ಶುಕ್ರವಾರ, ಡಿಸೆಂಬರ್ 6, 2019
26 °C
ಟಿಕೆಟ್‌ ಹಂಚಿಕೆಗೆ ಅಭ್ಯರ್ಥಿಗಳ ಮಾಹಿತಿ ಸಂಗ್ರಹ

ಬಿಜೆಪಿ ಮೊದಲ ಪಟ್ಟಿ 15ರೊಳಗೆ ಬಿಡುಗಡೆ

Published:
Updated:
ಬಿಜೆಪಿ ಮೊದಲ ಪಟ್ಟಿ 15ರೊಳಗೆ ಬಿಡುಗಡೆ

ಬೆಂಗಳೂರು: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಇದೇ 15 ರೊಳಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಮೊದಲ ಕಂತಿನಲ್ಲಿ 121 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಯಾವುದೇ ವಿವಾದಗಳಿಗೆ ಸಿಲುಕದ ಹಾಲಿ ಶಾಸಕರಿಗೆ ಟಿಕೆಟ್‌ ಸಿಗಲಿದೆ. ಕೆಲವು ಶಾಸಕರ ಕ್ಷೇತ್ರ ಬದಲಾಗುವ ಸಾಧ್ಯತೆಯೂ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ವರಿಷ್ಠರಿಗೆ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯನ್ನು ಕಳುಹಿಸಲು ಅಭಿಪ್ರಾಯ ಸಂಗ್ರಹಿಸುವ ಕಾರ್ಯಕ್ಕೆ ಯಲಹಂಕ ಬಳಿಯ ರಮಣಶ್ರೀ ಕಂಫರ್ಟ್ಸ್ ರೆಸಾರ್ಟ್‌ನಲ್ಲಿ ಬುಧವಾರ ಚಾಲನೆ ನೀಡಲಾಯಿತು. ಮೂರು ದಿನಗಳ ಕಾಲ ನಡೆಯುವ ಮಾಹಿತಿ ಸಂಗ್ರಹ ಕಾರ್ಯದಲ್ಲಿ ವಿವಿಧ ಜಿಲ್ಲಾ ಘಟಕಗಳ ಅಧ್ಯಕ್ಷರು ಭಾಗಿಯಾಗಲಿದ್ದಾರೆ. ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡಲು ಸಭೆಯಲ್ಲಿ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬಲ್ಲ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದರೆ ಗೆಲುವು ಸಾಧ್ಯ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.

ಮಾಲೀಕಯ್ಯ ಗುತ್ತೆದಾರ್‌ ಸೇರ್ಪಡೆಯಿಂದ ಅನುಕೂಲವಾಗಲಿದೆ. ಆದರೆ, ಬಸನಗೌಡ ಪಾಟೀಲ ಸೇರ್ಪಡೆಗೆ ಕೆಲವರಿಂದ ವಿರೋಧ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.

ಬುಧವಾರ ಬೆಂಗಳೂರು ನಗರ ಸೇರಿ 12 ಜಿಲ್ಲೆಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಭಾಗವಹಿಸಿದ್ದರು. ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳಿಗೆ ವಿವರಗಳನ್ನು ನೀಡಲು ತಲಾ ಹತ್ತು ನಿಮಿಷಗಳ ಅವಧಿ ನೀಡಲಾಗಿತ್ತು ಎಂದು ಪಕ್ಷದ ಮೂಲಗಳು ಹೇಳಿವೆ.

ಈ ಸಭೆಯಲ್ಲಿ ಸಂಗ್ರಹಿಸಿದ ಟಿಕೆಟ್‌ ಆಕಾಂಕ್ಷಿಗಳ ಮಾಹಿತಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೆ ನೀಡಲಾಗುತ್ತದೆ. ಅಂತಿಮವಾಗಿ ಶಾ ಅವರೇ ಟಿಕೆಟ್‌ ಯಾರಿಗೆ ನೀಡಬೇಕು ಎನ್ನುವುದನ್ನು ನಿರ್ಧರಿಸುತ್ತಾರೆ. ಈಗಾಗಲೇ ಅಭ್ಯರ್ಥಿಗಳ ಕುರಿತು ನಾಲ್ಕು ಬಾರಿ ಸಮೀಕ್ಷೆ ನಡೆಸಲಾಗಿದೆ.

ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್ ‌, ರಾಜ್ಯ ಉಸ್ತುವಾರಿ ಮುರುಳೀಧರರಾವ್‌, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್‌, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್‌ಕುಮಾರ್‌ ಹಾಜರಿದ್ದರು.‌‌

9 ಕ್ಕೆ ಸಂಸದೀಯ ಸಭೆ: ರಾಜ್ಯ ಬಿಜೆಪಿ ಅಧ್ಯಕ್ಷರು ಇದೇ 8 ರಂದು ದೆಹಲಿಗೆ ತೆರಳಲಿದ್ದು, 9ಕ್ಕೆ ಕೇಂದ್ರ ಸಂಸದೀಯ ಸಮಿತಿ ಸಭೆ ನಡೆಯಲಿದೆ.

ಯತ್ನಾಳ, ಖೂಬಾ, ನಾಗಪ್ಪ ಸೇರ್ಪಡೆ ವಿಧಾನಪರಿಷತ್‌ ಸದಸ್ಯ ಬಸನಗೌಡ ಪಾಟೀಲ ಯತ್ನಾಳ, ಶಾಸಕ ಮಲ್ಲಿಕಾರ್ಜುನ ಖೂಬಾ, ಮಾಜಿ ಸಚಿವ ನಾಗಪ್ಪ ಸಾಲೋಣಿ ಮತ್ತು ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ ಅನ್ವರಿ ಬುಧವಾರ ಬಿಜೆಪಿ ಸೇರಿದರು.  ಬಿ.ಎಸ್‌.ಯಡಿಯೂರಪ್ಪ ಪಕ್ಷದ ಧ್ವಜ ನೀಡುವ ಮೂಲಕ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ, ವಿಜಯಪುರ ಜಿಲ್ಲೆ ಬಸವಕಲ್ಯಾಣದಲ್ಲಿ  ಇದೇ 8 ರಂದು ವಿಜಯಪುರದಲ್ಲಿ ಸಮಾವೇಶ ನಡೆಸಲಾಗುವುದು. ಸಮಾವೇಶದಲ್ಲಿ ಮಾಲೀಕಯ್ಯ ಗುತ್ತೇದಾರ್‌ ಜತೆ ಇನ್ನೂ ನಾಲ್ಕು ಮಂದಿ ಕಾಂಗ್ರೆಸ್‌ ಶಾಸಕರು ಪಕ್ಷ ಸೇರಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖೂಬಾ, ಮೋದಿ ಅವರ ಚಿಂತನೆ ಮತ್ತು ಕಾರ್ಯ ವೈಖರಿಯನ್ನು ಮೆಚ್ಚಿ ಬಿಜೆಪಿ ಸೇರಿದ್ದೇನೆ. ಅನಗತ್ಯವಾಗಿ ಕೆಲವರು ನನ್ನ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಜೆಪಿಯಲ್ಲಿ ಟಿಕೆಟ್‌ ಸಿಗದೇ ಇದ್ದರೂ ಪಕ್ಷದಲ್ಲೇ ಉಳಿಯುತ್ತೇನೆ ಹೇಳಿದರು.

ಕಳಂಕಿತರಿಗೆ ಟಿಕೆಟ್ ಇಲ್ಲ:  ಈ ಬಾರಿ ಕಳಂಕಿತರಿಗೆ ಟಿಕೆಟ್‌ ನೀಡುವುದಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಕ್ಷದ ವರಿಷ್ಠರ ಸೂಚನೆ ಅನ್ವಯ ಕಳಂಕಿತರನ್ನು ದೂರ ಇಡಲಾಗುವುದು ಎಂದರು.

ಪ್ರತಿಕ್ರಿಯಿಸಿ (+)