ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೆಕ್ಕಪತ್ರ ತಪಾಸಣೆ: ಆರ್‌ಬಿಐ ವೈಫಲ್ಯ

Last Updated 3 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ವಜ್ರಾಭರಣ ವ್ಯಾಪಾರಿಗಳು ವಂಚಿಸಿರುವ ಹಗರಣ ತಡೆಗಟ್ಟುವಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ ಸೂಕ್ತ ರೀತಿಯಲ್ಲಿ ಲೆಕ್ಕಪತ್ರ ತಪಾಸಣೆ ನಡೆಸದಿರುವುದೂ ಕಾರಣವಾಗಿದೆ’ ಎಂದು ಕೇಂದ್ರೀಯ ವಿಚಕ್ಷಣಾ ಆಯುಕ್ತ (ಸಿವಿಸಿ) ಕೆ. ವಿ. ಚೌಧರಿ ಹೇಳಿದ್ದಾರೆ.

‘ಹಗರಣ ನಡೆಯುತ್ತಿದ್ದ ಸಂದರ್ಭದಲ್ಲಿ ಕೇಂದ್ರೀಯ ಬ್ಯಾಂಕ್‌ನ ಲೆಕ್ಕಪತ್ರ ತಪಾಸಣೆಯಲ್ಲಿನ ವೈಫಲ್ಯದಿಂದಾಗಿ ಇದು ಬೆಳಕಿಗೆ ಬರಲಿಲ್ಲ. ಇಂತಹ ವಂಚನೆ ಪ್ರಕರಣಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಮತ್ತು ಹೆಚ್ಚು ಪರಿಣಾಮಕಾರಿಯಾದ ಲೆಕ್ಕಪತ್ರ ತಪಾಸಣೆ ವ್ಯವಸ್ಥೆ ಜಾರಿಗೆ ತರುವ ಅಗತ್ಯ ಇದೆ’ ಎಂದು ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಪಿಎನ್‌ಬಿಯ ₹ 13 ಸಾವಿರ ಕೋಟಿಗೂ ಹೆಚ್ಚಿನ ಮೊತ್ತದ ವಂಚನೆ ಪ್ರಕರಣದ ಸಿಬಿಐ ತನಿಖೆಗೆ ‘ಸಿವಿಸಿ’ಯು ಅಗತ್ಯ ನಿರ್ದೇಶನ ನೀಡುತ್ತಿದೆ.

‘ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಆರ್‌ಬಿಐ ನಿಯಂತ್ರಣ ಕ್ರಮಗಳ ಹೊಣೆಗಾರಿಕೆ ಹೊತ್ತುಕೊಂಡಿದೆ. ಈ ಹೊಣೆಗಾರಿಕೆ ನಿಭಾಯಿಸುವಲ್ಲಿನ ವೈಫಲ್ಯವನ್ನು ‘ಸಿವಿಸಿ’ ಪರಿಗಣನೆಗೆ ತೆಗೆದುಕೊಳ್ಳಲಿದೆ.

‘ನಿಯಮಿತವಾಗಿ ಲೆಕ್ಕಪತ್ರ ತಪಾಸಣೆ ಮಾಡುವ ಬದಲಿಗೆ, ಹಣಕಾಸು ನಷ್ಟ ಸಾಧ್ಯತೆಯ ಪ್ರಕರಣಗಳ ಲೆಕ್ಕಪತ್ರ ತಪಾಸಣೆ ನಡೆಸಲಾಗುತ್ತಿದೆ ಎಂದು ಆರ್‌ಬಿಐ ಹೇಳುತ್ತಿದೆ. ನಷ್ಟದ ಅಂದಾಜು ನಿಗದಿ ಮಾಡಲು ಕೆಲ ಮಾನದಂಡಗಳು ಇರಬೇಕು. ಅದನ್ನು ಆಧರಿಸಿಯೇ ಲೆಕ್ಕಪತ್ರ ತಪಾಸಣೆ ನಡೆಸಬೇಕು. ವಂಚನೆ ಎಸಗುತ್ತಿದ್ದ ಅವಧಿಯಲ್ಲಿ ಆರ್‌ಬಿಐ ಇಂತಹ ಲೆಕ್ಕಪತ್ರ ತಪಾಸಣೆಗೆ ಗಮನ ಕೊಟ್ಟಿರಲಿಲ್ಲ.

‘ಬ್ಯಾಂಕ್ ಮತ್ತು ಬ್ಯಾಂಕ್‌ ಶಾಖೆಗಳ ಮಟ್ಟದಲ್ಲಿ ತಪಾಸಣೆ ನಡೆಸಬೇಕಾದ ಆರ್‌ಬಿಐ ಹಾಗೆ ಮಾಡಿರಲಿಲ್ಲ. ತಮ್ಮ ಹಣಕಾಸು ವಹಿವಾಟು ಸಮರ್ಪಕ ಮತ್ತು ನೈತಿಕ ಮಾರ್ಗದಲ್ಲಿ ನಡೆಯುತ್ತಿರುವುದರ ಬಗ್ಗೆ ಭರವಸೆ ನೀಡುವುದು ಬ್ಯಾಂಕ್‌ಗಳ ಪ್ರಾಥಮಿಕ ಕರ್ತವ್ಯವೂ ಆಗಿದೆ. ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ತಪ್ಪುಗಳಾದಾಗ ಯಾರೇ ಆಗಲಿ ಎಲ್ಲರನ್ನೂ ದೂಷಿಸಬಾರದು.

‘ನಷ್ಟ ಸಾಧ್ಯತೆ ಆಧರಿಸಿದ ಲೆಕ್ಕಪತ್ರ ತಪಾಸಣೆಯು ಉತ್ತಮ ನೀತಿಯಾಗಿದೆ. ಆದರೆ, ಅಂತಹ ಸಾಧ್ಯತೆಯ ಮಾನದಂಡಗಳನ್ನು ಹೇಗೆ ನಿರ್ಧರಿಸಲಾಗುತ್ತಿದೆ. ಹಾಗಿದ್ದರೆ ಈ ಹಗರಣವು ಈ ಮೊದಲೇ ಬೆಳಕಿಗೆ ಬರದೇ ಇರಲು ಕಾರಣಗಳೇನು’ ಎಂದು ಅವರು ಪ್ರಶ್ನಿಸಿದ್ದಾರೆ.

‘ಬರೀ ಪಿಎನ್‌ಬಿಯಲ್ಲಷ್ಟೇ ಈ ವಂಚನೆ ನಡೆದಿದ್ದು, ಇತರ ಬ್ಯಾಂಕ್‌ಗಳು ನೂರಕ್ಕೆ ನೂರರಷ್ಟು ಸರಿಯಾಗಿವೆ ಎಂದರ್ಥವಲ್ಲ. ಇತರ ಬ್ಯಾಂಕ್‌ಗಳು ವಂಚನೆ ತಡೆಗಟ್ಟಲು ಉತ್ತಮ ವ್ಯವಸ್ಥೆ ಅಳವಡಿಸಿಕೊಂಡಿರಬೇಕು ಎಂದೇ ನಾವು ಆಶಿಸಬಹುದು’ ಎಂದು ಹೇಳಿದ್ದಾರೆ.

‘ವಂಚನೆ ಪತ್ತೆಹಚ್ಚುವಲ್ಲಿ ನಿಯಂತ್ರಣ ಸಂಸ್ಥೆಗಳ ವೈಫಲ್ಯವೂ ಇದೆ’ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರೂ ಫೆಬ್ರುವರಿ ತಿಂಗಳಲ್ಲಿ ಆಪಾದಿಸಿದ್ದರು.

**

ಪಿಎನ್‌ಬಿ ಹಗರಣ ಕುರಿತ ತನಿಖೆ ಪ್ರಗತಿಯಲ್ಲಿರುವಾಗ ಆ ಬಗ್ಗೆ  ಮಾಹಿತಿ ಬಹಿರಂಗಪಡಿಸುವುದಿಲ್ಲ
- ಕೆ. ವಿ. ಚೌಧರಿ, ಕೇಂದ್ರೀಯ ವಿಚಕ್ಷಣಾ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT