ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರ ತಟದಲ್ಲಿ ಅನುರಣಿಸಿದ ಒಗ್ಗಟ್ಟಿನ ಮಂತ್ರ

Last Updated 4 ಏಪ್ರಿಲ್ 2018, 19:49 IST
ಅಕ್ಷರ ಗಾತ್ರ

ಗೋಲ್ಡ್‌ ಕೋಸ್ಟ್‌, ಆಸ್ಟ್ರೇಲಿಯಾ (ಎಎಫ್‌ಪಿ): ಆರಂಭದಲ್ಲಿ ಧಾರಾಕಾರ ಮಳೆ; ನಂತರ ಕಲೆ–ಸಂಸ್ಕೃತಿಯ ವೈಭವದ ಪ್ರದರ್ಶನ. ಇದರ ಬೆನ್ನಲ್ಲೇ ಮೊಳಗಿದ ಒಗ್ಗಟ್ಟಿನ ಮಂತ್ರ. ಇಂಥ ಭವ್ಯ ಸಮಾರಂಭದಲ್ಲಿ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಮಂಗಳವಾರ ಸಂಭ್ರಮದ ಚಾಲನೆ ಲಭಿಸಿತು.

ಕಡಲ ಕಿನಾರೆಯ ಸುಂದರ ನಗರಿಯಲ್ಲಿ ಸಮುದ್ರ ತಟದ ಮಾದರಿಯನ್ನು ಬಿಂಬಿಸಿದ ಕೆರಾರ
ಕ್ರೀಡಾಂಗಣದಲ್ಲಿ ನಡೆದ ವೈಭವೋ ಪೇತ ಸಮಾರಂಭಕ್ಕೆ ವಿವಿಧ ದೇಶಗಳ ಕ್ರೀಡಾ‍ಪಟುಗಳು ಮತ್ತು ಅಧಿಕಾರಿಗಳು ಒಳಗೊಂಡಂತೆ 35 ಸಾವಿರ ಪ್ರೇಕ್ಷಕರು ಸಾಕ್ಷಿಯಾದರು.

ಬ್ರಿಟನ್‌ ರಾಜಕುಮಾರ ಚಾರ್ಲ್ಸ್‌ ಮತ್ತು ಅವರ ಪತ್ನಿ ಕಮಿಲಾ ಮುಖ್ಯ ಅತಿಥಿಯಾಗಿದ್ದ ಸಮಾರಂಭದಲ್ಲಿ ಆಸ್ಟ್ರೇಲಿಯಾದ ಪುರಾತನ ಸಂಸ್ಖೃತಿ, ಕಲೆ ಮತ್ತು ನಾಗರಿಕತೆಯನ್ನು ಬಿಂಬಿಸುವ ರೂಪಕಗಳು ಮನಕ್ಕೆ ಮುದ ನೀಡಿದವು. ವಿಶೇಷ ಬೆಳಕಿನ ವಿನ್ಯಾಸದಲ್ಲಿ ವಿವಿಧ ಕಲಾಪ್ರಕಾರ
ಗಳು ರಂಗೇರಿದವು. ಕ್ರೀಡಾಪಟುಗಳ ಪಥಸಂಚಲನವೂ ಗಮನ ಸೆಳೆಯಿತು. ಭಾರತ ತಂಡವನ್ನು ತ್ರಿವರ್ಣ ಧ್ವಜ ಹಿಡಿದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಮುನ್ನಡೆಸಿದರು.

ಕಾರ್ಯಕ್ರಮದ ಆರಂಭದಲ್ಲಿ ಪ್ರೇಕ್ಷಕರ ನಡುವೆ ಸಿದ್ಧಪಡಿಸಿದ್ದ ವಿಶೇಷ ಸ್ಥಳದತ್ತ ಕ್ಯಾಮೆರಾಗಳ ಗಮನ ಸೆಳೆಯಲಾಯಿತು. ಅಲ್ಲಿ ಮುದ್ದಾದ ಬಾಲಕಿಯೊಬ್ಬಳು ಸ್ಮಾರ್ಟ್‌ ಫೋನ್ ಹಿಡಿದು ನಿಂತಿದ್ದಳು.

ಎಲ್ಲರ ಗಮನ ಅತ್ತ ಸಾಗುತ್ತಿದ್ದಂತೆ ಫೋನ್‌ ಪರದೆಯಲ್ಲಿ ‘ಭೂಮಿ ಮೇಲಿನ ಅತ್ಯಂತ ಪುರಾತನ ಜೀವಂತ ಸಂಸ್ಕೃತಿಯ ನಾಡಿಗೆ ಸ್ವಾಗತ’ ಎಂಬ ಸಂದೇಶ ಮೂಡಿತು.

ಕಾರ್ಯಕ್ರಮಗಳು ಆರಂಭವಾ ಗುತ್ತಿದ್ದಂತೆ ಧಾರಾಕಾರ ಮಳೆ ಸುರಿಯಿತು. ಇದರಿಂದ ಪ್ರೇಕ್ಷಕರು ಮತ್ತು ಸಂಘಟಕರು ಕೆಲಕಾಲ ಆತಂಕ ಗೊಂಡರು. ಆದರೆ ಮಳೆ ಕಡಿಮೆಯಾಗುತ್ತಿದ್ದಂತೆ ಬೆಳಕಿನ ವರ್ಣವೈಭವ ಕ್ರೀಡಾಂಗಣಕ್ಕೆ ಜೀವ ತುಂಬಿತು.

ರಾಜಕುಮಾರ ಮತ್ತು ಪತ್ನಿಯನ್ನು ಸ್ವಾಗತಿಸಿದ ನಂತರ ಆಸ್ಟ್ರೇಲಿಯಾದ ರಾಷ್ಟ್ರಗೀತೆಯನ್ನು ಹಾಡಲಾಯಿತು. ನಂತರ ಸಂಗೀತ, ನೃತ್ಯ ಮತ್ತು ಬೆಳಕಿನ ದೃಶ್ಯ ವೈಭವಕ್ಕೆ ವೇದಿಕೆ ಸಜ್ಜಾಯಿತು.

ತಿಳಿ ನೀಲಿ ಬಣ್ಣದ ಬೆಳಕಿನ ವಿನ್ಯಾಸದ ನಡುವೆ ಕೃತಕ ನಕ್ಷತ್ರ ಗುಚ್ಛಗಳು ಅರಳಿದವು. ಇನ್ನೊಂದೆಡೆ ಸರ್ಫಿಂಗ್‌ ಮಾದರಿಯನ್ನು ಪ್ರದರ್ಶಿ ಸಿದ ಗುಂಪು ಚಪ್ಪಾಳೆ ಗಿಟ್ಟಿಸಿ ಕೊಂಡಿತು. ನಂತರ ಸಂಗೀತ ಮತ್ತು ನೃತ್ಯದ ಸೊಬಗು ಮೈದಳೆಯಿತು. ಇದೆಲ್ಲವನ್ನು ಕಣ್ತುಂಬಿಕೊಂಡ ಪ್ರೇಕ್ಷಕರು ರೋಮಾಂಚನದ ಕಡಲಿನಲ್ಲಿ ಮಿಂದೆದ್ದರು.

ಗೋಲ್ಡ್‌ಕೋಸ್ಟ್ ನಗರದ ಕರಾವಳಿ ರಕ್ಷಣಾ ಪಡೆಯ ಸದಸ್ಯರೊಬ್ಬರು ಕೃತಕವಾಗಿ ನಿರ್ಮಿಸಿದ ಗುಡಿಸಲಿನ ಮೇಲೆ ನಿಂತು ‘ಜಿ ಡೇ’ ಎಂದು ಕೂಗಿದರು. ನಂತರ ಪಥಸಂಚಲನ ನಡೆಯಿತು. ಕಳೆದ ಬಾರಿ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಿದ್ದ ಸ್ಕಾಟ್ಲೆಂಡ್‌ನ ಕ್ರೀಡಾಪಟುಗಳು ಮೊದಲು ಹೆಜ್ಜೆ ಹಾಕಿದರು.

ಪಥಸಂಚಲನದ ನಂತರವೂ ಕಾರ್ಯಕ್ರಮಗಳು ಮುಂದುವರಿದವು. ಆಸ್ಟ್ರೇಲಿಯಾದ ಪರಿಸರ ಪ್ರೇಮವನ್ನು ಬಿಂಬಿಸುವ ಕಾರ್ಯಕ್ರಮದ ಕೊನೆಯಲ್ಲಿ ಸಿಡಿಮದ್ದಿನ ಚಿತ್ತಾರವು ಆಗಸವನ್ನು ಚುಂಬಿಸಿದವು. ಉದ್ಘಾಟನಾ ಸಮಾರಂಭದ ಭವ್ಯ ನೋಟ ಮನದಲ್ಲಿ ಅಚ್ಚಾಯಿತು.

ಪ್ರತಿಭಟನೆಯ ಬಿಸಿ: ಸಮಾರಂಭ ನಡೆಯುತ್ತಿದ್ದ ಸಂದರ್ಭದಲ್ಲಿ ಕ್ರೀಡಾಂಗಣದ ಹೊರಗೆ ಪ್ರತಿಭಟನೆ ನಡೆಯಿತು. ಘೋಷಣೆಗಳನ್ನು ಕೂಗುತ್ತ ಸೇರಿದ ಸುಮಾರು 100 ಮಂದಿ ಪ್ರತಿಭಟನಾಕಾರರು ‘ಇದು ಕಾಮನ್‌ವೆಲ್ತ್‌ ಗೇಮ್ಸ್ ಆಲ್ಲ; ಸ್ಟೋಲನ್‌ವೆಲ್ತ್‌ ಗೇಮ್ಸ್‌ (ಕಳವು ಮಾಡಿ ಸಂಪಾದಿಸಿದ ಹಣದ ಆಟ)’ ಎಂದು ಆರೋಪಿಸಿದರು.

ಶುಭಾರಂಭದ ನಿರೀಕ್ಷೆಯಲ್ಲಿ ಬ್ಯಾಡ್ಮಿಂಟನ್‌ ತಂಡ

ಗೋಲ್ಡ್‌ ಕೊಸ್ಟ್‌ (ಪಿಟಿಐ): ಬಲಿಷ್ಠ ಆಟಗಾರರು ಇರುವ ಭಾರತದ ಬ್ಯಾಡ್ಮಿಂಟನ್‌ ತಂಡ ಕ್ರೀಡಾಕೂಟದಲ್ಲಿ ಚಿನ್ನದ ಕನಸಿನೊಂದಿಗೆ ಕಣಕ್ಕೆ ಇಳಿಯಲಿದೆ. ಗುರುವಾರ ನಡೆಯಲಿರುವ ಮಿಶ್ರ ತಂಡ ವಿಭಾಗದ ಚಾಂಪಿಯನ್‌ಷಿಪ್‌ನಲ್ಲಿ ಶ್ರೀಲಂಕಾ ತಂಡದವರು ಭಾರತವನ್ನು ಎದುರಿಸಲಿದ್ದಾರೆ.

‘ಎ’ ಗುಂಪಿನಲ್ಲಿ ಭಾರತ ಸ್ಥಾನ ಪಡೆದಿದ್ದು ಪಾಕಿಸ್ತಾನ ಮತ್ತು ಸ್ಕಾಟ್ಲೆಂಡ್ ಕೂಡ ಇದೇ ಗುಂಪಿನಲ್ಲಿ ಇವೆ. ಸೈನಾ ನೆಹ್ವಾಲ್‌ ಮತ್ತು ಪುರುಷ ವಿಭಾಗದಲ್ಲಿ ಅಗ್ರಶ್ರೇಯಾಂಕ ಗಳಿಸಿರುವ ಕಿದಂಬಿ ಶ್ರೀಕಾಂತ್‌ ಅವರೊಂದಿಗೆ ಪುರುಷರ ಡಬಲ್ಸ್‌ ಜೋಡಿ ಸಾತ್ವಿಕ್‌ ರಣಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಕಣದಲ್ಲಿದ್ದಾರೆ. ಇದು ಭಾರತದ ಭರವಸೆಯನ್ನು ಹೆಚ್ಚಿಸಿದೆ.

2010ರಲ್ಲಿ ಬೆಳ್ಳಿ ಗೆದ್ದಿದ್ದ ಭಾರತ ತಂಡ 2014ರಲ್ಲಿ ಕಂಚಿನ ಪದಕ ಗೆದ್ದಿತ್ತು. ಗ್ಲಾಸ್ಗೊದಲ್ಲಿ ನಡೆದಿದ್ದ ಈ ಕೂಟದ ಪ್ಲೇ ಆಫ್‌ ಹಂತದಲ್ಲಿ ತಂಡ ಸಿಂಗಪುರ ವಿರುದ್ಧ ಸೋತಿತ್ತು.

ಪುಲ್ಲೇಲ ಗೋಪಿಚಂದ್‌ ಗರಡಿಯಲ್ಲಿ ಪಳಗಿರುವ ತಂಡ ಗುಂಪು ಹಂತದಲ್ಲಿ ಸುಲಭವಾಗಿ ಗೆದ್ದು ಮುಂದೆ ಸಾಗುವ ಭರವಸೆಯಲ್ಲಿದೆ. ಆದರೆ ನಂತರ ಮಲೇಷ್ಯಾ ಮತ್ತು ಇಂಗ್ಲೆಂಡ್ ತಂಡಗಳ ಸವಾಲನ್ನು ಎದುರಿಸಬೇಕು.

ಒಂದು ವಾರದ ಹಿಂದೆ ಹಿಮ್ಮಡಿ ನೋವು ಅನುಭವಿಸಿದ್ದ ಪಿ.ವಿ. ಸಿಂಧು ಬದಲಿಗೆ ಗುರುವಾರ ಸೈನಾ ನೆಹ್ವಾಲ್ ಕಣಕ್ಕೆ ಇಳಿಯಲಿದ್ದಾರೆ. ಕರಾರ ಕ್ರೀಡಾಂಗಣದಲ್ಲಿ ನಡೆಯುವ ಹಣಾಹಣಿಯಲ್ಲಿ ಅವರಿಗೆ ಮಧುಶಿಕಾ ದಿಲ್ರುಕ್ಷಿ ಬೆರುವೆಲಗೆ ಎದುರಾಳಿ.

ಮೊದಲ ಪಂದ್ಯದಲ್ಲಿ ಭಾರತದ ಪ್ರಣವ್ ಚೋಪ್ರಾ ಮತ್ತು ಋತ್ವಿಕಾ ಗಡ್ಡೆ ಎದುರಾಳಿ ತಂಡದ ಸಚಿನ್‌ ಡಯಾಸ್ ಮತ್ತು ತಿಲಿನಿ ಪ್ರಮೋದಿಕಾ ಹೆಂಡಹೇವ ಅವರನ್ನು ಎದುರಿಸುವರು. ‌

ಪುರುಷರ ಸಿಂಗಲ್ಸ್‌ನಲ್ಲಿ ಶ್ರೀಕಾಂತ್‌ ಒಲಿಂಪಿಯನ್‌ ನಿಲೂಕಾ ಕರುಣರತ್ನೆ ಎದುರು ಸೆಣಸಲಿದ್ದು ಸಾತ್ವಿಕ್‌ ಮತ್ತು ಚಿರಾಗ್ ಜೋಡಿ ಭುವನೇಕ ಗುಣತಿಲಕ ಮತ್ತು ದಿನುಕಾ ಕರುಣರತ್ನ ಎದುರು ಕಣಕ್ಕೆ ಇಳಿಯುವರು. ಅಶ್ವಿನಿ ಪೊನ್ನಪ್ಪ ಮತ್ತು ಎನ್‌ ಸಿಕ್ಕಿ ರೆಡ್ಡಿ ಜೋಡಿ ತಿಲಿನಿ ಪ್ರಮೋದಿಕಾ ಮತ್ತು ಕವಿಡಿ ಸಿರಿಮನ್ನಗೆ ವಿರುದ್ಧ ಸೆಣಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT