ಗುರುವಾರ , ಆಗಸ್ಟ್ 13, 2020
21 °C
ಮುಖ್ಯಮಂತ್ರಿಗೆ ಕುಮಾರಸ್ವಾಮಿ ತಿರುಗೇಟು

ಉಪಚುನಾವಣೆ ನಂತರ ಓಡಿ ಹೋಗಿದ್ದವರು ಯಾರು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಪಚುನಾವಣೆ ನಂತರ ಓಡಿ ಹೋಗಿದ್ದವರು ಯಾರು?

ಬೆಂಗಳೂರು: ‘ಕೆಲವರಿಗೆ ಸೋಲಿನ ಭಯ ಈಗಾಗಲೇ ಶುರುವಾಗಿದೆ. ಹಾಗಾಗಿ ನಾನು ಚಾಮುಂಡೇಶ್ವರಿಯಿಂದ ಸ್ಪರ್ಧಿಸುವುದಿಲ್ಲ ಎಂದು ಅಪಪ್ರಚಾರ ಮಾಡಿ, ಜನರ ಗಮನ ಬೇರೆಡೆಗೆ ತಿರುಗಿಸಲು ಯತ್ನಿಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದ ಟ್ವೀಟ್‌ಗೆ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಟ್ವೀಟ್‌ ಮೂಲಕವೇ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

‘ನನ್ನ ನಾಮಪತ್ರ ಸಲ್ಲಿಕೆಯಾದ ನಂತರ, ಅವರೇ ಭಯದಿಂದ ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸದೇ ಇದ್ದರೂ ಇರಬಹುದು ಎಂಬ ಅನುಮಾನ ನನಗೆ ಕಾಡಲು ಶುರುವಾಗಿದೆ’ ಎಂದೂ ಟ್ವೀಟ್‌ನಲ್ಲಿ ಮುಖ್ಯಮಂತ್ರಿ ಕೆಣಕಿದ್ದರು.

ಅದಕ್ಕೆ ಕುಮಾರಸ್ವಾಮಿ, ‘ಟ್ವೀಟ್‌ನಲ್ಲಿ ಎಲ್ಲಿಯೂ ಹೆಸರು ಹೇಳದೆ ಟೀಕೆಗೆ ಇಳಿದಿರುವ ಮುಖ್ಯಮಂತ್ರಿ, ಗಾಳಿಯಲ್ಲಿ ಗುದ್ದಾಡಿದಂತೆ ಕಾಣುತ್ತಿದೆ. ಎದುರಾಳಿಗಳು ಯಾರೆಂದು ಗುರುತಿಸಿಕೊಳ್ಳದ ಅವರ ಹೋರಾಟದಲ್ಲಿ ಗುರಿಯೇ ಇಲ್ಲ. ಇನ್ನು ಅವರ ಟ್ವೀಟ್‌ನಲ್ಲಿರುವ ‘ಕೆಲವರು’ ಬೇರೆ ಯಾರೂ ಅಲ್ಲ, ಸ್ವತಃ ಸಿದ್ದರಾಮಯ್ಯ’ ಎಂದು ತಿರುಗೇಟು ನೀಡಿದ್ದಾರೆ.

‘ಅಸಲಿಗೆ ಸೋಲಿನ ಭಯ ಕಾಡುತ್ತಿರುವುದು ಸ್ವತಃ ಮುಖ್ಯಮಂತ್ರಿಗೇ ಹೊರತು ಜೆಡಿಎಸ್‌ಗೆ ಅಲ್ಲ. ಅವರು ಹೋದ ಕಡೆಗಳಲ್ಲಿ ಜನ ಜೆಡಿಎಸ್‌ಗೆ, ದೇವೇಗೌಡರಿಗೆ, ನನಗೆ ಜೈಕಾರ ಹಾಕುತ್ತಿದ್ದಾರೆ. ಜನರಿಂದ ಆಗುತ್ತಿರುವ ಮುಜುಗರದಿಂದ ಬೇಸತ್ತಿರುವ ಅವರು, ಹತಾಶೆಯಿಂದ ಈ ರೀತಿ ಮಾತನಾಡುತ್ತಿದ್ದಾರೆ. ಸೋಲಿನ ಭಯ, ಚಡಪಡಿಕೆಯಿಂದ ಸಿದ್ದರಾಮಯ್ಯ ಈ ರೀತಿ ಟ್ವೀಟ್‌ ಮಾಡಿ ಆತಂಕ ವ್ಯಕ್ತಪಡಿಸಿ

ದ್ದಾರೆ’ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

‘ಅಲ್ಲಿ ಜಿ.ಟಿ. ದೇವೇಗೌಡ ನಮ್ಮ ಅಭ್ಯರ್ಥಿ. ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ಈಗ ಪುಂಖಾನುಪುಂಖವಾಗಿ ಮಾತನಾಡುತ್ತಿರುವ ನೀವು, 2006ರ ಉಪಚುನಾವಣೆ ನಂತರ ಆ ಕ್ಷೇತ್ರದಿಂದ ಪಲಾಯನ ಮಾಡಿದ್ದು ಏಕೆ? ಅಲ್ಲಿನ ಜನರೊಂದಿಗೆ ಇದ್ದವನು ನಾನು ಎಂದು ಈಗ ದೊಡ್ಡ ದೊಡ್ಡ ಭಾಷಣ ಮಾಡುತ್ತಿರುವ ನೀವು, ಹತ್ತು ವರ್ಷ ಅಲ್ಲಿನ ಜನರನ್ನು ಅನಾಥ ಮಾಡಿದ್ದೇಕೆ? ಮೊದಲು ಅದಕ್ಕೆ ಉತ್ತರ ಕೊಡಿ. ಆಗೆಲ್ಲ ಕ್ಷೇತ್ರವನ್ನು ಮರೆತು ಈಗ ಕೇವಲ ತಮ್ಮ ಪುತ್ರನಿಗೆ ರಾಜಕೀಯ ಆಶ್ರಯ ಕಲ್ಪಿಸಲು ವರುಣಾ ಕ್ಷೇತ್ರವನ್ನು ತೊರೆದು ಮರಳಿ ಚಾಮುಂಡೇಶ್ವರಿಗೆ ಬಂದಿದ್ದೀರಿ. ನಿಮ್ಮದು ಪುತ್ರ ವಾತ್ಸಲ್ಯವೇ ಹೊರತು ಜನಹಿತವಲ್ಲ. ಚಾಮುಂಡೇಶ್ವರಿ ಹಿತವಂತೂ ಅಲ್ಲ’ ಎಂದೂ ಕುಮಾರಸ್ವಾಮಿ ಜರಿದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.