ಶನಿವಾರ, ಡಿಸೆಂಬರ್ 7, 2019
24 °C
ಮನೆಯೊಳಗಿನ ಕಾರ್ಯಕ್ರಮಕ್ಕೆ ಅನ್ವಯಿಸದು

ಯಕ್ಷಗಾನಕ್ಕೆ ಘೋಷಣಾ ಪತ್ರ ಸಾಕು: ಡಿ.ಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಕ್ಷಗಾನಕ್ಕೆ ಘೋಷಣಾ ಪತ್ರ ಸಾಕು: ಡಿ.ಸಿ

ಉಡುಪಿ: ಮನೆಯ ಒಳಗೆ ನಡೆಯುವ ಖಾಸಗಿ ಕಾರ್ಯಕ್ರಮಗಳಿಗೆ ಅನುಮತಿ ಪಡೆಯುವ ಅಗತ್ಯ ಇಲ್ಲ. ಆದರೆ ಸಮುದಾಯ ಭವನ, ಕಲ್ಯಾಣ ಮಂಟಪಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಆಯೋಜಿಸುವುದಾದರೆ ಚುನಾವಣಾ ಅಧಿಕಾರಿಗಳಿಗೆ ಘೋಷಣಾ ಪತ್ರ ನೀಡಬೇಕು. ಎಂದಿನ ಹಾಗೆ ಮೈಕ್ ಬಳಸುವುದಾದದರೆ ಪೊಲೀಸರಿಂದ ಅನುಮತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸ್ಪಷ್ಟಪಡಿಸಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಕ್ಷಗಾನ, ನಾಟಕ ಮುಂತಾದ ಕಾರ್ಯಕ್ರಮಗಳಿಗೆ ಸಹ ಅನುಮತಿಯ ಅಗತ್ಯ ಇಲ್ಲ. ಆದರೆ ಅದರ ಬಗ್ಗೆ ಮಾಹಿತಿ ಹಾಗೂ ಘೋಷಣಾ ಪತ್ರವನ್ನು ಚುನಾವಣಾಧಿಕಾರಿಗೆ ನೀಡಿದರೆ ಸಾಕು. ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂಬ ಮಾಹಿತಿಯನ್ನು ಒಳಗೊಂಡ ಸಿದ್ಧ ಸೀಲನ್ನು ಹಾಕಿ ಕೊಡುತ್ತಾರೆ. ಸುಪ್ರೀಂ ಕೋರ್ಟ್‌ ಆದೇಶದ ಅನ್ವಯ ರಾತ್ರಿ ಹತ್ತು ಗಂಟೆಯ ನಂತರ ಧ್ವನಿವರ್ಧಕ ಬಳಸುವಂತಿಲ್ಲ. ಆದರೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ಬಳಸಲು ಅವಕಾಶ ನೀಡಲಾಗುತ್ತಿತ್ತು. ಈಗಲೂ ಆ ರೀತಿ ಮಾಡಲು ಅವಕಾಶ ಇದೆ ಎಂದರು.

ಖಾಸಗಿ ಕಾರ್ಯಕ್ರಮ, ಯಕ್ಷಗಾನ ಅಥವಾ ಇನ್ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮದ ಮೇಲೆ ನಿಗಾ ವಹಿಸು ವುದು ನಮ್ಮ ಉದ್ದೇಶವಲ್ಲ. ಆದರೆ ಮಾಹಿತಿ ಇರಬೇಕು ಎಂಬ ಕಾರಣಕ್ಕೆ ಘೋಷಣಾ ಪತ್ರ ಪಡೆಯಲಾಗುತ್ತಿದೆ. ಅಕ್ರಮ ಮದ್ಯ, ಹಣ ಸಾಗಣೆ ಮುಂತಾದ ಗಂಭೀರ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಮೇಲೆ ಅಧಿಕಾರಿಗಳು ಕಣ್ಣಿಡುತ್ತಾರೆ ಎಂದರು.ರಾಜಕೀಯ ವ್ಯಕ್ತಿಗಳು ಪ್ರಚಾರ, ಪ್ರಚಾರ ಸಾಮಗ್ರಿ ಮುದ್ರಣ ಮುಂತಾದ ವಿಷಯಗಳಿಗೆ ಅನುಮತಿ ಪಡೆಯಲು ಅನುಕೂಲವಾಗುವಂತೆ ಏಕಗವಾಕ್ಷಿ ಪದ್ಧತಿ ಜಾರಿ ಮಾಡಲಾಗುವುದು. ಅದ ರಲ್ಲಿ ಪೊಲೀಸ್‌ ಸಿಬ್ಬಂದಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಇತರ ಇಲಾಖೆಯ ಅಧಿಕಾರಿಗಳು ಇರುತ್ತಾರೆ. ಅನುಮತಿಯನ್ನು ತಡವಿಲ್ಲದೆ ಕೂಡಲೇ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಗರಿಷ್ಠ ಪ್ರಮಾಣದಲ್ಲಿ ಮತದಾನ ನಡೆಯುವಂತೆ ನೋಡಿಕೊಳ್ಳಲು ಈಗಾಗಲೇ ಹಲವಾರು ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿದೆ. ಯುವ ಅಂಗವಿಕಲ ಮತದಾರರು ಕಡ್ಡಾಯ ವಾಗಿ ಮತದಾನ ಮಾಡುವಂತೆ ಜಾಗೃತಿ ಅಭಿಯಾನ ನಡೆಸಲಾಗುವುದು. ಪ್ಯಾರಾಸೈಲಿಂಗ್ ಅನ್ನು ಮಲ್ಪೆಯಲ್ಲಿ ಹಮ್ಮಿಕೊಳ್ಳಲಾಗುವುದು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಕಳೆದ ಚುನಾವಣೆಯಲ್ಲಿ ಕಡಿಮೆ ಮತದಾನ ಆಗಿರುವ ಬೂತ್‌ಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಅಲ್ಲಿಗೆ ಹೆಚ್ಚಿನ ಗಮನ ನೀಡಲಾಗುವುದು ಎಂದು ಪ್ರಿಯಾಂಕ ಹೇಳಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಜಿ. ಅನುರಾಧ ಇದ್ದರು.

ಮತದಾನ ಆಮಂತ್ರಣ ಪತ್ರಿಕೆ

ಮತದಾನದ ಪ್ರಮಾಣವನ್ನು ಹೆಚ್ಚಿಸಲು ಕೈಗೊಂಡಿರುವ ಹಲವು ಕ್ರಮಗಳಲ್ಲಿ ಆಮಂತ್ರಣ ಕಳುಹಿಸುವುದು ಸಹ ಒಂದಾಗಿದೆ. ಆಮಂತ್ರಣ ಪತ್ರಿಕೆಯನ್ನು ಮುದ್ರಣ ಮಾಡಿ ಅದನ್ನು ಜಿಲ್ಲೆಯ ಕುಟುಂಬಗಳಿಗೆ ತಲುಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ. 9 ಲಕ್ಷ ಮತದಾರರು ಇರುವುದರಿಂದ ಕನಿಷ್ಠ 1.80 ಲಕ್ಷ ಕುಟುಂಬ ಇರಬಹುದು. ಆದರೆ ಎಲ್ಲ ಮನೆಗಳಿಗೆ ಪತ್ರಿಕೆ ಕಳುಹಿಸಲಾಗದು. ಕನಿಷ್ಠ 50 ಸಾವಿರ ಕುಟುಂಬಗಳಿಗೆ ಮತದಾನ ಆಮಂತ್ರಣ ಪತ್ರಿಕೆ ಕಳುಹಿಸಲಾಗುವುದು ಎಂದು ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು.ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಬೇಕು ಎಂಬುದು ನಮ್ಮ ಗುರಿಯಾಗಿದ್ದು, ಆ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಮತದಾನದಲ್ಲಿ ಪಾಲ್ಗೊಳ್ಳುವಿಕೆ ಹಾಗೂ ಜಾಗೃತಿ ಸಮಿತಿ ಹಲವಾರು ವಿಭಿನ್ನ ಕಾರ್ಯಕ್ರಮ ರೂಪಿಸಿದೆ ಎಂದು ಅವರು ಹೇಳಿದರು.

ಚುನಾಣಾಧಿಕಾರಿಗಳ ಹೆಸರು ದೂರವಾಣಿ ಸಂಖ್ಯೆ

ಬೈಂದೂರು– ಪಿ. ಶ್ರೀನಿವಾಸ, 87628 05600, 08254–251657, ಕುಂದಾಪುರ– ಟಿ. ಭೂಬಾಲನ್ 96067 79366, 08254 298058, ಉಡುಪಿ– ಕೆಂಪೇಗೌಡ– 99006 05169, 0820 2525553, ಕಾಪು– ಮುಮುದ ಶರತ್ 99454 69150, 0820 2525553, ಕಾರ್ಕಳ– ಕೆ.ಎಚ್. ಶಿವಕುಮಾರ್– 63614 48409, 08258 298200.

**

ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಈವರೆಗೆ ಮೂರು ಪ್ರಥಮ ಮಾಹಿತಿ ವರದಿ ದಾಖಲಾಗಿದೆ – ಲಕ್ಷ್ಮಣ್ ಬ. ನಿಂಬರಗಿ,ಎಸ್ಪಿ.

**

ಪ್ರತಿಕ್ರಿಯಿಸಿ (+)