ಶುಕ್ರವಾರ, ಡಿಸೆಂಬರ್ 6, 2019
23 °C

ಎಚ್ಚರ ಆ್ಯಪ್‌ಗಳಿವೆ!

Published:
Updated:
ಎಚ್ಚರ ಆ್ಯಪ್‌ಗಳಿವೆ!

ಚೀ ನಾದಲ್ಲಿ ತಯಾರಾದ ಉತ್ಪನ್ನಗಳು ದೊರೆಯದ ಮಾರುಕಟ್ಟೆ ಯಾವುದಿದೆ? ಸೂಜಿಯಿಂದ ವಿಮಾನದವರೆಗೆ ಎಲ್ಲ ಗಾತ್ರದ ಚೀನಾ ನಿರ್ಮಿತ ವಸ್ತುಗಳು ಭಾರತ ಸೇರಿದಂತೆ ವಿಶ್ವದ ನೂರಾರು ದೇಶಗಳಲ್ಲಿ ಬಿಕರಿಯಾಗುತ್ತಿವೆ. ಆದರೆ ಚೀನಾ ಉತ್ಪನ್ನಗಳ ಗುಣಮಟ್ಟದ ಬಗ್ಗೆಯೂ ಋಣಾತ್ಮಕ ಅಂಶಗಳು ಕೇಳಿಬಂದಿವೆ.

ಚೀನಾದ ಆಟಿಕೆಗಳಲ್ಲಿ ವಿಪರೀತ ಸೀಸದ ಅಂಶ ಇರುವ ಕಾರಣ ಮಕ್ಕಳಿಗೆ ಚೀನಾ ಆಟಿಕೆ ಕೊಡಿಸಬೇಡಿ ಎಂದು ಪೋಷಕರಿಗೆ ಹಲವು ವರ್ಷಗಳ ಹಿಂದೆಯೇ ತಿಳಿಸಲಾಗಿತ್ತು. ಈಗ ಚೀನಾ ಆ್ಯ‍ಪ್‌ಗಳ ಬಗ್ಗೆಯೂ ಎಚ್ಚರದಿಂದಿರಿ ಎಂಬ ಮಾತೂ ಕೇಳಿಬಂದಿದೆ.

ಭಾರತೀಯರ ವಾಟ್ಸ್‌ಆ್ಯಪ್‌ ಅನ್ನು ಗುರಿಯಾಗಿಸಿ ಚೀನಾದ ಹ್ಯಾಕರ್‌ಗಳು ದಾಳಿ ನಡೆಸುವ ಸಾಧ್ಯತೆ ಹೆಚ್ಚಿದೆ ಎಂದು ಇತ್ತೀಚೆಗೆ ಸೇನೆ ತನ್ನ ಯೋಧರಿಗೆ ತಿಳಿಸಿದೆ. ಕಂಪ್ಯೂಟರನ್ನು ಹ್ಯಾಕ್‌ ಮಾಡಲು ಬಳಸುವ ಹೊಸ ವಿಧಾನ ವಾಟ್ಸ್‌ಆ್ಯಪ್ ಆಗಿರಲಿದೆ. +86ನಿಂದ ಆರಂಭಗೊಳ್ಳುವ ಚೀನಾದ ದೂರವಾಣಿ ಸಂಖ್ಯೆಗಳು ನಿಮ್ಮ ಗುಂಪುಗಳಿಗೆ ಲಗ್ಗೆ ಇಡಲಿದ್ದು, ಎಲ್ಲ ದತ್ತಾಂಶಗಳನ್ನು ಕಸಿಯಲಿವೆ’ ಎಂದು ವಿಡಿಯೊದಲ್ಲಿ ವಿವರಿಸಲಾಗಿದೆ.

ಕಳೆದ ವರ್ಷವೂ ಇದೇ ರೀತಿಯ ಎಚ್ಚರಿಕೆ ನೀಡಲಾಗಿತ್ತು. ಗಡಿನಿಯಂತ್ರಣ ರೇಖೆಯ ಉದ್ದಕ್ಕೂ ನಿಯೋಜನೆಯಾಗಿರುವ ಯೋಧರು ಕೆಲವು ಆ್ಯಪ್‌ ಬಳಸುವ ಬಗ್ಗೆ ಜಾಗ್ರತೆ ವಹಿಸಬೇಕು ಎಂಬ ಮಾಹಿತಿ ರವಾನೆಯಾಗಿತ್ತು.

ಸದ್ಯಕ್ಕೆ ಲಭ್ಯವಿರುವ ಮಾಹಿತಿಗಳ ಪ್ರಕಾರ, ಚೀನಾ ಅಭಿವೃದ್ಧಿಪಡಿಸಿದ ಸಾಕಷ್ಟು ಆ್ಯಂಡ್ರಾಯ್ಡ್‌/ಐಒಎಸ್ ಆ್ಯಪ್‌ಗಳು ಸ್ಪೈವೇರ್‌ ಇಲ್ಲವೇ ಮಲಾಸಿಯಸ್ ವೇರ್‌ಗೆ ಸಂಪರ್ಕ ಹೊಂದಿರುತ್ತವೆ. ಇಂತಹ ಆ್ಯಪ್‌ಗಳನ್ನು ಬಳಸುವುದರಿಂದ ದತ್ತಾಂಶ ಸುರಕ್ಷತೆಯ ಮೇಲೆ ಪರಿಣಾಮ ಬೀರುತ್ತದೆ. ಇದು ರಾಷ್ಟ್ರದ ಭದ್ರತೆಗೆ ಹಾನಿ ಮಾಡುತ್ತದೆ ಎಂದು ರಕ್ಷಣಾ ಸಚಿವಾಲಯ ಎಚ್ಚರಿಕೆ ನೀಡಿದೆ.‌

ಸೈಬರ್‌ ಭದ್ರತೆಗೆ ಅಪಾಯ ಒಡ್ಡುವ ಈ ರೀತಿಯ ಆ್ಯಪ್‌ಗಳು ಬಳಕೆದಾರನನ್ನು ಮೋಸಗೊಳಿಸುವುದು ಗೊತ್ತೇ ಆಗುವುದಿಲ್ಲ. ಆ್ಯಪ್ ಉಪಯುಕ್ತತೆ ಬಗ್ಗೆಯೇ ನಾವು ತಲೆಕೆಡಿಸಿಕೊಳ್ಳುವುದರಿಂದ ಅದು ಯಾವ ರೀತಿಯದ್ದು ಮತ್ತು ಯಾವ ದೇಶದ್ದು ಎಂಬುದರ ಬಗ್ಗೆ ತಿಳಿಯಲು ಹೋಗುವುದೇ ಇಲ್ಲ. ಪ್ಲೇ ಸ್ಟೋರ್‌ಗಳಲ್ಲಿ ಲಕ್ಷಾಂತರ ಆ್ಯಪ್‌ಗಳು ಕಾಣಸಿಗುತ್ತವೆ. ಅವುಗಳ ಅಗತ್ಯವಿರುವವರು ಡೌನ್‌ಲೋಡ್‌ ಮಾಡಿಕೊಳ್ಳುತ್ತಾರೆ. ಆದರೆ ಈ ಆ್ಯಪ್‌ ಯಾವ ದೇಶದ್ದು ಎಂದು ಶೇ 98ರಷ್ಟು ಮಂದಿ ನೋಡಲು ಹೋಗುವುದೇ ಇಲ್ಲ.

ಟ್ರೂಕಾಲರ್, ಶೇರ್‌ ಇಟ್‌ ಸೇರಿದಂತೆ ಚೀನಾ ರೂಪಿಸಿದ 41 ಆ್ಯಪ್‌ಗಳನ್ನು ಬಳಕೆ ಮಾಡಬಾರದು ಎಂದು ಸರ್ಕಾರ, ಸೇನೆ ಮತ್ತು ಅರೆಸೇನಾ ‍ಪಡೆಗಳಿಗೆ ತಿಳಿಸಿದೆ. ಜನಸಾಮಾನ್ಯರಿಗೂ ಇದು ಹೊರತಲ್ಲ. ಈ ಹಿಂದೆಯೂ ಇದೇ ರೀತಿ ತಿಳಿಸಿದ್ದರೂ ಈ ಬಾರಿ ಭಾರತದ ಬೇಹುಗಾರಿಕಾ ಏಜೆನ್ಸಿಯ ಸೂಚನೆ ಇರುವುದು ವಿಶೇಷ. ಚೀನಾ ಆ್ಯಪ್‌ಗಳು ದೇಶದ ಭದ್ರತೆಗೆ ಅಪಾಯಕಾರಿಯಾಗಿರುವುದನ್ನು ರಾ(RAW) ಮತ್ತು ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ (ಎನ್‌ಟಿಆರ್‌ಒ) ಪತ್ತೆ ಹಚ್ಚಿದೆ.

ಇಡೀ ವಿಶ್ವದಲ್ಲೇ ಹೆಚ್ಚು ಬಳಕೆಯ ಬ್ರೌಸರ್‌ನಲ್ಲಿ ಯುಸಿ ಬ್ರೌಸರ್‌ ಎರಡನೇ ಸ್ಥಾನವಿದೆ. ಇದು 50 ಕೋಟಿ ಡೌನ್‌ಲೋಡ್‌ ಆಗಿದೆ. ಗೂಗಲ್ ಕ್ರೋಮ್‌ನಷ್ಟೇ ಇದು ಪ್ರಸಿದ್ಧಿ. ತನ್ನ ಬಳಕೆದಾರನ ದತ್ತಾಂಶವನ್ನು ಇದು ಮಾರಾಟ ಮಾಡುತ್ತಿದೆ ಎಂಬ ಆರೋಪ ಇದರ ಮೇಲೆ ಬಂದಿತ್ತು. ಅಪ್ರಸ್ತುತ ಮತ್ತು ವಿವಾದಾತ್ಮಕ ಚಿತ್ರಗಳನ್ನು ತನ್ನ ನೋಟಿಫಿಕೇಶನ್‌ನಲ್ಲಿ ಇದು ಬಳಸುತ್ತಿದೆ ಎಂದು ಸುದ್ದಿ ಹಬ್ಬಿತ್ತು.

ಇಷ್ಟೆಲ್ಲ ಆದರೂ ಗೂಗಲ್ ತನ್ನ ಪ್ಲೇಸ್ಟೋರ್‌ನಿಂದ ಯುಸಿ ಬ್ರೌಸರ್‌ ಅನ್ನು ತೆಗೆದು ಹಾಕಿರಲೇ ಇಲ್ಲ. ಆ್ಯಪ್‌ನ ನಿಯಮ ಮತ್ತು ಷರತ್ತುಗಳನ್ನು ಉಲ್ಲಂಘನೆ ಮಾಡಿದರೆ ಮಾತ್ರವೇ ಗೂಗಲ್‌ ತನ್ನ ಪ್ಲೇಸ್ಟೋರ್‌ನಿಂದ ನಿರ್ದಿಷ್ಟ ಆ್ಯಪ್‌ ಅನ್ನು ತೆಗೆದುಹಾಕುತ್ತದೆ.

ಕಳೆದ ವರ್ಷ 53 ಸಾವಿರ ಸೈಬರ್‌ ಭದ್ರತಾ ಪ್ರಕರಣಗಳು ವರದಿಯಾಗಿವೆ ಎಂದು ದೂರ ಸಂಪರ್ಕ ಸಚಿವ ರವಿಶಂಕರ್ ಪ್ರಸಾದ್‌ ಅವರು ಲೋಕಸಭೆಯಲ್ಲಿ ಇತ್ತೀಚೆಗೆ ತಿಳಿಸಿದ್ದಾರೆ. ಇವುಗಳಲ್ಲಿ ವೆಬ್‌ಸೈಟ್‌ಗಳಿಗೆ ಅಕ್ರಮ ಪ್ರವೇಶ, ಗುರುತುಗಳನ್ನು ಬದಲಾಯಿಸುವುದು, ವೈರಸ್‌ ಮತ್ತು ರ‍್ಯಾನ್‌ಸಮ್ ವೇರ್‌ ದಾಳಿಗಳು ಸೇರಿವೆ.

ಆರೋಪ ಒಪ್ಪದ ಟ್ರೂಕಾಲರ್‌

ಇಂತಹ ಆರೋಪವನ್ನು ಟ್ರೂಕಾಲರ್‌ ಮಾತ್ರ ಒಪ್ಪಿಕೊಳ್ಳುತ್ತಲೇ ಇಲ್ಲ. ‘ಕೆಲವು ವರದಿಗಳ ಪ್ರಕಾರ ನಮ್ಮ ಆ್ಯಪ್‌ ಅಪಾಯಕಾರಿ ಎಂಬ ಮಾಹಿತಿ ಹೊರಬಿದ್ದಿದೆ. ಯಾಕೆ ನಮ್ಮ ಆ್ಯಪ್‌ ಈ ಪಟ್ಟಿಯಲ್ಲಿ ಸೇರಿದೆ ಎಂಬುದೇ ತಿಳಿಯುತ್ತಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಟ್ರೂಕಾಲರ್ ಮಾಲ್‌ವೇರ್‌ ಅಲ್ಲವೇ ಅಲ್ಲ. ನಮ್ಮ ಎಲ್ಲಾ ಗುಣಗಳು ಅನುಮತಿ ಪಡೆದೇ ಕಾರ್ಯನಿರ್ವಹಿಸುತ್ತಿವೆ’ ಎಂದು ಟ್ರೂಕಾಲರ್‌ ವಕ್ತಾರರೊಬ್ಬರು ತಿಳಿಸಿದ್ದಾರೆ.

ಮಾಹಿತಿ ತಂತ್ರಜ್ಞಾನದ ವಿಸ್ತರಣೆಯಿಂದಾಗಿ ಸಾಕಷ್ಟು ಲಾಭಗಳಿವೆ. ಅದೇ ಹೊತ್ತಿನಲ್ಲಿ ಸೈಬರ್ ಅ‍ಪರಾಧಗಳ ಪ್ರಮಾಣವೂ ಹೆಚ್ಚುತ್ತಿದೆ. ಇವುಗಳಲ್ಲಿ ಹಣಕಾಸು ಅಕ್ರಮದಿಂದ ಹಿಡಿದು ಎಲ್ಲವೂ ಸೇರಿವೆ ಎನ್ನುತ್ತಾರೆ ಕೇಂದ್ರ ದೂರಸಂಪರ್ಕ ಖಾತೆ ಸಚಿವ ರವಿಶಂಕರ್‌.

**

ಹಲವು ದೇಶಗಳು ದೂರ

ಚೀನಾದ ಆ್ಯಪ್‌ಗಳಿಂದ ಸಾಕಷ್ಟು ದೇಶಗಳು ದೂರವಿವೆ. ಬಳಕೆದಾರರ ಖಾಸಗಿ ದತ್ತಾಂಶದ ರಕ್ಷಣೆಗೆ ಇವುಗಳಿಂದ ಯಾವುದೇ ಖಾತರಿ ಇಲ್ಲದೇ ಇರುವುದೇ ಇದಕ್ಕೆ ಕಾರಣ. ಚೀನಾದ ಫೋಟೊ ಎಡಿಟಿಂಗ್‌ ಆ್ಯಪ್‌ಗಳು, ಇಂಟರ್‌ನೆಟ್‌ ಉತ್ಪನ್ನಗಳು ಪದೇ ಪದೇ ವಿವಾದಗಳನ್ನು ಸೃಷ್ಟಿಸುತ್ತಲೇ ಇವೆ. ಇತ್ತೀಚೆಗೆ ಇದಕ್ಕೆ ಸೇರ್ಪಡೆಯಾಗಿದ್ದು, ಸೆಲ್ಫಿಗಳ ವರ್ಚ್ಯುವಲ್‌ ಮೇಕಪ್. ಬ್ಯೂಟಿ ಆ್ಯ‍ಪ್‌ಗಳು ಜನರ ವೈಯಕ್ತಿಕ ಮತ್ತು ಫೋನ್‌ ಮಾಹಿತಿಯನ್ನು ಮಾರಾಟ ಮಾಡುತ್ತಿವೆ ಎಂಬ ಆರೋಪವೂ ಇದೆ.

**

ಅನುಮಾನಿತ ಆ್ಯಪ್‌ಗಳು

ವಿ ಚಾಟ್‌, ಶೇರ್ ಇಟ್‌, ಯುಸಿ ನ್ಯೂಸ್‌, ಯುಸಿ ಬ್ರೌಸರ್‌, ನ್ಯೂಸ್ ಡಾಗ್‌, ವಿವಾ ವಿಡಿಯೊ, ಎಂಐ ಕಮ್ಯೂನಿಟಿ, ಡಿಯು ಕ್ಲೀನರ್‌, 360 ಸೆಕ್ಯೂರಿಟಿ, ವಂಡರ್ ಕ್ಯಾಮೆರಾ ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಪ್ರತಿಕ್ರಿಯಿಸಿ (+)