ಸೋಮವಾರ, ಆಗಸ್ಟ್ 10, 2020
26 °C

ಕೇಂದ್ರ ಸರ್ಕಾರದ ಕೀಳು ರಾಜಕೀಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರ ಸರ್ಕಾರದ ಕೀಳು ರಾಜಕೀಯ

ನವದೆಹಲಿ: ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಷಯದಲ್ಲಿ ಕೇಂದ್ರ ಸರ್ಕಾರ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ ಎಂದು ತೆಲುಗುದೇಶಂ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಕಿಡಿ ಕಾರಿದ್ದಾರೆ.

‘ಕೇಂದ್ರ ಸರ್ಕಾರದ ಈ ನಡೆಯ ಹಿಂದೆ, ಸಾರ್ವಜನಿಕ ಜೀವನದಲ್ಲಿ 40 ವರ್ಷಗಳಿಂದ ನಾನು ಎಚ್ಚರಿಕೆಯಿಂದ ಕಾಪಾಡಿಕೊಂಡು ಬಂದ ವಿಶ್ವಾಸಾರ್ಹತೆಗೆ ಮಸಿ ಬಳಿಯುವ ಷಡ್ಯಂತ್ರ ಅಡಗಿದೆ’ ಎಂದು ಅವರು ಆರೋಪಿಸಿದ್ದಾರೆ.

ದೆಹಲಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಷಯದಲ್ಲಿ ಕೇಂದ್ರ ಸರ್ಕಾರ ಅನಗತ್ಯ ಕೆಸರೆರಚಾಟದಲ್ಲಿ ತೊಡಗಿದೆ ಎಂದು ಹರಿಹಾಯ್ದರು.

’ಆಂಧ್ರ ಪ್ರದೇಶ ಇದೀಗ ಹುಟ್ಟಿದ ಕೂಸು. ಹೀಗಾಗಿ ಎಲ್ಲವನ್ನೂ ಮೌನವಾಗಿ ಸಹಿಸಿಕೊಂಡೆ. ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ ಕುರಿತು 29 ಬಾರಿ ಕೇಂದ್ರದ ಗಮನಕ್ಕೆ ತಂದಿದ್ದೆ’ ಎಂದರು.

ಬೆನ್ನಿಗೆ ಚೂರಿ: ‘ನಮ್ಮೊಂದಿಗೆ ಎನ್‌ಡಿಎ ಸರ್ಕಾರ ನಡೆದುಕೊಂಡ ರೀತಿ ನಿಜಕ್ಕೂ ನೋವು ತಂದಿದೆ. ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ಹಲವು ಬಾರಿ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಆಂಧ್ರದ ಜನತೆಯ ಬೆನ್ನಿಗೆ ಚೂರಿ ಹಾಕಿದ್ದಾರೆ’ ಎಂದು ನಾಯ್ಡು ಆರೋಪಿಸಿದರು.

ಕೇಜ್ರಿವಾಲ್‌ ಭೇಟಿ: ಗೊತ್ತುವಳಿಗೆ ಬೆಂಬಿಸಲು ಮನವಿ

ಕೇಂದ್ರ ಸರ್ಕಾರದ ವಿರುದ್ಧ ಮಂಡಿಸಿರುವ ಅವಿಶ್ವಾಸ ಗೊತ್ತುವಳಿಗೆ ಬೆಂಬಲ ಕೋರಲು ಚಂದ್ರಬಾಬು ನಾಯ್ಡು ಅವರ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಭೇಟಿ ಮುಂದುವರಿದಿದೆ.

ಬುಧವಾರ ಅವರು ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಭೇಟಿ ಮಾಡಿ ಅವಿಶ್ವಾಸ ಗೊತ್ತುವಳಿಗೆ ಬೆಂಬಲ ಕೋರಿದರು.

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕುರಿತು ಉಭಯ ನಾಯಕರು ಚರ್ಚಿಸಿದರು. ಅವಿಶ್ವಾಸ ಗೊತ್ತುವಳಿ ಬೆಂಬಲಿಸುವುದಾಗಿ ಕೇಜ್ರಿವಾಲ್‌ ಮಾತು ಕೊಟ್ಟಿದ್ದಾರೆ ಎಂದು ಟಿಡಿಪಿ ಸಂಸದ ಸಿ.ಎಂ. ರಮೇಶ್‌ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಎಎಪಿ ನಾಲ್ವರು ಸಂಸದರು ಮತ್ತು ರಾಜ್ಯಸಭೆಯಲ್ಲಿ ಮೂವರು ಸದಸ್ಯರನ್ನು ಹೊಂದಿದೆ. ಶಿರೋಮಣಿ ಅಕಾಲಿದಳ (ಎಸ್‌ಎಡಿ) ಮುಖ್ಯಸ್ಥ ಸುಖ್‌ಬೀರ್‌ ಸಿಂಗ್‌ ಬಾದಲ್‌ ಅವರನ್ನೂ ನಾಯ್ಡು ಭೇಟಿ ಮಾಡುವ ಸಾಧ್ಯತೆ ಇದೆ.

ಮಂಗಳವಾರ ದೆಹಲಿಗೆ ಬಂದಿಳಿದಿರುವ ನಾಯ್ಡು ಈಗಾಗಲೇ ವಿವಿಧ ಪಕ್ಷಗಳ ಮುಖಂಡರನ್ನು ಕಂಡು ಬೆಂಬಲ ಕೋರಿದ್ದಾರೆ. ಆದರೆ, ಬಿಜೆಪಿಯ ಯಾವ ನಾಯಕರನ್ನೂ ಅವರು ಭೇಟಿ ಮಾಡಿಲ್ಲ.

**

ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಆಂಧ್ರ ಪ್ರದೇಶದ ಹೋರಾಟ ಮತ್ತು ಕೇಂದ್ರದ ವರ್ತನೆಯ ವಿರುದ್ಧ ನನ್ನ ಸಮರ ಮುಂದುವರಿಯಲಿದೆ

– ಎನ್‌. ಚಂದ್ರಬಾಬು ನಾಯ್ಡು, ಆಂಧ್ರ ಪ್ರದೇಶದ ಮುಖ್ಯಮಂತ್ರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.