ಮಂಗಳವಾರ, ಡಿಸೆಂಬರ್ 10, 2019
24 °C

ರೈಲ್ವೆ ಜಾಹೀರಾತು: ಗಣ್ಯರ ಹೆಸರಿಗೆ ಕತ್ತರಿ!

Published:
Updated:
ರೈಲ್ವೆ ಜಾಹೀರಾತು: ಗಣ್ಯರ ಹೆಸರಿಗೆ ಕತ್ತರಿ!

ನವದೆಹಲಿ: ಭಾರತೀಯ ರೈಲ್ವೆ ಇಲಾಖೆ ಮಾಧ್ಯಮಗಳಿಗೆ ನೀಡುವ ಜಾಹೀರಾತುಗಳಲ್ಲಿ ಭಾರಿ ಬದಲಾವಣೆ ತರಲು ಮುಂದಾಗಿದ್ದು, ಗಣ್ಯರು ಮತ್ತು ಜನಪ್ರತಿನಿಧಿಗಳ ಹೆಸರಿಗೆ ಕತ್ತರಿ ಹಾಕಲು ನಿರ್ಧರಿಸಿದೆ.

ಶಿಷ್ಟಾಚಾರ ಪಾಲನೆಗೆ ನೀಡುವ ಇಂತಹ ಜಾಹೀರಾತುಗಳಿಂದ ಇಲಾಖೆಗೆ ಯಾವುದೇ ಪ್ರಯೋಜನ ಇಲ್ಲ. ಮೇಲಾಗಿ ಅವು ಯಾವ ಪರಿಣಾಮವನ್ನೂ ಬೀರುವುದಿಲ್ಲ ಎಂಬ ನಿರ್ಣಯಕ್ಕೆ ಬಂದಿರುವ ರೈಲ್ವೆ ಇಲಾಖೆ, ಅನೇಕ ದಶಕಗಳಿಂದ ಪಾಲಿಸಿಕೊಂಡು ಬಂದ ಶಿಷ್ಟಾಚಾರ ಬದಿಗಿರಿಸಲು ತೀರ್ಮಾನಿಸಿದೆ.

ಹೊಸ ಯೋಜನೆ ಉದ್ಘಾಟನೆ, ಹೊಸ ರೈಲು, ರೈಲು ಮಾರ್ಗಗಳಿಗೆ ಹಸಿರು ನಿಶಾನೆ ನೀಡುವ ಸಂದರ್ಭದಲ್ಲಿ ರೈಲ್ವೆ ಇಲಾಖೆ ನೀಡುವ ಜಾಹೀರಾತುಗಳಲ್ಲಿ ಗಣ್ಯ ಅತಿಥಿಗಳು, ಸಂಸದರು, ಶಾಸಕರು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಹೆಸರಿನ ದೊಡ್ಡ ಪಟ್ಟಿಯೇ ಇರುತ್ತದೆ. ಇನ್ನು ಮುಂದೆ ಜಾಹೀರಾತುಗಳಲ್ಲಿ ಉದ್ಘಾಟಕರ ಹೆಸರು ಮಾತ್ರ ಕಾಣಿಸಿಕೊಳ್ಳುತ್ತದೆ. ಅನವಶ್ಯಕ ಹೆಸರುಗಳಿಗೆ ಕತ್ತರಿ ಹಾಕಿ, ಆ ಜಾಗದಲ್ಲಿ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಉಪಯುಕ್ತವಾಗುವ ಮಾಹಿತಿ ನೀಡುವಂತೆ ಇಲಾಖೆಯ ಮಾಹಿತಿ ಮತ್ತು ಪ್ರಸಾರ ವಿಭಾಗ ಎಲ್ಲ ವಲಯ ಕಚೇರಿಗಳಿಗೂ ಸುತ್ತೋಲೆ ಕಳಿಸಿದೆ.

ಶಿಷ್ಟಾಚಾರದಂತೆ ಆಮಂತ್ರಣ ಪತ್ರಿಕೆಗಳಲ್ಲಿ ಸ್ಥಳೀಯ ಶಾಸಕರು, ಸಂಸದರು ಮತ್ತು ಜನಪ್ರತಿನಿಧಿಗಳ ಹೆಸರು ಪ್ರಕಟಿಸಲು ಅಭ್ಯಂತರ ಇಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಪ್ರತಿಕ್ರಿಯಿಸಿ (+)