ಶುಕ್ರವಾರ, ಡಿಸೆಂಬರ್ 13, 2019
17 °C
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಿಬಿಎಸ್‌ಇ ನಿರ್ಧಾರ; ಪೋಷಕರೂ ನಿರಾಳ

10ನೇ ತರಗತಿ ಗಣಿತ ಮರುಪರೀಕ್ಷೆ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

10ನೇ ತರಗತಿ ಗಣಿತ ಮರುಪರೀಕ್ಷೆ ಇಲ್ಲ

ನವದೆಹಲಿ: 10ನೇ ತರಗತಿ ಗಣಿತ ವಿಷಯಕ್ಕೆ ಮರು ಪರೀಕ್ಷೆ ನಡೆಸದಿರಲು ಕೇಂದ್ರ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ನಿರ್ಧರಿಸಿದೆ. ಇದರಿಂದಾಗಿ, ಮರು ಪರೀಕ್ಷೆ ಬರೆಯುವ ಆತಂಕದಲ್ಲಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರು ನಿರಾಳರಾಗಿದ್ದಾರೆ.

‘ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಶಾಲಾ ಶಿಕ್ಷಣ ವಿಭಾಗದ ಕಾರ್ಯದರ್ಶಿ ಅನಿಲ್ ಸ್ವರೂಪ್ ಮಂಗಳವಾರ ಟ್ವೀಟ್‌ ಮಾಡಿದ್ದಾರೆ.

ವಿದೇಶಗಳಲ್ಲಿ ಸಿಬಿಎಸ್‌ಇ 10 ಮತ್ತು 12ನೇ ತರಗತಿಯ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಈ ಎರಡೂ ವಿಷಯಗಳ ಮರು ಪರೀಕ್ಷೆ ಬರೆಯುವ ಅವಶ್ಯಕತೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಗಣಿತ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದರೂ ಪರೀಕ್ಷೆಯ ಮೇಲೆ ಅದರ ಪರಿಣಾಮವಾಗಿಲ್ಲ. ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮತ್ತು ವಿಶ್ಲೇಷಣೆಯ ನಂತರ ಅಧಿಕಾರಿಗಳಿಗೆ ಈ ವಿಷಯ ಮನವರಿಕೆಯಾಗಿದೆ. ಹಾಗಾಗಿ ಮರು ಪರೀಕ್ಷೆ ನಿರ್ಧಾರ ಕೈಬಿಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರಸ್ತಾಪ ಇಲ್ಲ: 12ನೇ ತರಗತಿ ಅರ್ಥಶಾಸ್ತ್ರದ ಮರು ಪರೀಕ್ಷೆ ಬಗ್ಗೆ ಮಂಡಳಿ ಅಥವಾ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಪ್ರಸ್ತಾಪ ಮಾಡಿಲ್ಲ.

ಈ ಮೊದಲೇ ನಿಗದಿಪಡಿಸಿದಂತೆ ಏಪ್ರಿಲ್‌ 25ರಂದು ದೇಶದಾದ್ಯಂತ ಅರ್ಥಶಾಸ್ತ್ರದ ಮರು ಪರೀಕ್ಷೆ ನಡೆಯಲಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮೂಲಗಳು ತಿಳಿಸಿವೆ.

ಮಾರ್ಚ್‌ 10ರಂದು ನಡೆದ ಗಣಿತ ಪರೀಕ್ಷೆ ಪ್ರಶ್ನೆಪತ್ರಿಕೆ ಹರಿಯಾಣ, ದೆಹಲಿ ಮತ್ತು ದೆಹಲಿ ರಾಜಧಾನಿ ಪ್ರದೇಶಗಳಲ್ಲಿ ಸೋರಿಕೆಯಾಗಿತ್ತು. ಇಲ್ಲಿ ಜುಲೈನಲ್ಲಿ ಮರು ಪರೀಕ್ಷೆ ನಡೆಸುವುದಾಗಿ ಸಿಬಿಎಸ್‌ಇ ಪ್ರಕಟಿಸಿತ್ತು.

ಇದನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಸುಪ್ರೀಂ ಕೋರ್ಟ್‌ ಮತ್ತು ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳ ವಿಚಾರಣೆ ನಡೆಯಲಿದೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಕೂಡ ಈ ಕುರಿತು ಕೇಂದ್ರ ಮತ್ತು ಸಿಬಿಎಸ್‌ಇಯಿಂದ ವರದಿ ಕೇಳಿದೆ.

ಪ್ರತಿಕ್ರಿಯಿಸಿ (+)