ಶುಕ್ರವಾರ, ಡಿಸೆಂಬರ್ 6, 2019
26 °C

ಹಫೀಜ್ ಪಕ್ಷ ಜಾಗತಿಕ ಉಗ್ರ ಸಂಘಟನೆ

ಪಿಟಿಐ Updated:

ಅಕ್ಷರ ಗಾತ್ರ : | |

ಹಫೀಜ್ ಪಕ್ಷ ಜಾಗತಿಕ ಉಗ್ರ ಸಂಘಟನೆ

ವಾಷಿಂಗ್ಟನ್: ಮುಂಬೈ ದಾಳಿಯ ಸಂಚುಕೋರ ಹಫೀಜ್ ಸಯೀದ್ ನೇತೃತ್ವದ ಜಮಾತ್ ಉದ್ ದವಾ ಉಗ್ರ ಸಂಘಟನೆಯ ರಾಜಕೀಯ ಪಕ್ಷ ಮಿಲ್ಲಿ ಮುಸ್ಲಿಂ ಲೀಗ್‌ ಅನ್ನು (ಎಂಎಂಎಲ್) ಜಾಗತಿಕ ಭಯೋತ್ಪಾದಕ ಸಂಘಟನೆ ಎಂದು ಅಮೆರಿಕ ಮಂಗಳವಾರ ಘೋಷಣೆ ಮಾಡಿದೆ.

ಇದರಿಂದಾಗಿ, ರಾಜಕೀಯವಾಗಿ ಮುನ್ನೆಲೆಗೆ ಬರುವ ಹಫೀಜ್ ಸಯೀದ್‌ ಯತ್ನಕ್ಕೆ ಹಿನ್ನಡೆಯಾಗಿದೆ. ಎಂಎಂಎಲ್‌ನ ಏಳು ಮುಖಂಡರನ್ನು ಅಂತರರಾಷ್ಟ್ರೀಯ ಭಯೋತ್ಪಾದಕರು ಎಂದು ಗುರುತಿಸಲಾಗಿದೆ.

ಲಷ್ಕರ್ ಎ ತಯಬಾ (ಎಲ್‌ಇಟಿ) ಸಂಘಟನೆಯ ಭಾಗ ಎನ್ನಲಾದ ತೆಹ್ರೀಕ್– ಎ– ಆಜಾದಿ ಎ ಕಾಶ್ಮೀರ್ (ಟಿಎಜೆಕೆ) ಸಂಘಟನೆಯನ್ನೂ ಅಂತರರಾಷ್ಟ್ರೀಯ ಉಗ್ರ ಸಂಘಟನೆಯ ಪಟ್ಟಿಯಲ್ಲಿ ಅಮೆರಿಕ ಸೇರಿಸಿದೆ.

‘ಎಂಎಂಎಲ್ ಮತ್ತು ಟಿಎಜೆಕೆ ಎರಡೂ ಎಲ್ಇಟಿಯ ಪರ್ಯಾಯ ಹೆಸರುಗಳೇ ಆಗಿವೆ’ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಹೇಳಿದೆ.

ಎಂಎಂಎಲ್ ನೋಂದಣಿಗೆ ಆಂತರಿಕ ವ್ಯವಹಾರಗಳ ಸಚಿವಾಲಯದಿಂದ ನಿರಾಕ್ಷೇಪಣಾ ಪತ್ರ ಸಲ್ಲಿಸುವಂತೆ ಪಾಕಿಸ್ತಾನದ ಚುನಾವಣಾ ಆಯೋಗ ಸೂಚಿಸಿದ ಮರುದಿನವೇ ಈ ಬೆಳವಣಿಗೆ ನಡೆದಿದೆ. ಈ ವರ್ಷದ ಜುಲೈನಲ್ಲಿ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ.

ಭಾರತ ಸ್ವಾಗತ (ನವದೆಹಲಿ ವರದಿ): ಎಂಎಂಎಲ್ ಮತ್ತು ಎಲ್ಇಟಿಯನ್ನು ಅಂತರರಾಷ್ಟ್ರೀಯ ಉಗ್ರ ಗುಂಪಿನ ಪಟ್ಟಿಗೆ ಸೇರಿಸಿರುವ ಅಮೆರಿಕದ ಕ್ರಮವನ್ನು ಭಾರತ ಸ್ವಾಗತಿಸಿದೆ.

‘ಪಾಕಿಸ್ತಾನವು ತನ್ನ ನೆಲದಲ್ಲಿ ಭಯೋತ್ಪಾದಕ ಚಟುವಟಿಕೆ ತಡೆಯಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಅಮೆರಿಕದ ಕ್ರಮವು ತೋರಿಸುತ್ತಿದೆ’ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ.

ಪ್ರತಿಕ್ರಿಯಿಸಿ (+)