ಗುರುವಾರ , ಆಗಸ್ಟ್ 13, 2020
21 °C
ಅಡಕತ್ತರಿಗೆ ಸಿಲುಕಿದ ಆಡಳಿತ: ರೈತರ ಕೈಗೆ ಸಿಗದ ಮಾನ್ಯತಾ ಪತ್ರ

ಜಾರಿಯಾಗದ ಪಾರಂಪರಿಕ ಅರಣ್ಯ ಮಾನ್ಯತಾ ಹಕ್ಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾರಿಯಾಗದ ಪಾರಂಪರಿಕ ಅರಣ್ಯ ಮಾನ್ಯತಾ ಹಕ್ಕು

ತೀರ್ಥಹಳ್ಳಿ: ಅರಣ್ಯ ಹಕ್ಕು ಕಾಯ್ದೆ ಅರಣ್ಯ ವಾಸಿಗರ ಬದುಕಿಗೆ ಆಸರೆಯಾಗಬಹುದೆಂಬ ನಿರೀಕ್ಷೆ ಬಹುತೇಕ ಹುಸಿಯಾಗಿದೆ. ಪಾರಂಪರಿಕ ಅನುಸೂಚಿತ ಬುಡಕಟ್ಟು ಇತರೆ ಅರಣ್ಯವಾಸಿಗಳ ಮಾನ್ಯತಾ ಕಾಯ್ದೆಯಡಿ ಅರಣ್ಯಪ್ರದೇಶ ಸಾಗುವಳಿ ಮಾನ್ಯತಾ ಪತ್ರ ಪಡೆಯುವುದು ಸಾಗುವಳಿದಾರರಿಗೆ ದುಸ್ತರವಾಗಿದೆ.ಸಾಗುವಳಿ ಪ್ರದೇಶದ ಮಾನ್ಯತೆಗೆ ಅರಣ್ಯ ಇಲಾಖೆ ಸಂಪೂರ್ಣ ನಿರಾಸಕ್ತಿ ತಳೆದಿದ್ದು, ಕಾಯ್ದೆಯ ಅನುಷ್ಠಾನದ ಜವಾಬ್ದಾರಿಯನ್ನು ಹೊಂದಿರುವ ಸಮಾಜ ಕಲ್ಯಾಣ ಇಲಾಖೆ ಸಾವಿರಾರು ಅರ್ಜಿಗಳಿಗೆ ಉತ್ತರ ನೀಡದೆ ಮೌನ ವಹಿಸಿದೆ. ಈ ನಡುವೆ ಕಾಯ್ದೆ ಜಾರಿಯ ಕುರಿತು ಸುಪ್ರೀಂ ಕೋರ್ಟ್‌ ತೀವ್ರ ನಿಗಾ ವಹಿಸುತ್ತಿದ್ದು, ಆಡಳಿತದಲ್ಲಿ ನಡುಕ ಹುಟ್ಟಿಸಿದೆ.

ಜಿಲ್ಲೆಯಲ್ಲಿ 85,518 ಅರ್ಜಿಗಳ ಪೈಕಿ ಕೇವಲ 2,381 ಅರ್ಜಿಗಳಿಗೆ ಮಾನ್ಯತಾ ಪತ್ರ ನೀಡಲಾಗಿದೆ. ಬಾಕಿ ಉಳಿದ 41,718 ಅರ್ಜಿಗಳು ತಬ್ಬಲಿಯಾಗಿದೆ. ಗ್ರಾಮ ಅರಣ್ಯ ಹಕ್ಕು ಮಾನ್ಯ ಸಮಿತಿಗೆ ನೀಡಿರುವ ಪರಮಾಧಿಕಾರ ಹೆಸರಿಗೆ ಮಾತ್ರ ಎನ್ನುವಂತಾಗಿದೆ. ಸಮಿತಿ ಅನೇಕ ಗ್ರಾಮ ಪಂಚಾಯ್ತಿಗಳಲ್ಲಿ ಕಾರ್ಯಚಟುವಟಿಕೆಯನ್ನು ನಿಲ್ಲಿಸಿದೆ. 2016 ಮೇ 15ರಂದು ನಡೆದ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳ ಸಮೀಕ್ಷಾ ಸಭೆಯಲ್ಲಿ ಅರ್ಜಿ ಶೀಘ್ರ ವಿಲೇವಾರಿ ಆಗದ, ಅರ್ಹ ಅರ್ಜಿಗಳ ತಿರಸ್ಕಾರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದರು. ತಿರಸ್ಕೃತಗೊಂಡ ಅರ್ಜಿಗಳ ಪುನರ್‌ ಪರಿಶೀಲನೆ ನಡೆಸಿ ಅರ್ಜಿಗಳ ಶೀಘ್ರ ಇತ್ಯರ್ಥಕ್ಕೆ ಸೂಚನೆ ನೀಡಿದ್ದರೂ, ಅದು ಕಾರ್ಯರೂಪಕ್ಕೆ ಬಂದಿಲ್ಲ. 90 ದಿನಗಳಲ್ಲಿ ಇತರೆ ವರ್ಗದ ಅರ್ಜಿ, 30 ದಿನಗಳಲ್ಲಿ ಬುಡಕಟ್ಟುವಾಸಿಗಳ ಅರ್ಜಿ ಇತ್ಯರ್ಥಪಡಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಆದೇಶ, ಮುಖ್ಯಮಂತ್ರಿಗಳ ಸೂಚನೆ ಆಡಳಿತದ ಕಸದ ಬುಟ್ಟಿ ಸೇರಿದೆ.

ಜಿಲ್ಲೆಯಲ್ಲಿ 4,634 ಬುಡಕಟ್ಟು, 1,449 ಸಮುದಾಯ, 79,435 ಇತರೆ ಪಾರಂಪರಿಕ ಅರ್ಜಿ ಸಲ್ಲಿಕೆಯಾಗಿದ್ದು, ಬುಡಕಟ್ಟು ವರ್ಗಕ್ಕೆ 1941, ಇತರೆ ಪಾರಂಪರಿಕ 440, ಸಮುದಾಯದ 4 ಅರ್ಜಿಗೆ ಮಾತ್ರ ಅರಣ್ಯಹಕ್ಕು ಮಾನ್ಯತಾ ಪತ್ರ ನೀಡಲಾಗಿದೆ. ಇತರೆ ವರ್ಗದ 39,025, ಬುಡಕಟ್ಟು ವರ್ಗದ 2,693, ಸಮುದಾಯದ 201 ಅರ್ಜಿ ತಿರಸ್ಕೃತಗೊಂಡಿದೆ.

2001–12 ಹಾಗೂ 2015–16ನೇ ಸಾಲಿನ ಅರ್ಜಿ ಕುರಿತು ಪೂರ್ಣ ಮಾಹಿತಿ ಕಡ್ಡಾಯ. ಕುಟುಂಬವಾರು ಮೂರು ಎಕರೆ ಒಳಗಿನ ಹಾಗೂ ಮೇಲಿನ ವಿಸ್ತೀರ್ಣ, ಅರ್ಜಿ ಪುರಸ್ಕಾರ, ತಿರಸ್ಕಾರ ಸೇರಿದಂತೆ ಒಟ್ಟು 9 ವಿಭಾಗದ ಮಾಹಿತಿ ಸಲ್ಲಿಸಿರಬೇಕು. ಅರಣ್ಯ ಪಡೆ, ಸಿಸಿಎಫ್‌ಒ 2016 ಏಪ್ರಿಲ್‌ 18ರಂದು, ಡಿಸಿಎಫ್ಒ ಸಂರಕ್ಷಣಾಧಿಕಾರಿ 2016 ಏಪ್ರಿಲ್‌ 25ರಂದು ಬರೆದ ಪತ್ರಕ್ಕೆ ಈವರೆಗೂ ಮಾಹಿತಿ ಸಲ್ಲಿಕೆಯಾಗಿಲ್ಲ. ಸ್ವಾತಂತ್ರ್ಯ ಪೂರ್ವ ಆಡಳಿತದ ಅಧಿಸೂಚನೆ ಅನ್ವಯ ಅರಣ್ಯ ಇಲಾಖೆ ಭೂ ಮಾಲಿಕತ್ವ ಹಕ್ಕು ಪ್ರತಿಪಾದಿಸುತ್ತಿದೆ. ಅರಣ್ಯ ಇಲಾಖೆ ಬಳಿಯಲ್ಲಿ ಆಕಾರ್‌ಬಂದ್‌, ಪಕ್ಕಾ, ಆರ್‌ಆರ್‌–5, ಆರ್‌ಆರ್‌–6, ಖೇತುವಾರು, ಆರ್‌ಟಿಸಿ, ಮ್ಯುಟೇಷನ್‌, ಸರ್ವೆ ಸ್ಕೆಚ್‌ ಇತರೆ ಪ್ರಮುಖ ದಾಖಲೆ ಇಲ್ಲ. ಜಂಟಿ ಸರ್ವೆ ಕಾರ್ಯ ಪೂರ್ಣಗೊಳ್ಳದೆ ಅರಣ್ಯ ಹಕ್ಕು ಮಾನ್ಯತಾ ಕಾಯ್ದೆ ಜಾರಿ ಅಡಕತ್ತರಿಗೆ ಸಿಲುಕಿದೆ.

ಅಂಕಿ–ಅಂಶಗಳು

85,518 ಸಲ್ಲಿಕೆಯಾದ ಅರ್ಜಿಗಳು

2381 ಮಾನ್ಯತೆ ಪಡೆದ ಅರ್ಜಿಗಳು

41,718 ತಿರಸ್ಕೃತ ಅರ್ಜಿಗಳು

**

‘ಕೃಷಿಕರಿಗೆ ಅನ್ಯಾಯ’

ಭೂಮಿ ಹಕ್ಕು ನೀಡುವಲ್ಲಿ ಆಡಳಿತ ವಿಫಲವಾಗಿದೆ. ಅರಣ್ಯ ಹಕ್ಕು ಮಾನ್ಯತಾ ಪತ್ರ ಬಹುತೇಕರಿಗೆ ಸಿಗಲಿಲ್ಲ. ಅರಣ್ಯವಾಸಿಗರಿಗೆ ಸರ್ಕಾರ ನೀಡಲು ಮುಂದಾಗಿರುವ ಕಾಯ್ದೆ ಸಮರ್ಪಕವಾಗಿ ಜಾರಿಗೆ ಬಂದಿಲ್ಲ. ಇದರಿಂದ ಬಡ ಕೃಷಿಕರಿಗೆ ಅನ್ಯಾಯವಾಗಿದೆ. ಇಂದಿಗೂ ಬುಡಕಟ್ಟು ಅರಣ್ಯವಾಸಿಗರು ಭೂಮಿ ಪಡೆಯಲು ಅಲೆದಾಡುವಂತಾಗಿದೆ ಎಂದು ತಾಲ್ಲೂಕು ಹಸಲರ ಬುಡಕಟ್ಟು ಹೋರಾಟ ಸಮಿತಿ ಅಧ್ಯಕ್ಷ ಹರಡವಳ್ಳಿ ಮಂಜುನಾಥ್‌ ಅಳಲು ತೋಡಿಕೊಂಡಿದ್ದಾರೆ.

– ಶಿವಾನಂದ ಕರ್ಕಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.