ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆ ಅಕ್ರಮ ಪರಿಶೀಲನೆ: ಹೈಕೋರ್ಟ್‌ಗೆ ‘ಸುಪ್ರೀಂ’ ಸೂಚನೆ

Last Updated 4 ಏಪ್ರಿಲ್ 2018, 20:09 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ವು 2011ನೇ ಸಾಲಿನ ಗ್ರೂಪ್‌ ‘ಎ’ ಮತ್ತು ಗ್ರೂಪ್‌ ‘ಬಿ’ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಕ್ಕೆ ನಡೆಸಿದ್ದ ಪ್ರಕ್ರಿಯೆ ರದ್ದುಗೊಳಿಸಿ ರಾಜ್ಯ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಬುಧವಾರ ಎತ್ತಿ ಹಿಡಿದಿದೆ.

ಆದರೆ ಈ ನೇಮಕಾತಿ ಸಂದರ್ಭದಲ್ಲಿ ನಡೆಸಲಾದ ಮುಖ್ಯ ಲಿಖಿತ ಪರೀಕ್ಷೆಯೂ ಅಕ್ರಮದಿಂದ ಕೂಡಿದೆಯೇ ಎಂಬುದನ್ನು ಪರಿಶೀಲಿಸಿ ಮೂರು ತಿಂಗಳಿನಲ್ಲಿ ವರದಿ ಸಲ್ಲಿಸುವಂತೆ ಹೈಕೋರ್ಟ್ ಗೆ ಸೂಚಿಸಿದೆ.

ಆಯ್ಕೆ ಪ್ರಕ್ರಿಯೆ ರದ್ದುಪಡಿಸಿ ರಾಜ್ಯ ಹೈಕೋರ್ಟ್‌ ಮಾರ್ಚ್‌ 9ರಂದುನೀಡಿದ್ದ ಆದೇಶ ಪ್ರಶ್ನಿಸಿ ಅಭ್ಯರ್ಥಿ ಸಿ.ಅವಿನಾಶ್‌ ಮತ್ತಿತರರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಆದರ್ಶ ಕುಮಾರ್‌ ಗೋಯಲ್‌ ಹಾಗೂ ಆರ್‌.ಎಫ್‌. ನಾರಿಮನ್‌ ಅವರಿದ್ದ ಪೀಠ ಈ ನಿರ್ದೇಶನ ನೀಡಿತು.

‘ಮೌಖಿಕ ಸಂದರ್ಶನ ಪ್ರಕ್ರಿಯೆ ಪೂರ್ಣಗೊಳಿಸಿದ ಕೂಡಲೇ ನೇಮಕಾತಿ ಪಟ್ಟಿ ಸಿದ್ಧಪಡಿಸಲಾಗಿದೆ. ನಂತರವಷ್ಟೇ ಅಕ್ರಮದ ಆರೋಪ ಕೇಳಿ ಬಂದಿದೆ. ಹಾಗಾಗಿ ಇಡೀ ನೇಮಕಾತಿ ಪ್ರಕ್ರಿಯೆಯನ್ನೇ ರದ್ದುಪಡಿಸಿ ಮಾರ್ಚ್ 9ರಂದು ಹೈಕೋರ್ಟ್‌ ನೀಡಿರುವ ಆದೇಶವನ್ನು ನಾವು ಎತ್ತಿ ಹಿಡಿದಿದ್ದೇವೆ’ ಎಂದು ಪೀಠ ತಿಳಿಸಿತು.

ಬಾರ್‌ ಕೋಡಿಂಗ್‌ ವ್ಯವಸ್ಥೆಯೊಂದಿಗೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ನಡೆದಿರುವುದರಿಂದ ಮುಖ್ಯ ಲಿಖಿತ ಪರೀಕ್ಷೆ ಕಳಂಕರಹಿತ
ವಾಗಿದೆ. ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿ ಅಭ್ಯರ್ಥಿಗಳಿಗೂ ಉತ್ತರ ಪತ್ರಿಕೆಗಳ ಝೆರಾಕ್ಸ್‌ ಪ್ರತಿಯನ್ನು ಒದಗಿಸಲಾಗಿದೆ ಎಂದು ಕೆಪಿಎಸ್‌ಸಿ ಪರ ವಕೀಲ ಎಸ್.ಎನ್. ಭಟ್ ತಿಳಿಸಿದರು. ಲಿಖಿತ ಪರೀಕ್ಷಾ ಪ್ರಕ್ರಿಯೆಯು ಅಕ್ರಮದಿಂದ ಕೂಡಿಲ್ಲ ಎಂಬುದು ಮನವರಿಕೆಯಾಗಬೇಕು. ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನದಿಂದ ಮಾತ್ರ ಎಲ್ಲ ಸಂಶಯಗಳಿಗೂ ತೆರೆ ಬೀಳಲಿದೆ ಎಂದು ಪೀಠ ಹೇಳಿತು.

ಆಯ್ಕೆಯಾಗಿದ್ದ ಅಭ್ಯರ್ಥಿಗಳ ಪರ ವಕೀಲರಾದ ವಿ.ಗಿರಿ,ಗುರು ಕೃಷ್ಣಕುಮಾರ್‌, ರಾಜು ರಾಮಚಂದ್ರನ್‌ ಹಾಗೂ ಸಜ್ಜನ್‌ ಪೂವಯ್ಯ, ಆಯ್ಕೆ
ಯಾಗದ ಅಭ್ಯರ್ಥಿಗಳ ಪರ ವಕೀಲ ಎಚ್‌.ಎನ್‌. ನಾಗಮೋಹನದಾಸ್‌ ವಾದ ಮಂಡಿಸಿದರು.

ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ)ಯ ನಿರ್ದೇಶನವು ಸರಿಯಾದದ್ದು ಎಂಬ ಕಾರಣದಿಂದ ನೇಮಕಾತಿ ಆದೇಶ ನೀಡಲಾಗಿದೆ. ನ್ಯಾಯಾಧೀಶರ ನೇತೃತ್ವದ ಸಮಿತಿಯೊಂದನ್ನು ರಚಿಸಿ ಪ್ರತಿ ಅಭ್ಯರ್ಥಿಯ ಅಭಿಪ್ರಾಯ ಸಂಗ್ರಹಿಸುವ ಮೂಲಕ ಕಳಂಕಿತರನ್ನು ಬೇರ್ಪಡಿಸಬಹುದಾಗಿದೆ ಎಂದು ತಿಳಿಸಿದ ಸರ್ಕಾರದ ಪರ ವಕೀಲರು, ಎಲ್ಲ ಅಭ್ಯರ್ಥಿಗಳಿಗೂ ಹೊಸದಾಗಿ ಸಂದರ್ಶನ ಏರ್ಪಡಿಸಬೇಕೆಂಬ ನ್ಯಾಯಪೀಠದ ಸಲಹೆಗೆ ಸಮ್ಮತಿ ಸೂಚಿಸಿತು.

ಒಟ್ಟು 362 ಹುದ್ದೆಗಳ ನೇಮಕಾತಿಗಾಗಿ ನಡೆದಿದ್ದ ಪ್ರಕ್ರಿಯೆಯು ಅಕ್ರಮದಿಂದ ಕೂಡಿದೆ ಎಂದು 2013ರಲ್ಲಿ ಸಿಐಡಿ ತನಿಖೆ ನಡೆಸಿ ವರದಿ ಸಲ್ಲಿಸಿದ ಕೂಡಲೇ ನೇಮಕಾತಿ ಅಧಿಸೂಚನೆ ರದ್ದುಗೊಳಿಸಿದ್ದ ಸರ್ಕಾರ, 2016ರ ಅಕ್ಟೋಬರ್‌ 19ರಂದು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ನೀಡಿದ್ದ ನಿರ್ದೇಶನದ ಮೇರೆಗೆ ಕೆಲವರಿಗೆ ಮಾತ್ರ ನೇಮಕಾತಿ ಆದೇಶ ನೀಡಿತ್ತು.

ಅಕ್ರಮ ನಡೆದಿದ್ದಲ್ಲಿ ಮತ್ತೆ ಸಂದರ್ಶನ’

‘ಮುಖ್ಯ ಲಿಖಿತ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆಯೇ ಎಂಬುದರ ಬಗ್ಗೆ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಪ್ರಸ್ತಾಪಿಸಿಲ್ಲ. ಬದಲಿಗೆ, ಮೌಖಿಕ ಸಂದರ್ಶನ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವುದರಿಂದ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಹೇಳಿದೆ.

ಒಂದೊಮ್ಮೆ, ಮುಖ್ಯ ಲಿಖಿತ ಪರೀಕ್ಷೆಯ ಮೌಲ್ಯಮಾಪಕರೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಶಂಕೆ ಇದ್ದರೆ ಇಡೀ ನೇಮಕಾತಿ ಪ್ರಕ್ರಿಯೆಗೆ ಮಾನ್ಯತೆ ನೀಡುವುದು ಸರಿಯಲ್ಲ. ಮೌಖಿಕ ಸಂದರ್ಶನ ಪ್ರಕ್ರಿಯೆಯಲ್ಲಿ ಮಾತ್ರ ಅಕ್ರಮ ನಡೆದಿದ್ದಲ್ಲಿ ಹೊಸದಾಗಿ ಸಂದರ್ಶನ ನಡೆಸಿ ಅನ್ಯಾಯ ಸರಿಪಡಿಸಬಹುದು' ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT