7

‘ಶಾಂತಿ’ಯೇ ಇಲ್ಲಿ ಚುನಾವಣಾ ವಿಷಯ

Published:
Updated:
‘ಶಾಂತಿ’ಯೇ ಇಲ್ಲಿ ಚುನಾವಣಾ ವಿಷಯ

ಬೆಂಗಳೂರು: ಬೆಂಗಳೂರು ನಗರದ ಮಹಾತ್ಮ ಗಾಂಧಿ ರಸ್ತೆ, ಬ್ರಿಗೇಡ್‌ ರಸ್ತೆ, ರೆಸಿಡೆನ್ಸಿ ರಸ್ತೆಯಂತಹ ಪ್ರಮುಖ ಪ್ರದೇಶಗಳನ್ನು ಒಳಗೊಂಡ ಕ್ಷೇತ್ರ ಶಾಂತಿನಗರ. ಈ ಕ್ಷೇತ್ರವನ್ನು ಸತತ ಎರಡು ಬಾರಿ ಪ್ರತಿನಿಧಿಸಿರುವ ಎನ್‌.ಎ.ಹ್ಯಾರಿಸ್‌, ಹ್ಯಾಟ್ರಿಕ್‌ ಗೆಲುವಿಗೆ ಸಿದ್ಧತೆ ನಡೆಸಿದ್ದರು. ಇನ್ನೇನು ಚುನಾವಣೆ ಸಮೀಪಿಸಿತು ಎನ್ನುವಾಗ ಅವರ ಪುತ್ರ ನಡೆಸಿದ ದಾಂಧಲೆ ಅವರ ವರ್ಚಸ್ಸಿಗೆ ಮಂಕು ಕವಿಯುವಂತೆ ಮಾಡಿದೆ.

ಹ್ಯಾರಿಸ್‌ ಪುತ್ರ ಮೊಹಮ್ಮದ್ ನಲಪಾಡ್ ಯು.ಬಿ. ಸಿಟಿಯ ಫರ್ಜಿ ಕೆಫೆಯಲ್ಲಿ ಫೆ. 17ರಂದು ರಾತ್ರಿ ಉದ್ಯಮಿ ಲೋಕನಾಥ್‌ ಎಂಬುವವರ ಪುತ್ರ ವಿದ್ವತ್‌ ಮೇಲೆ ಹಲ್ಲೆ ಮಾಡಿದ್ದರು. ಈ ಪ್ರಕರಣದ ಬಳಿಕ ಈ ಕ್ಷೇತ್ರದ ರಾಜಕೀಯ ಚಟುವಟಿಕೆ ಬೇರೆಯೇ ಆಯಾಮ ಪಡೆದಿದೆ. ಈ ಘಟನೆಯನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಲು ಬಿಜೆಪಿ ಸಿದ್ಧತೆ ನಡೆಸಿದೆ. ಹಾಗಾಗಿ ‘ಶಾಂತಿ’ ಕಾಪಾಡುವ ವಿಚಾರವೇ ಈ ಬಾರಿ ಇಲ್ಲಿ ಚುನಾವಣಾ ವಿಷಯವಾಗಿದೆ.

ಎನ್‌ಎಸ್‌ಯುಐ ಮೂಲಕ ರಾಜಕೀಯ ಪ್ರವೇಶಿಸಿದ ಹ್ಯಾರಿಸ್‌, ಯುವ ಕಾಂಗ್ರೆಸ್‌ನ ಉಪಾಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದವರು. 2004ರಲ್ಲಿ ಶಿವಾಜಿನಗರದಿಂದ ಸ್ಪರ್ಧಿಸಿ ಬಿಜೆಪಿಯ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಎದುರು 4,373 ಮತಗಳ ಅಂತರದಿಂದ ಸೋತಿದ್ದರು. ಕ್ಷೇತ್ರ ಪುನರ್ವಿಂಗಡಣೆ ಬಳಿಕ ಶಾಂತಿನಗರಕ್ಕೆ ಬಂದ ಅವರು, 2008ರಲ್ಲಿ ಬಿಜೆಪಿಯ ಡಿ.ಯು.ಮಲ್ಲಿಕಾರ್ಜುನ ಅವರ ವಿರುದ್ಧ 13,797 ಮತಗಳಿಂದ ಗೆದ್ದಿದ್ದರು. 2013ರಲ್ಲಿ ಜೆಡಿಎಸ್‌ನ ಕೆ.ವಾಸುದೇವ ಮೂರ್ತಿ ಅವರನ್ನು 20,187 ಮತಗಳಿಂದ ಸೋಲಿಸಿದ್ದರು.

ಪಾಲಿಕೆ ಚುನಾವಣೆಯಲ್ಲಿ ದೊಮ್ಮಲೂರು ವಾರ್ಡ್‌ನಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದ ಸಿ.ಆರ್.ಲಕ್ಷ್ಮಿನಾರಾಯಣ್‌, ‘ನಾನೂ ಇಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ’ ಎಂದು ಹೇಳಿಕೊಂಡಿದ್ದಾರೆ. ಆದರೆ ಅವರ ಬೇಡಿಕೆಗೆ ಪಕ್ಷದ ವರಿಷ್ಠರು ಸೊಪ್ಪು ಹಾಕುವ ಲಕ್ಷಣ ಕಾಣಿಸುತ್ತಿಲ್ಲ.

ಹ್ಯಾರಿಸ್‌ ಪುತ್ರ ನಡೆಸಿದ ಹಲ್ಲೆಯಿಂದ ಕಾಂಗ್ರೆಸ್‌ ವರ್ಚಸ್ಸಿಗೆ ಧಕ್ಕೆ ಆಗಿದೆ ಎಂಬುದನ್ನು ಪಕ್ಷದ ವರಿಷ್ಠರೂ ಒಪ್ಪುತ್ತಾರೆ. ಆದರೆ ಈ ಕ್ಷೇತ್ರದಲ್ಲಿ ಹ್ಯಾರಿಸ್‌ ಪ್ರಾಬಲ್ಯ ಇರುವುದರಿಂದ ಹಾಗೂ ಕಳೆದ ಎರಡು ಚುನಾವಣೆಗಳಲ್ಲೂ ಅವರು ಹೆಚ್ಚಿನ ಬಹುಮತದಿಂದ ಗೆದ್ದಿರುವುದರಿಂದ, ಮತ್ತೆ ಅವರಿಗೇ ಟಿಕೆಟ್‌ ನೀಡುವ ಅನಿವಾರ್ಯ ಪರಿಸ್ಥಿತಿಯನ್ನು ಅವರು ಎದುರಿಸುತ್ತಿದ್ದಾರೆ.

‘ಮಗನ ವರ್ತನೆಯನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ. ಅದು ಯುವಕರ ನಡುವಿನ ಗಲಾಟೆ. ಅದಕ್ಕೂ ಕ್ಷೇತ್ರದ ಅಭಿವೃದ್ಧಿಗೂ ಸಂಬಂಧವೇ ಇಲ್ಲ. ಬಿಜೆಪಿಯವರು ಚುನಾವಣೆಗೆ ಬೇರೆ ವಿಷಯಗಳು ಸಿಗದ ಕಾರಣ ಇದನ್ನೇ ದೊಡ್ಡದು ಮಾಡುತ್ತಿದ್ದಾರೆ. ಶಾಸಕನಾಗಿ ನಾನು ಹೇಗೆ ಕಾರ್ಯ ನಿರ್ವಹಿಸಿದ್ದೇನೆ ಎಂಬುದು ಪಕ್ಷದ ವರಿಷ್ಠರಿಗೆ ಗೊತ್ತಿದೆ. ಈ ಬಾರಿಯೂ ಪಕ್ಷವು ನನಗೇ ಟಿಕೆಟ್‌ ನೀಡಲಿದೆ. ಇಲ್ಲಿ ನಾನು ಮತ್ತೆ ಗೆಲ್ಲುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಹ್ಯಾರಿಸ್‌.

2004ರ ಚುನಾವಣೆಯಲ್ಲಿ ಬಿಜೆಪಿಯ ಎಸ್‌.ರಘು ಇಲ್ಲಿ ಗೆದ್ದಿದ್ದರು. 2008ರಲ್ಲಿ ಪಕ್ಷದ ಅಭ್ಯರ್ಥಿ ಡಿ.ಯು.ಮಲ್ಲಿಕಾರ್ಜುನ ಅವರು ಹ್ಯಾರಿಸ್‌ಗೆ ಪ್ರಬಲ ಪೈಪೋಟಿ ಒಡ್ಡಿದ್ದರು. ಆದರೆ, 2013ರಲ್ಲಿ ಪಕ್ಷದ ಅಭ್ಯರ್ಥಿ ಡಿ.ವೆಂಕಟೇಶಮೂರ್ತಿ ಮೂರನೇ ಸ್ಥಾನ ಪಡೆದಿದ್ದರು. ಈ ಕ್ಷೇತ್ರವನ್ನು ಮತ್ತೆ ವಶಕ್ಕೆ ಪಡೆಯುವ ಹವಣಿಕೆಯಲ್ಲಿರುವ ಬಿಜೆಪಿ, ನಲಪಾಡ್‌ ಹಲ್ಲೆ ಪ್ರಕರಣದ ಲಾಭ ಪಡೆಯಲು ಸಕಲ ಪ್ರಯತ್ನ ನಡೆಸುತ್ತಿದೆ. ಈ ಘಟನೆ ಖಂಡಿಸಿ ಸಾಲು ಸಾಲು ಪ್ರತಿಭಟನೆಗಳನ್ನೂ ನಡೆಸಿತ್ತು. ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ‘ಬೆಂಗಳೂರು ರಕ್ಷಿಸಿ’ ಅಭಿಯಾನದಲ್ಲೂ ಮುಖಂಡರು ಈ ವಿಚಾರವನ್ನೇ ಪ್ರಸ್ತಾಪಿಸಿದ್ದರು.

ಬಿಜೆಪಿ ಟಿಕೆಟ್‌ಗಾಗಿ ಭಾರಿ ಪೈಪೋಟಿ ನಡೆದಿದೆ. ಕಳೆದ ಬಾರಿ ಇಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮಾಜಿ ಉಪಮೇಯರ್‌ ಕೆ.ವಾಸುದೇವ ಮೂರ್ತಿ ಈಗ ಬಿಜೆಪಿಯಲ್ಲಿದ್ದಾರೆ. ಅವರ ಸಹೋದರ ಕೆ.ಶಿವಕುಮಾರ್‌ ಈ ಕ್ಷೇತ್ರದ ವನ್ನಾರ್‌ಪೇಟೆ ವಾರ್ಡ್‌ನ ಪಾಲಿಕೆ ಸದಸ್ಯ. ಇನ್ನೊಬ್ಬರು ಸಂಬಂಧಿ ಎನ್‌.ಭವ್ಯಾ ಅಗರ ವಾರ್ಡ್‌ನ ಪಾಲಿಕೆ ಸದಸ್ಯೆ. ಪಕ್ಷದಿಂದ ಟಿಕೆಟ್‌ ಸಿಗುವ ನಿರೀಕ್ಷೆ ಇಟ್ಟುಕೊಂಡು ವಾಸುದೇವ ಮೂರ್ತಿ ಈಗಾಗಲೇ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಇಲ್ಲಿನ ಜೋಗುಪಾಳ್ಯ ವಾರ್ಡ್‌ನ ಸದಸ್ಯ ಎಂ.ಗೌತಮ್‌ ಕುಮಾರ್‌ ಅವರೂ ಬಿಜೆಪಿ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದಾರೆ. ಇತ್ತೀಚೆಗಷ್ಟೇ ಪಕ್ಷಕ್ಕೆ ಸೇರ್ಪಡೆಯಾಗಿರುವ ನಿವೃತ್ತ ಪೊಲೀಸ್‌ ಅಧಿಕಾರಿ ಬಿಎಸ್‌ಎಸ್‌ ರೆಡ್ಡಿ ಹಾಗೂ ಈ ಹಿಂದೆ ದೊಡ್ಡನೆಕ್ಕುಂದಿ

ಯಲ್ಲಿ ಪಾಲಿಕೆ ಸದಸ್ಯರಾಗಿದ್ದ ಎನ್‌.ಆರ್‌.ಶ್ರೀಧರ ರೆಡ್ಡಿ ಅವರೂ ಟಿಕೆಟ್‌ ಗಿಟ್ಟಿಸಲು ಪ್ರಯತ್ನ ನಡೆಸಿದ್ದಾರೆ. ವಾಸುದೇವ ಮೂರ್ತಿ ಬಿಜೆಪಿಗೆ ವಲಸೆ ಹೋದ ಬಳಿಕ ಇಲ್ಲಿ ಜೆಡಿಎಸ್‌ ಬಲ ಕುಸಿದಿದೆ. ಒಂದು ವೇಳೆ ಶ್ರೀಧರ ರೆಡ್ಡಿ ಅವರಿಗೆ ಬಿಜೆಪಿ ಟಿಕೆಟ್‌ ನಿರಾಕರಿಸಿದರೆ, ಅವರಿಗೆ ಗಾಳ ಹಾಕಲು ಜೆಡಿಎಸ್‌ ಮುಂದಾಗಿದೆ.

ಮಳೆ ಬಂದಾಗ ಶಾಂತಿನಗರ ಹಾಗೂ ಜೋಗುಪಾಳ್ಯ ವಾರ್ಡ್‌ನ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗುತ್ತದೆ. ವನ್ನಾರ್‌ಪೇಟೆ ವಾರ್ಡ್‌ಗೆ ಸೇರಿದ ಈಜಿಪುರ ಪ್ರದೇಶದ ಕೊಳೆಗೇರಿಗಳೂ ಜಲಾವೃತವಾಗುತ್ತವೆ.

‘ಶಾಂತಿನಗರ ವಾರ್ಡ್‌ನಲ್ಲಿ ಕೆಲವು ಮನೆಗಳಿಗೆ ಕಾವೇರಿ ನೀರು ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ. ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ಹೆಚ್ಚುತ್ತಿದೆ. ಕಟ್ಟಡ ನಿರ್ಮಿಸುವಾಗ ನಿಯಮ ಉಲ್ಲಂಘಿಸಲಾಗುತ್ತಿದೆ. ಬಡಾವಣೆಯಲ್ಲಿ ಒಂದೂ ಉದ್ಯಾನವಿಲ್ಲ’ ಎಂದು ದೂರುತ್ತಾರೆ ಈ ಬಡಾವಣೆಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಶಶಿಕಲಾ ಆನಂದ್‌.

ಶಾಸಕರ ಪುತ್ರ ನಡೆಸಿರುವ ಹಲ್ಲೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ‘ಆ ಘಟನೆ ನಡೆಯಬಾರದಿತ್ತು. ಆದರೆ, ನಾವು ಮತ ನೀಡುವಾಗ ಜನಪ್ರತಿನಿಧಿಯಾಗುವವರು ನಮ್ಮ ಸಮಸ್ಯೆಗಳಿಗೆ ಎಷ್ಟರ ಮಟ್ಟಿಗೆ ಸ್ಪಂದಿಸುತ್ತಾರೆ ಎಂಬುದನ್ನು ನೋಡುತ್ತೇವೆ’ ಎಂದರು.

ಈ ಕ್ಷೇತ್ರದಲ್ಲಿ ಅನಧಿಕೃತ ಫ್ಲೆಕ್ಸ್‌ಗಳ ಹಾವಳಿ ವಿಪರೀತವಿತ್ತು. ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಅವುಗಳನ್ನು ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಇಲ್ಲಿನ ಏಳು ವಾರ್ಡ್‌ಗಳ ಪೈಕಿ ನಾಲ್ಕರಲ್ಲಿ ಬಿಜೆಪಿ, ಎರಡರಲ್ಲಿ ಕಾಂಗ್ರೆಸ್‌ ಸದಸ್ಯರಿದ್ದಾರೆ. ಒಂದರಲ್ಲಿ ಸ್ವತಂತ್ರ ಅಭ್ಯರ್ಥಿ ಗೆದ್ದಿದ್ದರು. ಶಾಸಕರ ಪುತ್ರನ ಹಲ್ಲೆ ವಿಷಯಕ್ಕೆ ಇಲ್ಲಿನ ಮತದಾರರು ಎಷ್ಟು ಮಹತ್ವ ನೀಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ಈಜಿಪುರ ವಸತಿ ಸಮುಚ್ಚಯದ ವ್ಯಥೆಯ ಕತೆ

ಈಜಿಪುರದ ಒಂದು ಪಾರ್ಶ್ವ ಶಾಂತಿನಗರ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಇಲ್ಲಿ ಆರ್ಥಿಕ ದುರ್ಬಲ ವರ್ಗದವರಿಗಾಗಿ (ಇಡಬ್ಲ್ಯುಎಸ್‌) ನಿರ್ಮಿಸಿದ್ದ ವಸತಿ ಸಮುಚ್ಚಯದ ಗುಣಮಟ್ಟ ಕಳಪೆ ಎಂಬ ದೂರುಗಳು ಬಂದಿತ್ತು. 2007ರಲ್ಲಿ ಕಟ್ಟಡದಲ್ಲಿ ಸರಣಿ ಅವಘಡಗಳು ನಡೆದಿದ್ದವು. ನಾಲ್ವರು ಮಕ್ಕಳು ಸೇರಿ ಐದು ಮಂದಿ ಸತ್ತಿದ್ದರು. ಆ ವರ್ಷ ಡಿಸೆಂಬರ್‌ನಲ್ಲಿ ವಸತಿ ಸಮುಚ್ಚಯವನ್ನು ನೆಲಸಮ ಮಾಡಲಾಯಿತು. ಈ ಕಟ್ಟಡದಲ್ಲಿ ವಾಸವಿದ್ದವರು ಅಲ್ಲೇ ಗುಡಿಸಲು ನಿರ್ಮಿಸಿಕೊಂಡು ವಾಸವಿದ್ದರು.

ಇಲ್ಲಿ ಪಾಲಿಕೆಗೆ ಸೇರಿದ ಜಾಗದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ವಸತಿ ಸಮುಚ್ಚಯ ನಿರ್ಮಿಸಲು ನಿರ್ಧರಿಸಲಾಯಿತು. ಈ ಕುರಿತು ಬಿಬಿಎಂಪಿ ಹಾಗೂ ಮೇವರಿಕ್‌ ಸಂಸ್ಥೆ  ಒಪ್ಪಂದ ಮಾಡಿಕೊಂಡವು. ಇಲ್ಲಿನ ಗುಡಿಸಲುಗಳಲ್ಲಿ ವಾಸವಿದ್ದವರನ್ನು ಈ ಸಲುವಾಗಿ 2013ರಲ್ಲಿ ಒಕ್ಕಲೆಬ್ಬಿಸಲಾಯಿತು. ಆಗ ಬೀದಿಪಾಲಾದ 20ಕ್ಕೂ ಹೆಚ್ಚು ಕುಟುಂಬಗಳು ಈ ಜಾಗದ ಪಕ್ಕದಲ್ಲಿ ಜೋಪಡಿ ನಿರ್ಮಿಸಿಕೊಂಡಿವೆ. ಎರಡು ವರ್ಷಗಳೊಳಗೆ ಹೊಸ ವಸತಿ ಸಮುಚ್ಚಯ ನಿರ್ಮಿಸುವುದಾಗಿ ಬಿಬಿಎಂಪಿ ಭರವಸೆ ನೀಡಿತ್ತು. ಆದರೆ, ಇದಾಗಿ ಐದು ವರ್ಷಗಳು ಕಳೆದಿವೆ. ಇನ್ನೂ ಹೊಸ ಕಟ್ಟಡ ನಿರ್ಮಾಣವಾಗಿಲ್ಲ.

‘ಇಲ್ಲಿ ವಾಸವಿದ್ದವರಿಗೆ ಹಂಚಿಕೆ ಮಾಡುವ ಸಲುವಾಗಿ ಸೂಲಿಕುಂಟೆಯಲ್ಲಿ 900 ಮನೆಗಳನ್ನು ನಿರ್ಮಿಸಲಾಗಿದೆ. ಅದನ್ನು ಶೀಘ್ರವೇ ಹಂಚಿಕೆ ಮಾಡಲಾಗುತ್ತದೆ. ಕಾನೂನು ತೊಡಕಿನಿಂದ ಹೊಸ ವಸತಿ ಸಮುಚ್ಚಯ ನಿರ್ಮಾಣ ವಿಳಂಬವಾಗಿದೆ. ಈಗ ಇದರ ಕಾಮಗಾರಿಯೂ ಆರಂಭವಾಗಿದೆ’ ಎಂದು ಹ್ಯಾರಿಸ್‌ ತಿಳಿಸಿದರು.

‘ಅಭಿವೃದ್ಧಿ ಗುರುತಿಸುವ ಭರವಸೆ ಇದೆ’

ಶಾಸಕನಾಗಿ 10 ವರ್ಷಗಳಲ್ಲಿ ಏನೆಲ್ಲ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿದ್ದೇನೆ ಎಂಬುದು ಕ್ಷೇತ್ರದ ಜನರಿಗೆ ಚೆನ್ನಾಗಿ ತಿಳಿದಿದೆ. ಅದನ್ನು ಗುರುತಿಸುತ್ತಾರೆ ಎಂಬ ವಿಶ್ವಾಸವಿದೆ.

ಕ್ಷೇತ್ರದ ಎಲ್ಲಾ ರಾಜಕಾಲುವೆಗಳನ್ನು ಕಾಂಕ್ರಿಟೀಕರಣಗೊಳಿಸಲಾಗಿದೆ. ಒಳಚರಂಡಿ ವ್ಯವಸ್ಥೆಯಲ್ಲಿದ್ದ ಲೋಪಗಳನ್ನು ಬಹುತೇಕ ಸರಿಪಡಿಸಿದ್ದೇವೆ. ಸೇಂಟ್‌ ಮಾರ್ಕ್ಸ್‌ ರಸ್ತೆ, ರೆಸಿಡೆನ್ಸಿ ರಸ್ತೆ, ಮ್ಯೂಸಿಯಂ ರಸ್ತೆ, ರಿಚ್ಮಂಡ್‌ ರಸ್ತೆಗಳನ್ನು ಟೆಂಡರ್‌ಶ್ಯೂರ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಚರ್ಚ್‌ಸ್ಟ್ರೀಟ್‌ ರಸ್ತೆಯನ್ನು ಕಾಬಲ್‌ ಸ್ಟೋನ್‌ ಬಳಸಿ ವಿನೂತನ ರೀತಿಯಲ್ಲಿ ನಿರ್ಮಿಸಿದ್ದೇವೆ. 25 ಕಡೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. 7,000 ಬಡವರಿಗೆ ವಸತಿ ಒದಗಿಸಲಾಗಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದೇನೆ.

ಹ್ಯಾರಿಸ್, ಶಾಸಕ

***

ನಿವೃತ್ತ ಐಎಎಸ್‌ ಅಧಿಕಾರಿ ರೇಣುಕಾ ಕಣಕ್ಕೆ

ನಿವೃತ್ತ ಐಎಎಸ್‌ ಅಧಿಕಾರಿ ರೇಣುಕಾ ವಿಶ್ವನಾಥ್‌ ಅವರು ಇಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ.

ಕೇಂದ್ರ ಯೋಜನಾ ಆಯೋಗದಲ್ಲೂ ಅಧಿಕಾರಿಯಾಗಿ ಕೆಲಸ ಮಾಡಿರುವ ಅವರು, ಆಡಳಿತಾತ್ಮಕವಾಗಿ ಉತ್ತಮ ಅನುಭವ ಹೊಂದಿದ್ದಾರೆ. ಮಹದೇವಪುರ ಪ್ರದೇಶದಲ್ಲಿ ಘನತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನು ಸರಿದಾರಿಗೆ ತರಲು ಅನೇಕ ಹೋರಾಟಗಳನ್ನು ನಡೆಸಿದ್ದಾರೆ.

‘ರೇಣುಕಾ ಅವರು ನಾಲ್ಕೈದು ವರ್ಷಗಳಿಂದ ಪಕ್ಷದ ಚಟುವಟಿಕೆಯಲ್ಲಿ ತೊಡಗಿದ್ದರೂ, ಚುನಾವಣಾ ರಾಜಕೀಯಕ್ಕೆ ಬರಲು ಹಿಂದೇಟು ಹಾಕುತ್ತಿದ್ದರು. ಸ್ವಚ್ಛ ರಾಜಕೀಯ ವಾತಾವರಣ ರೂಪಿಸಲು ಅವರಂತಹ ಶುದ್ಧ ಹಿನ್ನೆಲೆಯ ಅಭ್ಯರ್ಥಿಗಳು ಬೇಕು ಎಂಬ ಕಾರಣಕ್ಕೆ ಅವರನ್ನು ಕಣಕ್ಕಿಳಿಸುತ್ತಿದ್ದೇವೆ’ ಎಂದು ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry