ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್ ‘ಮತ’ ಬೇಟೆ: ಶಾ ‘ಮಠ’ ಭೇಟಿ

ಸಾರಥಿಗಳ ದಾಂಗುಡಿ: ಏರಿದ ಕಾವು
Last Updated 3 ಏಪ್ರಿಲ್ 2018, 20:08 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಭವಿಷ್ಯ ನಿರ್ಧರಿಸುವ ವಿಧಾನಸಭೆ ಚುನಾವಣೆಗೆ ತಿಂಗಳೊಪ್ಪತ್ತು ಇರುವ ಹೊತ್ತಿನಲ್ಲಿ ನಾಡಿಗೆ ಮಂಗಳವಾರ ದಾಂಗುಡಿ ಇಟ್ಟಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ ಪ್ರಚಾರದ ಕಾವನ್ನು ಮತ್ತಷ್ಟು ಹೆಚ್ಚಿಸಿದರು.

ಉತ್ತರ ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ನಡೆಸಿ, ‘ಮಠ’ಗಳಿಗೆ ಮುಡಿಭಾಗಿ ಮತ ಸೆಳೆಯುವ ಯತ್ನವನ್ನು ಶಾ ಮಾಡಿದರು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅವರಿಗೆ ಜತೆಯಾದರು.

ಜನಾಶೀರ್ವಾದ ಯಾತ್ರೆ ಅಂಗವಾಗಿ ಮಧ್ಯ ಕರ್ನಾಟಕದಲ್ಲಿ ರೋಡ್ ಶೋ, ಬಹಿರಂಗ ಸಭೆಗಳಲ್ಲಿ ಪಾಲ್ಗೊಂಡ ರಾಹುಲ್‌ ಕೈ ಪಾಳಯದಲ್ಲಿ ಹೊಸ ಹುರುಪು ತಂದರಲ್ಲದೇ, ‘ಮತ’ ಬೇಟೆಯ ಕಸರತ್ತು ಮುಂದುವರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಸಾಥ್‌ ನೀಡಿದರು.

ಶಾ ‘ಮಠ’ ಬೇಟೆ
ಮಧ್ಯ ಕರ್ನಾಟಕಕ್ಕೆ ಭೇಟಿ ನೀಡಿದ್ದ ವೇಳೆ ಲಿಂಗಾಯತ ಮಠಗಳನ್ನು ಕೇಂದ್ರೀಕರಿಸಿದ್ದ ಶಾ, ಈ ಬಾರಿ ಕುರುಬ ಸಮುದಾಯದವರ ಶ್ರದ್ಧಾಕೇಂದ್ರ ಹಾಗೂ ಭಕ್ತ ಕನಕದಾಸರ ಕರ್ಮಭೂಮಿ ಕಾಗಿನೆಲೆಗೆ ಭೇಟಿ ನೀಡಿದರು.

‘ಕುರುಬ ಸಮುದಾಯದವರು ನನ್ನ ಬೆನ್ನಿಗೆ ಇದ್ದಾರೆ, ನಮ್ಮ ಸಮುದಾಯಕ್ಕೆ ನಾನೊಬ್ಬನೇ ನಾಯಕ ಸಾಕು’ ಎಂದು ಸಿದ್ದರಾಮಯ್ಯ ಅನೇಕ ಬಾರಿ ಪ್ರತಿಪಾದಿಸಿದ್ದುಂಟು. ರಾಜ್ಯದಲ್ಲಿ ಕೇಸರಿ ಪತಾಕೆ ಹಾರಿಸುವ ಉಮೇದಿನಲ್ಲಿರುವ ಶಾ, ತಮ್ಮ ಉದ್ದೇಶದ ಸಾಕಾರಕ್ಕೆ ಕುರುಬ ಸಮುದಾಯದವರನ್ನು ಕಮಲ ಪಾಳಯದತ್ತ ಆಕರ್ಷಿಸುವ ಕಾಯಕ ಮಾಡಿದರು.

ಕಾಗಿನೆಲೆಯಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಸೇರಿದ್ದ ಭಾರಿ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ‘ಹಿಂದುಳಿದ ವರ್ಗಗಳ ನಾಯಕ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯಗೆ ಹಿಂದುಳಿದವರಿಗಿಂತ ಅಲ್ಪಸಂಖ್ಯಾತರ ಮೇಲೆ ಕಾಳಜಿ ಹೆಚ್ಚಿದೆ’ ಎಂದು ಜರಿದರು.

ಅಲ್ಲಿಂದ ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿರುವ ಶಿವಯೋಗಿ ಮಂದಿರಕ್ಕೆ ಹೆಲಿಕಾಪ್ಟರ್ ಮೂಲಕ ತೆರಳಿದ ಶಾ, ಹಾನಗಲ್ ಕುಮಾರಸ್ವಾಮಿಗಳ ಗದ್ದುಗೆ ಬಳಿ ರಾಷ್ಟ್ರೀಯ ವೀರಶೈವ ಮಠಾಧೀಶರ ಜತೆ ಗೋಪ್ಯ ಸಭೆ ನಡೆಸಿದರು. ಬಸವೇಶ್ವರರನ್ನು ನಂಬದ ವೀರಶೈವರನ್ನು ಹೊರಗಿಟ್ಟು, ಲಿಂಗಾಯತರಿಗೆ ಪ್ರತ್ಯೇಕ ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ನೀಡುವ ರಾಜ್ಯ ಸರ್ಕಾರದ ತೀರ್ಮಾನದ ಕುರಿತು ಮಠಾಧೀಶರ ಜತೆ ಸಮಾಲೋಚನೆ ನಡೆಸಿದರು.

ಕಾಗಿನೆಲೆಯಲ್ಲಿ ಶಾಗೆ ಸಿಗದ ‘ಕನಕ’: ಕಾಗಿನೆಲೆಯ ಕನಕ ಗುರುಪೀಠಕ್ಕೆ ಅಮಿತ್ ಶಾ ಭೇಟಿ ನೀಡಿದ ವೇಳೆ ಪೀಠಾಧ್ಯಕ್ಷರಾದ ನಿರಂಜನಾನಂದ ಪುರಿ ಶ್ರೀಗಳು ಅಲ್ಲಿ ಇರಲಿಲ್ಲ. ಗುರುಪೀಠದಲ್ಲಿ ಹಾಜರಿದ್ದ ಶಾಖಾ ಮಠಗಳ ಎಲ್ಲ ಸ್ವಾಮೀಜಿಗಳ ಜತೆ ಶಾ ಕೆಲ ಹೊತ್ತು ಸಮಾಲೋಚನೆ ನಡೆಸಿದರು.

ದಾವಣಗೆರೆಗೆ ಸಾಗುವ ಮಾರ್ಗ ಮಧ್ಯೆ ಮಲೆಬೆನ್ನೂರು ಬಳಿ ಇರುವ ಕನಕ ಗುರುಪೀಠದ ಶಾಖಾ ಮಠಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದರು. ಶಾಖಾ ಮಠದಲ್ಲಿದ್ದ ನಿರಂಜನಾನಂದ ಪುರಿ ಶ್ರೀಗಳ ಜತೆ ಕೆಲಹೊತ್ತು ಚರ್ಚಿಸಿದರು.

ರಾಹುಲ್ ‘ಮತ’ ಬೇಟೆ
ಚುನಾವಣೆ ಘೋಷಣೆಯಾದ ಬಳಿಕ ಮಧ್ಯ ಕರ್ನಾಟಕಕ್ಕೆ ಕಾಲಿಟ್ಟ ರಾಹುಲ್‌, ಈ ಭಾಗದಲ್ಲಿ ಮಿಂಚಿನ ಸಂಚಾರ ನಡೆಸಿದರು. ‘ಇಲ್ಲಿಯವರೆಗೂ ಸುಳ್ಳು ಹೇಳುತ್ತಿದ್ದ ಅಮಿತ್ ಶಾ, ಯಡಿಯೂರಪ್ಪ ಸರ್ಕಾರ ಭ್ರಷ್ಟಾಚಾರದಲ್ಲಿ ನಂ.1 ಎಂದು ಹೇಳಿದಾಗ ಮಾತ್ರ ಸತ್ಯ ನುಡಿದ್ದಾರೆ’ ಎಂದು ಟೀಕಿಸಿದರು. ಪ್ರಧಾನಿ ಮೋದಿ, ನೀರವ್ ಮೋದಿ ಹೆಸರು ಉಚ್ಚರಿಸಿ ಅಣಕಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ರೋಡ್ ಶೋ ಆರಂಭಿಸಿದ ರಾಹುಲ್‌, ಸವಳಂಗ, ನ್ಯಾಮತಿ, ಹೊನ್ನಾಳಿ, ಹರಿಹರ ಮಾರ್ಗವಾಗಿ ದಾವಣಗೆರೆ ತಲುಪಿದರು. ನಗರ–ಪಟ್ಟಣ ಪ್ರದರ್ಶನಗಳಲ್ಲಿ ಜನರತ್ತ ಕೈಬೀಸುತ್ತಾ, ಹರ್ಷೋದ್ಗಾರಗಳ ಸ್ವಾಗತಗಳನ್ನು ಎದುರುಗೊಳ್ಳುತ್ತಾ ಸಾಗಿದ ಅವರು ಮತಾಕರ್ಷಣೆಗೆ ಹೆಚ್ಚಿನ ಒತ್ತು ನೀಡಿದರು.

ಶಿವಮೊಗ್ಗದ ಅಮೀರ್ ಅಹಮದ್‌ ಸರ್ಕಲ್‌ನಲ್ಲಿ ಬಸ್ಸಿನಿಂದ ಇಳಿದ ರಾಹುಲ್, ಅಭಿಮಾನಿಗಳ ಕೈ ಕುಲುಕಿದರು. ಹೊನ್ನಾಳಿಯಲ್ಲಿ ಹಣ್ಣು ಮಾರುವ ತಾಯಿಯೊಬ್ಬರಿಂದ ಕರಬೂಜ ಹಣ್ಣು ಸ್ವೀಕರಿಸಿದರು. ಸವಳಂಗ, ಹೊನ್ನಾಳಿಯಲ್ಲಿ ಅಭಿಮಾನಿಗಳನ್ನು ನಿಯಂತ್ರಿಸಲು ಹರಸಾಹಸ ಪಟ್ಟ ಪೊಲೀಸರು, ಕೆಲವು ಕಡೆ ಲಘುವಾಗಿ ಲಾಠಿ ಬೀಸಿ, ಜನರನ್ನು ದೂರ ಸರಿಸಿದರು.

ಹರಿಹರ ಬರುತ್ತಿದ್ದಂತೆ ಅವರ ವಾಹನವನ್ನು ಯುವಕರ ಗುಂಪು ಅಡ್ಡಗಟ್ಟಿತು. ಸೇನಾ ತರಬೇತಿ ವೇಳೆ ಆಕಸ್ಮಿಕವಾಗಿ ನಡೆದ ಸ್ಪೋಟದಿಂದ ಮೃತಪಟ್ಟಿದ್ದ ಜಾವೀದ್ ಮನೆಗೆ ರಾಹುಲ್ ಅವರನ್ನು ಯುವಕರ ಗುಂಪು ಕರೆದೊಯ್ದಿತು. ರಕ್ಷಣಾ ಬೆಂಗಾವಲನ್ನು ಲೆಕ್ಕಿಸದೇ ಅಲ್ಲಿಗೆ ತೆರಳಿದ ಅವರು ಕುಟುಂಬದವರಿಗೆ ಸಾಂತ್ವನ ಹೇಳಿದರು.

ಬಳಿಕ ದಾವಣಗೆರೆಯಲ್ಲಿ ನಡೆದ ಸಮಾವೇಶದಲ್ಲಿ ರಾಹುಲ್ ಭಾಗಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT