ವಿಟಿಯು ಮೆಮೊ ಸಲ್ಲಿಕೆ

7

ವಿಟಿಯು ಮೆಮೊ ಸಲ್ಲಿಕೆ

Published:
Updated:

ಬೆಂಗಳೂರು: ಆಯ್ಕೆ ಆಧಾರಿತ ಗುಣಾಂಕ ಪದ್ಧತಿ (ಚಾಯ್ಸ್ ಬೇಸ್ಡ್ ಕ್ರೆಡಿಟ್ ಸಿಸ್ಟಂ- ಸಿಬಿಸಿಎಸ್) 2015ರಲ್ಲಿ ಜಾರಿಯಾದ ನಂತರ ಎಂಜಿನಿಯರ್ ಪದವಿ ಪ್ರವೇಶಿಸಿರುವ ವಿದ್ಯಾರ್ಥಿಗಳಿಗೂ ‘ಒನ್ ಟೈಮ್ ಎಕ್ಸಿಟ್ ಸ್ಕೀಮ್’ನಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹೈಕೋರ್ಟ್‌ಗೆ ತಿಳಿಸಿದೆ.

ಈ ಕುರಿತಂತೆ ತಿಪಟೂರು ತಾಲ್ಲೂಕಿನ ಹೊನ್ನವಳ್ಳಿಯ ವಿ.ಅಮಿತ್ ಸೇರಿದಂತೆ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿನೀತ್ ಕೋಠಾರಿ ಅವರಿದ್ದ ಏಕಸದಸ್ಯ ನ್ಯಾಯಪೀಠಕ್ಕೆ ವಿಟಿಯು ಪರ ವಕೀಲರು ಬುಧವಾರ ಜ್ಞಾಪನಾ ಪತ್ರ (ಮೆಮೊ) ಸಲ್ಲಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವ ಎಲ್ಲಾ ವಿದ್ಯಾರ್ಥಿಗಳಿಗೆ ‘ಒನ್ ಟೈಮ್ ಎಕ್ಸಿಟ್ ಸ್ಕೀಮ್‌‘ಗೆ ಅವಕಾಶ ಕಲ್ಪಿಸಲಾಗುವುದು. ಈ ಸ್ಕೀಮ್ ಮೂಲಕ ಬಾಕಿ ಇರುವ ವಿಷಯಗಳನ್ನು ಪೂರ್ಣಗೊಳಿಸಿಕೊಂಡು ಮುಂದಿನ ಸೆಮಿಸ್ಟರ್‌ಗೆ ನೋಂದಣಿ ಮಾಡಿಕೊಳ್ಳಬಹುದು ಎಂದು ಮೆಮೊದಲ್ಲಿ ವಿವರಿಸಲಾಗಿದೆ.

‘ಒನ್ ಟೈಮ್ ಎಕ್ಸಿಟ್ ಸ್ಕೀಮ್‌‘ಗೆ ಪರೀಕ್ಷೆಗಳು ಏ.9 ರಿಂದ ಪ್ರಾರಂಭವಾಗಲಿದ್ದು ಇದರಲ್ಲಿ ವಿದ್ಯಾರ್ಥಿಗಳು ಭಾಗಿಯಾಗಬಹುದು ಎಂದು ತಿಳಿಸಲಾಗಿದೆ. ವಿಟಿಯು ಸಲ್ಲಿಸಿರುವ ಈ ಮೆಮೊದಿಂದಾಗಿ ರಾಜ್ಯದಲ್ಲಿ ಎಂಜಿನಿಯರಿಂಗ್ ಪದವಿ ಓದುತ್ತಿರುವ ಸುಮಾರು 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೆರವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry