ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಬಗ್ಗೆ ನಿಲುವು ಸ್ಪಷ್ಟಪಡಿಸಿ: ಕೇಂದ್ರಕ್ಕೆ ಹೈಕೋರ್ಟ್‌ ತಾಕೀತು

ತಜ್ಞರ ಸಮಿತಿ ರಚನೆ ಪ್ರಶ್ನಿಸಿದ ಪಿಐಎಲ್
Last Updated 3 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಲಿಂಗಾಯತ, ವೀರಶೈವ ಲಿಂಗಾಯತರಿಗೆ (ಬಸವತತ್ವ ಒಪ್ಪುವವರು) ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ರಾಜ್ಯ ಸರ್ಕಾರ ಕಳುಹಿಸಿರುವ ಶಿಫಾರಸಿನ ಬಗ್ಗೆ ನಿಮ್ಮ ನಿಲುವು ಏನೆಂಬುದನ್ನು ಸ್ಪಷ್ಟಪಡಿಸಿ’ ಎಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ತಾಕೀತು ಮಾಡಿದೆ.

ಲಿಂಗಾಯತರಿಗೆ ಸ್ವತಂತ್ರ ಧರ್ಮದ ಮಾನ್ಯತೆ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಅಲ್ಪಸಂಖ್ಯಾತ ಆಯೋಗವು ತಜ್ಞರ ಸಮಿತಿ ರಚನೆಗೆ ಆದೇಶ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ನಾಲ್ಕು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್‌) ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಕೇಂದ್ರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ಕೆ.ನಾವದಗಿ, ‘ರಾಜ್ಯ ಸರ್ಕಾರ ಕಳುಹಿಸಿರುವ ಶಿಫಾರಸಿನ ಬಗ್ಗೆ ನಮಗೆ ಈತನಕ ಯಾವುದೇ ಮಾಹಿತಿ ಬಂದಿಲ್ಲ. ಈ ಕುರಿತಂತೆ ಗೃಹ ಇಲಾಖೆಯಿಂದ ವಿವರಣೆ ಪಡೆಯಲು ಸಮಯಾವಕಾಶ ಬೇಕು’ ಎಂದು ಕೋರಿದರು.

ಆದರೆ, ಇದನ್ನು ಒಪ್ಪದ ದಿನೇಶ್ ಮಾಹೇಶ್ವರಿ, ‘ಶಿಫಾರಸು ಕುರಿತಂತೆ ಮುಂದುವರಿಯುತ್ತೀರೊ ಇಲ್ಲವೊ ಎಂಬುದನ್ನೂ ತಡಮಾಡದೆ ಕೋರ್ಟ್‌ಗೆ ನಿಖರವಾಗಿ ತಿಳಿಸಿ’ ಎಂಬ ಖಡಕ್‌ ನಿರ್ದೇಶನ ನೀಡಿದರು.

ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್‌ ಜನರಲ್‌ ಎಂ.ಆರ್.ನಾಯಕ್, ‘ಕಳೆದ ತಿಂಗಳ 22ರಂದು ರಾಜ್ಯ ಸರ್ಕಾರ ಲಿಂಗಾಯತ, ವೀರಶೈವ ಲಿಂಗಾಯತರಿಗೆ (ಬಸವತತ್ವ ಒಪ್ಪುವವರು) ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡಿ ಅಧಿಸೂಚನೆ ಹೊರಡಿಸಿದೆ ಮತ್ತು ಈ ಕುರಿತಂತೆ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ’ ಎಂದು ತಿಳಿಸಿದರು.

ಇದಕ್ಕೆ ನ್ಯಾಯಪೀಠ, ‘ಈ ಸಂಗತಿಯನ್ನು ನೀವು ಪ್ರಮಾಣ ಪತ್ರದ ಮೂಲಕ ಅಧಿಕೃತವಾಗಿ ಸಲ್ಲಿಸಿ’ ಎಂದು ಸೂಚಿಸಿತು.

ಅರ್ಜಿದಾರರ ಪರ ವಕೀಲ ಜಿ.ಆರ್.ಗುರುಮಠ, ‘ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುತ್ತದೆ ಎಂಬ ವಿಷಯ ಗೊತ್ತಿದ್ದರಿಂದಲೇ ಸರ್ಕಾರ ತರಾತುರಿಯಲ್ಲಿ ತಜ್ಞರ ಸಮಿತಿಯ ವರದಿಯನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ’ ಎಂದು ಆಕ್ಷೇಪಿಸಿದರು.

ಮತ್ತೊಬ್ಬ ಅರ್ಜಿದಾರರ ಪರ ಹಾಜರಿದ್ದ ಲಕ್ಷ್ಮೀ ಅಯ್ಯಂಗಾರ್, 'ರಾಜ್ಯ ಸರ್ಕಾರ ತನ್ನ ಅಧಿಕಾರ ವ್ಯಾಪ್ತಿ ಮೀರಿ ಲಿಂಗಾಯತರಿಗೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡಿದೆ’ ಎಂದರು.

ವಿಚಾರಣೆಯನ್ನು ಇದೇ 13ಕ್ಕೆ ಮುಂದೂಡಲಾಗಿದೆ.
**
‘ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ಬೇಡ’
ಶಿವಯೋಗ ಮಂದಿರ (ಬಾಗಲಕೋಟೆ): ‘ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಮನವಿ ಮಾಡಲಾಗುವುದು. ಅದು ನಮ್ಮ ನೈತಿಕ ಹಕ್ಕು’ ಎಂದು ಶಿವಯೋಗ ಮಂದಿರ ಸಂಸ್ಥೆ ಅಧ್ಯಕ್ಷ ಸಂಗನಬಸವ ಸ್ವಾಮೀಜಿ ಮಂಗಳವಾರ ಇಲ್ಲಿ ಹೇಳಿದರು.

ಶಿವಯೋಗ ಮಂದಿರಕ್ಕೆ ಅಮಿತ್ ಶಾ ಭೇಟಿ ನೀಡುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ನಿಂತವರೇ ಲಿಂಗಧಾರಣೆ ಮಾಡಿಲ್ಲ. ಹಾಗೆಂದರೇನು ಎಂಬುದೇ ಅವರಿಗೆ ಗೊತ್ತಿಲ್ಲ. ಅಂಥವರು ಪ್ರತ್ಯೇಕ ಧರ್ಮದ ಮಾನ್ಯತೆ ಕೇಳುತ್ತಿದ್ದಾರೆ. ಬಸವಣ್ಣನವರ ಬಗ್ಗೆ ಅಂಥವರಿಂದ ಉಪದೇಶ ಕೇಳಬೇಕಾಗಿಲ್ಲ’ ಎಂದರು.

‘ನಾವು ಕೂಡ ಶೋಷಣೆಯ ವಿರುದ್ಧ ಇರುವವರೇ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಂತಹ ನಿರ್ಧಾರ ತೆಗೆದುಕೊಂಡಿದ್ದು ತಪ್ಪು. ಚುನಾವಣೆ ಹೊಸ್ತಿಲಲ್ಲಿ ಧರ್ಮ ಒಡೆಯುವ ಕೆಲಸ ಮಾಡಬಾರದಿತ್ತು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಶಿವಯೋಗ ಮಂದಿರವು ಸ್ವಾಮೀಜಿಗಳನ್ನು ರೂಪಿಸುವ ಸಂಸ್ಥೆ. ಇದೊಂದು ರಾಜಕೀಯೇತರ ಸಂಸ್ಥೆ ಆಗಿರುವುದರಿಂದ ಇಲ್ಲಿ ಎಲ್ಲಾ ಪಕ್ಷಗಳ ಮುಖಂಡರಿಗೂ ಮುಕ್ತ ಅವಕಾಶ ಇದೆ. ಈ ಹಿಂದೆ ಸೋನಿಯಾ ಗಾಂಧಿ, ಎಲ್‌.ಕೆ.ಅಡ್ವಾಣಿ ಇಲ್ಲಿಗೆ ಭೇಟಿ ನೀಡಿದ್ದಾರೆ. ಮುಂದೆ ರಾಹುಲ್‌ ಗಾಂಧಿಯೂ ಬರಬಹುದು. ಅಮಿತ್‌ ಶಾ ಭೇಟಿ ನೀಡುತ್ತಿರುವುದರ ಹಿಂದೆ ಯಾವುದೇ ರಾಜಕೀಯ ಇಲ್ಲ. ಆದರೆ, ರಾಜಕೀಯ ಲಾಭ ಪಡೆಯುವುದು ಅವರ ಉದ್ದೇಶವೂ ಆಗಿರಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT