ಗುರುವಾರ , ಜುಲೈ 16, 2020
22 °C
ವಿವಿಧ ರಾಜಕೀಯ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಸತ್ಯವತಿ ಸೂಚನೆ

ಸಭೆ, ಸಮಾರಂಭಕ್ಕೆ ಅನುಮತಿ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಭೆ, ಸಮಾರಂಭಕ್ಕೆ ಅನುಮತಿ ಕಡ್ಡಾಯ

ಕೋಲಾರ: ರಾಜಕೀಯ ಸಭೆ ಸಮಾರಂಭಗಳಿಗೆ, ಮುದ್ರಣ, ವಿದ್ಯುನ್ಮಾನ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡಲು ರಾಜಕೀಯ ಪಕ್ಷಗಳು ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ತಿಳಿಸಿದರು.ರಾಜ್ಯ ವಿಧಾನಸಭಾ ಚುನಾವಣೆ ಸಂಬಂಧ ನಗರದಲ್ಲಿ ಮಂಗಳವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ, ‘ಸಭೆ ಸಮಾರಂಭ ಆಯೋಜನೆ ಕುರಿತು ಪಕ್ಷಗಳು ನಿಗದಿತ ಅರ್ಜಿಯಲ್ಲಿ ಸಂಪೂರ್ಣ ವಿವರ ನೀಡಬೇಕು’ ಎಂದು ಹೇಳಿದರು.

‘ಸಭೆಯಲ್ಲಿ ಬಳಸುವ ಸಾಮಗ್ರಿಗಳು, ಪಾಲ್ಗೊಳ್ಳುವ ಜನರ ಸಂಖ್ಯೆ, ಜನರನ್ನು ಕಾರ್ಯಕ್ರಮಕ್ಕೆ ಕರೆತರುವ ವಿಧಾನ, ಬಳಸಲಾಗುವ ವಾಹನಗಳ ಸಂಖ್ಯೆ ಸೇರಿದಂತೆ ಸಮಗ್ರ ಮಾಹಿತಿಯನ್ನು ಅರ್ಜಿಯಲ್ಲಿ ನಮೂದಿಸಬೇಕು. ಚುನಾವಣಾ ಪ್ರಚಾರದ ವಾಹನಗಳ ಮೇಲೆ ಅನುಮತಿ ಪತ್ರದ ಮೂಲ ಪ್ರತಿಯನ್ನು ಕಡ್ಡಾಯವಾಗಿ ಅಂಟಿಸಬೇಕು’ ಎಂದು ಸೂಚಿಸಿದರು.‘ಚುನಾವಣಾ ಪ್ರಕ್ರಿಯೆ ಪೂರ್ಣ ಗೊಳ್ಳುವವರೆಗೂ ಪ್ರಜಾಪ್ರತಿನಿಧಿ ಕಾಯ್ದೆ ಅನ್ವಯ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಭಟನೆ, ಧರಣಿ ಮಾಡುವುದನ್ನು ನಿರ್ಬಂಧಿಸಲಾಗಿದೆ. ನಾಮಪತ್ರ ಸಲ್ಲಿಕೆಗೂ ಮುನ್ನ ತಾನು ಸಂಭವನೀಯ ಅಭ್ಯರ್ಥಿ ಎಂದು ಯಾವುದೇ ವ್ಯಕ್ತಿ ಪ್ರಚಾರ ನಡೆಸುವಂತಿಲ್ಲ’ ಎಂದು ವಿವರಿಸಿದರು.

‘ಏ.17ರವರೆಗೆ ಯಾವುದೇ ಬಹಿರಂಗ ಪ್ರಚಾರಕ್ಕೆ ಜಿಲ್ಲಾ ಚುನಾವಣಾ ಧಿಕಾರಿಯಿಂದ ಪೂರ್ವಾನುಮತಿ ಪಡೆಯಬೇಕು. ಏ.17ರ ನಂತರ ಆಯಾ ಕ್ಷೇತ್ರದ ಚುನಾವಣಾಧಿಕಾರಿಯಿಂದ ಅನುಮತಿ ಪಡೆಯಬಹುದು’ ಎಂದು ಮಾಹಿತಿ ನೀಡಿದರು.

ಸಹಕರಿಸಬೇಕು: ‘2017ರ ನವೆಂಬರ್‌ನಲ್ಲೇ ರಾಜಕೀಯ ಪಕ್ಷಗಳ ಸಭೆ ನಡೆಸಿ ಬೂತ್‌ ಮಟ್ಟದ ಏಜೆಂಟರನ್ನು ನೇಮಿಸುವಂತೆ ಸೂಚಿಸಿದ್ದರೂ ಸಂಪೂರ್ಣವಾಗಿ ಮತಗಟ್ಟೆ ಮಟ್ಟದ ಏಜೆಂಟರನ್ನು ನೇಮಕ ಮಾಡಿಲ್ಲ. ಶೀಘ್ರವೇ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಮತದಾರರ ಪಟ್ಟಿಯಲ್ಲಿ ಹೊಸದಾಗಿ ಮತದಾರರ ಹೆಸರು ಸೇರಿಸಲು ಬೂತ್ ಮಟ್ಟದ ಅಧಿಕಾರಿಗಳೊಂದಿಗೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸೆಪಟ್‌, ಕೆಜಿಎಫ್ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಲೋಕೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ, ಉಪ ವಿಭಾಗಾಧಿಕಾರಿ ಶುಭಾ ಕಲ್ಯಾಣ್‌, ಕ್ಷೇತ್ರ ಚುನಾವಣಾಧಿಕಾರಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪಾಲ್ಗೊಂಡಿದ್ದರು.

**

ಮತದಾರರ ಪಟ್ಟಿಗೆ ಹೆಸರು ಸೇರಿಸಲು ಏ.14ರವರೆಗೆ ಕಾಲಾವಕಾಶವಿದೆ. ಮತದಾರರು ಪಟ್ಟಿಯಲ್ಲಿ ತಮ್ಮ ಹೆಸರು ಪರಿಶೀಲಿಸಿ, ಹೆಸರು ಇಲ್ಲದಿದ್ದರೆ ಸೇರಿಸಬೇಕು – ಜಿ.ಸತ್ಯವತಿ, ಜಿಲ್ಲಾಧಿಕಾರಿ.

**

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.