ಮಂಗಳವಾರ, ಜೂಲೈ 7, 2020
27 °C

ತಮಿಳುನಾಡಿನ ಒತ್ತಡಕ್ಕೆ ಕೇಂದ್ರ ಮಣಿಯಬಾರದು: ದೇವೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಮಿಳುನಾಡಿನ ಒತ್ತಡಕ್ಕೆ ಕೇಂದ್ರ ಮಣಿಯಬಾರದು: ದೇವೇಗೌಡ

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಷಯಕ್ಕೆ ಸಂಬಂಧಿಸಿ ತಮಿಳುನಾಡಿನ ಒತ್ತಡಕ್ಕೆ ಕೇಂದ್ರ ಸರ್ಕಾರ ಮಣಿಯಬಾರದು ಎಂದು ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ ಹೇಳಿದರು.

ಖಾಸಗಿ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರದ ಮೇಲೆ ಒತ್ತಡ ಹೇರಿ ತಮ್ಮ ಉದ್ದೇಶ ಈಡೇರಿಸಿಕೊಳ್ಳಲು ತಮಿಳುನಾಡಿನ ಮುಖ್ಯಮಂತ್ರಿಗಳು ಮತ್ತು ಸಚಿವರು ಧರಣಿ ಕುಳಿತಿದ್ದಾರೆ’ ಎಂದು ಹೇಳಿದರು.

ಸಂಸತ್ತಿನಲ್ಲಿ ತಮಿಳುನಾಡು ಸಂಸದರು ಗದ್ದಲ ಎಬ್ಬಿಸಿರುವುದರ ಹಿಂದೆಯೂ ಇದೇ ಉದ್ದೇಶವಿದೆ. ಕೇಂದ್ರ ಸರ್ಕಾರ ಇದಕ್ಕೆ ಮಣಿಯಬಾರದು ಎಂದು ಅವರು ಹೇಳಿದರು.

ಇದೇ 9ರಂದು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಗೆ ಬರಲಿದೆ. ಆಗ ರಾಜ್ಯಕ್ಕೆ ಕಾವೇರಿ ನ್ಯಾಯಮಂಡಳಿಯಿಂದ ಆಗಿರುವ ಅನ್ಯಾಯವನ್ನು ವಿವರಿಸಬೇಕು ಎಂದೂ ಅವರು ಸಲಹೆ ನೀಡಿದರು.

‘ಕಾವೇರಿ ನೀರು ಹಂಚಿಕೆ ಸಂಬಂಧ 6 ವಾರಗಳಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ಈ ಗಡುವಿನಲ್ಲಿ ತೀರ್ಮಾನ ಕೈಗೊಳ್ಳಲು ಆಗುವುದಿಲ್ಲ ಎಂದು ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಆದ್ದರಿಂದಲೇ ತಮಿಳುನಾಡಿನವರು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಆದೇಶವನ್ನು ದಿಕ್ಕರಿಸಿದೆ ಎಂದು ಅರ್ಜಿ ಸಲ್ಲಿಸಿದ್ದಾರೆ. ಎರಡೂ ರಾಜ್ಯಗಳು ಸೌಹರ್ದತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತಮಿಳುನಾಡಿನ ಸರ್ಕಾರದ ಮನೋಭಾವ ಇನ್ನೂ ಬದಲಾಗಿಲ್ಲ’ ಎಂದು ದೇವೇಗೌಡರು ಹೇಳಿದರು.

’ಕಾವೇರಿ ನದಿನೀರು ಹಂಚಿಕೆ ವಿಚಾರವಾಗಿ 1961ರಲ್ಲಿ ಟ್ರಿಬ್ಯೂನಲ್ ರಚಿಸಲಾಯಿತು. ಯಾವ ಯಾವ ಹಂತದಲ್ಲಿ ಅದು ಏನು ಮಾಡಿದೆ, ನ್ಯಾಯಾಲಯಗಳು ಏನು ಮಾಡಿವೆ ಎಂಬುದನ್ನು ಕೇಂದ್ರ ಸರ್ಕಾರ ಕೂಲಂಕಷವಾಗಿ ಪರಿಶೀಲನೆ ಮಾಡಬೇಕು’ ಎಂದು ಅವರು ಆಗ್ರಹಿಸಿದರು.

ಕಾವೇರಿ ನದಿ ನೀರಿನ ವಿಚಾರದಲ್ಲಿ ಕನ್ನಡಿಗರಿಗೆ ಹಿಂದಿನಿಂದಲೂ ಅನ್ಯಾಯವಾಗುತ್ತಿದೆ. ಕನ್ನಡಿಗರನ್ನು ಪ್ರಚೋದಿಸಲು ನಾನು ಇದನ್ನು ಹೇಳುತ್ತಿಲ್ಲ. ನಮಗಾಗಿರುವ ಅನ್ಯಾಯವನ್ನು ಹೇಳುತ್ತಿದ್ದೇನಷ್ಟೆ ಎಂದು ದೇವೇಗೌಡ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.