ಖಾತ್ರಿಯಾಗದ ಟಿಕೆಟ್: ರಂಗೇರದ ಕಣ

7
ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಲ್ಲಿ ಆತಂಕ, ಬಿಜೆಪಿಯಲ್ಲಿ ಸಿಗದ ಸುಳಿವು

ಖಾತ್ರಿಯಾಗದ ಟಿಕೆಟ್: ರಂಗೇರದ ಕಣ

Published:
Updated:

ಮಡಿಕೇರಿ: ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಗೂ ಮೊದಲೇ ಮನೆ ಮನೆ ಬಾಗಿಲಿಗೆ ಕಾಂಗ್ರೆಸ್‌, ಬೂತ್‌ಮಟ್ಟದ ಪ್ರಚಾರ ಸಭೆ, ಭೂಮಿ ಪೂಜೆ, ಶಂಕುಸ್ಥಾಪನೆ... ಎಂದೆಲ್ಲ ಪ್ರಚಾರದಲ್ಲಿದ್ದ ಕಾಂಗ್ರೆಸ್ ಮುಖಂಡರು ಈಗ ಯಾರ ಕಣ್ಣಿಗೂ ಬೀಳುತ್ತಿಲ್ಲ. ಬಿಜೆಪಿ ಹಿಡಿತವುಳ್ಳ ಜಿಲ್ಲೆಯಲ್ಲಿ ಈ ಬಾರಿ ಮೇಲುಗೈ ಸಾಧಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌, ಸಚಿವ ಡಿ.ಕೆ.ಶಿವಕುಮಾರ್‌, ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರನ್ನು ಕರೆಸಿ, ಬೃಹತ್‌ ಸಮಾವೇಶ ನಡೆಸಿದ ಬಳಿಕ ಜಿಲ್ಲಾ ಕಾಂಗ್ರೆಸ್‌ ಮುಖಂಡರು ಮೌನಕ್ಕೆ ಶರಣಾಗಿದ್ದಾರೆ.

ಎರಡು ಕ್ಷೇತ್ರಗಳಿಂದ ಒಟ್ಟು 12 ಮಂದಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಕೆಲವು ಮುಖಂಡರು ಬೆಂಗಳೂರಿನಲ್ಲೇ ಠಿಕಾಣಿ ಹೂಡಿದ್ದಾರೆ. ಮತ್ತೆ ಕೆಲವರು ಟಿಕೆಟ್‌ ನನಗೇ ಎಂಬ ವಿಶ್ವಾಸದಲ್ಲಿದ್ದಾರೆ. ಟಿಕೆಟ್‌ ಸಿಗದಿದ್ದರೆ ಪ್ರಚಾರ ನಡೆಸಿ ಏನು ಪ್ರಯೋಜನ ಎಂದು ಹಲವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ, ಚುನಾವಣೆಯ ಕಣ ಇನ್ನೂ ರಂಗೇರುತ್ತಿಲ್ಲ. ಟಿಕೆಟ್‌ ಖಾತ್ರಿಯಾಗದಿದ್ದ ಕಾರಣ ರಾಜಕೀಯ ಚುಟುವಟಿಕೆಗಳು ನಡೆಯುತ್ತಿಲ್ಲ ಎಂಬ ಮಾತುಗಳು ವ್ಯಕ್ತವಾಗುತ್ತಿವೆ.‘ನಾನು ಪ್ರಚಾರ ನಡೆಸಿ, ಬೇರೆಯವರಿಗೆ ಟಿಕೆಟ್ ಕೊಟ್ಟರೆ ಏನು ಪ್ರಯೋಜನ’ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ಪ್ರಶ್ನಿಸುತ್ತಾರೆ.

ಹೈಕಮಾಂಡ್‌ ಮೇಲೆ ಒತ್ತಡ: ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್‌.ಸೀತಾರಾಂ ಅವರ ಆಪ್ತ ಹರೀಶ್‌ ಬೋಪಣ್ಣ ವಿರಾಜಪೇಟೆ ಕ್ಷೇತ್ರದಿಂದ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಹೈಕಮಾಂಡ್‌ ಮೇಲೂ ಒತ್ತಡ ಹಾಕಿದ್ದಾರೆ. ಸೀತಾರಾಂ ಅವರ ಕೃಪೆಯೂ ಅವರ ಮೇಲಿದೆ ಎಂಬ ಮಾತುಗಳು ವ್ಯಕ್ತವಾಗುತ್ತಿವೆ.ಅಷ್ಟಲ್ಲದೇ ಹರೀಶ್‌ ಬೋಪಣ್ಣ ಬೆಂಬಲಿಗರು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಭೇಟಿ ಮಾಡಿ ಟಿಕೆಟ್‌ ನೀಡುವಂತೆ ಕೋರಿಕೊಂಡಿ ದ್ದಾರೆ. ಹೀಗಾಗಿ, ಹೈಕಮಾಂಡ್‌ಗೆ ರವಾನೆಯಾಗಿರುವ ಪಟ್ಟಿಯಲ್ಲಿ ಅವರ ಹೆಸರೂ ಇದೆ ಎಂದು ಮೂಲಗಳು ತಿಳಿಸಿವೆ. ಇನ್ನೂ ಇದೇ ಕ್ಷೇತ್ರದಿಂದ ವಿಧಾನ ಪರಿಷತ್‌ ಮಾಜಿ ಸದಸ್ಯ ಅರುಣ್‌ ಮಾಚಯ್ಯ, ಪದ್ಮಿನಿ ಪೊನ್ನಪ್ಪ ಅವರು ಆಕಾಂಕ್ಷಿಗಳಾಗಿದ್ದು ಹೈಕಮಾಂಡ್‌ಗೆ ಕಳುಹಿಸಿರುವ ಪಟ್ಟಿಯಲ್ಲಿ ಅವರ ಹೆಸರಿದೆ ಎನ್ನಲಾಗಿದೆ.ಅರೆಮಲೆನಾಡು, ಮಲೆನಾಡು ಪ್ರದೇಶ ಒಳಗೊಂಡಿರುವ ಮಡಿಕೇರಿ ಕ್ಷೇತ್ರದ ಮೇಲೆ ಹಲವರು ಕಣ್ಣಿಟ್ಟಿದ್ದಾರೆ. ನಾಪಂಡ ಮುತ್ತಪ್ಪ, ಕೆ.ಎಂ. ಲೋಕೇಶ್‌, ವಕೀಲ ಚಂದ್ರಮೌಳಿ ಪ್ರಮುಖರು. ಈ ಕ್ಷೇತ್ರಕ್ಕೂ ಅಭ್ಯರ್ಥಿಯ ಅಂತಿಮ ಮುದ್ರೆ ಒತ್ತಿಲ್ಲ. ಹೀಗಾಗಿ, ಅಲ್ಲಿಯೂ ಬಿರುಸಿನ ಪ್ರಚಾರ ಕಾಣಿಸುತ್ತಿಲ್ಲ.

ಕೊಡಗು ಜಿಲ್ಲೆಯಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಮಾತ್ರ ಮತದಾರರನ್ನು ಸೆಳೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಬಿಜೆಪಿಯಲ್ಲೂ ಟಿಕೆಟ್‌ ಗೊಂದಲ ಮುಂದುವರಿದಿದೆ. ಹಾಲಿ ಶಾಸಕರಾದ ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ. ಅಪ್ಪಚ್ಚು ರಂಜನ್‌ ಅವರು ಆತಂಕದಲ್ಲಿದ್ದಾರೆ. ಅವರು ಸಹ ಪೈಪೋಟಿಗೆ ಬಿದ್ದವರಂತೆ ಕ್ಷೇತ್ರದಲ್ಲಿ ಓಡಾಡುತ್ತಿಲ್ಲ.‘ಟಿಕೆಟ್‌ ಅಂತಿಮವಾಗುವ ತನಕವೂ ದೊಡ್ಡಮಟ್ಟದ ಪ್ರಚಾರ ಸಭೆ ನಡೆಸದಿರಲು ನಿರ್ಧರಿಸಿದ್ದೇವೆ. ಪ್ರತಿ ಕ್ಷೇತ್ರಲ್ಲೂ ಆರು ಮಂದಿ ಆಕಾಂಕ್ಷಿಗಳಿದ್ದಾರೆ. ಹೀಗಾಗಿ, ಯಾರ ಮುಂದಾಳತ್ವದಲ್ಲಿ ಮತಯಾಚನೆ ಮಾಡುವುದು ಎಂಬ ಪ್ರಶ್ನೆ ಎದುರಾಗಿದೆ’ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ಹೇಳುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry