ಶುಕ್ರವಾರ, ಡಿಸೆಂಬರ್ 13, 2019
21 °C

ನಾಯಕಿ ಪಾತ್ರದತ್ತ ಅಲಿಶಾ ಚಿತ್ತ

ಕೆ. ಎಂ. ಸತೀಶ್ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

ನಾಯಕಿ ಪಾತ್ರದತ್ತ ಅಲಿಶಾ ಚಿತ್ತ

ಐಟಂ ಡಾನ್ಸ್‌ನಿಂದ ನಾಯಕಿ ಪಾತ್ರಕ್ಕೆ ಬಡ್ತಿ ಪಡೆದುಕೊಂಡಿರುವ ಅಲಿಶಾ ಅಪ್ಪಟ ಕರಾವಳಿ ಪ್ರತಿಭೆ. ತುಳು ಹಾಗೂ ಕನ್ನಡ ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ‘ಭೂಮಿಕಾ’ ಸಿನಿಮಾ ನಾಯಕಿ ಪ್ರಧಾನ ಸಿನಿಮಾ. ಈ ಚಿತ್ರದಲ್ಲಿ ಅಲಿಶಾ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ.

‘ಇತ್ತೀಚೆಗೆ ತೆರೆಕಂಡ ‘ಚಿನ್ನದ ಗೊಂಬೆ’, ಸದ್ಯದಲ್ಲೇ ತೆರೆಗೆ ಬರಲಿರುವ ‘ಮದುವೆ ದಿಬ್ಬಣ’ ಸಿನಿಮಾಗಳಲ್ಲಿ ನಾನು ಐಟಂ ಸಾಂಗ್‌ ಮಾಡಿದ್ದೇನೆ. ಹಾಗೆಯೇ, ತಮಿಳು ಹಾಗೂ ತೆಲುಗು ಸಿನಿಮಾಗಳ ಐಟಂ ನಂಬರ್‌ಗೂ ನಡು ಬಳುಕಿಸಿದ್ದೇನೆ. ನನಗೆ ಮುಖ್ಯ ಪಾತ್ರ ನಿರ್ವಹಿಸುವಂತೆ ಆಫರ್‌ಗಳು ಬಂದಿದ್ದವು. ಆದರೆ, ನನಗೆ ನೃತ್ಯದಲ್ಲಿರುವ ಲಾಲಿತ್ಯ ಅಭಿನಯದಲ್ಲಿ ಇರಲಿಲ್ಲ ಎಂಬ ಕಾರಣಕ್ಕೆ ನಾಯಕಿ ಪಾತ್ರಗಳನ್ನು ನಾನು ಒಪ್ಪಿಕೊಂಡಿರಲಿಲ್ಲ’ ಎಂದು ಇಷ್ಟು ವರ್ಷ ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಳ್ಳದಿದ್ದುದಕ್ಕೆ ಕಾರಣ ವಿವರಿಸುತ್ತಾರೆ ಅಲಿಶಾ.

ಸಿನಿಮಾಗಳ ಸಣ್ಣಪುಟ್ಟ ಪಾತ್ರ ನಿರ್ವಹಣೆಯನ್ನೇ ಅಭಿನಯದಲ್ಲಿ ಪಕ್ವತೆ ಸಾಧಿಸಲು ಮೆಟ್ಟಿಲುಗಳಾಗಿ ಬಳಸಿಕೊಂಡ ಅಲಿಶಾ ‘ಭೂಮಿಕಾ’ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದರ ಕುರಿತು ಹೇಳುವುದು ಹೀಗೆ:

‘ನಿರ್ದೇಶಕ ಪಿ.ಕೆ. ದಾಸ್‌ ಅವರ ಸಿನಿಮಾದಲ್ಲಿ ನಾನು ಈ ಹಿಂದೆ ಕೆಲಸ ಮಾಡಿದ್ದೆ. ಆದಾದ ನಂತರ, ಅವರದೊಂದು ತಮಿಳು ಪ್ರಾಜೆಕ್ಟ್‌ಗಾಗಿ ಬಣ್ಣ ಹಚ್ಚಿದ್ದೆ. ಆಗಲೇ ಅವರು ನನ್ನನ್ನು ಮುಖ್ಯಪಾತ್ರಕ್ಕೆ ಬಣ್ಣಹಚ್ಚುವ ಆಫರ್‌ ಕೊಟ್ಟಿದ್ದರು. ಆದರೆ, ನಾನು ಐಟಂ ಡಾನ್ಸ್‌ನಲ್ಲಿ ಪಳಗಿರುವಷ್ಟು ಅಭಿನಯದಲ್ಲಿ ಪಳಗಿರಲಿಲ್ಲ. ಈ ಕಾರಣದಿಂದಾಗಿ ಅವರ ಆಫರ್‌ ಅನ್ನು ನಯವಾಗಿಯೇ ತಿರಸ್ಕರಿಸಿದ್ದೆ. ಆದರೆ, ನಾಯಕಿ ಆಗಬೇಕು ಎನ್ನುವ ಕನಸು ಮಾತ್ರ ನನ್ನ ಎದೆಯೊಳಗೆ ಹಬೆಯಾಡುತ್ತಲೇ ಇತ್ತು. ಈ ಕಾರಣದಿಂದಲೇ ಐಟಂ ಡಾನ್ಸ್‌ ಜತೆಗೆ ಚಿಕ್ಕ ಪಾತ್ರಗಳಿಗೆ ಬಣ್ಣ ಹಚ್ಚಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದೆ. ನಟನಾ ಸಾಮರ್ಥ್ಯವನ್ನು ಸುಧಾರಿಸಿಕೊಳ್ಳುತ್ತಿದ್ದೆ. ಈಗ ಅಭಿನಯಿಸಬಲ್ಲೆ ಎಂಬ ಆತ್ಮವಿಶ್ವಾಸ ಬಂದಿದೆ. ಈ ಕಾರಣಕ್ಕಾಗಿಯೇ ಪಿ.ಕೆ.ದಾಸ್‌ ಅವರು ಮೂರನೇ ಬಾರಿ ಆಫರ್‌ ಕೊಟ್ಟಾಗ ಇಲ್ಲ ಅಂತ ಹೇಳದೆ ನಟಿಸುವುದಕ್ಕೆ ಒಪ್ಪಿಕೊಂಡೆ’.

‘ಭೂಮಿಕಾ’ ನಾಯಕಿ ಪ್ರಧಾನ ಸಿನಿಮಾ. ಕತೆಯಲ್ಲಿ ಗಟ್ಟಿತನವಿದೆ. ಚಿತ್ರೀಕರಣ ಮುಗಿದಿದೆ. ಮಂಗಳೂರಿನ ಮೀನಾನಾಥ್‌ ಚಿತ್ರದ ನಿರ್ಮಾಪಕರು. ಚಿತ್ರದ ಕುರಿತು ಯಾವುದೇ ಮಾಹಿತಿ ನೀಡುವಂತಿಲ್ಲ ಎಂಬ ಷರತ್ತು ಇರುವುದರಿಂದ ಚಿತ್ರದ ಕತೆ ಬಗ್ಗೆ ಈಗಲೇ ಏನೂ ಹೇಳಲಾರೆ ಎನ್ನುತ್ತಾರೆ ಅಲಿಶಾ.

ಪ್ರತಿಕ್ರಿಯಿಸಿ (+)