ಭಾನುವಾರ, ಡಿಸೆಂಬರ್ 8, 2019
24 °C
ಮತದಾನ ಜಾಗೃತಿಗೆ ಜಿಲ್ಲೆಯ ಲಾಂಛನ ಬಿಡುಗಡೆ: ಮತಗಟ್ಟೆಗಳಲ್ಲಿ ಮೂಲಸೌಕರ್ಯ

ಅಂಗವಿಕಲ ಸ್ನೇಹಿ ಮತಗಟ್ಟೆ: ಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಗವಿಕಲ ಸ್ನೇಹಿ ಮತಗಟ್ಟೆ: ಡಿಸಿ

ಕೊಪ್ಪಳ: 'ವಿಧಾನಸಭಾ ಚುನಾವಣೆ ಯಲ್ಲಿ ಮತಗಟ್ಟೆಗಳನ್ನು ಅಂಗವಿಕಲರ ಸ್ನೇಹಿಯನ್ನಾಗಿಸಲಾಗುವುದು' ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಹೇಳಿದರು.ನಗರದ ಸಮೂಹ ಸಾಮರ್ಥ್ಯ ಸ್ವಯಂ ಸೇವಾ ಸಂಸ್ಥೆಯ ಆವರಣದಲ್ಲಿ ಮಂಗಳವಾರ ಮತದಾರರ ಜಾಗೃತಿಯ ಜಿಲ್ಲಾ ವಿಶೇಷ ಲಾಂಛನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

'ಚುನಾವಣೆಗಳಲ್ಲಿ ಅಂಗವಿಕಲರು ಕೆಲವು ಅನಿವಾರ್ಯ ಕಾರಣಗಳಿಂದ ಮತದಾನ ಪ್ರಕ್ರಿಯೆಯಿಂದ ಹೊರಗುಳಿಯುತ್ತಿದ್ದರು. ಇದನ್ನು ಮನಗಂಡಿರುವ ಚುನಾವಣಾ ಆಯೋಗ, ಈ ಬಾರಿಯ ಚುನಾವಣೆಯಲ್ಲಿ ಅಂಗವಿಕಲರನ್ನು ಚುನಾವಣಾ ಮುಖ್ಯವಾಹಿನಿಗೆ ತರಲು ಅನೇಕ ಕ್ರಮ ಕೈಗೊಂಡಿದೆ. ಎಲ್ಲ ಮತಗಟ್ಟೆಗಳಿಗೂ ರ್‍ಯಾಂಪ್ ಅಳವಡಿಸಲಾಗುವುದು. ಅಂಗವಿಕಲರು ಸರದಿ ಸಾಲಿನಲ್ಲಿ ನಿಲ್ಲುವ ಅಗತ್ಯವಿರುವುದಿಲ್ಲ. ಅಂಗವಿಕಲರ ಮತದಾನಕ್ಕೆ ಸಹಾಯ ಮಾಡಲು ಸಿಬ್ಬಂದಿ ನೇಮಕ, ಕುಡಿಯುವ ನೀರು ಶೌಚಾಲಯ ವ್ಯವಸ್ಥೆ, ಹೆಚ್ಚು ಅಂಗವಿಕಲ ಮತದಾರರಿರುವ ಮತಗಟ್ಟೆಯಲ್ಲಿ ಗಾಲಿ ಕುರ್ಚಿ ವ್ಯವಸ್ಥೆ ಕೈಗೊಳ್ಳಲಾಗುವುದು' ಎಂದರು.'ಶೇ.100ರಷ್ಟು ಮತದಾನ ಆಗಬೇಕು ಎನ್ನುವುದು ನಮ್ಮ ಆಶಯ. ಅಂಗವಿಕಲರಲ್ಲಿ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಇಂತಹ ಕ್ರಮ ಕೈಗೊಳ್ಳಲಾಗಿದೆ' ಎಂದರು.'ಅಂಗವಿಕಲರ ಸ್ನೇಹಿ ಚುನಾವಣೆ ಹಾಗೂ ಮತದಾರರ ಜಾಗೃತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಈ ಬಾರಿ ಜಿಲ್ಲೆಗೆ ವಿಶೇಷ ಲಾಂಛನ ರೂಪಿಸಲಾಗಿದೆ' ಎಂದರು.

'ಓಟರ್ ಕುಮಾರ ಲಾಂಛನ ಹಾಗೂ ವಿಶ್ಲೇಷಣೆಗೆ ಚುನಾವಣಾ ಆಯೋಗ ಅನುಮೋದನೆ ನೀಡಿರುವುದು ವಿಶೇಷ. ಇಡೀ ರಾಜ್ಯದಲ್ಲಿಯೇ ವಿಶೇಷ ಲಾಂಛನ ಪಡೆದಿರುವ ಏಕೈಕ ಜಿಲ್ಲೆ ಕೊಪ್ಪಳ. ಈ ಲಾಂಛನ ತಯಾರಿಕೆ ಹಾಗೂ ಚುನಾವಣಾ ಆಯೋಗದಿಂದ ಅನುಮೋದನೆ ಪಡೆಯುವಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರ ಶ್ರಮ ಶ್ಲಾಘನೀಯ' ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಮಾತನಾಡಿ, 'ಅಂಗವಿಕಲರಿಗೆ ಮತದಾನದ ಬಗ್ಗೆ ಪ್ರೋತ್ಸಾಹ ಹಾಗೂ ಪ್ರೇರಣೆ ನೀಡುವ ನಿಟ್ಟಿನಲ್ಲಿ ಸ್ವೀಪ್ ಕಾರ್ಯಕ್ರಮದ ಅಡಿ ಮತದಾರರ ಜಾಗೃತಿ ಕೈಗೊಳ್ಳಲಾಗುತ್ತಿದೆ. ಮತದಾನ ಜಾಗೃತಿ ಕಾರ್ಯಕ್ರಮಗಳಲ್ಲಿ ಈ ಲಾಂಛನ ಬಳಸಲಾಗುವುದು. ಎಲ್ಲ ಮತಗಟ್ಟೆಗಳಿಗೂ ಈ ಲಾಂಛನ ಅಳವಡಿಸಲಾಗುವುದು. ಪ್ರತಿ ಮತವೂ ಅಮೂಲ್ಯ. ಮತಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿರುವ ಗ್ರಾಮೀಣ ಅಂಗವಿಕಲರ ಪುನರ್ವಸತಿ ಕಾರ್ಯಕರ್ತರು ಹಾಗೂ ತಾಲೂಕುಮಟ್ಟದ ಕಾರ್ಯಕರ್ತರು, ಎಲ್ಲ ಅರ್ಹ ಅಂಗವಿಕಲರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಮುಂದಾಗಬೇಕು' ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅನೂಪ್ ಶೆಟ್ಟಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ್, ಸಮೂಹ ಸಾಮರ್ಥ್ಯ ಸಂಸ್ಥೆ ನಿರ್ದೇಶಕ ಬಿ.ಹಂಪಣ್ಣ, ತುಕಾರಾಂರಾವ್ ಇದ್ದರು.

ಜವಾಬ್ದಾರಿಯುತ ಪ್ರಜೆಯ ಸಂಕೇತ

ಚಿರತೆ ಮುಖವನ್ನು ಬಳಸಿ 'ಓಟರ್ ಕುಮಾರ’ ಎಂಬ ಹೆಸರಿನಲ್ಲಿ ಲಾಂಛನ ತಯಾರಿಸಲಾಗಿದೆ. ಭಾರತದ ಚಿರತೆಯು ಬಲಶಾಲಿ, ಬುದ್ಧಿವಂತ, ಧೈರ್ಯ ಸಂಕೇತಿಸುವ ಪ್ರಾಣಿ. ಚಿತ್ರದಲ್ಲಿರುವ ಕುಮಾರ ದೇಶದ ಜವಾಬ್ದಾರಿಯುತ ಪ್ರಜೆಯಾಗಿದ್ದು, ಗುಣಮಟ್ಟದ ಆದರ್ಶ ಮತದಾರನಾಗಿದ್ದಾನೆ ಎಂದು ಜಿಲ್ಲಾಧಿಕಾರಿ ವಿವರಣೆ ನೀಡಿದರು.

**

‘ಚಿರತೆ’ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಕಂಡುಬರುವ ಪ್ರಾಣಿ. ‘ಓಟರ್ ಕುಮಾರ’ ಎಂಬ ಹೆಸರಿನಲ್ಲಿ ಲಾಂಛನ ತಯಾರಿಸಲಾಗಿದೆ. – ಎಂ.ಕನಗವಲ್ಲಿ, ಜಿಲ್ಲಾ ಚುನಾವಣಾಧಿಕಾರಿ.

**

ಪ್ರತಿಕ್ರಿಯಿಸಿ (+)