4
ಶಿವಯೋಗ ಮಂದಿರಕ್ಕೆ ಭೇಟಿ: ರಾಷ್ಟ್ರೀಯ ವೀರಶೈವ ಮಠಾಧೀಶರ ಪರಿಷತ್‌ ಸಭೆಯಲ್ಲಿ ಭಾಗಿ

ಧರ್ಮ ವಿಭಜನೆ ಇಲ್ಲ: ಶಾ ಸ್ಪಷ್ಟನೆ

Published:
Updated:
ಧರ್ಮ ವಿಭಜನೆ ಇಲ್ಲ: ಶಾ ಸ್ಪಷ್ಟನೆ

ಶಿವಯೋಗ ಮಂದಿರ (ಬಾಗಲಕೋಟೆ ಜಿಲ್ಲೆ): ‘ಧರ್ಮ ವಿಭಜನೆಯಲ್ಲಿ ಯಾರೂ ಸಫಲರಾಗುವುದಿಲ್ಲ. ಅದಕ್ಕೆ ನಾವು ಅವಕಾಶವನ್ನೂ ಮಾಡಿಕೊಡುವು

ದಿಲ್ಲ’ ಎಂದು, ವೀರಶೈವ– ಲಿಂಗಾಯತ ಧರ್ಮ ಪರ ಇರುವ ಮಠಾಧೀಶರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಂಗಳವಾರ ಇಲ್ಲಿ ಭರವಸೆ ನೀಡಿದರು.ಬಾದಾಮಿ ತಾಲ್ಲೂಕು ಶಿವಯೋಗ ಮಂದಿರದಲ್ಲಿ ನಡೆದ ರಾಷ್ಟ್ರೀಯ ವೀರಶೈವ ಮಠಾಧೀಶರ ಪರಿಷತ್ತಿನ ಸಭೆಯಲ್ಲಿ ಅವರು ಪಾಲ್ಗೊಂಡಿದ್ದರು. ಈ ವೇಳೆ ವೀರಶೈವ ಲಿಂಗಾಯತ ಧರ್ಮ ಅಖಂಡವಾಗಿಯೇ ಇರಲು ನಿಮ್ಮ ಸಹಕಾರ ಬೇಕು ಎಂಬ ಸ್ವಾಮೀಜಿಗಳ ಕೋರಿಕೆಗೆ ಮೇಲಿನಂತೆ ಸ್ಪಂದಿಸಿದ ಅವರು, ಇದೇ ವೇಳೆ ಪಕ್ಷದ ನಿಲುವನ್ನೂ ಸ್ಪಷ್ಟಪಡಿಸಿದರು.‘ಧರ್ಮ, ಸಂಪ್ರದಾಯಗಳ ವಿಭಜನೆ ಸಲ್ಲ. ಅದರಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ. ಈ ವಿಚಾರವನ್ನು ರಾಜಕೀಯ ಲಾಭಕ್ಕೆ ಬಳಕೆ ಮಾಡಿಕೊಳ್ಳುವ ಅಪೇಕ್ಷೆಯೂ ಇಲ್ಲ. ನಾನು ಇಲ್ಲಿ ರಾಜಕೀಯ ಮಾಡಲು ಬಂದಿಲ್ಲ. ಬದಲಿಗೆ ಸಂತರ ಆಶೀರ್ವಾದ ಪಡೆಯಲು ಬಂದಿರುವೆ’ ಎಂದರು.

‘ನರೇಂದ್ರ ಮೋದಿ ಬರುವವರೆಗೂ ದೇಶದ ಪ್ರಧಾನಿಯಾದವರು ಮಂದಿರಗಳಿಗೆ ಭೇಟಿ ನೀಡಲು ಹಿಂದೇಟು ಹಾಕುತ್ತಿದ್ದರು. ಆದರೆ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಮೊದಲು ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಗಂಗಾರತಿಯ ದರ್ಶನ ಪಡೆದರು. ಇದು ಧರ್ಮ ಹಾಗೂ ಪರಂಪರೆಯ ಬಗ್ಗೆ ಬಿಜೆಪಿ ಇಟ್ಟಿರುವ ನಂಬಿಕೆಯ ದ್ಯೋತಕ. ಧರ್ಮದಿಂದ ದೂರವಾದರೆ ದೇಶಕ್ಕೆ ಒಳಿತಾಗುವುದಿಲ್ಲ. ಅದೇ ರೀತಿ, ಧರ್ಮ ಒಡೆಯುವುದರಿಂದಲೂ ತೊಂದರೆ ನಿಶ್ಚಿತ’ ಎಂದು ಹೇಳಿದರು.

ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಮಾತನಾಡಿ, ‘ವೀರಶೈವ–ಲಿಂಗಾಯತ ಧರ್ಮವನ್ನು ಒಡೆಯುವ ಪ್ರಕ್ರಿಯೆ ಈಗ ಕೇಂದ್ರದ ಅಂಗಳ ತಲುಪಿದೆ. ಆದರೆ ಧರ್ಮ ಒಡೆದು ರಾಜಕೀಯ ಲಾಭ ಪಡೆಯುವ ಕೆಲವರ ಇಚ್ಛೆ ಈಡೇರುವುದಿಲ್ಲ. ಅದಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡುವುದಿಲ್ಲ. ಧರ್ಮ ಅಖಂಡವಾಗಿಯೇ ಇರಲಿದೆ’ ಎಂದು ಹೇಳಿದರು.

‘ಪಂಚಾಚಾರ್ಯರಿಂದ ಸ್ಥಾಪನೆಯಾದ ವೀರಶೈವ– ಲಿಂಗಾಯತ ಧರ್ಮಕ್ಕೆ ಬಸವಾದಿ ಶರಣರು ಯುಗಪ್ರವರ್ತಕರು; ಹಾನಗಲ್ ಕುಮಾರಸ್ವಾಮಿಗಳು ಯುಗಪುರುಷರು. ಅದು ಅಖಂಡವಾಗಿಯೇ ಇರಲು ನಿಮ್ಮ ಸಹಾಯ ಬೇಕು’ ಎಂದು ಮನವಿ ಮಾಡಿದ ಶ್ರೀಗಳು, ‘ಧರ್ಮ ಒಡೆಯುವ ಕಾರ್ಯ ತಡೆಯುವಂತೆ ನಿಮ್ಮನ್ನು (ಅಮಿತ್ ಶಾ) ಹಾಗೂ ಪ್ರಧಾನಿಯನ್ನು ಭೇಟಿ ಮಾಡಲು ನಾವೇ ದೆಹಲಿಗೆ ಬರುವ ಉದ್ದೇಶ ಹೊಂದಿದ್ದೆವು. ನೀವೇ ಇಲ್ಲಿಗೆ ಬಂದಿರುವುದು ಸಂತಸವಾಗಿದೆ’ ಎಂದರು. ಪ್ರಧಾನಿ ನರೇಂದ್ರ ಮೋದಿ ತ್ಯಾಗ ಮತ್ತು ಅಮಿತ್ ಶಾ ಅವರ ರಣನೀತಿಯ ಕಾರಣ, ಬಿಜೆಪಿಗೆ ದೇಶದ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ದಿಗ್ವಿಜಯ ದೊರೆತಿದೆ. ಮುಂದಿನ ದಿನಗಳಲ್ಲೂ ಅದು ಮುಂದುವರಿಯುವ ವಿಶ್ವಾಸವಿದೆ ಎಂದು ಹೇಳಿದರು.

ಇದೇ ವೇಳೆ, ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರ ನೇತೃತ್ವದಲ್ಲಿ ಶಾ ಅವರಿಗೆ ಮನವಿ ಸಲ್ಲಿಸಲಾಯಿತು.ಸಭೆಯಲ್ಲಿ ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯರು, ಶಿವಯೋಗ ಮಂದಿರ ಸಂಸ್ಥೆ ಅಧ್ಯಕ್ಷ ಡಾ. ಸಂಗನಬಸವ ಸ್ವಾಮೀಜಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿದರು.

ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಸಂಸದ ಪ್ರಹ್ಲಾದ ಜೋಶಿ, ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರ ರಾವ್, ಮಾಜಿ ಶಾಸಕರಾದ ವೀರಣ್ಣ ಚರಂತಿಮಠ, ಎಂ.ಕೆ.ಪಟ್ಟಣಶೆಟ್ಟಿ ಇದ್ದರು.

**

ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದನ್ನು ತಡೆಯಲು ವೀರಶೈವ–ಲಿಂಗಾಯತ ಧರ್ಮ ಒಡೆಯುವ ಷಡ್ಯಂತ್ರ ಮಾಡಲಾಗಿದೆ -  ಡಾ.ಚಂದ್ರಶೇಖರ ಶಿವಾಚಾರ್ಯ, ಕಾಶಿಪೀಠ.

**

ಸಮಾಜವನ್ನು ಒಗ್ಗೂಡಿಸುವ ಕಾರ್ಯಕ್ಕೆ ಟೊಂಕ ಕಟ್ಟಿರುವ ಮಠಾಧೀಶರ ಕೆಲಸ ಶ್ಲಾಘನೀಯ. ನಿಮ್ಮ ಆಶೀರ್ವಾದ ನಮಗಿರಲಿ - ಬಿ.ಎಸ್.ಯಡಿಯೂರಪ್ಪ,ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry