ಶುಕ್ರವಾರ, ಡಿಸೆಂಬರ್ 6, 2019
25 °C
ಪ್ರಯಾಣಿಕರೇ ಸೇರಿ ಅಭಿವೃದ್ಧಿಪಡಿಸಿದ ಕಿರುತಂತ್ರಾಶ

ಸಬ್ಅರ್ಬನ್‌ ರೈಲಿನ ಮಾಹಿತಿಗೆ ಆ್ಯಪ್‌

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಸಬ್ಅರ್ಬನ್‌ ರೈಲಿನ ಮಾಹಿತಿಗೆ ಆ್ಯಪ್‌

ಬೆಂಗಳೂರು: ಸಬ್‌ಅರ್ಬನ್‌ ರೈಲು ಬಳಸುವುದಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಪ್ರಯಾಣಿಕರೇ ಸೇರಿ ಆ್ಯಪ್‌ ಅಭಿವೃದ್ಧಿಪಡಿಸಿದ್ದಾರೆ. ನಗರದಲ್ಲಿ ಸಂಚರಿಸುವ ಅಷ್ಟೂ ರೈಲುಗಳ ಸಮಗ್ರ ವಿವರಗಳನ್ನು ಈ ಆ್ಯಪ್‌ ಮೂಲಕ ಪಡೆಯಬಹುದಾಗಿದೆ.

ಈ ಆ್ಯಪ್‌ ಅಭಿವೃದ್ಧಿಪಡಿಸಲು ‘ಮೊಬಿಜಿನಿ’ ಕಂಪನಿ ತಾಂತ್ರಿಕ ನೆರವನ್ನು ಉಚಿತವಾಗಿ ಒದಗಿಸಿದೆ.

ನಗರದಲ್ಲಿ ಸಬ್ಅರ್ಬನ್‌ ರೈಲು ಸೇವೆ ಹೆಚ್ಚಳದ ಬಗ್ಗೆ ಹೋರಾಟ ಮಾಡುತ್ತಿದ್ದಾಗ ಆರ್‌.ಜೆ. ಪ್ರದೀಪ್‌ ಹಾಗೂ ಮೊಬಿಜಿನಿ ಕಂಪನಿಯ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಕೇಶ್‌ ಚಿನಗುಂಡಿ ಅವರು ಸಂಪರ್ಕಕ್ಕೆ ಬಂದರು. ರೈಲು ಬಳಕೆಗಾಗಿಯೇ ಆ್ಯಪ್‌ ಅಭಿವೃದ್ಧಿಪಡಿಸುವ ಬಗ್ಗೆ ನಾವು ಒಂದು ವರ್ಷದ ಹಿಂದೆಯೇ ಚರ್ಚಿಸಿದ್ದೆವು. ಇದು ಅದು ಈಗ ಕಾರ್ಯರೂಪಕ್ಕೆ ಬರುತ್ತಿದೆ. ನಗರದಲ್ಲಿ ರೈಲು ಬಳಕೆಗೆ ನೆರವಾಗುವ ಸಲುವಾಗಿ ರೂಪಿಸಿದ ಮೊದಲ ಆ್ಯಪ್‌ ಇದು ಎಂದು ಅವರು ತಿಳಿಸಿದರು.

ಗುರುವಾರ ಸಂಜೆ 6 ಗಂಟೆಗೆ ‘ಫೇಸ್‌ಬುಕ್‌ ಲೈವ್‌’ ಮೂಲಕ ಈ ಆ್ಯಪ್‌ ಅನ್ನು ಲೋಕಾರ್ಪಣೆ ಮಾಡಲಾಗುತ್ತಿದೆ ಎಂದು ರೈಲ್ವೆ ಹೋರಾಟಗಾರ ಸುಹಾಸ್‌ ನಾರಾಯಣಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಇದನ್ನು ಗೂಗಲ್‌ ಪ್ಲೇಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಆ್ಯಂಡ್ರಾಯ್ಡ್‌ ಹಾಗೂ ಐಫೋನ್‌ಗಳಲ್ಲಿ ಇದನ್ನು ಬಳಸಬಹುದು. ರೈಲುಗಳ ಹೆಸರು, ಸಂಖ್ಯೆ, ರೈಲು ನಿಲ್ದಾಣ ಹಾಗೂ ಪ್ರದೇಶಗಳ ಆಧಾರದಲ್ಲಿ ಮಾಹಿತಿ ಒದಗಿಸಲಾಗುತ್ತದೆ ಎಂದು ಮೊಬಿಜಿನಿ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ರಾಕೇಶ್‌ ಚಿನಗುಂಡಿ ತಿಳಿಸಿದರು.

‘ರೈಲುಗಳು ಯಾವ ಸ್ಥಳದಲ್ಲಿ ಸಂಚರಿಸುತ್ತಿವೆ ಎಂಬ ಮಾಹಿತಿಯನ್ನೂ ಇದರಲ್ಲಿ ಪಡೆಯಬಹುದು. ಇದನ್ನು ಡೌನ್‌ಲೋಡ್‌ ಮಾಡಿ ಬಳಸುವ ಪ್ರಯಾಣಿಕರೇ ಈ ಕುರಿತ ಮಾಹಿತಿ ಹಂಚಿಕೊಳ್ಳಲು ನೆರವಾಗುತ್ತಾರೆ’ ಎಂದು ಅವರು ತಿಳಿಸಿದರು.

ಇದರಲ್ಲಿ ‘ವರ್ಚ್ಯುವಲ್‌ ಚಾಟ್‌ರೂಮ್‌’ ಸೌಕರ್ಯವನ್ನೂ ಒದಗಿಸಲಾಗಿದೆ. ಯಾರಾದರೂ ರೈಲು ಪ್ರಯಾಣಕ್ಕೆ ಸಂಬಂಧಿಸಿ ಹೆಚ್ಚುವರಿ ಮಾಹಿತಿ ಬಯಸಿದರೆ ಆ್ಯಪ್‌ ಮೂಲಕ ಕೋರಿಕೆ ಸಲ್ಲಿಸಬಹುದು. ಅದನ್ನು ಬಳಸುತ್ತಿರುವ ಅನ್ಯ ಪ್ರಯಾಣಿಕರು ಅವರಲ್ಲಿರುವ ಮಾಹಿತಿ ಹಂಚಿಕೊಳ್ಳಲು ಇದು ನೆರವಾಗಲಿದೆ ಎಂದರು.

‘ವರ್ಷದ ಹಿಂದೆಯೇ ಈ ಆ್ಯಪ್‌ ಅಭಿವೃದ್ಧಿಪಡಿಸಲು ಆರಂಭಿಸಿದ್ದೆವು. ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸುವ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಕೊನೆಯ ತಾಣಕ್ಕೆ ಸಂಪರ್ಕ ಒದಗಿಸುವ ಉದ್ದೇಶ ನಮ್ಮದಾಗಿತ್ತು. ಈ ಕುರಿತ ಮಾತುಕತೆಗಳು ಇನ್ನೂ ಅಂತಿಮಗೊಂಡಿಲ್ಲ. ಶೀಘ್ರವೇ ಈ ಕುರಿತು ನಿರ್ಧಾರಕ್ಕೆ ಬರಲಿದ್ದೇವೆ’ ಎಂದು ಸುಹಾಸ್‌ ತಿಳಿಸಿದರು.

ರೈಲು– ಮೆಟ್ರೊ ಮಾಹಿತಿ

ನಗರದಲ್ಲಿ ಯಶವಂತಪುರ, ಬೈಯಪ್ಪನಹಳ್ಳಿ ಹಾಗೂ ಮೆಜೆಸ್ಟಿಕ್‌ನ ಸಂಗೊಳ್ಳಿ ರಾಯಣ್ಣ ನಗರ ರೈಲು ನಿಲ್ದಾಣಗಳ ಬಳಿ ಮೆಟ್ರೊ ನಿಲ್ದಾಣಗಳೂ ಇವೆ. ಪ್ರಯಾಣಿಕರು ಮೆಟ್ರೊ ರೈಲಿನ ಮಾಹಿತಿಯನ್ನು ಹಾಗೂ ಮೆಟ್ರೊ ಪ್ರಯಾಣಿಕರು ರೈಲಿನ ಕುರಿತ ಮಾಹಿತಿ ಪಡೆಯುವುದಕ್ಕೂ ಈ ಆ್ಯಪ್‌ ನೆರವಾಗುತ್ತದೆ. ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಳ್ಳಲು ಇದು ಸಹಕಾರಿ ಎಂದು ಸುಹಾಸ್‌ ತಿಳಿಸಿದರು.

ಆ್ಯ‍ಪ್‌ನಿಂದ ಏನು ಉಪಯೋಗ?

*   ನಗರದಿಂದ 100 ಕಿ.ಮೀ ವ್ಯಾಪ್ತಿಯ ರೈಲು ನಿಲ್ದಾಣಗಳ ಮಾಹಿತಿ ಇದರಲ್ಲಿದೆ

*   ನಗರಕ್ಕೆ ಬಂದು ಹೋಗುವ ರೈಲುಗಳ ವೇಳಾಪಟ್ಟಿ ಲಭ್ಯ

*   ಸಮೀಪದ ರೈಲು ನಿಲ್ದಾಣ ಎಲ್ಲಿದೆ ಎಂಬುದನ್ನು ತಿಳಿಸುತ್ತದೆ

*   ಸಮೀಪದ ನಿಲ್ದಾಣದಲ್ಲಿ ಯಾವ ರೈಲು ಎಷ್ಟು ಹೊತ್ತಿಗೆ ಹೊರಡಲಿದೆ ಎಂದು ತಿಳಿದುಕೊಳ್ಳಬಹುದು

ಪ್ರತಿಕ್ರಿಯಿಸಿ (+)