ಗುರುವಾರ , ಡಿಸೆಂಬರ್ 12, 2019
20 °C
ಕೇಂದ್ರ ಸಚಿವ ಪೀಯೂಷ್‌ ವಿರುದ್ಧ ರಾಹುಲ್‌ ಲೇವಡಿ

‘ಬಿಜೆಪಿಯ ಹೊಸ ಹಗರಣ ಶಿರಡಿ ಕಾ ಚಮತ್ಕಾರ್‌’

ಪಿಟಿಐ Updated:

ಅಕ್ಷರ ಗಾತ್ರ : | |

‘ಬಿಜೆಪಿಯ ಹೊಸ ಹಗರಣ ಶಿರಡಿ ಕಾ ಚಮತ್ಕಾರ್‌’

ನವದೆಹಲಿ : ಕೇಂದ್ರ ರೈಲ್ವೆ ಮತ್ತು ಕಲ್ಲಿದ್ದಲು ಸಚಿವ ಪೀಯೂಷ್‌ ಗೋಯಲ್‌ ಪ್ರವರ್ತಕರಾಗಿರುವ ಮುಂಬೈನ ಶಿರಡಿ ಇಂಡಸ್ಟ್ರೀಸ್‌, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ₹650 ಕೋಟಿ ವಂಚಿಸಿದೆ ಎಂದು ಸುದ್ದಿ ಜಾಲತಾಣ ‘ದಿ ವೈರ್‌’ ಮಂಗಳವಾರ ವರದಿ ಪ್ರಕಟಿಸಿದೆ.

ಸುದ್ದಿ ಹೊರಬಿದ್ದ ಬೆನ್ನಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ‘ಈ ವಂಚನೆ ಪ್ರಕರಣದೊಂದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮತ್ತೊಂದು ಭ್ರಷ್ಟಾಚಾರ ಹಗರಣ ಬಯಲಾಗಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಈ ವರದಿಯನ್ನು ಟ್ವೀಟ್‌ ಜತೆ ಲಗತ್ತಿಸಿರುವ ರಾಹುಲ್‌ ‘ಪೀಯೂಷ್‌ ಘೋಟಾಲಾ’ ಎಂಬ ಹ್ಯಾಶ್‌ಟ್ಯಾಗ್‌ ಬಳಸಿ ವ್ಯಂಗ್ಯವಾಗಿ ಟ್ವೀಟ್‌ ಮಾಡಿದ್ದಾರೆ.

‘ಶಾ’ಜಾದಾನ ಆಸಕ್ತಿದಾಯಕ ಕಥೆ, ‘ಶೌರ‍್ಯ’ಗಾಥಾ ಮತ್ತು ಛೋಟೆ ಮೋದಿಯ ದೊಡ್ಡ ವಂಚನೆ ನಂತರ ಬಿಜೆಪಿಯಿಂದ ಮತ್ತೊಂದು ಪ್ರದರ್ಶನ ‘ಶಿರಡಿ ಕಾ ಚಮತ್ಕಾರ್‌’ ಎಂದು ರಾಹುಲ್‌ ಲೇವಡಿ ಮಾಡಿದ್ದಾರೆ.

ಇಲ್ಲಿ ‘ಶಾ’ಜಾದಾ ಎಂದರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರ ಪುತ್ರ ಜಯ್‌ ಶಾ. ಪ್ರಧಾನಿಯ ರಕ್ಷಣಾ ಸಲಹೆಗಾರ ಅಜೀತ್‌ ಢೊಬಾಲ್‌ ಅವರ ಪುತ್ರ ಶೌರ್ಯ ಅವರನ್ನು ‘ಶೌರ‍್ಯ’ಗಾಥಾ ಎಂದು ಬಣ್ಣಿಸಿದ್ದಾರೆ. ವಜ್ರಾಭರಣ ಉದ್ಯಮಿ ನೀರವ್‌ ಮೋದಿಗೆ ‘ಛೋಟೆ ಮೋದಿ’ ಎಂಬ ವಿಶೇಷಣ ನೀಡಿದ್ದಾರೆ.

ಪೀಯೂಷ್‌ ಪ್ರವರ್ತಕರಾಗಿರುವ ಕಂಪೆನಿಯ ಹೆಸರು ಶಿರಡಿ. ಹಾಗಾಗಿ  ‘ಶಿರಡಿಯ ಚಮತ್ಕಾರ’ ಎಂಬ ಶಬ್ದ ಬಳಸಿದ್ದಾರೆ.

ಪ್ರತಿಕ್ರಿಯಿಸಿ (+)