ಶುಕ್ರವಾರ, ಡಿಸೆಂಬರ್ 13, 2019
19 °C
ಸಾಲಮನ್ನಾ ಮೊತ್ತವೂ ಸಹಕಾರಿ ಸಂಘಗಳಿಗೆ ಪೂರ್ಣ ತಲುಪಿಲ್ಲ; ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

ಸಿ.ಎಂ ಮಾಡಿದ್ದು ಕೇವಲ ಟೋಪಿ ವ್ಯವಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿ.ಎಂ ಮಾಡಿದ್ದು ಕೇವಲ ಟೋಪಿ ವ್ಯವಹಾರ

ಹಾಸನ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದುವರೆಗೂ ಮಾಡಿಕೊಂಡು ಬಂದಿರುವುದು ಕೇವಲ ಟೋಪಿ ವ್ಯವಹಾರ. ರಾಜ್ಯದಲ್ಲಿ ಸಾಲಭಾದೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗುತ್ತಿರುವ ರೈತರ ಸಂಖ್ಯೆ ಹೆಚ್ಚು ತ್ತಿದೆ’ ಎಂದು ಜೆಡಿಎಸ್‌ ರಾಜ್ಯ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದರು.

‘ಸಹಕಾರಿ ಸಂಘಗಳಲ್ಲಿನ ₹ 8 ಸಾವಿರ ಕೋಟಿ ಸಾಲಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಅವರು ಪ್ರಕಟಿಸಿದ್ದರು. ಆದರೆ, ಇದುವರೆಗೆ ಬ್ಯಾಂಕ್‌ಗಳಿಗೆ ಪಾವತಿಸಿರುವುದು ಕೇವಲ ₹ 1.5 ಸಾವಿರ ಕೋಟಿ ಮಾತ್ರ’ ಎಂದು ಸುದ್ದಿಗೋಷ್ಠಿಯಲ್ಲಿ ಅವರು ತರಾಟೆಗೆ ತೆಗೆದುಕೊಂಡರು.‘ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ ಮತ್ತು ಬಿಜೆಪಿ ಒಂದು ಗೂಡಿದರೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ’ ಎಂದು ಸಿ.ಎಂ ಹೇಳುತ್ತಾರೆ. ಅವರು ಈಗ ಜ್ಯೋತಿಷ ಹೇಳಲು ಪ್ರಾರಂಭಿಸಿದ್ದಾರೆ. ಮತದಾರರು ಅವರ ಜೇಬಿನಲ್ಲಿಲ್ಲ. ಯಾರು ಗೆಲ್ಲಬೇಕು ಎಂದು ಆ ಕ್ಷೇತ್ರದ ಜನರು ತೀರ್ಮಾನ ಮಾಡಲಿದ್ದಾರೆ’ ಎಂದು ಟೀಕಿಸಿದರು.

ಚುನಾವಣೆಯ ಸಮಯದಲ್ಲಿ ಪಕ್ಷಾಂತರ ವಿಷಯ ಸಾಮಾನ್ಯವಾಗಿಬಿಟ್ಟಿದೆ. ಈ ಬಾರಿ ಅದು ಹೆಚ್ಚಾಗಿದೆ. ಮುಂದಿನ 10 ರಿಂದ 15 ದಿನಗಳಲ್ಲಿ ಪಕ್ಷಾಂತರ ಪರ್ವ ಜೋರಾಗಲಿದೆ. ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಬಾಗಿಲು ತೆರೆದುಕೊಂಡು ಕುಳಿತಿವೆ’ ಎಂದರು.ಶಾಸಕ ಜಮೀರ್ ಅಹಮದ್‌ ಕುರಿತು ನಾನು ಮಾತನಾಡುವುದಿಲ್ಲ. ಅವರೊಬ್ಬ ರಾಜಕೀಯ ವಿದೂಷಕ ಎಂದು ಅವರು ವ್ಯಂಗ್ಯವಾಡಿದರು.‘ಜೆಡಿಎಸ್ ಇನ್ನು ಒಂದು ವಾರದಲ್ಲಿ ಅಭ್ಯರ್ಥಿಗಳ ಎರಡನೇ ಹಂತದ ಪಟ್ಟಿ ಘೋಷಿಸಲಿದೆ’ ಎಂದು ತಿಳಿಸಿದರು.

ಇಬ್ಬರೇ ಸ್ಪರ್ಧೆ: ‘ನಮ್ಮ ಕುಟುಂಬದಿಂದ ಇಬ್ಬರೇ ಚುನಾವಣೆಗೆ ಸ್ಪರ್ಧಿಸುತ್ತೇವೆ. ರಾಮನಗರ ಕ್ಷೇತ್ರದ ಜನ ನನ್ನ ಕೆಲಸಗಳನ್ನು ಕಂಡಿದ್ದು, ಪ್ರಚಾರಕ್ಕೆ ಹೋಗದಿದ್ದರೂ ನನ್ನನ್ನು ಗೆಲ್ಲಿಸುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.‘ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡಲು ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಕುಟುಂಬ ರಾಜಕರಣದ ಪಕ್ಷ ಎಂಬ ಹಣೆಪಟ್ಟಿಯಿಂದ ಹೊರಬರಲು ಇಬ್ಬರೇ ಸ್ಪರ್ಧಿಸಲಿದ್ದೇವೆ ’ ಎಂದು ತಿಳಿಸಿದರು. ಶಾಸಕರಾದ ಎಚ್.ಕೆ.ಕುಮಾರಸ್ವಾಮಿ, ಎಚ್.ಎಸ್‌. ಪ್ರಕಾಶ್‌, ಸಿ.ಎನ್.ಬಾಲಕೃಷ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಪಟೇಲ್ ಶಿವರಾಂ ಇದ್ದರು.

ಸುದೀಪ್‌ ಜತೆ ಚರ್ಚಿಸಿದ್ದೇನೆ

ಹಾಸನ: ನಟ ಸುದೀಪ್ ಜತೆಗೆ ನನಗೆ ಆತ್ಮೀಯ ಸಂಬಂಧ ಇದೆ. ಸದ್ಯದ ರಾಜಕೀಯ ಸ್ಥಿತಿ, ಜನರ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು.‘ಪಕ್ಷ ಸೇರ್ಪಡೆ ಹಾಗೂ ಸ್ಟಾರ್ ಪ್ರಚಾರಕ ಆಗುವ ಕುರಿತು ಸುದೀಪ್‌ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಅವರು ಸಿನಿಮಾರಂಗದಲ್ಲಿ ಬೆಳೆಯಬೇಕಿದೆ. ಆದ್ದರಿಂದ, ಅವರಿಗೆ ಯಾವುದೇ ಒತ್ತಡ ಹಾಕಿಲ್ಲ’ ಎಂದು ತಿಳಿಸಿದರು.

**

ಮೇಲ್ಮಟ್ಟದ ಅಧಿಕಾರಿಗಳು ನಿರ್ಭೀತಿಯಿಂದ ಕೆಲಸ ಮಾಡುವ ಸ್ಥಿತಿ ರಾಜ್ಯದಲ್ಲಿ ಇಲ್ಲ. ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಬೇಕು - 

ಎಚ್.ಡಿ. ಕುಮಾರಸ್ವಾಮಿ,ರಾಜ್ಯ ಘಟಕದ ಅಧ್ಯಕ್ಷ ,ಜೆಡಿಎಸ್‌

**

 

ಪ್ರತಿಕ್ರಿಯಿಸಿ (+)