ಭಾನುವಾರ, ಡಿಸೆಂಬರ್ 15, 2019
25 °C
ಹುಬ್ಬಳ್ಳಿಯ ಲಿಂಗರಾಜ ನಗರ: ಕಾಮಗಾರಿಯಿಂದ ನಿತ್ಯ ದೂಳು, ಜನರಿಗೆ ತಪ್ಪದ ಗೋಳು

ಮುಖ್ಯರಸ್ತೆ ಕಾಮಗಾರಿ ತ್ವರಿತಕ್ಕೆ ಒತ್ತಾಯ

ಎಂ. ರವಿ Updated:

ಅಕ್ಷರ ಗಾತ್ರ : | |

ಮುಖ್ಯರಸ್ತೆ ಕಾಮಗಾರಿ ತ್ವರಿತಕ್ಕೆ ಒತ್ತಾಯ

ಹುಬ್ಬಳ್ಳಿ: ಸದಾ ವಾಹನಗಳ ದಟ್ಟಣೆಯಿಂದ ಕೂಡಿರುವ ಲಿಂಗರಾಜನಗರ ಮುಖ್ಯರಸ್ತೆ ಕಾಂಕ್ರೀಟ್ ಮಾಡುವ ಕಾಮಗಾರಿ ಆರಂಭವಾಗಿ ಎರಡು ತಿಂಗಳಾಗಿದ್ದು, ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಜನರು ಅನುಭವಿಸುತ್ತಿರುವ ತೊಂದರೆಯನ್ನು ತಪ್ಪಿಸಬೇಕು ಎಂಬುದು ಸ್ಥಳೀಯರ ಒಕ್ಕೊರಲ ಒತ್ತಾಯ.ಹಳೇ ಹುಬ್ಬಳ್ಳಿ ಇಂಡಿ ಪಂಪ್‌ ವೃತ್ತದಿಂದ ಲಿಂಗರಾಜ ನಗರ ಮುಖ್ಯರಸ್ತೆಯ ಸೇತುವೆವರೆಗೆ ಕೇಂದ್ರ ರಸ್ತೆ ಅನುದಾನ (ಸಿಆರ್‌ಎಫ್‌)ದಡಿ ₹40 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಇಂಡಿ ಪಂಪ್‌ನಿಂದ ಸಿದ್ಧೇಶ್ವರ ಪಾರ್ಕ್‌ ವೃತ್ತದವರೆಗೂ ಕಾಮಗಾರಿ ತ್ವರಿತಗತಿಯಲ್ಲಿ ನಡೆದಿದೆ. ಆದರೆ, ಸಿದ್ಧೇಶ್ವರ ಪಾರ್ಕ್‌ ವೃತ್ತದಿಂದ ಲಿಂಗರಾಜ ಮುಖ್ಯರಸ್ತೆಯಲ್ಲಿ ನಡೆಯುತ್ತಿರುವ ಆಮೆಗತಿಯಲ್ಲಿ ಸಾಗಿದ್ದು, ನಿತ್ಯ ದೂಳು, ವಾಹನಗಳ ದಟ್ಟಣೆಯಿಂದ ಸ್ಥಳೀಯರು ರೋಸಿ ಹೋಗಿದ್ದಾರೆ.

ಕಾಮಗಾರಿ ನಡೆಸುವ ವೇಳೆ ಕುಡಿಯುವ ನೀರಿನ ಪೈಪ್‌ಲೈನ್‌ಗಳನ್ನು ಒಡೆದು ಹಾಕಿದ್ದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿ ಸ್ಥಳೀಯರು ಕಾಮಗಾರಿ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಿದ್ಧೇಶ್ವರ ಪಾರ್ಕ್‌ ವೃತ್ತದಲ್ಲಿ ಈಚೆಗೆ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.ಮುಖ್ಯರಸ್ತೆಯಲ್ಲಿ ಇರುವ ಮನೆಗಳ ಮುಂದಿನ ಕಟ್ಟೆಗಳನ್ನು ಒಡೆದು ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಡದಿರುವ ಬಗ್ಗೆಯೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಏಕಾಏಕಿ ಮನೆಗಳ ಮುಂದಿನ ಕಟ್ಟೆಗಳನ್ನು ಒಡೆದು ಹಾಕಿದ್ದರಿಂದ ಮನೆಯವರು ಒಳಗೆ ಹೋಗಲು ಮತ್ತು ಹೊರಗೆ ಬರಲು ತೊಂದರೆ ಅನುಭವಿಸುವಂತಾಯಿತು. ವಾಹನಗಳನ್ನು ನಿಲುಗಡೆ ಎಲ್ಲಿ ಮಾಡಬೇಕು ಎಂದೂ ಗೊತ್ತಾಗುತ್ತಿಲ್ಲ. ಮಹಿಳೆಯರು, ಮಕ್ಕಳು, ವೃದ್ಧರು ಓಡಾಡಲು ತೊಂದರೆ ಆಗಿದೆ’ ಎಂದು ಸ್ಥಳೀಯ ಜಗದೀಶ ಅಂಚಟಗೇರಿ ಅಳಲು ತೋಡಿಕೊಂಡರು.‘ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸ್ಥಳೀಯರು ಅನುಭವಿಸುತ್ತಿರುವ ಸಮಸ್ಯೆ ತಪ್ಪಿಸಬೇಕು. ಮನೆ ಮುಂದೆ ರಸ್ತೆ ಅಗೆಯುವ ಮುನ್ನ ಪರ್ಯಾಯ ವ್ಯವಸ್ಥೆ ಮಾಡಬೇಕು. ಪೈಪ್‌ಗಳು ಒಡೆದರೆ ಕುಡಿಯುವ ನೀರು, ಶೌಚಾಲಯ ಪೈಪ್‌ಲೈನ್‌ಗೆ ತೊಂದರೆ ಆಗಲಿದೆ. ಈ ಬಗ್ಗೆ ಗಮನ ಹರಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಕಾಮಗಾರಿ ಆರಂಭಿಸಿದಾಗಿನಿಂದ ಲಿಂಗರಾಜನಗರ ರಸ್ತೆಯಲ್ಲಿ ಓಡಾಡುವುದೇ ಸಮಸ್ಯೆಯಾಗಿದೆ. ಕಿರಿದಾದ ರಸ್ತೆಯಲ್ಲಿ ವಾಹನಗಳು ಹೆಚ್ಚು ಓಡಾಡುತ್ತಿರುವುದರಿಂದ ದೂಳು ವಿಪರೀತವಾಗಿದೆ. ಎರಡು ತಿಂಗಳಾದರೂ ಕಾಮಗಾರಿ ಮಾಡುತ್ತಿಲ್ಲ’ ಎಂದು ಸಿದ್ಧೇಶ್ವರ ಪಾರ್ಕ್‌ ನಿವಾಸಿ ಮಹಾಲಕ್ಷ್ಮಿ ದೂರಿದರು.‘ಗೋಕುಲ ರೋಡ್‌ ಕ್ರಾಸ್‌ನಿಂದ ಶಿರೂರ ಪಾರ್ಕ್‌ ವೃತ್ತದವರೆಗೆ ಈಗಾಗಲೇ ಒಂದು ಬದಿಯಲ್ಲಿ ಕಾಂಕ್ರೀಟ್‌ ಕಾಮಗಾರಿ ಮುಗಿದಿದ್ದು, ಒಳಚರಂಡಿ ವ್ಯವಸ್ಥೆ ಮುಗಿದಿದೆ. ಕಾಮಗಾರಿ ನಡೆಸುವ ವೇಳೆ ಕುಡಿಯುವ ನೀರಿನ ಪೈಪ್‌ಲೈನ್‌ ಮತ್ತು ಶೌಚಾಲಯಗಳಿಗೆ ತೊಂದರೆ ಆಗದಂತೆ ಎಚ್ಚರ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿದೆ’ ಎಂದು ಪಾಲಿಕೆ ಸದಸ್ಯ ಮಹೇಶ ಬುರ್ಲಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಾಹನ ದಟ್ಟಣೆಯಿಂದ ಮೇಲೆ ಏಳುವ ದೂಳನ್ನು ತಪ್ಪಿಸಲು ಬೆಳಿಗ್ಗೆ ಮತ್ತು ಸಂಜೆ ವೇಳೆ ನೀರು ಸಿಂಪಡಣೆ ಮಾಡಲಾಗುತ್ತಿದೆ. ಕಟ್ಟೆಗಳನ್ನು ಒಡೆದು ಹಾಕಿದ ಮನೆಗಳಿಗೆ ಓಡಾಡಲು ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಎರಡು ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದರು.

ಪ್ರತಿಕ್ರಿಯಿಸಿ (+)