ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀತಿ ಸಂಹಿತೆ ಚಂಡೆಮದ್ದಳೆಗೆ ಬೆದರಿದ ಯಕ್ಷಗಾನ

Last Updated 3 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಮಂಗಳೂರು: ಚುನಾವಣೆ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವ ನಿಯಮಾವಳಿಯಿಂದಾಗಿ ಕರಾವಳಿ ಜಿಲ್ಲೆಗಳ ಯಕ್ಷಗಾನ ಸಂಘಟಕರಲ್ಲಿ ಗೊಂದಲ ಮೂಡಿದೆ. ರಾತ್ರಿ 11ರ ನಂತರ ಧ್ವನಿವರ್ಧಕ ಬಳಸುವಂತಿಲ್ಲ ಎಂದು ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಚುನಾವಣಾಧಿಕಾರಿಗಳು ಸೂಚಿಸಿರುವ ಕಾರಣ ಕೆಲವೆಡೆ ಯಕ್ಷಗಾನ ಪ್ರದರ್ಶನಗಳು ರದ್ದಾಗಿವೆ.

ಸಾಲಿಗ್ರಾಮದ ಶೆಟ್ಟಿಗೇರಿ ಗ್ರಾಮದಲ್ಲಿ ಮಂಗಳವಾರ ಸಾಲಿಗ್ರಾಮ ಗುರುಪ್ರಸಾದಿತ ಯಕ್ಷಗಾನ ಮಂಡಳಿ ವತಿಯಿಂದ ನಡೆಯಬೇಕಾಗಿದ್ದ ‘ಶ್ವೇತ
ಕುಮಾರ ಚರಿತೆ– ದಕ್ಷಯಜ್ಞ’ ಪ್ರಸಂಗವನ್ನು ರದ್ದುಪಡಿಸಲಾಗಿದೆ. ‘ಯಕ್ಷಗಾನ ಪ್ರಸಂಗ ಆರಂಭವಾಗುವುದೇ ರಾತ್ರಿ 10 ಗಂಟೆಗೆ. ಅಂದಮೇಲೆ ರಾತ್ರಿ 11 ಗಂಟೆಯ ಬಳಿಕ ಧ್ವನಿವರ್ಧಕ ಬಳಸುವಂತಿಲ್ಲ ಎಂಬ ಸೂಚನೆಯನ್ನು ಪಾಲಿಸುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ಪ್ರದರ್ಶನ ರದ್ದುಪಡಿಸಿದ್ದೇವೆ’ ಎಂದು ಯಕ್ಷಗಾನ ಸಂಘಟಕ ಪ್ರಶಾಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾರ್ಕಳದ ಹೆಬ್ರಿಯಲ್ಲಿ ಸೋಮವಾರ ‘ವಜ್ರಮಾನಸಿ’ ಪ್ರದರ್ಶನದ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದ ಚುನಾವಣಾ ವೀಕ್ಷಕರು, ನಿಗದಿತ ಸಮಯದ ನಂತರ ಮೈಕ್‌ ಇಲ್ಲದೇ ಪ್ರದರ್ಶನ ಮುಂದುವರಿಸಬೇಕು ಅಥವಾ ಪ್ರದರ್ಶನ ರದ್ದುಪಡಿಸಬೇಕು ಎಂದು ಸೂಚಿಸಿದ್ದರು. ‘500ಕ್ಕೂ ಹೆಚ್ಚು ಪ್ರೇಕ್ಷಕ ಸಮೂಹವನ್ನು ಮೈಕ್‌ ಇಲ್ಲದೇ ತಲುಪುವುದಾದರೂ ಹೇಗೆ’ ಎಂಬುದು ಸಂಘಟಕ ದಯಾನಂದ ಶೆಟ್ಟಿ ಅವರ ಪ್ರಶ್ನೆ. ಅಜ್ರಿ ಶನೀಶ್ವರ ಮೇಳ ಮತ್ತು ನೀಲಾವರ ಮೇಳದ ಸಂಚಾಲಕ ಅಶೋಕ್‌ ಶೆಟ್ಟಿ ಅವರೂ ನೀತಿ ಸಂಹಿತೆಯಿಂದ ಯಕ್ಷಗಾನ ಪ್ರದರ್ಶನಕ್ಕೆ ತೊಡಕಾಗಿರುವ ಬಗ್ಗೆ ವಿವರಿಸುತ್ತಾರೆ.

ಕೋಟ ಪಡುಕೆರೆಯಲ್ಲಿ ನಡೆದ ಪ್ರದರ್ಶನಕ್ಕೆ ಬಂದ ಅಧಿಕಾರಿಗಳು 11 ಗಂಟೆಯವರೆಗೆ ಕಾದು, ಬಳಿಕ ಆಟ ನಿಲ್ಲಿಸಲು ಸೂಚಿಸಿದರು. ಆದರೆ ಕೊಂಚ ಹೊತ್ತು ಆಟ ನಿಲ್ಲಿಸಿ, ಮತ್ತೆ ಪ್ರದರ್ಶನ ಮುಂದುವರಿಯಿತು. ಅಮಾಸೆಬೈಲಿನ ನಂದಿಕೋಣ ದೈವಸ್ಥಾನದಲ್ಲಿಯೂ ಇದೇ ರೀತಿ ಪ್ರದರ್ಶನ ನಿಲ್ಲಿಸುವಂತೆ ಸೂಚಿಸಲಾಗಿದೆ.

35 ವರ್ಷಗಳಿಂದ ಈ ಕ್ಷೇತ್ರದಲ್ಲಿರುವ ಸಾಲಿಗ್ರಾಮ, ಸೌಕೂರು, ಹಿರಿಯಡ್ಕ ಮತ್ತು ಮಡಾಮಕ್ಕಿ ಮೇಳದ ಸಂಚಾಲಕರಾದ ಕಿಶನ್‌ ಹೆಗ್ಡೆಯವರು, ‘ಇಂತಹ ಪರಿಸ್ಥಿತಿಯನ್ನು ಹಿಂದೆಂದೂ ಕಂಡಿರಲಿಲ್ಲ’ ಎನ್ನುತ್ತಾರೆ. ‘ನಾಲ್ಕು ಮೇಳಗಳಲ್ಲಿ ಕಲಾವಿದರು ಮತ್ತು ಸಹಾಯಕರು ಸೇರಿದಂತೆ ಒಟ್ಟು 250ಕ್ಕೂ ಹೆಚ್ಚು ಮಂದಿ ಪ್ರತಿದಿನ ಕೆಲಸ ಮಾಡುತ್ತಾರೆ. ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಲ್ಲಿ ಜಾತ್ರೆ, ವಾರ್ಷಿಕೋತ್ಸವ ಮತ್ತಿತರ ಸಂದರ್ಭಗಳಲ್ಲಿ ಯಕ್ಷಗಾನ ಆಯೋಜಿಸುತ್ತಾರೆ. ಇದೇ ಸಂದರ್ಭದಲ್ಲಿ ಪ್ರದರ್ಶನಗಳನ್ನು ಏಕಾಏಕಿ ರದ್ದುಪಡಿಸಿದರೆ ಕಲಾವಿದರ ದುಡಿಮೆಗೆ ಕಲ್ಲು ಹಾಕಿದಂ
ತಾಗುತ್ತದೆ. ಈ ಕಲಾ ಪ್ರದರ್ಶನಗಳಿಗೂ ರಾಜಕೀಯಕ್ಕೂ ಸಂಬಂಧ ಕಲ್ಪಿಸುವುದು ಸರಿಯಲ್ಲ’ ಎನ್ನುತ್ತಾರೆ ಅವರು.

ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಇಂತಹ ಅಡಚಣೆ ಉಂಟಾಗಿಲ್ಲ. ನೀತಿ ಸಂಹಿತೆ ಘೋಷಣೆಯಾದ ಮರುದಿನ, ಕಾರ್ಯಕ್ರಮದ ಮಾಹಿತಿಯನ್ನು ಚುನಾವಣಾಧಿಕಾರಿಗಳಿಗೆ ನೀಡಬೇಕು ಎಂಬ ಸೂಚನೆಯ ಮೇರೆಗೆ ತುಸು ಗೊಂದಲ ಸೃಷ್ಟಿಯಾಗಿ
ದ್ದರೂ ಎಲ್ಲಿಯೂ ಪ್ರದರ್ಶನಕ್ಕೆ ಅಡ್ಡಿಯಾಗಿಲ್ಲ. ಕಟೀಲು ಶ್ರೀ ದುರ್ಗಾಪರಮೇಶ್ವರಿಪ್ರಸಾದಿತ ದಶಾವತಾರ ಯಕ್ಷಗಾನ ಮಂಡ
ಳಿಯ ಆರು ಮೇಳಗಳು, ಧರ್ಮಸ್ಥಳ ಮೇಳ, ಬಪ್ಪನಾಡು ಮೇಳದ ಯಕ್ಷಗಾನ ಪ್ರದರ್ಶನಗಳು ನಡೆದಿವೆ.

ಕರಾವಳಿ ಭಾಗದಲ್ಲಿ 40ಕ್ಕೂ ಹೆಚ್ಚು ಮೇಳಗಳು ನಿರಂತರ ಪ್ರದರ್ಶನಗಳನ್ನು ನೀಡುತ್ತಿವೆ. ದೀಪಾವಳಿಗೆ ಹೊರಡುವ ಮೇಳಗಳು ವೃಷಭ ಮಾಸದ ಹತ್ತನೇ ದಿನವಾದ ಪತ್ತನಾಜೆಯವರೆಗೆ (ಮೇ 24) ಸುಮಾರು 160 ದಿನಗಳಲ್ಲಿ 6,400ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡುತ್ತವೆ. ಇದಲ್ಲದೆ ಹವ್ಯಾಸಿ ಸಂಘಟನೆಗಳೂ ಯಕ್ಷಗಾನ ಪ್ರದರ್ಶಿಸುತ್ತವೆ. 500 ವರ್ಷಕ್ಕೂ ಪೂರ್ವದ ಈ ಕಲೆಯ ಬಗ್ಗೆ ಕರಾವಳಿ ಜನರಲ್ಲಿ ಭಕ್ತಿಯಿದೆ.

‘ಇಂತಹ ಶ್ರೀಮಂತ ಕಲೆಯ ಬಗ್ಗೆ ಹೆಮ್ಮೆ ಪಡಬೇಕೇ ವಿನಾ ಅದು ನೀತಿ ಸಂಹಿತೆಗೆ ತೊಡಕು ಎನ್ನುವುದು ಸರಿಯಲ್ಲ. ಬದಲಾಗಿ, ಅಳವಡಿಸಿಕೊಳ್ಳಬೇಕಾದ ನಿಯಮಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಸಂಘಟಕರಿಗೆ ನೀಡಬೇಕು’ ಎನ್ನುತ್ತಾರೆ ಯಕ್ಷಗಾನ ಅಕಾಡೆಮಿಯ ಸದಸ್ಯ ಕಲಾವಿದ ಜಬ್ಬಾರ್‌ ಸಮೋ.

‘ನೀತಿ ಸಂಹಿತೆ ಆರಂಭವಾದ ದಿನಗಳಲ್ಲಿ ರಿಟರ್ನಿಂಗ್‌ ಆಫೀಸರ್‌ಗಳು ಈ ಮಾತುಗಳನ್ನು ಹೇಳಿದ್ದಾರೆ. ಅಧಿಕಾರಿಗಳಿಗೆ ಪತ್ರಮುಖೇನ ಮಾಹಿತಿ ನೀಡಿ, ಯಕ್ಷಗಾನ ಪ್ರದರ್ಶನ ನಡೆಸಲು ಯಾವುದೇ ಅಡ್ಡಿ ಇಲ್ಲ ಎಂದು ತಿಳಿಸಲಾಗಿದೆ’ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಹೇಳುತ್ತಾರೆ.

ಇದೇ ಮಾತನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಸಹ ಹೇಳುತ್ತಾರೆ. ‘ರಾಜಕೀಯ ಪಕ್ಷಗಳ ಚಟುವಟಿಕೆಯನ್ನು ಸೂಕ್ಷ್ಮವಾಗಿ ಗಮನಿಸುವುದು ನಮ್ಮ ಕರ್ತವ್ಯ. ಆದ್ದರಿಂದ ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮಗಳ ಅರಿವು ಚುನಾವಣಾ ಅಧಿಕಾರಿಗಳಿಗೆ ಇರಬೇಕು ಎಂಬ ದೃಷ್ಟಿಯಿಂದ ಮಾಹಿತಿ ಕೊಡುವಂತೆ ಸೂಚಿಸಲಾಗಿದೆ ಅಷ್ಟೆ. ಯಕ್ಷಗಾನ ಪ್ರದರ್ಶನದಲ್ಲಿ ರಾಜಕೀಯ ವ್ಯಕ್ತಿಗಳು ಭಾಗವಹಿಸುವುದು,ಊಟೋಪಚಾರ ನೀಡುವುದು ಸರಿಯಲ್ಲ. ಜನರ ದೈನಂದಿನ ಚಟುವಟಿಕೆಗೆ, ಆಚರಣೆಗೆ ತೊಂದರೆಯಾಗುವ ರೀತಿಯಲ್ಲಿ ನೀತಿ ಸಂಹಿತೆಯನ್ನು ಹೇರಲಾಗುತ್ತಿಲ್ಲ’ ಎನ್ನುತ್ತಾರೆ ಅವರು.

ಏನಿದು ಗೊಂದಲ?

ಸುಪ್ರೀಂ ಕೋರ್ಟ್‌ ಆದೇಶದಂತೆ, ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕ ಬಳಕೆಗೆ ಅವಕಾಶ ಇಲ್ಲ. ಆದರೆ ಕರಾವಳಿ ಜಿಲ್ಲೆಗಳಲ್ಲಿ ಯಕ್ಷಗಾನ, ಬಯಲಾಟ, ನಾಟಕ, ಉರುಸ್‌, ಕ್ರಿಕೆಟ್‌ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ರಾತ್ರಿ ನಡೆಯುವುದು ಸಾಮಾನ್ಯ. ಇದು ಜನಜೀವನದ ಭಾಗವೇ ಆಗಿದೆ. ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವ ಭರದಲ್ಲಿ ಅಧಿಕಾರಿಗಳು, ‘10 ಗಂಟೆಯ ನಂತರ ನಿಮ್ಮದೇ ಅಪಾಯದಲ್ಲಿ ಪ್ರದರ್ಶನ ನಡೆಸಬೇಕು. ನಾವು ವಿಡಿಯೊ ಮಾಡಿ ಮೇಲಧಿಕಾರಿಗೆ ತಿಳಿಸಿ ಕರ್ತವ್ಯ ನಿರ್ವಹಿಸುತ್ತೇವೆ’ ಎಂದು ಹೇಳುತ್ತಿದ್ದಾರೆ. ಇದ್ದಕ್ಕಿದ್ದಂತೆಯೇ ವಿಡಿಯೊ ಮಾಡುವ ಮತ್ತು ದೂರು ಸಲ್ಲಿಸುವ ಈ ಪ್ರಕ್ರಿಯೆಯಿಂದಾಗಿ ಸಂಘಟಕರು ತಬ್ಬಿಬ್ಬಾಗಿದ್ದಾರೆ.

ಒಂದು ಪ್ರದರ್ಶನಕ್ಕೆ ವೀಳ್ಯ :₹50ರಿಂದ ₹ 70 ಸಾವಿರ
ವಾರ್ಷಿಕ ಅಂದಾಜು ವಹಿವಾಟು: ₹ 320 ಕೋಟಿ
ಕಲಾವಿದರ ಸಂಖ್ಯೆ ಸುಮಾರು 10 ಸಾವಿರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT