ಸೋಮವಾರ, ಜೂಲೈ 13, 2020
23 °C
ಪಾಲಿಥಿನ್ ಚೀಲದಲ್ಲಿ ಮೇವು ಸಂಸ್ಕರಣೆ: ರೈತರಿಗೆ ಕೃಷಿ ವಿಜ್ಞಾನ ಕೇಂದ್ರದಿಂದ ತರಬೇತಿ

ಬೇಸಿಗೆಯಲ್ಲಿ ರೈತರ ಕೈಹಿಡಿದ ರಸಮೇವು

ರವಿ ಎಸ್‌.ಬಳೂಟಗಿ Updated:

ಅಕ್ಷರ ಗಾತ್ರ : | |

ಬೇಸಿಗೆಯಲ್ಲಿ ರೈತರ ಕೈಹಿಡಿದ ರಸಮೇವು

ಕಲಬುರ್ಗಿ: ಇಲ್ಲಿನ ಕೃಷಿ ವಿಜ್ಞಾನ ಕೇಂದ್ರ(ಕೆವಿಕೆ)ವು ಬೇಸಿಗೆಯಲ್ಲಿ ಸಾಕುಪ್ರಾಣಿಗಳಿಗೆ ಮೇವಿನ ತೊಂದರೆ ಆಗದಂತೆ ರಸಮೇವು ತಯಾರಿಕೆ ಕುರಿತು ರೈತರಿಗೆ ತರಬೇತಿ ನೀಡಿದೆ. ಇದರಿಂದ ಜಿಲ್ಲೆಯ ಹಲವು ಜಾನುವಾರು ಸಾಕಾಣಿಕೆದಾರರಿಗೆ ಹಸಿ ಮೇವಿನ ಕೊರತೆ ಆಗಿಲ್ಲ. ಕೆವಿಕೆಯು ರಾಷ್ಟ್ರೀಯ ಹವಾಮಾನ ವೈಪರೀತ್ಯ ಸೈರಣಾ ಕೃಷಿ ಯೋಜನೆ (ನಿಕ್ರಾ)ಯಲ್ಲಿ ಹಸಿ ಮೇವು ತಯಾರಿಕಾ ಘಟಕವನ್ನು ಪ್ರಾರಂಭಿಸಿದೆ. ಕಡಿಮೆ ಖರ್ಚಿನಲ್ಲಿ ಪಾಲಿಥಿನ್ ಚೀಲದಲ್ಲಿ ಮೇವು ಸಂಗ್ರಹಿಸುವ ವಿಧಾನ ಇಲ್ಲಿ ಪರಿಚಯಿಸಲಾಗಿದೆ. ಈ ಮೇವು ಒಂದು ವರ್ಷ ಹಸಿಯಾಗಿರುತ್ತದೆ. ಜತೆಗೆ ಸಾಕುಪ್ರಾಣಿಗಳ ಆರೋಗ್ಯ ಹಾಗೂ ಮಾಂಸದ ತೂಕವನ್ನು ಹೆಚ್ಚಿಸುತ್ತದೆ.

ಈ ಘಟಕಕ್ಕೆ ಜಿಲ್ಲೆಯ ರೈತರನ್ನು ಕರೆತಂದು ಪ್ರಾತ್ಯಕ್ಷಿಕೆ ಮೂಲಕ ತಿಳಿವಳಿಕೆ ನೀಡಲಾಗಿದೆ. ಕೆವಿಕೆ ವಿಜ್ಞಾನಿಗಳು ಆಸಕ್ತ ರೈತರ ಗ್ರಾಮಗಳಿಗೆ ತೆರಳಿ ಮೇವು ಸಂಸ್ಕರಣೆ ಬಗ್ಗೆ ಎರಡು ವರ್ಷಗಳಿಂದ ಮಾರ್ಗದರ್ಶನ ಮಾಡುತ್ತಿದ್ದಾರೆ. ಬೇಸಿಗೆಯಲ್ಲಿ ಗುಣಮಟ್ಟದ ಮೇವಿಗೆ ಪರದಾಡುತ್ತಿದ್ದ ರೈತರ ಸಮಸ್ಯೆಯನ್ನು ಇದು ನೀಗಿಸಿದೆ.

‘ಮೆಕ್ಕೆಜೋಳ, ಜೋಳ, ತೊಗರಿಯ ತ್ಯಾಜ್ಯದಿಂದ ರಸಮೇವು ತಯಾರಿಸಿದ್ದೇವೆ. ಮಹಾರಾಷ್ಟ್ರದಲ್ಲಿ ಈ ವಿಧಾನ ಜನಪ್ರಿಯ. ಜಿಲ್ಲೆಯ ಹಲವು ರೈತರು ಅದೇ ಮಾದರಿ ಅನುಸರಿಸುತ್ತಿದ್ದಾರೆ’ ಎನ್ನುತ್ತಾರೆ ಕೆವಿಕೆಯ ಪ್ರಾಣಿ ವಿಜ್ಞಾನಿ ಮಂಜುನಾಥ ಪಾಟೀಲ.

ಕಲಬುರ್ಗಿ ತಾಲ್ಲೂಕಿನ ಜಂಬಗಾ, ಮದಗುಣಕಿ, ಆಳಂದ ತಾಲ್ಲೂಕಿನ ಮೇಳಕುಂದಾ(ಬಿ), ಮಾದನಹಿಪ್ಪರಗಾ ಗ್ರಾಮದ ರೈತರಿಗೆ ಪ್ರಾಯೋಗಿಕವಾಗಿ ತರಬೇತಿ ನೀಡಲಾಗಿತ್ತು. ಈ ಗ್ರಾಮಗಳ ರೈತರು ಪಾಲಿಥಿನ್ ಚೀಲದಲ್ಲಿ ಸಂಗ್ರಹಿಸಿದ್ದ ರಸಮೇವನ್ನು ಬಳಸಿ ‘ಮೇವಿನ ಬರ’ ನೀಗಿಸಿಕೊಂಡಿದ್ದಾರೆ. ‘ನಾನು ಆಡುಗಳನ್ನು ಸಾಕಿದ್ದೇನೆ. ಸಂಕ್ರಾಂತಿಯಿಂದ ಕಾರಹುಣ್ಣಿಮೆಯ ತನಕ ಆಡುಗಳ ಪಾಲನೆಯೇ ದೊಡ್ಡ ಸಮಸ್ಯೆ. ಪಾಲಿಥಿನ್ ಚೀಲದ ರಸಮೇವು ತಯಾರಿ ಆರಂಭಿಸಿದ ನಂತರ ಮೇವಿನ ಸಮಸ್ಯೆ ಆಗಿಲ್ಲ’ ಎನ್ನುತ್ತಾರೆ ಮಾದನಹಿಪ್ಪರಗಾ ರೈತ ಮಲ್ಲಿನಾಥ ನಿಂಬಾಳ.‘ತರಬೇತಿ ನಂತರ ಮೂರು ಪಾಲಿಥಿಲ್‌ ಚೀಲಗಳಲ್ಲಿ ಮೇವು ಸಂಗ್ರಹಿಸಿದ್ದೆವು. ಇದರಿಂದ ಬೇಸಿಗೆಗೆ ಮೇವಿನ ಕೊರತೆ ಅಗಲಿಲ್ಲ. ಆಡುಗಳ ತೂಕವೂ ಹೆಚ್ಚಾಗಿದೆ’ ಎನ್ನುತ್ತಾರೆ ಅವರು.

ಏನಿದು ರಸಮೇವು?:

ಮೆಕ್ಕೆಜೋಳ, ಜೋಳ, ಸಜ್ಜೆ ಮತ್ತು ಬಹು ವಾರ್ಷಿಕ ಬೆಳೆಯ ಹುಲ್ಲನ್ನು ರಸಮೇವಾಗಿ ಸಂಗ್ರಹಿಸಬಹುದು. ತೇವಾಂಶವಿರುವ ಮತ್ತು ಬೆಳೆಯ ಆರಂಭಿಕ ಹಂತದಲ್ಲಿಯೇ ಲಭಿಸುವ ಹಸಿರು ಮೇವನ್ನು ತುಣಕುಗಳಾಗಿ ಕತ್ತರಿಸಿ ರಾಸಾಯನಿಕ ಕ್ರಿಯೆಗೆ ಒಳಪಡಿಸಲಾಗುತ್ತದೆ. 1 ಟನ್‌ ಹಸಿ ಮೇವಿಗೆ 1 ಕೆ.ಜಿ. ಉಪ್ಪು ಹಾಗೂ ಎರಡು ಕೆ.ಜಿ ಬೆಲ್ಲ ಮಿಶ್ರಣ ಮಾಡಬೇಕು. ಈ ಮಿಶ್ರಣವನ್ನು ಪಾಲಿಥಿಲ್‌ ಚೀಲದಲ್ಲಿ ಬಿಗಿಯಾಗಿ ತುಂಬಬೇಕು. ಬಿಸಿಲು–ಮಳೆ ನೀರು ಬೀಳದ ಜಾಗದಲ್ಲಿ ಅದನ್ನು ಇಡಬೇಕು. ಹೀಗೆ ಸಂಗ್ರಹಿಸಿಟ್ಟ ಮೇವು ಬೇಸಿಗೆಯಲ್ಲೂ ಹಸಿಯಾಗಿರುತ್ತದೆ.‘ಸಂಸ್ಕರಿಸಿದ ಮೇವನ್ನು ಹಸುಗಳಿಗೆ ಪ್ರತಿದಿನ 7ರಿಂದ 10 ಕೆ.ಜಿ. ನೀಡಬೇಕು. ಒಂದು ಚೀಲದಲ್ಲಿ ಸಂಗ್ರಹಿಸಿಟ್ಟ ಮೇವು ಒಂದು ಹಸವಿಗೆ ನಾಲ್ಕು ತಿಂಗಳು ಸಾಕಾಗುತ್ತದೆ ಅಥವಾ 10 ಆಡುಗಳಿಗೆ ಮೂರು ತಿಂಗಳ ವರೆಗೆ ನೀಡಬಹುದು’ ಎನ್ನುತ್ತಾರೆ ಡಾ.ಮಂಜುನಾಥ ಪಾಟೀಲ.

ಡಾ.ಮಂಜುನಾಥ ಪಾಟೀಲ ಅವರ ಮೊಬೈಲ್‌ ಸಂಖ್ಯೆ 94492 36868

**

ರಸಮೇವು ಸರಿಯಾಗಿ ಸಂಗ್ರಹಿಸಿದರೆ ಹವಾಮಾನದ ಬದಲಾವಣೆಯ ವ್ಯತ್ಯಾಸ ಆಗುವುದಿಲ್ಲ. ಎಲ್ಲ ಪೋಷಕಾಂಶಗಳು ಬಹಳ ದಿನ ಉಳಿಯುತ್ತವೆ. ರಸಮೇವು ಪ್ರಾಣಿಗಳ ಪಚನ ಶಕ್ತಿಯನ್ನೂ ಹೆಚ್ಚಿಸುತ್ತದೆಡಾ.ಮಂಜುನಾಥ ಪಾಟೀಲ, ಪ್ರಾಣಿ ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರ, ಕಲಬುರ್ಗಿ.

**

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.