಸುನಕ್ಕರು.

ಜೆಡಿಎಸ್‌ಗೆ ಗರಿಷ್ಠ 25 ಗೆಲುವು: ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್‌ ಗರಿಷ್ಠ 25 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಸಿದ್ದರಾಮಯ್ಯ ಹೇಳಿದರು.‘ಕಳೆದ ಚುನಾವಣೆಯಲ್ಲಿ ಜೆಡಿಎಸ್‌ 40 ಕ್ಷೇತ್ರಗಳಲ್ಲಿ ಗೆದ್ದಿತ್ತು. ಅದರ ಹಿಂದಿನ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ ಗೆದ್ದಿತ್ತು. ನಾನು ಜೆಡಿಎಸ್‌ನಲ್ಲಿದ್ದಾಗ 58 ಕ್ಷೇತ್ರಗಳಲ್ಲಿ ಗೆದ್ದಿತ್ತು. ಈ ಬಾರಿ 25 ಕ್ಷೇತ್ರಗಳಲ್ಲಿ ಗೆದ್ದರೆ ಹೆಚ್ಚು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT