ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೃಷ್ಣಪ್ಪ ಲೇಔಟ್‌’ನಲ್ಲಿ ಗಾಳಿಸುದ್ದಿಯ ಸುಂಟರಗಾಳಿ!

ಕಾಮಗಾರಿಗಳ ಶ್ರೇಯ ಪಡೆಯಲು ಕಾಂಗ್ರೆಸ್‌– ಬಿಜೆಪಿ ಮಧ್ಯೆ ಪೈಪೋಟಿ
Last Updated 3 ಏಪ್ರಿಲ್ 2018, 20:03 IST
ಅಕ್ಷರ ಗಾತ್ರ

ನಿನ್ನೆ–ಮೊನ್ನೆಯವರೆಗೆ ಈ ಕ್ಷೇತ್ರದ ಯಾವ ರಾಜಕಾರಣಿಗೂ ಮಾತನಾಡಲು ಪುರುಸೊತ್ತೇ ಇರಲಿಲ್ಲ. ಗಲ್ಲಿ–ಗಲ್ಲಿಯಲ್ಲಿ ನಡೆದಿರುವ ‘ಅಭಿವೃದ್ಧಿ’ ಕಾರ್ಯಗಳ ಮೇಲುಸ್ತುವಾರಿ ನೋಡಿಕೊಳ್ಳುವಷ್ಟರಲ್ಲೇ ಅವರ ಸಮಯವೆಲ್ಲ ಕಳೆದು ಹೋಗುತ್ತಿತ್ತು. ಹಿಂದಿನ ಎಂಟು ತಿಂಗಳ ಅವಧಿಯೊಳಗೆ ಈ ಭಾಗದಲ್ಲಿ ಬರೋಬ್ಬರಿ ₹ 72 ಕೋಟಿ ವೆಚ್ಚದ ಕಾಮಗಾರಿಗಳು ನಡೆದಿವೆ ಎಂದರೆ ಸುಮ್ಮನೆಯೇ ಮತ್ತೆ?

ಬೆಂಗಳೂರಿನ ವಿಜಯನಗರ ಕ್ಷೇತ್ರದಾದ್ಯಂತ ಚರಂಡಿ ಮೇಲಿನ ಚಪ್ಪಡಿ ಕಲ್ಲುಗಳು ಒಮ್ಮೆ ಮೈಕೊಡವಿಕೊಂಡು ಮತ್ತೆ ಸ್ವಸ್ಥಾನದಲ್ಲಿ ಪವಡಿಸಿವೆ. ಅವುಗಳ ಮೇಲೀಗ ಹೊಸ ಗಿಲೀಟು ಮೆತ್ತಿಕೊಂಡಿದೆ. ಬಹುತೇಕ ಎಲ್ಲ ರಸ್ತೆಗಳಿಗೂ ಟಾರು ಹಾಕಲಾಗಿದೆ. ಈ ಕಾಮಗಾರಿಗಳ ಶ್ರೇಯ ಪಡೆಯಲು ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ (ಶಾಸಕರು ವರ್ಸಸ್‌ ಕಾರ್ಪೊರೇಟರ್‌ಗಳು) ಪೈಪೋಟಿ ಏರ್ಪಟ್ಟಿದೆ!

ಕರಿಬಣ್ಣ ಬಳಿದುಕೊಂಡ ರಸ್ತೆಗಳ ಮೇಲೆ ನಿಂತು ಜನ ಕೇಳೋದು ಈಗ ಒಂದೇ ಪ್ರಶ್ನೆ: ‘ಈ ಬಾರಿ, ತಂದೆ–ಮಗನದು ಯಾವ ಪಾರ್ಟಿ?’ ಇಲ್ಲಿ ತಂದೆ–ಮಗ ಎಂದೊಡನೆ ಪದ್ಮನಾಭನಗರದ ಗೌಡರ ಕುಟುಂಬದತ್ತಲೇ ನೋಡಬೇಕಿಲ್ಲ. ಏಕೆಂದರೆ, ಇದು ವಿಜಯನಗರದ ಗೌಡರ ಕುಟುಂಬದ ಕುರಿತಾದ ಪ್ರಶ್ನೆ. ಅಂದಹಾಗೆ, ವಸತಿ ಸಚಿವ ಎಂ.ಕೃಷ್ಣಪ್ಪ ಈ ಮನೆತನದ ಯಜಮಾನ.

ಒಂದೊಮ್ಮೆ ಪೊಲೀಸ್‌ ಇಲಾಖೆಯಲ್ಲಿದ್ದ ಕೃಷ್ಣಪ್ಪ, ಆ ಹುದ್ದೆಗೆ ರಾಜೀನಾಮೆ ನೀಡಿ, ರಿಯಲ್‌ ಎಸ್ಟೇಟ್‌ ಉದ್ಯಮದೊಳಗೆ ಧುಮುಕಿದವರು. ಹಲವು ಬಡಾವಣೆಗಳನ್ನು ಅಭಿವೃದ್ಧಿಪಡಿಸಿದ ಅವರು, ‘ಲೇಔಟ್‌ ಕೃಷ್ಣಪ್ಪ’ ಎಂದೇ ಹೆಸರಾದವರು. ರಾಜ್ಯದ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರು. 2008ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಪಡೆಯುವ ಮುನ್ನ ಒಂದು ಬಾರಿ ಅದೇ ಪಕ್ಷದಿಂದ ವಿಧಾನ ಪರಿಷತ್‌ ಸದಸ್ಯರೂ ಆಗಿದ್ದರು.

ವಿಜಯನಗರ ಕ್ಷೇತ್ರದಿಂದ ಎರಡು ಬಾರಿ ಕಾಂಗ್ರೆಸ್‌ ಶಾಸಕರಾಗಿ ಆಯ್ಕೆಯಾಗಿರುವ ಅವರು, ಮತ್ತೆ ಇಲ್ಲಿಂದಲೇ ಸ್ಪರ್ಧಿಸುವುದು ನಿಕ್ಕಿ. ಆದರೆ, ಯಾವ ಪಕ್ಷದಿಂದ ಎನ್ನುವುದು ಮಾತ್ರ ಇನ್ನೂ ನಿಗೂಢ. ಕಾಂಗ್ರೆಸ್‌ನ ಪ್ರಭಾವಿ ನಾಯಕ ಡಿ.ಕೆ. ಶಿವಕುಮಾರ್‌ ಅವರ ಜತೆಗಿನ ಮುನಿಸು, ಕೃಷ್ಣಪ್ಪ ಅವರ ಒಲವು ಬಿಜೆಪಿಯತ್ತ ತಿರುಗುವಂತೆ ಮಾಡಿದೆ ಎನ್ನುವುದು ಈಗ ಕೇವಲ ಗುಟ್ಟಿನ ಮಾತಾಗಿ ಉಳಿದಿಲ್ಲ.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರು ಇತ್ತೀಚೆಗೆ ಮಂಡ್ಯ ಜಿಲ್ಲೆಯಲ್ಲಿ ರೋಡ್‌ ಷೋ ನಡೆಸಿದಾಗ, ಆ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಕೃಷ್ಣಪ್ಪ ಗೈರಾಗಿದ್ದರು. ಆಗ ಅವರು ಕಾಂಗ್ರೆಸ್‌ ತೊರೆಯುವ ಗಾಳಿಸುದ್ದಿ ಮತ್ತಷ್ಟು ಬಲ ಪಡೆದು ಸುಂಟರಗಾಳಿಯಂತೆ ಸುಳಿದಾಡಿತು. ‘ಅಪ್ಪನಿಗೆ ವಿಜಯನಗರ, ಮಗನಿಗೆ (ಪ್ರಿಯಾಕೃಷ್ಣ) ಮಾಗಡಿಯಿಂದ ಟಿಕೆಟ್‌ ನೀಡುವ ಖಾತ್ರಿ ಬಿಜೆಪಿ ಕಡೆಯಿಂದ ಸಿಕ್ಕಿದೆ’ ಎನ್ನುವುದು ಈಗಿನ ಗಾಳಿಸುದ್ದಿ. ಸಚಿವರು ಮಾತ್ರ ಕಾಂಗ್ರೆಸ್‌ನಿಂದಲೇ ಮರುಸ್ಪರ್ಧೆ ಎನ್ನುತ್ತಿದ್ದಾರೆ. ಆದರೆ, ರಾಜಕೀಯ ಮಡುವಿನ ಒಳಸುಳಿಗಳನ್ನು ಬಲ್ಲವರು ಯಾರು?

ಹಿಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ದೊಡ್ಡ ಅಂತರದಿಂದ ಸೋತಿದ್ದ ಈ ಭಾಗದ ಪ್ರಭಾವಿ ನಾಯಕ ವಿ.ಸೋಮಣ್ಣ, ಈ ಸಲ ಗೋವಿಂದರಾಜನಗರ ಕ್ಷೇತ್ರಕ್ಕೆ ವಲಸೆ ಹೊರಟಿದ್ದಾರೆ. ಕ್ಷೇತ್ರದ ಅಭ್ಯರ್ಥಿಯೇ ಅಂತಿಮಗೊಳ್ಳದಿರುವ ಕಾರಣ ‘ನೆಲ ಹದ’ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಆಗುತ್ತಿಲ್ಲ ಎನ್ನುವುದು ಬಿಜೆಪಿ ಕಾರ್ಯಕರ್ತರ ಅಳಲು.

ಕಮಲದ ಪಾಳಯದಿಂದ ಅಭ್ಯರ್ಥಿಯಾಗಿ ಎಚ್‌.ರವೀಂದ್ರ ಅವರ ಹೆಸರು ಮುಂಚೂಣಿಯಲ್ಲಿದೆ. ಎರಡು ಸಲ ಕಾರ್ಪೊರೇಟರ್‌ ಆಗಿದ್ದಲ್ಲದೆ, ಕಳೆದ ಚುನಾವಣೆಯಲ್ಲಿ ಗೋವಿಂದರಾಜ ನಗರದಿಂದ ಸ್ಪರ್ಧಿಸಿ ಸೋತಿದ್ದ ರವೀಂದ್ರ ಅವರ ಇನ್ನೊಂದು ಅದೃಷ್ಟ ಪರೀಕ್ಷೆ ಯತ್ನಕ್ಕೆ ಸೋಮಣ್ಣ ಅವರ ಬೆಂಬಲ ಕೂಡ ಇದೆಯಂತೆ. ಅಶ್ವತ್ಥನಾರಾಯಣ ಹಾಗೂ ಲಕ್ಷ್ಮಿನಾರಾಯಣ ಅವರು ಸಹ ಈ ಪಕ್ಷದಿಂದ ಟಿಕೆಟ್‌ ಆಕಾಂಕ್ಷಿಗಳು.

ಜೆಡಿಎಸ್‌ಗೆ ಇಲ್ಲಿ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎನ್ನುವಂತಹ ಸ್ಥಿತಿ. ಹಿಂದಿನ ಎರಡು ಚುನಾವಣೆಗಳಲ್ಲಿ ಆ ಪಕ್ಷದಿಂದ ಸ್ಪರ್ಧಿಸಿದ್ದ ಇಂದಿರಾ ಜಯರಾಂ (2008) ಹಾಗೂ ಬಿ.ಎಸ್. ಕನ್ಯಾಕುಮಾರಿ (2013) ತಲಾ ನಾಲ್ಕುಸಾವಿರ ಓಟು ಪಡೆಯಲಷ್ಟೇ ಯಶಸ್ವಿಯಾಗಿದ್ದರು.

ಮೈಸೂರು, ಮಾಗಡಿ ಹಾಗೂ ಪಶ್ಚಿಮ ಕಾರ್ಡ್‌ ರಸ್ತೆಗಳಗುಂಟ ಪಸರಿಸಿರುವ ಈ ಕ್ಷೇತ್ರದಲ್ಲಿ ಒಕ್ಕಲಿಗರು ಹಾಗೂ ಕುರುಬರು ಗಣನೀಯ ಸಂಖ್ಯೆಯಲ್ಲಿದ್ದಾರೆ. ನಾಯಂಡಹಳ್ಳಿಯಿಂದ ಮೆಟ್ರೊ ರೈಲು ಓಡಾಡಲು ಆರಂಭಿಸಿದ ಮೇಲೆ ಇಲ್ಲಿನ ಜನರ ದಿನಚರಿಯಲ್ಲಿ ದೊಡ್ಡ ಬದಲಾವಣೆ ಆಗಿದೆಯಾದರೂ ಟ್ರಾಫಿಕ್‌ ಸಮಸ್ಯೆ ಹಾಗೇ ಇದೆ. ಕಿಷ್ಕಿಂಧೆಯಂತಹ ರಸ್ತೆಗಳಲ್ಲಿ ವಾಹನಗಳು ಓಡಲಾಗದೆ ಕುಯ್ಯೋ ಮರ್ರೋ ಎನ್ನುತ್ತವೆ. ಕೆಂಪಾಪುರ ಅಗ್ರಹಾರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಕುಡಿಯುವ ನೀರಿನ ಬರ ನೀಗಿಲ್ಲ.

ಕ್ಷೇತ್ರದ ವಿವಿಧ ಕಡೆಗಳಲ್ಲಿರುವ ಕೊಳೆಗೇರಿಗಳಲ್ಲಿ ಯಾರೇ ಸತ್ತರೂ ರಾಜಕಾರಣಿಗಳಿಂದ ಅಂತ್ಯಕ್ರಿಯೆಗೆ ಧನಸಹಾಯ ಹೋಗುತ್ತದೆ. ಆದರೆ, ನರಕದಲ್ಲಿ ನಿತ್ಯ ಸಾಯುತ್ತಿರುವ ತಮಗೆ ಪರ್ಯಾಯ ವ್ಯವಸ್ಥೆ ರೂಪಿಸದ ಅಧಿಕಾರಸ್ಥರ ಬಗೆಗೆ ಅಲ್ಲಿನ ನಿವಾಸಿಗಳಲ್ಲಿ ಸಿಟ್ಟಿದ್ದರೂ ಸಹಾಯದ ರೂಪದಲ್ಲಿ ಬರುವ ಧನ ಅವರನ್ನು ಶಾಂತವಾಗಿರಿಸಿದೆ.

ವಿಧಾನಸಭೆಗೆ ಕಾಂಗ್ರೆಸ್‌; ಬಿಬಿಎಂಪಿಗೆ ಬಿಜೆಪಿ

ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಎಂಟು ವಾರ್ಡ್‌ಗಳಿವೆ. ಐದು ವಾರ್ಡ್‌ಗಳಲ್ಲಿ (ವಿಜಯನಗರ, ಅತ್ತಿಗುಪ್ಪೆ, ಹಂಪಿನಗರ, ದೀಪಾಂಜಲಿನಗರ, ಹೊಸಹಳ್ಳಿ) ಬಿಜೆಪಿ ಜಯಿಸಿದರೆ, ಎರಡು ವಾರ್ಡ್‌ಗಳಲ್ಲಿ (ಬಾಪೂಜಿನಗರ ಮತ್ತು ಗಾಳಿ ಆಂಜನೇಯ ದೇವಸ್ಥಾನ) ಕಾಂಗ್ರೆಸ್‌ ಗೆದ್ದಿದೆ. ಮತ್ತೊಂದು ವಾರ್ಡ್‌ (ಕೆಂಪಾಪುರ ಅಗ್ರಹಾರ) ಸ್ವತಂತ್ರ ಅಭ್ಯರ್ಥಿಯ ಪಾಲಾಗಿದೆ.

ಕ್ಷೇತ್ರ ವಿಭಜನೆಗೆ ಮುನ್ನ ಈ ಭಾಗ ಬಿನ್ನಿಪೇಟೆ ಕ್ಷೇತ್ರದಲ್ಲಿತ್ತು. ವಿಧಾನಸಭೆ ಚುನಾವಣೆಯಲ್ಲಿ ಇದುವರೆಗೆ ಬಿಜೆಪಿ ಇಲ್ಲಿ ಖಾತೆಯನ್ನೇ ತೆರೆದಿಲ್ಲ. ಆದರೆ, ಬಿಬಿಎಂಪಿ ಮತ್ತು ಲೋಕಸಭಾ ಚುನಾವಣೆಯಲ್ಲಿ ಮಾತ್ರ ಒಳ್ಳೆಯ ಫಸಲನ್ನೇ ತೆಗೆದಿದೆ. ಕಳೆದ ಚುನಾವಣೆಯಲ್ಲಿ ಕೃಷ್ಣಪ್ಪ ಅವರು 32,642 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು. ಅದೇ ಓಟ ಮುಂದುವರಿಸಲು ಕಾಂಗ್ರೆಸ್‌ ಯತ್ನಿಸುತ್ತಿದ್ದರೆ, ತೊಡರುಗಾಲು ಹಾಕಲು ಬಿಜೆಪಿ ಹವಣಿಸುತ್ತಿದೆ.

‘ಬೇರೆ ಮನೆಯಲ್ಲೇನು ಕೆಲಸ?’

ನಮ್ಮ ಮನೆಯಲ್ಲಿ (ಕಾಂಗ್ರೆಸ್‌) ನಾವು ಆರಾಮವಾಗಿಯೇ ಇದ್ದೇವೆ. ಬೇರೆ ಮನೆಯಲ್ಲಿ ನಮಗೇನು ಕೆಲಸ? ಯಾರೊಂದಿಗೂ ಭಿನ್ನಾಭಿಪ್ರಾಯವಿಲ್ಲ. ಕ್ಷೇತ್ರದಲ್ಲಿ ಆಗಿರುವ ಕೆಲಸಗಳನ್ನು ನೀವೇ ಒಮ್ಮೆ ಓಡಾಡಿ ನೋಡಿ. ಚರಂಡಿಗಳು ಹೊಸರೂಪ ಪಡೆದಿವೆ. ರಸ್ತೆಗಳಿಗೆ ಟಾರು ಹಾಕುವ ಕೆಲಸ ಬಹುತೇಕ ಮುಕ್ತಾಯದ ಹಂತದಲ್ಲಿದೆ. ನಮ್ಮ ಕ್ಷೇತ್ರದಲ್ಲಿ ನೀರಿನ ಸಮಸ್ಯೆಯೂ ಇಲ್ಲ.

ಎಂ.ಕೃಷ್ಣಪ್ಪ, ವಸತಿ ಸಚಿವ

***

ರಸ್ತೆಗಳು ಹದಗೆಟ್ಟು, ಸಂಚಾರಕ್ಕೆ ಯೋಗ್ಯವಿಲ್ಲದೆ ಎಷ್ಟೋ ವರ್ಷಗಳಾಗಿದ್ದವು. ಚುನಾವಣೆ ನೆಪದಲ್ಲಿ ಅವುಗಳೆಲ್ಲ ದುರಸ್ತಿ ಕಾಣುತ್ತಿವೆ. ಕಾವೇರಿ ನೀರು ಮೂರು ದಿನಗಳಿಗೊಮ್ಮೆ ಬರುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ಹಾಗೇ ಇದೆ. ಅಭಿವೃದ್ಧಿ ಹೆಸರಿನಲ್ಲಿ ದೊಡ್ಡ ಕನಸುಗಳನ್ನು ಬಿತ್ತಲಾಗುತ್ತಿದೆ. ಆದರೆ, ನಮಗೆ ಪುಟ್ಟ ಸಮಸ್ಯೆಗಳು ನೀಗಿದರೆ ಸಾಕು.

ಎಲ್‌.ರಮೇಶ್‌, ಲೆಕ್ಕ ಪರಿಶೋಧಕ, ಕೆಂಪಾಪುರ ಅಗ್ರಹಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT