ಮಂಗಳವಾರ, ಜೂಲೈ 7, 2020
25 °C
ಎಚ್‌.ಡಿ.ದೇವೇಗೌಡ, ಕುಮಾರಸ್ವಾಮಿ ಭಾವಚಿತ್ರ ಹಾಕಿಕೊಂಡು ಕಣಕ್ಕಿಳಿಯುವೆ

ಬಂಡಾಯ ಬಾವುಟ ಹಾರಿಸಿದ ಸಿದ್ದರಾಮೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಡಾಯ ಬಾವುಟ ಹಾರಿಸಿದ ಸಿದ್ದರಾಮೇಗೌಡ

ಮಂಡ್ಯ: ‘ಕಳೆದ 40 ವರ್ಷಗಳಿಂದ ಜೆಡಿಎಸ್‌ಗೆ ನಿಷ್ಠೆಯಿಂದ ದುಡಿದಿದ್ದೇನೆ. ಆದರೆ, ಪಕ್ಷದಲ್ಲಿ ನನಗೆ ನಿರಂತರವಾಗಿ ಅನ್ಯಾಯ ಮಾಡಲಾಗಿದೆ. ಈ ಬಾರಿ ಮಂಡ್ಯ ಕ್ಷೇತ್ರದಿಂದ ಟಿಕೆಟ್‌ ನೀಡದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ನಿಶ್ಚಿತ’ ಎಂದು ಜೆಡಿಎಸ್‌ ಮುಖಂಡ ಸಿದ್ದರಾಮೇಗೌಡ ಹೇಳಿದರು. ‘ಕೇವಲ ಭರವಸೆ ನೀಡುತ್ತಲೇ ನಮ್ಮ ಕುಟುಂಬವನ್ನು ರಾಜಕೀಯವಾಗಿ ಅತಂತ್ರ ಸ್ಥಿತಿಗೆ ತಳ್ಳಲಾಗಿದೆ. ವಿಧಾನಪರಿಷತ್‌ ಚುನಾವಣೆಯಲ್ಲಿ ಕೆ.ಟಿ. ಶ್ರೀಕಂಠೇಗೌಡರಿಗೆ ಟಿಕೆಟ್ ನೀಡುವಾಗ 2018ರ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದರು. ಈಗ ಆ ಸಮಯ ಬಂದಿದ್ದು ನನಗೆ ಟಿಕೆಟ್‌ ನೀಡಬೇಕು. ಕ್ಷೇತ್ರದ ಜೆಡಿಎಸ್‌ ಮುಖಂಡರು ನನಗೆ ಟಿಕೆಟ್‌ ನೀಡುವಂತೆ ಒತ್ತಾಯ ಮಾಡಿದ್ದಾರೆ. ಹಾಲಿ ಹಾಗೂ ಮಾಜಿ ನಗರಸಭಾ ಸದಸ್ಯರು ಟಿಕೆಟ್‌ ನೀಡುವಂತೆ ಆಗ್ರಹಿಸಿದ್ದಾರೆ. ಇವುಗಳನ್ನು ಗಮನದಲ್ಲಿಟ್ಟುಕೊಂಡು ವರಿಷ್ಠರು ಚುನಾವಣೆಗೆ ನಿಲ್ಲಲು ಅವಕಾಶ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.

‘ಸಿದ್ದರಾಮೇ ಗೌಡರ ಋಣ ನಮ್ಮ ಮೇಲಿದೆ ಎಂದು ಎಚ್‌.ಡಿ.ದೇವೇಗೌಡರು ಹಲವು ಬಾರಿ ಹೇಳಿದ್ದಾರೆ. ಈಗಲೂ ನಾನು ಸ್ಥಳೀಯವಾಗಿ ದೇವೇಗೌಡರ ಮಾನಸ ಪುತ್ರ ಎಂದೇ ಪ್ರಸಿದ್ಧಿ ಪಡೆದಿದ್ದೇನೆ. ಇಷ್ಟೆಲ್ಲಾ ಇದ್ದರೂ ಟಿಕೆಟ್‌ ಹಂಚಿಕೆ ವಿಷಯದಲ್ಲಿ ನನಗೆ ಅನ್ಯಾಯ ಮಾಡಲಾಗುತ್ತಿದೆ. ವರಿಷ್ಠರು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ವಿದ್ಯಾರ್ಥಿ ದೆಸೆಯಿಂದಲೂ ಜನರ ಜೊತೆ ಇದ್ದೇನೆ. ಪಕ್ಷ ಟಿಕೆಟ್‌ ಕೊಟ್ಟರೆ ಜನರು ಖಂಡಿತವಾಗಿಯೂ ಶಾಸಕನಾಗಿ ಸೇವೆ ಮಾಡುವ ಅವಕಾಶ ನೀಡುತ್ತಾರೆ’ ಎಂದು ಹೇಳಿದರು.

‘ಕಳೆದ ವರ್ಷ ಡಿ. 7ರಂದು ಬೆಂಗಳೂರಿನಲ್ಲಿ ಅಭ್ಯರ್ಥಿಗಳ ಕುರಿತು ಚರ್ಚೆ ನಡೆಯಿತು. ಆಗ ಟಿಕೆಟ್‌ ಹಂಚಿಕೆ ವಿಷಯದಲ್ಲಿ ಹಣವನ್ನು ಪ್ರಮುಖವಾಗಿ ಪರಿಗಣಿಸುವುದಿಲ್ಲ, ಪಕ್ಷದ ನಿಷ್ಠೆ, ಹಿರಿತನ, ಅನುಭವ ಉಳ್ಳವರಿಗೆ ಟಿಕೆಟ್‌ ನೀಡುವುದಾಗಿ ವರಿಷ್ಠರು ತಿಳಿಸಿದ್ದರು. ಅನುಭವ, ನಿಷ್ಠೆಯ ವಿಚಾರದಲ್ಲಿ ನನಗೆ ಟಿಕೆಟ್‌ ನೀಡಲು ಯಾವುದೇ ಅಡ್ಡಿ ಇಲ್ಲ. ಅಲ್ಲದೆ ಮಂಡ್ಯ ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಮೇಲೂ ಪರಿಣಾಮ ಬೀರುವ ಕಾರಣ ವರಿಷ್ಠರು ಟಿಕೆಟ್‌ ನೀಡುವಾಗ ಗಂಭೀರವಾಗಿ ಯೋಚನೆ ನೀಡಬೇಕು. ಹಣಕ್ಕೆ ಪ್ರಾಮುಖ್ಯತೆ ಕೊಡಬಾರದು’ ಎಂದು ಹೇಳಿದರು.

‘ನನಗೆ ಟಿಕೆಟ್‌ ತಪ್ಪಿಸಲು ಕುಮಾರಸ್ವಾಮಿ ಅವರ ಕಿವಿ ಹಿಂಡಿದವರು ಹಾಳಾಗಿ ಹೋಗುತ್ತಾರೆ. ಕ್ಷೇತ್ರಕ್ಕೆ ಹೊಸ ಮುಖ ಬೇಕಾಗಿದೆ. ಹಾಲಿ ಹಾಗೂ ಮಾಜಿ ಶಾಸಕರಿಗೆ ಮತ ನೀಡಿದ ಮತವದಾರರು ಅವರ ಕಾರ್ಯ ನೋಡಿ ಬೇಸತ್ತಿದ್ದಾರೆ. ಜನರಿಗೆ ಬೇಡವಾದ ಅಭ್ಯರ್ಥಿಗೆ ಟಿಕೆಟ್ ನೀಡಿ ಪಕ್ಷದ ಘನತೆ ಹಾಳು ಮಾಡುವ ಬದಲು ಜನರ ನಡುವೆ ಇರುವ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು. ಕಳೆದ ನಾಲ್ಕು ದಶಕದಿಂದ ಅವಕಾಶಕ್ಕಾಗಿ ಕಾದಿದ್ದೇನೆ. ಈ ಬಾರಿ ನನಗೆ ಅವಕಾಶ ನೀಡದಿದ್ದರೆ ನನ್ನ ಬೆಂಬಲಿಗರು ಹಾಗೂ ಜನರ ಸಲಹೆಯಂತೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ’ ಎಂದು ಹೇಳಿದರು. ಮುಖಂಡರಾದ ಶ್ರೀನಿವಾಸ್ ಹಾಗೂ ಪಂಚಲಿಂಗಯ್ಯ ಇದ್ದರು.

ಅಂಬುಜಮ್ಮ ಬೆಂಬಲ ಘೋಷಣೆ

ಜೆಡಿಎಸ್‌ ನಾಯಕಿ ಅಂಬುಜಮ್ಮ ಮಾತನಾಡಿ ‘ನಾನು ಕೂಡ ಜೆಡಿಎಸ್‌ನ ಪ್ರಬಲ ಟಿಕೆಟ್‌ ಆಕಾಂಕ್ಷಿ. ಮಂಡ್ಯ ಜಿಲ್ಲೆ ಜೆಡಿಎಸ್‌ ಭದ್ರಕೋಟೆಯಾಗಿದ್ದು ನಿಷ್ಠಾವಂತರಿಗೆ ಟಿಕೆಟ್‌ ನೀಡಬೇಕು. ಇಂದು, ನಿನ್ನೆ ಬಂದವರಿಗೆ ವರಿಷ್ಠರು ಟಿಕೆಟ್‌ ನೀಡಬಾರದು. ನಾನು ಹಲವು ವರ್ಷಗಳಿಂದ ಟಿಕೆಟ್‌ ನೀಡುವಂತೆ ಒತ್ತಾಯ ಮಾಡುತ್ತಲೇ ಬಂದಿದ್ದೇನೆ. ಈ ಬಾರಿ ನನಗೆ ಟಿಕೆಟ್‌ ನೀಡದಿದ್ದರೆ ಸ್ವತಂತ್ರವಾಗಿ ಕಣಕ್ಕಿಳಿಯುವ ಸಿದ್ದರಾಮೇಗೌಡರಿಗೆ ಬೆಂಬಲ ನೀಡುತ್ತೇನೆ’ ಎಂದು ಹೇಳಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.