ಮತದಾನ ಹೆಚ್ಚಳಕ್ಕೆ ಬಗೆಬಗೆ ಚಟುವಟಿಕೆ

7
ಈ ಬಾರಿ ಜಿಲ್ಲೆಯ ಮತದಾನ ಶೇ 95ರಷ್ಟು ಹೆಚ್ಚಿಸುವ ಗುರಿ; ಮತದಾರರ ಪ್ರೇರಣೆಗೆ ವೈವಿಧ್ಯಮಯ ಪ್ರಚಾರ

ಮತದಾನ ಹೆಚ್ಚಳಕ್ಕೆ ಬಗೆಬಗೆ ಚಟುವಟಿಕೆ

Published:
Updated:

ಚಿಕ್ಕಬಳ್ಳಾಪುರ:  ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದು ನೈತಿಕವಾಗಿ ಮತ ಚಲಾಯಿಸಲು ಪ್ರೇರೇಪಿಸುವ ನಿಟ್ಟಿನಲ್ಲಿ ವ್ಯವಸ್ಥಿತವಾಗಿ ಮತದಾರರಿಗೆ ಶಿಕ್ಷಣ ಮತ್ತು ಮತದಾನದಲ್ಲಿ ಭಾಗವಹಿಸುವಿಕೆ (ಸ್ವೀಪ್) ಸಮಿತಿ ಮೂಲಕ ಜಿಲ್ಲೆಯಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ, ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಗುರುದತ್ ಹೆಗಡೆ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಧಾನಸಭೆ ಸಾರ್ವತ್ರಿಕ ಚುನಾವಣೆ ಪೂರ್ವಭಾವಿಯಾಗಿ ಜನಸಾಮಾನ್ಯರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಈಗಾಗಲೇ ಒಂದು ಲಕ್ಷ ವಿದ್ಯಾರ್ಥಿಗಳ ಬಳಿ ಮತದಾನದ ಅರಿವಿನ ಬಗ್ಗೆ ಪ್ರತಿಜ್ಞಾ ವಿಧಿ ತೆಗೆದುಕೊಳ್ಳಲಾಗಿದ್ದು, ಅವರನ್ನು ಮನೆಯ ರಾಯಭಾರಿಗಳನ್ನಾಗಿ ಮಾಡಿದ್ದೇವೆ. ಅವರು ಮನೆಯ ಜತೆಗೆ ನೆರೆಯಹೊರೆ ಜನರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಿದ್ದಾರೆ’ ಎಂದು ತಿಳಿಸಿದರು.

ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಮತ್ತು ಮತ ಖಾತರಿ ಯಂತ್ರ (ವಿ.ವಿ ಪ್ಯಾಟ್‌) ಬಳಕೆ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ರೈತರು, ಪರಿಶಿಷ್ಟ ಸಮುದಾಯಗಳ ಜನರಿರುವ ಕಾಲೊನಿಗಳು, ಮಾರುಕಟ್ಟೆ, ಜನದಟ್ಟಣೆ ಪ್ರದೇಶ, ಜಾತ್ರೆ, ಸಂತೆಗಳಲ್ಲಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.

‘ಕಳೆದ ವಿಧಾನಸಭೆ ಚುನಾವಣೆ ಯಲ್ಲಿ ಜಿಲ್ಲೆಯಲ್ಲಿ ಶೇ 83ರಷ್ಟು ಮತದಾನವಾಗಿತ್ತು. ಈ ಬಾರಿ ಅದನ್ನು ಶೇ 95 ರಷ್ಟು ಏರಿಕೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಯುವ ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ವಾಟ್ಸಪ್ ಗ್ರೂಪ್, ಫೇಸ್‌ಬುಕ್ ಪುಟ ಆರಂಭಿಸಲಾಗಿದೆ. ಜತೆಗೆ ಅಂಧರಿಗೆ ಇವಿಎಂ ಮೇಲೆ ಇರುವ ಬ್ರೈಲ್ ಲಿಪಿ ಆಧರಿಸಿ ತಮ್ಮ ಇಷ್ಟದ ಅಭ್ಯರ್ಥಿಗೆ ಮತದಾನ ಮಾಡುವುದು ಹೇಗೆ ಎನ್ನುವುದರ ಬಗ್ಗೆ ತರಬೇತಿ ನೀಡಲಾಗುತ್ತದೆ’ ಎಂದು ತಿಳಿಸಿದರು.

ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ದೀಪ್ತಿ ಕಾನಡೆ ಮಾತನಾಡಿ, ‘ಜಿಲ್ಲೆಯಲ್ಲಿ 23 ಸಾವಿರ ಅಂಗವಿಕಲರಿದ್ದಾರೆ. ಈ ಪೈಕಿ ಈಗಾಗಲೇ 12 ಸಾವಿರ ಜನರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿಕೊಂಡಿದ್ದಾರೆ. ಉಳಿದವರನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಗ್ರಾಮ ಸಂಪನ್ಮೂಲ ವ್ಯಕ್ತಿಗಳು ಮನೆ ಮನೆಗೆ ಭೇಟಿ ನೀಡಿ ಅಂಗವಿಕಲರಿಗೆ ಮತದಾನದ ಅರಿವು ಮೂಡಿಸುವ ಜತೆಗೆ, ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ನೆರವು ನೀಡುತ್ತಿದ್ದಾರೆ’ ಎಂದು ಹೇಳಿದರು.‘ಎಲ್ಲಾ ಗ್ರಾಮ ಪಂಚಾಯಿತಿ ಗಳ ವ್ಯಾಪ್ತಿಯಲ್ಲಿ ಇವಿಎಂ ಮತ್ತು ವಿ.ವಿ ಪ್ಯಾಟ್ ಯಂತ್ರಗಳ ಬಳಕೆ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗುತ್ತಿದೆ. ಇದಕ್ಕಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ. ಈ ತಂಡ ಹಳ್ಳಿಗೆ ಬಂದಾಗ ಜನರು ಈ ಯಂತ್ರಗಳ ಬಗ್ಗೆ ಇರುವ ಸಂದೇಹಗಳನ್ನು ಪರಿಹಾರ ಮಾಡಿಕೊಳ್ಳಬೇಕು’ ಎಂದರು.

ಟಿ.ಎನ್.ಸೀತಾರಾಂ ಜಿಲ್ಲಾ ರಾಯಭಾರಿ

ನಿರ್ದೇಶಕ ಟಿ.ಎನ್.ಸೀತಾರಾಂ ಅವರಿಗೆ ಜಿಲ್ಲಾ ರಾಯಭಾರಿ ಆಗುವಂತೆ ಮನವಿ ಮಾಡಿಕೊಳ್ಳಲಾಗಿದ್ದು, ಅವರು ಸಮ್ಮತಿಸಿದ್ದಾರೆ ಎಂದು ಗುರುದತ್ ಹೆಗಡೆ ಹೇಳಿದರು.‘ಮತದಾನ ಕುರಿತ ಅವರ ವಿಡಿಯೊ ಸಂದೇಶವನ್ನು ಸಿದ್ಧಪಡಿಸಿ ಶೀಘ್ರದಲ್ಲಿಯೇ ಸ್ಥಳೀಯ ಎಲ್ಲ ಟಿ.ವಿ. ಚಾನೆಲ್‌ಗಳು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡುತ್ತೇವೆ. ಎರಡ್ಮೂರು ಬಾರಿ ಕರೆಯಿಸಿ ಜಾಥಾ ನಡೆಸಿ ಜನರಿಗೆ ಪ್ರೇರಣೆ ನೀಡುವ ಕೆಲಸ ಮಾಡುತ್ತೇವೆ’ ಎಂದು ಹೇಳಿದರು.

ಮತದಾರರ ಸಹಾಯಕ್ಕೆ ಕೇಂದ್ರ

ವಿಧಾನಸಭಾ ಚುನಾವಣೆ ವ್ಯವಸ್ಥಿತವಾಗಿ ನಿರ್ವಹಿಸಲು ಜಿಲ್ಲಾಡಳಿತ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಸಹಾಯ ಕೇಂದ್ರ ತೆರೆಯುವ ಜತೆಗೆ ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು ನಿಯೋಜಿಸಿದೆ.ಪ್ರತಿ ತಾಲ್ಲೂಕು ಕಚೇರಿಯಲ್ಲಿ ತೆರೆದಿರುವ ಮತದಾರರ ಸಹಾಯ ಕೇಂದ್ರ ಮತ್ತು ನಿಯೋಜಿತ ಅಧಿಕಾರಿಯ ಹೆಸರು ಮತ್ತು ದೂರವಾಣಿ ಸಂಖ್ಯೆ ವಿವರ ಈ ಕೆಳಕಂಡಂತಿದೆ..

ಗೌರಿಬಿದನೂರು ಟಿ.ಎಸ್.ಚಂದ್ರಶೇಖರ್ 08155-286451, ಬಾಗೇಪಲ್ಲಿ ಭಾಗ್ಯಶ್ರೀ 08150-282225, ಗುಡಿಬಂಡೆ ವೆಂಕಟೇಶ್ 08156-261250, ಚಿಕ್ಕಬಳ್ಳಾಪುರ ಚಂದ್ರಪ್ಪ ಮರಾಠ 08156-272025, ಶಿಡ್ಲಘಟ್ಟ ಮಹಮ್ಮದ್ ಹಸನ್ ಕೆ.ಮುಲ್ಲಾ 08158-256763, ಚಿಂತಾಮಣಿ ಯೋಗೇಶ್ ಮುದ್ದು 08154-252164.

58 ಪ್ರಕರಣಗಳು ದಾಖಲು

ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ದಿನದಿಂದ ಈವರೆಗೆ ಜಿಲ್ಲೆಯಾದ್ಯಂತ ಚೆಕ್‌ಪೋಸ್ಟ್‌ಗಳಲ್ಲಿ ₹ 9.50 ಲಕ್ಷ ನಗದು, ₹ 21 ಸಾವಿರ ಮೌಲ್ಯದ 102 ಲೀಟರ್ ಮದ್ಯ, 240 ಸೀರೆಗಳು, 2,500 ಕರಪತ್ರಗಳು ಮತ್ತು ಚುನಾವಣಾ ಸಾಮಗ್ರಿಗಳು, ₹ 3.80 ಲಕ್ಷ ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.ಅಬಕಾರಿ ಇಲಾಖೆಯವರು 55 ಮತ್ತು ಪೊಲೀಸರು ಮೂರು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಗುರುದತ್ ಹೆಗಡೆ ತಿಳಿಸಿದರು.

ಚುನಾವಣಾಧಿಕಾರಿಗಳ ವಿವರ

ಚುನಾವಣಾ ಕರ್ತವ್ಯಕ್ಕಾಗಿ ಪ್ರತಿ ಕ್ಷೇತ್ರಕ್ಕೆ ನಿಯೋಜಿತರಾಗಿರುವ ಚುನಾವಣಾಧಿಕಾರಿಗಳು (ರಿಟರ್ನಿಂಗ್ ಅಧಿಕಾರಿಗಳು) ಮತ್ತು ದೂರವಾಣಿ ಸಂಖ್ಯೆಗಳು ಇಂತಿವೆ. ಗೌರಿಬಿದನೂರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಮಹಮದ್ ಅತಿಖುಲ್ಲಾ ಷರೀಫ್ 9845625583, ಬಾಗೇಪಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಜಗದೀಶ್ ಗಂಗಣ್ಣವರ್ 9742094639, ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿ ಬಿ. ಶಿವಸ್ವಾಮಿ 9448523683, ಶಿಡ್ಲಘಟ್ಟ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ 7259004828, ಚಿಂತಾಮಣಿ ಆಹಾರ ನಾಗರಿಕ ಮತ್ತು ಸರಬರಾಜು ಇಲಾಖೆ ಉಪನಿರ್ದೇಶಕಿ ಪಿ.ಸವಿತಾ 9663245718.

ಸಹಾಯಕ ಚುನಾವಣಾಧಿಕಾರಿಗಳ ವಿವರ

ಚುನಾವಣಾ ಕರ್ತವ್ಯಕ್ಕಾಗಿ ಪ್ರತಿ ಕ್ಷೇತ್ರಕ್ಕೆ ತಹಶೀಲ್ದಾರ್ ಅವರನ್ನು ಸಹಾಯಕ ಚುನಾವಣಾಧಿಕಾರಿಗಳಾಗಿ (ಅಸಿಸ್ಟಂಟ್ ರಿಟರ್ನಿಂಗ್ ಅಧಿಕಾರಿಗಳು) ನೇಮಕ ಮಾಡಿದ್ದು, ಅವರ ದೂರವಾಣಿ ಸಂಖ್ಯೆಗಳು ಇಂತಿವೆ. ಗೌರಿಬಿದನೂರು ಶ್ರೀನಿವಾಸ್ 8105841396, ಬಾಗೇಪಲ್ಲಿ ಮಹಮದ್ ಅಸ್ಲಾಮ್ 9480202844, ಗುಡಿಬಂಡೆ ಕೆ. ಮುನಿರಾಜು 9845234664, ಚಿಕ್ಕಬಳ್ಳಾಪುರ ಕೆ. ನರಸಿಂಹ ಮೂರ್ತಿ 9986660803, ಶಿಡ್ಲಘಟ್ಟ ಎಸ್.ಅಜಿತ್ ಕುಮಾರ್ ರೈ 9008001368, ಚಿಂತಾಮಣಿ ವಿಶ್ವನಾಥ್ 9620222276.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry