ಮಂಗಳವಾರ, ಡಿಸೆಂಬರ್ 10, 2019
23 °C

ದುಬಾರಿ ಶೂಗಳ ಒಡೆಯ

Published:
Updated:
ದುಬಾರಿ ಶೂಗಳ ಒಡೆಯ

ಕತ್ತಲಲ್ಲಿ ಬೆಳಗುವ ಶೂಗಳು, ಹಾವಿನ ಚರ್ಮದ ಹೊದಿಕೆಯಿರುವ ಶೂಗಳು, 24 ಕ್ಯಾರೆಟ್ ಚಿನ್ನದಿಂದ ವಿನ್ಯಾಸಗೊಂಡ ಶೂಗಳು... ಇವಿಷ್ಟೇ ಅಲ್ಲ, ಇನ್ನೂ ಥರಾವರಿ ಶೂಗಳು ಈತನ ಬಳಿ ಇವೆ.

ಹತ್ತಲ್ಲ, ಇಪ್ಪತ್ತಲ್ಲ, ಇನ್ನೂರಕ್ಕೂ ಹೆಚ್ಚು ಜೊತೆಯ ಶೂಗಳನ್ನು ಹೊಂದಿರುವ ಹದಿನೇಳರ ಹರೆಯದ ಈ ಪೋರನ ಹೆಸರು ರಶೀದ್ ಬೆಲ್‌ಹಾಸ್. ದುಬೈ ಮೂಲದ ಈ ಹುಡುಗನಿಗೆ ಶೂಗಳೆಂದರೆ ತುಂಬಾ ಇಷ್ಟ.

ಹಾಗೆಂದು ಕಂಡಕಂಡ ಶೂಗಳನ್ನೆಲ್ಲ ಕೊಂಡುಕೊಳ್ಳುವುದು ರಶೀದ್ ಜಾಯಮಾನವಲ್ಲ. ದುಬಾರಿಯಾಗಿರುವ ಶೂಗಳೇ ಈತನ ಕಣ್ಣನ್ನು ಸೆಳೆಯುವುದು. ಏಳು ಕೋಟಿ ರೂಪಾಯಿ ಮೌಲ್ಯದ ಶೂಗಳು ಈತನ ಬಳಿಯಿವೆ.

ಏರ್‌ಜೋರ್ಡನ್‌ನಿಂದ ಹಿಡಿದು ಈಜೀಸ್‌ನಂಥ ಶೂಗಳು ಇವನಲ್ಲಿವೆ. ಎಪ್ಪತ್ತು ಜೊತೆ ಏರ್‌ ಜೋರ್ಡನ್‌ಗಳನ್ನು ಹೊಂದಿ ದ್ದಾನೆ. ಇದರ ಒಂದು ಜೊತೆ ಬೆಲೆಯೇ ₹16,38,250. ಸ್ಪೋರ್ಟ್ಸ್ ಶೂ ಎಂದರೆ ಇವನಿಗೆ ಮತ್ತೂ ಇಷ್ಟ. $30,000 (₹19 ಲಕ್ಷ) ಮೌಲ್ಯದ ಸ್ಪೋರ್ಟ್‌ ಶೂಗಳ ಸಂಗ್ರಹವಿದೆ. ಇವನ ಬಳಿ ಇರುವ ಪ್ರತಿ ಶೂಗೆ, ಕಡಿಮೆ ಎಂದರೂ $5,000ಕ್ಕಿಂತ ಹೆಚ್ಚು ಬೆಲೆಯಿದೆಯಂತೆ.

ಶೂಗಳನ್ನು ಸಂಗ್ರಹಿಸುವುದಷ್ಟೇ ಅಲ್ಲ, ಅದರ ಬಗ್ಗೆ ಮಾಹಿತಿ ನೀಡಲೆಂದೇ ‘ಮನಿ ಕಿಕ್ಸ್’ ಎಂಬ ಆನ್‌ಲೈನ್ ಪಬ್ಲಿಕೇಷನ್ ಅನ್ನು 2016ರಲ್ಲಿ ಆರಂಭಿಸಿದ್ದಾನೆ. ಸ್ನೀಕರ್‌ಗಳಿಗೆ ಸಂಬಂಧಿಸಿದ ಯಾವುದೇ ಸುದ್ದಿಯಿದ್ದರೂ ಅದರಲ್ಲಿ ಲಭ್ಯ. ಈಗಿನ ಟ್ರೆಂಡ್, ಆಯ್ಕೆಗಳ ಬಗ್ಗೆ ಸದಾ ಕಣ್ಣಿಡುವುದು ಈತನ ಅಭ್ಯಾಸವೂ ಹೌದು. ದುಬೈಗೆ ಹೋಗುವ ಸೆಲೆಬ್ರಿಟಿಗಳು ಈತನ ಸಂಗ್ರಹವನ್ನು ನೋಡಲು ಹೋಗುತ್ತಾರಂತೆ. ಬಾಲಿವುಡ್ ಹಾಲಿವುಡ್‌ನಲ್ಲೂ ಅನೇಕ ಗೆಳೆಯರಿದ್ದಾರೆ ರಶದ್‌ಗೆ. ಸೈಫ್ ಅಲಿ ಖಾನ್, ವಿಜ್ ಖಲೀಫ, ಸಲ್ಮಾನ್‌ಖಾನ್, ಮೆಸ್ಸಿ, ನಿಕಿ ಮಿನಾಜ್ ಇವರೆಲ್ಲಾ ಇಲ್ಲಿಗೆ ಭೇಟಿ ನೀಡಿದ್ದ ಸೆಲೆಬ್ರಿಟಿಗಳು.

ಇಂಟರ್‌ನ್ಯಾಷನಲ್ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಸೈನ್ಸ್‌ನಲ್ಲಿ ಕಲಿಯುತ್ತಿರುವ ಈತ ಈಗ ಇನ್‌ಸ್ಟಾಗ್ರಾಂ ಹಾಗೂ ಯೂಟ್ಯೂಬ್‌ನಲ್ಲಿ ಭಾರೀ ಜನಪ್ರಿಯ. ಹತ್ತು ಲಕ್ಷ ಫಾಲೊವರ್‌ಗಳನ್ನು ಹೊಂದಿದ್ದು, ಇನ್ನಷ್ಟು, ಮತ್ತಷ್ಟು ದುಬಾರಿ ಶೂಗಳನ್ನು ಸಂಗ್ರಹಿಸುವ ತವಕದಲ್ಲಿದ್ದಾನೆ ರಶೀದ್.

ಪ್ರತಿಕ್ರಿಯಿಸಿ (+)