ಶುಕ್ರವಾರ, ಡಿಸೆಂಬರ್ 6, 2019
25 °C

ಭರವಸೆಯಲ್ಲಿ ಸ್ಪಿನ್ ದ್ವಯರು

Published:
Updated:
ಭರವಸೆಯಲ್ಲಿ ಸ್ಪಿನ್ ದ್ವಯರು

ಬೆಂಗಳೂರು: ‘ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) ಆಡಲು ಯಾವುದೇ ಬಗೆಯ ಒತ್ತಡ ಇಲ್ಲ’ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಆಫ್‌ ಸ್ಪಿನ್ನರ್‌ ವಾಷಿಂಗ್ಟನ್ ಸುಂದರ್ ಮತ್ತು ಲೆಗ್ ಸ್ಪಿನ್ನರ್‌ ಯಜುವೇಂದ್ರ ಚಾಹಲ್ ಭರವಸೆಯಿಂದ ನುಡಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ಅಭ್ಯಾಸದ ನಡುವೆ ಪತ್ರಕರ್ತರ ಜೊತೆ ಇವರಿಬ್ಬರು ಮಾತನಾಡಿದರು.

‘ಲೆಗ್ ಸ್ಪಿನ್ನರ್ ಚಾಹಲ್ ಜೊತೆ ಬೌಲಿಂಗ್ ಮಾಡಲು ಖುಷಿಯಾಗುತ್ತದೆ. ನಮ್ಮ ಜೋಡಿ ತಂಡದ ಗೆಲುವಿಗೆ ಸಹಕಾರಿಯಾಗುವ ವಿಶ್ವಾಸವಿದೆ. ಚಿನ್ನಸ್ವಾಮಿ ಅಂಗಣದಲ್ಲಿ ಪವರ್‌ ಪ್ಲೇ ಸಂದರ್ಭದಲ್ಲಿ ಬೌಲಿಂಗ್ ಮಾಡುವುದು ದೊಡ್ಡ ಸವಾಲು. ಆದರೂ ಆಟಗಾರನ ಮನಸ್ಥಿತಿಯನ್ನು ಅರ್ಥೈಸಿಕೊಂಡು ಬೌಲಿಂಗ್ ಮಾಡುತ್ತೇನೆ’ ಎಂದು ವಾಷಿಂಗ್ಟನ್ ಸುಂದರ್ ತಿಳಿಸಿದರು.

‘ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಉತ್ತಮ ಸಾಮರ್ಥ್ಯ ತೋರಿರುವುದರಿಂದ ಐಪಿಎಲ್‌ನಲ್ಲಿ ಒತ್ತಡಕ್ಕೆ ಒಳಗಾಗಲು ಸಾಧ್ಯವಿಲ್ಲ. ಎಲ್ಲ ಪಂದ್ಯಗಳನ್ನೂ ನಾನು ಒಂದೇ ರೀತಿ ನೋಡುತ್ತೇನೆ. ಆದ್ದರಿಂದ ಆರ್‌ಸಿಬಿ ಪರವಾಗಿ ಒತ್ತಡವಿಲ್ಲದೆ ಆಡುವೆನು’ ಎಂದು ಅವರು ಹೇಳಿದರು.

‘ಬೆಂಗಳೂರಿನಲ್ಲಿ ಆಡುವುದೆಂದರೆ ನನಗೆ ತುಂಬ ಖುಷಿ. ಇಲ್ಲಿ ಪೂರ್ಣಪ್ರಮಾಣದಲ್ಲಿ ನನ್ನ ಸಾಮರ್ಥ್ಯವನ್ನು ಹೊರಗೆಡವಲು ಪ್ರಯತ್ನಿಸಲಿದ್ದೇನೆ. ನನ್ನ ಸಾಮರ್ಥ್ಯದ ಮೇಲೆ ನನಗೆ ಪೂರ್ಣ ನಂಬಿಕೆ ಇರುವುದರಿಂದ ಹೆಚ್ಚು ಪ್ರಯೋಗಗಳನ್ನು ಮಾಡಲು ಮುಂದಾಗುವುದಿಲ್ಲ’ ಎಂದರು.

ಎಲ್ಲ ಸಂದರ್ಭದಲ್ಲೂ ಆಡಲು ಸಜ್ಜು

‘ಪವರ್ ಪ್ಲೇ ಇರಲಿ, ಇನಿಂಗ್ಸ್‌ನ ಮಧ್ಯದಲ್ಲಿಯೇ ಇರಲಿ, ಬೌಲಿಂಗ್ ಮಾಡಲು ನಾನು ಮತ್ತು ವಾಷಿಂಗ್ಟನ್‌ ಸಜ್ಜಾಗಿದ್ದೇವೆ. ನಿದಾಸ್ ಟ್ರೋಫಿ ಟ್ವೆಂಟಿ–20 ಕ್ರಿಕೆಟ್‌ ಸರಣಿಯಲ್ಲಿ ನಾವು ಜೊತೆಯಾಗಿ ಬೌಲಿಂಗ್ ಮಾಡಿದ್ದೇವೆ. ಡ್ರೆಸಿಂಗ್ ಕೊಠಡಿಯಲ್ಲಿ ಕುಳಿತು ಚರ್ಚಿಸಿದ್ದೇವೆ. ಅಲ್ಲಿ ಮಾತನಾಡಿದ ವಿಷಯಗಳು ಇಲ್ಲಿಯೂ ಪ್ರಯೋಜನಕ್ಕೆ ಬರುವ ಸಾಧ್ಯತೆ ಇದೆ’ ಎಂದು ಯಜುವೇಂದ್ರ ಚಾಹಲ್ ಹೇಳಿದರು.

‘ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಐಪಿಎಲ್‌ನಲ್ಲಿ ಆಡುವುದು ಸವಾಲಿನ ವಿಷಯವಲ್ಲ’ ಎಂದು ಹೇಳಿದ ಅವರು ‘ಕಳೆದ ನಾಲ್ಕು ವರ್ಷಗಳಲ್ಲಿ ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ, ಚಿನ್ನಸ್ವಾಮಿಯಂಥ ಸಣ್ಣ ಅಂಗಣದಲ್ಲಿ ಆಡುವಾಗ ಯಾವ ತಂತ್ರಗಳನ್ನು ಬಳಸಬೇಕು ಎಂಬುದು ತಿಳಿದಿದೆ’ ಎಂದರು.

ಪ್ರತಿಕ್ರಿಯಿಸಿ (+)