ಶನಿವಾರ, ಡಿಸೆಂಬರ್ 14, 2019
20 °C

ಸುಳ್ಳುಸುದ್ದಿಯ ಸುಳ್ಳು ನಿಯಂತ್ರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಳ್ಳುಸುದ್ದಿಯ  ಸುಳ್ಳು ನಿಯಂತ್ರಣ

‘ಸುಳ್ಳು ಸುದ್ದಿ’ಗಳನ್ನು ನಿಯಂತ್ರಿಸುವುದಕ್ಕೆ ಕೇಂದ್ರ ಸರ್ಕಾರ ದಿಢೀರ್ ಎಂದು ಕೆಲವು ನಿಯಮಗಳನ್ನು ಪ್ರಕಟಿಸಿ ಅಷ್ಟೇ ವೇಗವಾಗಿ ಹಿಂತೆಗೆದುಕೊಂಡಿದೆ. ಇಡೀ ಪ್ರಕರಣವೇ ಒಂದು ಪ್ರಹಸನವಾಗಿತ್ತು. ಸಮಸ್ಯೆಯ ಸಂಕೀರ್ಣತೆಯನ್ನು ಸ್ವಲ್ಪವೂ ಅರ್ಥ ಮಾಡಿಕೊಳ್ಳದೆ ರೂಪಿಸಲಾಗಿದ್ದ ಈ ನಿಯಮಾವಳಿಗಳು ಪತ್ರಕರ್ತರ ತೀಕ್ಷ್ಣ ಟೀಕೆಗಳಿಗೆ ವಸ್ತುವಾದದ್ದು ಸಹಜ. ಸಾಮಾಜಿಕ ಜಾಲತಾಣಗಳ ವ್ಯಾಪಕತೆ ‘ನಾಗರಿಕ ಪತ್ರಕರ್ತ’ ಎಂಬ ಪರಿಕಲ್ಪನೆಗೆ ಕಾರಣವಾದಂತೆಯೇ ‘ಸುಳ್ಳು ಸುದ್ದಿ’ ಎಂಬ ಹೊಸ ಸಮಸ್ಯೆಯನ್ನೂ ಹುಟ್ಟುಹಾಕಿದೆ. ಈ ಸಮಸ್ಯೆ ಜಾಗತಿಕವಾದುದು. ಮಾಧ್ಯಮ ಸ್ವಾತಂತ್ರ್ಯವನ್ನು ಸ್ಪಷ್ಟವಾಗಿ ನಿರ್ವಚಿಸಲಾಗಿರುವ ಅಮೆರಿಕದಂಥ ಪ್ರಜಾಪ್ರಭುತ್ವದಿಂದ ತೊಡಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಧಿಯಲ್ಲೇ ಮಾಧ್ಯಮ ಸ್ವಾತಂತ್ರ್ಯವನ್ನೂ ಇಟ್ಟುಕೊಂಡಿರುವ ಭಾರತದ ತನಕವೂ ‘ಸುಳ್ಳು ಸುದ್ದಿ’ಯ ಹಾವಳಿ ಬೇರೆ ಬೇರೆ ರೀತಿಯ ಪರಿಣಾಮಗಳಿಗೆ ಕಾರಣವಾಗಿದೆ. ಈಗ ‘ಸುಳ್ಳು ಸುದ್ದಿ’ಯ ನಿಯಂತ್ರಣಕ್ಕೆ ಹೊರಟಿರುವ ಕೇಂದ್ರ ಆಡಳಿತಾರೂಢರು 2014ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಬಳಸಿದ್ದ ಸುಳ್ಳು ಸುದ್ದಿಯ ಪ್ರಮಾಣವೇನೂ ಸಣ್ಣದಲ್ಲ.

ಅಷ್ಟೇಕೆ, ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಕೇಂದ್ರ ಸಚಿವರು ಟ್ವೀಟ್ ಮಾಡಿದ ‘ಸುಳ್ಳು ಸುದ್ದಿ’ಗಳ ಸಂಖ್ಯೆಯೂ ಸಾಕಷ್ಟು ದೊಡ್ಡದೇ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಚೆನ್ನೈನ ಪ್ರವಾಹ ಪರಿಸ್ಥಿತಿಯ ವೈಮಾನಿಕ ವೀಕ್ಷಣೆ ನಡೆಸಿದ್ದರ ಕುರಿತು ಪ್ರೆಸ್ ಇನ್ಫರ್ಮೇಷನ್ ಬ್ಯೂರೊ ಒಂದು ಫೋಟೊ ಶಾಪ್ ಮಾಡಿದ ಛಾಯಾಚಿತ್ರವನ್ನು ಬಿಡುಗಡೆ ಮಾಡಿತ್ತು. ಭಾರತದ 647 ಕಿಲೋಮೀಟರ್ ಉದ್ದದ ಗಡಿ ಪ್ರದೇಶದಲ್ಲಿ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗಿರುವ ಸಾಧನೆಯನ್ನು ಹೇಳಿಕೊಂಡಿದ್ದ ಗೃಹ ಸಚಿವಾಲಯ ಇದನ್ನು ತೋರಿಸಲು ಬಳಸಿಕೊಂಡದ್ದು ಸ್ಪೇನ್ ಮತ್ತು ಮೊರೊಕ್ಕೊ ದೇಶಗಳ ಗಡಿಯಲ್ಲಿರುವ ವಿದ್ಯುತ್ ದೀಪಗಳ ಚಿತ್ರವನ್ನು. ಈ ಚಿತ್ರ ಗೃಹಸಚಿವಾಲಯದ ವಾರ್ಷಿಕ ವರದಿಯಲ್ಲೇ ಪ್ರಕಟವಾಗಿತ್ತು.

ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಟ್ಟಿಟರ್‌ನಲ್ಲಿ ಹಿಂಬಾಲಿಸುವ ಅನೇಕ ಖಾತೆಗಳು ಈ ಬಗೆಯ ಸುಳ್ಳು ಸುದ್ದಿಗಳನ್ನು ಸೃಷ್ಟಿಸಿ ಹರಡುವಲ್ಲಿ ಬಹುಮುಖ್ಯ ಪಾತ್ರ ವಹಿಸಿವೆ ಎಂಬ ಅಂಶವೂ ಇಲ್ಲಿ ಉಲ್ಲೇಖನೀಯ. ಸುಳ್ಳು ಸುದ್ದಿ ಹರಡಿದ ಆರೋಪದ ಮೇಲೆ ಕರ್ನಾಟಕದ ಪೊಲೀಸರಿಂದ ಇತ್ತೀಚೆಗೆ ಬಂಧನಕ್ಕೆ ಒಳಗಾದ ‘ಪೋಸ್ಟ್ ಕಾರ್ಡ್ ಡಾಟ್ ನ್ಯೂಸ್’ ಎಂಬ ಜಾಲತಾಣದ ಮುಖ್ಯಸ್ಥ ಮಹೇಶ್ ವಿಕ್ರಂ ಶೆಟ್ಟಿಯನ್ನೂ ಪ್ರಧಾನಿಯವರು ಟ್ವಿಟರ್‌ನಲ್ಲಿ ಹಿಂಬಾಲಿಸುತ್ತಾರೆ. ಈತನ ಬಂಧನವನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆ ಎಂಬಂತೆ ಬಿಂಬಿಸಲು ಪ್ರಯತ್ನಿಸಿದವರೆಲ್ಲರೂ ಬಿಜೆಪಿಯ ಅನೇಕ ಪ್ರಮುಖ ನಾಯಕರೇ.

ತಪ್ಪಾದ, ಸುಳ್ಳಾದ ಅಥವಾ ಪ್ರಚೋದನಕಾರಿ ಸುದ್ದಿಗಳನ್ನು ಪ್ರಕಟಿಸುವ ಮಾಧ್ಯಮ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳುವುದಕ್ಕೆ ಈಗಾಗಲೇ ಸಾಕಷ್ಟು ಕಾನೂನುಗಳಿವೆ. ಈ ಬಗೆಯ ಸುದ್ದಿಗಳಿಂದ ನೇರವಾಗಿ ತೊಂದರೆಗೊಳಗಾದವರು ಕ್ರಿಮಿನಲ್ ಮತ್ತು ಸಿವಿಲ್ ಮಾನನಷ್ಟ ಮೊಕದ್ದಮೆಗಳನ್ನು ಹೂಡುವ ಅವಕಾಶವಿದೆ. ಪೊಲೀಸರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಲೂ ಸಾಧ್ಯವಿದೆ. ಇಂಥ ಸುದ್ದಿಗಳ ವಿರುದ್ಧ ಪೊಲೀಸರಿಗೆ ದೂರು ನೀಡುವುದಕ್ಕೆ ಸಾರ್ವಜನಿಕರಿಗೂ ಅವಕಾಶವಿದೆ. ಇವೆಲ್ಲವೂ ಈಗಿರುವ ಕಾನೂನಿನ ವ್ಯಾಪ್ತಿಯಲ್ಲೇ ಸಾಧ್ಯ.

‘ಸುಳ್ಳು ಸುದ್ದಿ’ಯನ್ನು ಒಂದು ಸಮಸ್ಯೆಯನ್ನಾಗಿ ಮಾರ್ಪಡಿಸಿರುವುದು ಮಾಧ್ಯಮ ಸಂಸ್ಥೆಗಳಂತೂ ಅಲ್ಲ. ಅದನ್ನೊಂದು ಸಮಸ್ಯೆಯಾಗಿ ಮಾರ್ಪಡಿಸಿದ ದೊಡ್ಡ ಪಾಲು ರಾಜಕೀಯ ಪಕ್ಷಗಳು ಮತ್ತು ಅವುಗಳನ್ನು ಬೆಂಬಲಿಸುವ ಸಂಘಟನೆಗಳದ್ದು. ಸಾಮಾಜಿಕ ಮಾಧ್ಯಮಗಳು ಪ್ರಬಲವಾದ ಒಂದು ದಶಕದ ಅವಧಿಯಲ್ಲಿ ಅತ್ಯಂತ ಹೆಚ್ಚು ಸುಳ್ಳು ಇತಿಹಾಸ, ಸುಳ್ಳು ಸುದ್ದಿ ಮತ್ತು ಸುಳ್ಳು ಚಿತ್ರಗಳನ್ನು ಸೃಷ್ಟಿಸಿದ ಖ್ಯಾತಿ ಬಲಪಂಥೀಯ ಸಂಘಟನೆಗಳದ್ದು. ಇದರ ಲಾಭವನ್ನು ಪಡೆದುಕೊಂಡದ್ದು ಬಿಜೆಪಿ. ಸುಳ್ಳು ಸುದ್ದಿ ನಿಯಂತ್ರಣಕ್ಕೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಪ್ರಕಟಿಸಿದ ದಿಢೀರ್ ನಿಯಮಾವಳಿಯು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡುವವರ ನಿಯಂತ್ರಣದ ಬಗ್ಗೆ ಮೌನವಾಗಿತ್ತು. ಅಂದರೆ ಸ್ಮೃತಿ ಇರಾನಿಯವರ ಇಲಾಖೆ ನಿಜಕ್ಕೂ ನಿಯಂತ್ರಿಸಲು ಹೊರಟದ್ದು ಮಾಧ್ಯಮ ರಂಗವನ್ನೇ ಹೊರತು ಸುಳ್ಳು ಸುದ್ದಿಗಳನ್ನಲ್ಲ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ.

ಈ ವಿಷಯದಲ್ಲಿ ರಾಜಕಾರಣಿಗಳೆಲ್ಲರೂ ಜಾಣರು. ಸಾಮಾಜಿಕ ಮಾಧ್ಯಮಗಳ ಮೂಲಕ ‘ಒಮ್ಮತದ ಉತ್ಪಾದನೆ’ಗೆ ಹಣ ಬಲವಿದ್ದರೆ ಸಾಕಾಗುತ್ತದೆ. ಎಲ್ಲಾ ಮಿತಿಗಳ ಮಧ್ಯೆಯೂ ತನ್ನತನವನ್ನು ಉಳಿಸಿಕೊಂಡಿರುವ ಸ್ವತಂತ್ರ ಮಾಧ್ಯಮಗಳನ್ನು ಬಗ್ಗಿಸುವುದು ಅಷ್ಟು ಸುಲಭವಲ್ಲ. ಸುಳ್ಳು ಸುದ್ದಿ ನಿಯಂತ್ರಣದ ಹೆಸರಿನಲ್ಲಿ ಮಾಧ್ಯಮ ನಿಯಂತ್ರಣಕ್ಕೆ ಹೊರಟಿದ್ದ ಸರ್ಕಾರದ ಪ್ರಯತ್ನಕ್ಕೆ ತಕ್ಷಣಕ್ಕೇನೋ ಹಿನ್ನಡೆಯಾಗಿದೆ. ಆದರೆ ಅದನ್ನು ಬೇರೊಂದು ಬಗೆಯಲ್ಲಿ ಸಾಧಿಸುವ ಕೆಲಸದಲ್ಲಿ ಅದು ಈಗಾಗಲೇ ತೊಡಗಿಕೊಂಡಿದೆ. ಪ್ರೆಸ್ ‍ಕೌನ್ಸಿಲ್‌ಗೆ ನೇಮಕಗೊಂಡಿರುವ ಸದಸ್ಯರ ಹೆಸರುಗಳೇ ಇದನ್ನು ಸೂಚಿಸುತ್ತಿವೆ. ಭಾರತೀಯ ಮಾಧ್ಯಮಗಳು ಕಠಿಣ ಸವಾಲುಗಳನ್ನು ಎದುರಿಸಲು ಸಿದ್ಧವಾಗಬೇಕಿದೆ.

ಪ್ರತಿಕ್ರಿಯಿಸಿ (+)