ಶುಕ್ರವಾರ, ಡಿಸೆಂಬರ್ 6, 2019
25 °C

ಮರುಪರೀಕ್ಷೆ ಸಿಬಿಎಸ್‌ಇ ವಿವೇಚನಾಧಿಕಾರ

ಪಿಟಿಐ Updated:

ಅಕ್ಷರ ಗಾತ್ರ : | |

ಮರುಪರೀಕ್ಷೆ ಸಿಬಿಎಸ್‌ಇ ವಿವೇಚನಾಧಿಕಾರ

ನವದೆಹಲಿ‌: ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ 10ನೇ ತರಗತಿ ಗಣಿತ ಮತ್ತು 12ನೇ ತರಗತಿ ಅರ್ಥಶಾಸ್ತ್ರ ವಿಷಯಗಳ ಮರುಪರೀಕ್ಷೆ ನಡೆಸಲು ಮುಂದಾಗಿದ್ದ ಕೇಂದ್ರ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ನಿರ್ಧಾರ ಪ್ರಶ್ನಿಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಸಲ್ಲಿಸಿದ್ದ ಐದು ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಬುಧವಾರ ವಜಾಗೊಳಿಸಿದೆ.

‘ಮರುಪರೀಕ್ಷೆ ನಡೆಸುವುದು ಅಥವಾ ಬಿಡುವುದು ಪ್ರೌಢಶಿಕ್ಷಣ ಮಂಡಳಿಯ ವಿವೇಚನೆಗೆ ಬಿಟ್ಟದ್ದು. ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗದು’ ಎಂದು ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ.

‘ಸಿಬಿಎಸ್‌ಇ ನಡೆಸುವ ಮರುಪರೀಕ್ಷೆಗೆ ಹಾಜರಾಗಿ’ ಎಂದು ನ್ಯಾಯಮೂರ್ತಿಗಳಾದ ಎಸ್‌.ಎ. ಬೊಬ್ಡೆ ಮತ್ತು ಎಲ್‌. ನಾಗೇಶ್ವರ ರಾವ್‌ ಅವರ ಪೀಠ ವಿದ್ಯಾರ್ಥಿಗಳಿಗೆ ಬುದ್ಧಿವಾದ ಹೇಳಿದೆ.

ಮರುಪರೀಕ್ಷೆಯಿಂದ ತಮ್ಮ ಹಕ್ಕುಗಳ ಉಲ್ಲಂಘನೆಯಾಗಲಿದೆ ಎಂಬ ವಿದ್ಯಾರ್ಥಿಗಳ ವಾದವನ್ನು ಕೋರ್ಟ್ ಪುರಸ್ಕರಿಸಲಿಲ್ಲ.

ಪ್ರಕರಣದ ಸ್ವತಂತ್ರ ತನಿಖೆಗೆ ಒತ್ತಾಯಿಸಿದ್ದ ವಿದ್ಯಾರ್ಥಿಗಳು, ಸಿಬಿಐಗೆ ತನಿಖೆಗೂ ಕೋರಿದ್ದರು. ಈಗಾಗಲೇ ನಡೆದ ಪರೀಕ್ಷೆಗಳ ಆಧಾರದ ಮೇಲೆ ಫಲಿತಾಂಶ ಘೋಷಿಸಲು ಸಿಬಿಎಸ್‌ಇಗೆ ನಿರ್ದೇಶಿಸುವಂತೆಯೂ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದ 10ನೇ ತರಗತಿ ಗಣಿತ ಮತ್ತು 12ನೇ ತರಗತಿ ಅರ್ಥಶಾಸ್ತ್ರ ವಿಷಯಗಳ ಮರುಪರೀಕ್ಷೆ ನಡೆಸುವುದಾಗಿ ಸಿಬಿಎಸ್‌ಇ ಹೇಳಿತ್ತು. ಆದರೆ, ನಂತರ ತನ್ನ ನಿರ್ಧಾರ ಬದಲಿಸಿರುವ ಸಿಬಿಎಸ್‌ಇ, 10ನೇ ತರಗತಿ ಗಣಿತ ಮರುಪರೀಕ್ಷೆ ನಡೆಸುವ ನಿರ್ಧಾರ ಕೈಬಿಟ್ಟಿರುವುದಾಗಿ ಮಂಗಳವಾರ ಘೋಷಿಸಿದೆ. ಪರೀಕ್ಷೆಯ ಮೇಲೆ ಪ್ರಶ್ನೆಪತ್ರಿಕೆ ಸೋರಿಕೆ ಯಾವುದೇ ಪರಿಣಾಮ ಬೀರಿಲ್ಲ. ಉತ್ತರ ಪತ್ರಿಕೆಗಳ ಮೌಲ್ಯಮಾಪನದ ವೇಳೆ ಇದು ಮನವರಿಕೆಯಾಗಿದೆ ಎಂದು ಮಂಡಳಿ ಸಮಜಾಯಿಷಿ ನೀಡಿದೆ.

ಪರೀಕ್ಷಾ ವಿಧಾನ:ಅಧ್ಯಯನಕ್ಕೆ ಸಮಿತಿ

ಪ್ರಶ್ನೆಪತ್ರಿಕೆ ಸೋರಿಕೆಯಿಂದ ತೀವ್ರ ಮುಜುಗರಕ್ಕೀಡಾಗಿರುವ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು (ಎಚ್‌ಆರ್‌ಡಿ) ಸಿಬಿಎಸ್‌ಇ ಪರೀಕ್ಷಾ ವಿಧಾನದ ಸಮಗ್ರ ಅಧ್ಯಯನಕ್ಕೆ ಬುಧವಾರ ಉನ್ನತಾಧಿಕಾರ ಸಮಿತಿ ರಚಿಸಿದೆ.

ಎಚ್‌ಆರ್‌ಡಿ ಮಾಜಿ ಕಾರ್ಯದರ್ಶಿ ವಿನಯಶೀಲ್‌ ಒಬೆರಾಯ್‌ ನೇತೃತ್ವದ ಏಳು ಸದಸ್ಯರ ಸಮಿತಿ ಮೇ 31ರೊಳಗಾಗಿ ಸಚಿವಾಲಯಕ್ಕೆ ವರದಿ ಸಲ್ಲಿಸಲಿದೆ.

ಲಭ್ಯವಿರುವ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಪ್ರಶ್ನೆಪತ್ರಿಕೆ ಸೋರಿಕೆಯನ್ನು ಹೇಗೆ ತಡೆಯಬಹುದು ಎಂಬ ಬಗ್ಗೆ ಶಿಫಾರಸು ಮಾಡುವಂತೆ ಸಮಿತಿಗೆ ಸೂಚಿಸಲಾಗಿದೆ ಎಂದು ಎಚ್‌ಆರ್‌ಡಿ ಶಾಲಾ ಶಿಕ್ಷಣ ಕಾರ್ಯದರ್ಶಿ ಅನಿಲ್‌ ಸ್ವರೂಪ್‌ ತಿಳಿಸಿದ್ದಾರೆ.

ಪರೀಕ್ಷಾ ವಿಧಾನದಲ್ಲಿ ಅಳವಡಿಸಿಕೊಳ್ಳಬಹುದಾದ ಸುರಕ್ಷತಾ ಕ್ರಮ ಮತ್ತು ಸಿಬ್ಬಂದಿ ಹಸ್ತಕ್ಷೇಪ ತಡೆಯಲು ತಂತ್ರಜ್ಞಾನದ ಪರಿಣಾಮಕಾರಿ ಬಳಕೆ ಕುರಿತು ಸಮಿತಿ ಶಿಫಾರಸು ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.

**

ಮರುಪರೀಕ್ಷೆ ನಡೆಸುವುದು ಅಥವಾ ಬಿಡುವುದು ಪರೀಕ್ಷಾ ಮಂಡಳಿ ವಿವೇಚನೆಗೆ ಬಿಟ್ಟಿದ್ದು. ಇದರಲ್ಲಿ ಮಧ್ಯೆ ಪ್ರವೇಶಿಸಲು ಸಾಧ್ಯವಿಲ್ಲ. ಮರುಪರೀಕ್ಷೆ ನಡೆದರೆ ವಿದ್ಯಾರ್ಥಿಗಳು ಹಾಜರಾಗಬೇಕು

– ಸುಪ್ರೀಂ ಕೋರ್ಟ್‌ ಪೀಠ

**

ಸಿಬಿಎಸ್‌ಇ ನಡೆಸುವ ಪರೀಕ್ಷೆಯ ಇಡೀ ಪ್ರಕ್ರಿಯೆಯನ್ನು ಸಮಿತಿಯು ಕೂಲಂಕಷವಾಗಿ ಪರಿಶೀಲಿಸಲಿದ್ದು ಲೋಪದೋಷ ಪಟ್ಟಿ ಮಾಡಲಿದೆ

– ಅನಿಲ್‌ ಸ್ವರೂಪ್‌, ಎಚ್‌ಆರ್‌ಡಿ ಸಚಿವಾಲಯದ ಕಾರ್ಯದರ್ಶಿ

ಪ್ರತಿಕ್ರಿಯಿಸಿ (+)