ಶುಕ್ರವಾರ, ಡಿಸೆಂಬರ್ 6, 2019
25 °C

ಮೀನಿನ ಬಿರಿಯಾನಿ ಸವಿ ಬಲ್ಲಿರಾ?

Published:
Updated:
ಮೀನಿನ ಬಿರಿಯಾನಿ ಸವಿ ಬಲ್ಲಿರಾ?

ಬಾಯಲ್ಲಿ ನೀರೂರಿಸುವ ಏಡಿ ಮಸಾಲ ಕರಿ, ಸುವಾಸನೆಯಿಂದಲೇ ತಿನ್ನಲು ಆಸೆ ಹುಟ್ಟಿಸುವ ಮೀನು ಬಿರಿಯಾನಿ, ಮೀಟ್‌ ಬೋಟ್‌ (ಚಿಕನ್‌ ಪೀಸ್‌) ತುಂಡುಗಳನ್ನು ಬಗೆಬಗೆ ಸಾಸ್‌ಗಳಲ್ಲಿ ಅದ್ದಿ ತಿನ್ನುತ್ತಿದ್ದರೆ ಸಿಗುವ ಮಜವೇ ಬೇರೆ. ಪೂರ್ವ ರಾಜ್ಯಗಳಾದ ಒಡಿಶಾ, ಅಸ್ಸಾಂ, ಮೇಘಾಲಯ ಹಾಗೂ ಪಶ್ಚಿಮ ಬಂಗಾಳದ ಆಹಾರ ಪದಾರ್ಥಗಳ ಹೊಸ ರುಚಿಯನ್ನು ಯುಬಿ ಸಿಟಿ ಸಮೀಪದ ಈಟ್‌ ವಾಟರ್‌ ಹೋಟೆಲ್‌ನಲ್ಲಿ ಆಸ್ವಾದಿಸಬಹುದು. ಅಸ್ಸಾಮಿ ಅಡುಗೆ ಶೈಲಿಯಲ್ಲಿ ತಯಾರಾದ ಬಗೆ ಬಗೆ ಬಿರಿಯಾನಿಗಳ ರುಚಿಯಂತೂ ವ್ಹಾಹ್! ಅನಿಸುವಂತಿದೆ.

ರೆಸ್ಟೊರೆಂಟ್‌ನ ಒಳಗೆ ಕಾಲಿಟ್ಟೊಡನೆ ಅಮೂರ್ತ ಶೈಲಿಯ ಒಳಾಂಗಣ ವಿನ್ಯಾಸ ಸ್ವಾಗತಿಸುತ್ತದೆ. ದೇಸಿ ಶೈಲಿಯ ಆಹಾರ ರುಚಿ ತಿಂದು ಹೊಸ ರುಚಿ ಬಯಸುವವರು ಈ ಹೋಟೆಲ್‌ಗೆ ಬರಬಹುದು. ನಾನು ಮೊದಲು ಸ್ಪ್ಲಿಟ್‌ ಪೀ ಅಂಡ್‌ ರಾ ಮ್ಯಾಂಗೊ ಸೂಪ್‌ ರುಚಿ ನೋಡಿದೆ. ವೈಟ್‌ ಕ್ರೀಮ್‌ನಿಂದ ಅಲಂಕಾರ ಮಾಡಿದ್ದ ಸೂಪ್‌ ನೋಡಲು ಎಷ್ಟು ಆಕರ್ಷಕವಾಗಿತ್ತೋ, ರುಚಿಯೂ ಅಷ್ಟೇ ಚೆನ್ನಾಗಿತ್ತು.

ಬಳಿಕ ‘ಶುಕ್ಲೊ ಮವಸೆ ವಿತ್‌ ಫ್ರೈಡ್‌ ಲೆಂಟಿಲ್ಸ್‌ ಡಂಪ್ಲಿಂಗ್ಸ್‌’ ಟೇಬಲ್‌ಗೆ ತಂದಿಟ್ಟರು. ನೋಡಲು ಬಾಳೆಕಾಯಿ ಚಿಪ್ಸ್‌ನಂತಿತ್ತು. ಪಕ್ಕದಲ್ಲಿ wಕೆಂಪು, ಹಸಿರು, ಬಿಳಿ ಬಣ್ಣದ ಸಾಸ್‌ಗಳು, ಒಂದೊಂದು ಬಗೆಯ ಸಾಸ್‌ನಲ್ಲಿ ಅದ್ದಿ ತಿಂದೆ. ರುಚಿ ಪರವಾಗಿಲ್ಲ ಅಂದುಕೊಳ್ಳುತ್ತಿರುವಾಗಲೇ ‘ಸರ್‌ ನಮ್ಮಲ್ಲಿ ಯಾವುದೇ ಆಹಾರ ಪದಾರ್ಥಗಳು ರೆಡಿಮೇಡ್‌ ಅಲ್ಲ. ಗ್ರಾಹಕರಿಂದ ಬೇಡಿಕೆ ಬಂದ 15ರಿಂದ 20 ನಿಮಿಷಗಳಲ್ಲಿ ಪದಾರ್ಥಗಳನ್ನು ಸಿದ್ಧಪಡಿಸುತ್ತೇವೆ’ ಎನ್ನುತ್ತಲೇ ಬೆಂಗಾಲಿ ಬನಾನಾ ಲೀಫ್‌ ರ್‍ಯಾಪ್ ಸಾಸ್‌, ಕೋಶಾ ಡಿಪ್ ತಂದು ಮುಂದಿಟ್ಟರು ಶೆಫ್‌ ಇಂದ್ರನೀಲ್‌ ಚೌಧರಿ.

ಬಳಿಕ ರುಚಿ ನೋಡಿದ್ದು ಮೀನಿನ ಬಿರಿಯಾನಿ. ಒಂದು ಚಮಚ ತೆಗೆದು ಬಾಯಿಗಿಟ್ಟೆ. ಮಸಾಲೆಯಿಂದ ಕೂಡಿದ ಬಿರಿಯಾನಿಯ ರುಚಿ ಇಷ್ಟವಾಯಿತು. ಅಸ್ಸಾಂ ಶೈಲಿಯ ಹೊಸ ರುಚಿ ಎನಿಸಿತು. ಬೆಂದಿದ್ದ ಮೀನಿನ ತುಂಡುಗಳು ಬಿರಿಯಾನಿಯನ್ನು ಪೂರ್ತಿ ಖಾಲಿ ಮಾಡಿಸಿದವು. ಬಿರಿಯಾನಿ ರುಚಿ ನೋಡಿದವರಿಗೆ ಹೆಚ್ಚುಕಡಿಮೆ ಅದೇ ಅನುಭವವೇ ಸಿಗುತ್ತದೆ. ಆದರೆ ಬಳಸುವ ಮಸಾಲೆ, ಮಾಡುವ ವಿಧಾನದಿಂದ ತುಸು ಭಿನ್ನ ಎನಿಸಿಕೊಳ್ಳುತ್ತದೆ.

ಅಸ್ಸಾಮಿ ಖಾದ್ಯಗಳಾದ ಸಾಸಿವೆ ಎಣ್ಣೆಯಿಂದ ಮಾಡಿರುವಂತಹ ಸ್ಮೋಕ್ಡ್‌ ಅವುರ್ಬೆಜಿನ್‌ ಡಿಪ್‌, ಕಫೀರ್‌ ಲೈಮ್‌ ಸಾಸ್‌ ಡಿಪ್‌, , ಕುಚೊ ನಿಮ್ಕಿ ಸ್ಟಾರ್ಟರ್ಸ್‌ಗಳಲ್ಲಿ ಇಷ್ಟವಾದರೆ, ಸ್ಪಿಲ್ಟ್‌ ಪೀಸ್‌ ರಾ ಮ್ಯಾಂಗೋ ಸೂಪ್‌ ಹುಳಿ, ಖಾರದಿಂದ ಇಷ್ಟವಾಗುತ್ತದೆ. ಒರಿಸ್ಸಾ ಖಾದ್ಯಗಳಾದ ವೆಗ್ಗಿ ಚಾಟ್‌, ನಾನ್‌ ವೆಜ್‌ ಬೋರಾ ಪ್ಲಾಟೆರ್‌, ಫಿಶ್‌ ಪ್ಲಾಟೆರ್‌ ಮಟನ್‌ ಪೋರಾ ಖಾದ್ಯಗಳ ಹೊಸ ರುಚಿ ನೋಡಬಹುದು.

‘ನಮ್ಮಲ್ಲಿ ಮಾಂಸಾಹಾರಕ್ಕೆ ಬೇಡಿಕೆ ಹೆಚ್ಚು. ಆದರಲ್ಲೂ ಕೇರಳ ಮೀನು, ಏಡಿ ಮಸಾಲ ಕರಿ, ಸಿಗಡಿ ಬಿರಿಯಾನಿ, ಫಿಷ್ ಲಾಲಿಪಾಪ್‌ ಮತ್ತು ಫಿಷ್‌ ಕಬಾಬ್‌ ಹಾಗೂ ಕೋಸ್ಟಲ್‌ ಮಟನ್ ಪದಾರ್ಥಗಳನ್ನು ಜನರು ಇಷ್ಟಪಡುತ್ತಾರೆ. ಅಡುಗೆ ಮಾಡುವಾಗ ಬ್ಲಾಕ್‌ ಸಾಲ್ಟ್‌ ಬಳಸುತ್ತೇವೆ. ಅದು ಜೀರ್ಣ ಶಕ್ತಿ ಹೆಚ್ಚಿಸುತ್ತದೆ’ ಎಂದು ಇಂದ್ರನೀಲ್‌ ತಿಳಿಸಿದರು.

ಡೆಸರ್ಟ್‌ನಲ್ಲಿ ಎಳನೀರು, ಮ್ಯಾಂಗೋ ರೆಲಿಷ್‌ ಐಸ್‌ಕ್ರೀಂ, ಕೇಕ್‌, ಹಲವು ಬಗೆಯ ಹಣ್ಣಿನ ಜ್ಯೂಸ್‌ ಸವಿದು ಊಟ ಮುಗಿಸಬಹುದು. ಇಲ್ಲಿ ಪಾನಿಪುರಿ ಕೂಡ ಸಿಗುತ್ತದೆ. ಈ ರೆಸ್ಟೋರೆಂಟ್‌ ಅನ್ನು ನಗರದಲ್ಲಿ 2017ರ ಡಿಸೆಂಬರ್‌ ತಿಂಗಳಲ್ಲಿ ಪ್ರೊಎಮ್‌ ಹಾಸ್ಪಿಟಾಲಿಟಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಚಿರಾಗ್‌ ಪಾಲ್‌ ಅವರು ಪ್ರಾರಂಭಿಸಿದರು. 

ಹೋಟೆಲ್‌: ‘ಈಟ್‌ ವಾಟರ್‌’ (ಪೂರ್ವ ಭಾರತ ಶೈಲಿ)
ಇಬ್ಬರಿಗೆ: ₹1,000
ಸಮಯ: ಮಧ್ಯಾಹ್ನ 12ರಿಂದ 3.30ರವರೆಗೆ. ರಾತ್ರಿ 7ರಿಂದ 10.30ರವರೆಗೆ
ಸ್ಥಳ: ಲ್ಯಾವೆಲ್ಲೆ ರಸ್ತೆ, ಯುಬಿ ಸಿಟಿ ಸಮೀಪ ಬೆಂಗಳೂರು
ಮಾಹಿತಿಗೆ: 93424 83454

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು