ಪಾರಾಯಣವೆಂದರೆ...

ಭಾನುವಾರ, ಮಾರ್ಚ್ 24, 2019
32 °C

ಪಾರಾಯಣವೆಂದರೆ...

Published:
Updated:
ಪಾರಾಯಣವೆಂದರೆ...

ಭಾರತೀಯ ಪರಂಪರೆಯಲ್ಲಿ ಪಾರಾಯಣಕ್ಕೆ ತುಂಬಾ ಮಹತ್ವವಿದೆ. ಪಾರಾಯಣ ಎಂದರೆ ಒಂದಾನೊಂದು ಗ್ರಂಥದ ನಿರಂತರ ಪಠಣ. ಆದರೆ ಈ ಪಠಣದ ನಿಜವಾದ ಉದ್ದೇಶ ತಿಳಿಯದೇ ಹೋದರೆ, ಪಾರಾಯಣ ಮಾಡಿಯೂ ಪ್ರಯೋಜನವಿರದು. ಈ ವಿಷಯವಾಗಿ

ಡಿ.ವಿ.ಜಿಯವರ ಮಾತು ಇಲ್ಲಿ ಮನನೀಯ; ಭಗವದ್ಗೀತೆ ನಮ್ಮಲ್ಲಿ ಪಾರಾಯಣ ಗ್ರಂಥ. ಅದರ ವಿಷಯವಾಗಿ ಅವರ ಮಾತುಗಳು ಹೀಗಿವೆ...

‘ಗೀತೆಯನ್ನು ಓದುವವರಲ್ಲಿ ಬಹುಮಂದಿ ಅದು ತಮಗೆ ಅರ್ಥವಾಗದಿದ್ದರೂ ಪುಣ್ಯ ಕಾರ್ಯವೆಂದು ಭಾವಿಸಿ ಪಾರಾಯಣ ಮಾಡುತ್ತಾರೆ. ಅದು ಒಳ್ಳೆಯದೇ ಸರಿ. ಆದರೆ ಅದರಲ್ಲಿ ಒಂದು ಅಪಾಯವುಂಟು. ಬರಿಯ ಅಕ್ಷರೋಚ್ಚಾರಣೆಯ ಮಾತ್ರದಿಂದ ಸಮಸ್ತ ಪಾಪಗಳೂ ಪರಿಹಾರವಾದಾವೆಂದು ಧೈರ್ಯ ತಂದುಕೊಳ್ಳುವ ಸಂಭವವುಂಟು. ನಮ್ಮಲ್ಲಿ ನಾಮಸ್ಮರಣೆ, ನಾಮ ಸಂಕೀರ್ತನೆ – ಇವುಗಳನ್ನು ಬಹುವಾಗಿ ಪ್ರಶಂಸೆ ಮಾಡಿದ್ದಾರೆ.

ನಾಮಸ್ಮರಣೆಯೂ ಗ್ರಂಥಪಾರಾಯಣವೂ ಸಾಧನ ಮಾತ್ರಗಳು. ಯಾವುದಕ್ಕೆ ಸಾಧನ? ಮನಸ್ಸನ್ನು ಭಗವದ್ವಿಷಯಕ್ಕೆ ತಿರುಗಿಸಲು ಸಾಧನ. ಮನಸ್ಸನ್ನು ಭಗವಂತನಲ್ಲಿರಿಸದೇ ಬೇರೆಲ್ಲಿಯೋ ಇರಿಸಿ ಮಾಡುವ ನಾಮಸಂಕೀರ್ತನೆ ನಿಷ್ಫಲ ದುಷ್ಕಾರ್ಯ ಮಾಡಿ ಅದರ ದೋಷವು ಗೀತಾಕ್ಷರೋಚ್ಚಾರಣೆಯಿಂದ ನಿವಾರಣೆಯಾದೀತೆಂಬುದು ಅಪಾಯಕರವಾದ ಭ್ರಾಂತಿ. ಪಾರಾಯಣದ ಪ್ರಯೋಜನವು ಗೀತವಾಕ್ಯಗಳನ್ನು ಬಾಯಿಗೆ ಸ್ವಾಧೀನಮಾಡಿಕೊಡುವುದರಲ್ಲಿರುತ್ತದೆ. ಗೀತವಾಕ್ಯವು ಮುಖ್ಯಸ್ಥವಾಗಿದ್ದರೆ, ಆಗ ಅದನ್ನು ಪದೇ ಪದೇ ಸ್ಮರಿಸಿಕೊಳ್ಳುವುದು ಸುಲಭವಾಗುತ್ತದೆ. ಪುನಃ ಪುನಃ ಸ್ಮರಣೆ ಮಾಡುವುದರಿಂದ ವಾಕ್ಯದ ಅರ್ಥವು ಮನಸ್ಸಿಗೆ ಪರಿಚಯವಾಗುತ್ತದೆ. ಅರ್ಥ ಪರಿಚಯದಿಂದ ಮನನವು ಸುಲಭವಾಗುತ್ತದೆ. ಅರ್ಥ ಮನನದಿಂದ ಅನುಸಂಧಾನವು ಸುಲಭವಾಗುತ್ತದೆ. ಹೀಗೆ ಪಾರಾಯಣವು ಪರಂಪರೆಯಿಂದ ಪ್ರಯೋಜಕವೇ ಹೊರತು ಸ್ವತಃ ಹೆಚ್ಚು ಫಲಕಾರಿಯಾಗದು.

ಪೂರ್ಣಫಲ ದೊರೆಯಬೇಕಾದರೆ ಅರ್ಥದ ಮೇಲೆ ದೃಷ್ಟಿ ಇಡಬೇಕು. ಅರ್ಥದ ಮೇಲೆ ಗಮನವಿಲ್ಲದ ಶುಕಪಠಿತದ ಪದ್ಧತಿ ನಮ್ಮಲ್ಲಿ ಅತಿ ಹೆಚ್ಚಾಗಿದೆ. ನಾವೂ ಗೀತೆ ಓದಿದ್ದೇವೆ– ಎಂದು ಹೇಳಿಕೊಳ್ಳುವ ಆಶೆ ಬಲವಾಗಿ ಹರಡಿದೆ. ಓದಿದರೆ ಏನು ಬಂತು? ಮಾತಿನ ಅರ್ಥ ಕಂಡಿದ್ದರೆ ಏನು ಬಂತು? ಗ್ರಂಥದ ನಾನಾ ಭಾಗಗಳ ಅರ್ಥಗಳನ್ನು ಸಮಂಜಸವಾಗಿ ಹೊಂದಿಸಿ ಏಕಾಕಾರವಾಗಿ ಮನಸ್ಸಿನಲ್ಲಿ ಭಾವಿಸಿ ನೋಡಿದರೆ ಬಹುಕಾಲದ ಅಭ್ಯಾಸದಿಂದ ತತ್ತ್ವವು ಮನಸ್ಸಿಗೆ ಸ್ಫುರಿಸೀತು’

ಯಾವುದೇ ಗ್ರಂಥವನ್ನು ನಾವು ಮೂರು ಹಂತಗಳಲ್ಲಿ ಅಧ್ಯಯನ ಮಾಡಬೇಕೆಂದು ಪರಂಪರೆ ಸೂಚಿಸುತ್ತದೆ. ಈ ಮೂರು ಹಂತಗಳೇ ಶ್ರವಣ, ಮನನ ಮತ್ತು ನಿದಿಧ್ಯಾಸನ.

ಡಿ.ವಿ.ಜಿಯವರೇ ಈ ಮೂರು ಹಂತಗಳನ್ನು ಸರಳವಾಗಿ ನಿರೂಪಿಸಿದ್ದಾರೆ.

‘ಶ್ರವಣವೆಂದರೆ ಕೇಳುವುದು: ಅರ್ಥಾತ್ ಓದುವುದು ಅಂದರೆ ಪಾರಾಯಣ ಮನನವೆಂದರೆ ಅರ್ಥ ಚಿಂತನೆ ಮಾಡುವುದು. ಸುಸಂಸ್ಕೃತವಾದ ಮನಸ್ಸೂ ಸುಶಿಕ್ಷಿತವಾದ ಬುದ್ಧಿಯೂ ಏಕೀಭವಿಸಿ ಗ್ರಂಥದ ಅರ್ಥವನ್ನು ವಿಚಾರ ಮಾಡುವುದು ಮನನ. ನಿದಿಧ್ಯಾಸನವೆಂದರೆ, ಮನನದಿಂದ ಗೊತ್ತಾದ ಸಿದ್ಧಾಂತವನ್ನು ನಡವಳಿಕೆಯಲ್ಲಿ ಸರ್ವದಾ ಗಮನದಲ್ಲಿರಿಸಿಕೊಂಡು ಅನುಸರಿಸುವುದು. ಈ ಮೂರರಲ್ಲಿ ಮೊದಲನೆಯದು ಹೆಚ್ಚು ಕಷ್ಟವಲ್ಲ. ಮಿಕ್ಕೆರಡು ಕಷ್ಟಸಾಧ್ಯಗಳು. ಆ ಎರಡರಲ್ಲಿ ಮನನವು ಸಾಂಗವಾಗಿ ನಡೆದಿದ್ದರೆ, ನಿದಿಧ್ಯಾಸನವು ಅಷ್ಟು ಕಷ್ಟವಾಗದು. ಹೀಗೆ ಮನನವು ಈ ವಿಧಾನದ ಮುಖ್ಯ ಭಾಗ’

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry