ಮಂಗಳವಾರ, ಆಗಸ್ಟ್ 11, 2020
26 °C

ರಜೆ ಬಂತು ಟೂರ್ ಹೋಗೋಣ್ವಾ

ಕಲಾವತಿ ಬೈಚಬಾಳ Updated:

ಅಕ್ಷರ ಗಾತ್ರ : | |

ರಜೆ ಬಂತು ಟೂರ್ ಹೋಗೋಣ್ವಾ

ಬೆಂಗಳೂರಿನ ಬೀಸಲ ತಾಪಕ್ಕೆ ತಣಿದು, ತಣ್ಣನೆ ವಾತಾವರಣದತ್ತ ಮಕ್ಕಳನ್ನೆಲ್ಲ ಬೇಸಿಗೆ ರಜೆಗೆಂದು ಕರೆದೊಯ್ಯುವ ಆತುರದಲ್ಲಿ ಪಾಲಕರೂ ಇದ್ದಾರೆ. ಈ ವರ್ಷದ ಅಂತಿಮ ಪರೀಕ್ಷೆ ಬರೆಯುತ್ತಿರುವ ಸಾಕಷ್ಟು ಮಕ್ಕಳು ತಮ್ಮ ಬೇಸಿಗೆ ರಜೆಯನ್ನು ಮೋಜು ಮಸ್ತಿಯಿಂದ ಕಳೆಯಲು ಕಾತುರರಾಗಿದ್ದಾರೆ.

ವರ್ಷಾನುಗಟ್ಟಲೆ ರಜಾದಿನಗಳ ಮಜಕ್ಕಾಗಿ ಕಾದ ಮಕ್ಕಳು ಮತ್ತು ಒತ್ತಡದ ಜೀವನವನ್ನು ಒಂದಷ್ಟು ಕಾಲ ಕುಟುಂಬದೊಂದಿಗೆ ಕಳೆಯಲು, ಬೇಸಿಗೆ ವಿರಾಮದ ದಿನಗಳು ಆನಂದಕರವಾಗಿಲು ಎಲ್ಲಿ ಪ್ರವಾಸ ಕೈಗೊಂಡರೆ ಸೂಕ್ತ. ಈ ಬಾರಿ ಮಕ್ಕಳಿಗೆ ಏನು ತೋರಿಸುವುದು, ಎಲ್ಲಿ ಕರೆದೊಯ್ಯುವುದು ಎನ್ನುವ ನೂರಾರು ಯೋಜನೆಗಳನ್ನು ಪಾಲಕರು ಈಗಾಗಲೇ ಸಿದ್ಧ ಮಾಡಿಕೊಂಡಿದ್ದಾರೆ.

ಕೆಲವರು ಅಜ್ಜಿ ಮನೆ, ತವರುಮನೆ, ಬಂಧು ಬಳಗದವರ ಮನೆಯಲ್ಲಿಯೇ ರಜಾ ದಿನಗಳನ್ನು ಕಳೆಯುವುದು ಸಾಮಾನ್ಯ. ಆದರೆ ರಜಾ ದಿನಗಳನ್ನು ಪ್ರವಾಸದಲ್ಲಿ ಕಳೆಯುವ ಪ್ರವಾಸ ಪ್ರಿಯರೂ ಇದ್ದಾರೆ.  ಅಂತವರ ಪುಟ್ಟ ಪುಟ್ಟ ಪ್ರವಾಸ ಯೋಜನೆಗಳ ದೊಡ್ಡ ದೊಡ್ಡ ಸಂತೋಷದ ಮಾತುಗಳು ಇಲ್ಲಿವೆ.

ಪ್ರತಿ ವರ್ಷನೂ ಮಕ್ಕಳನ್ನು ಬೇಸಿಗೆ ರಜೆಗೆ ದೂರದ ಊರುಗಳಿಗೆ ಕರೆದುಕೊಂಡು ಹೋಗ್ತಿದ್ದೀವಿ. ಈ ಸಲನೂ ಬರು ಏಪ್ರಿಲ್‌ ಅಥವಾ ಮೇ ತಿಂಗಳದಾಗ ಕೊಲ್ಹಾಪುರ, ಮಹಾಬಳೇಶ್ವರ, ಅಕ್ಲೋಜ್ ವಾಟರ್‌ ಫಾಲ್ಸ್ ನೋಡಾಕ ಹೋಗಬೇಕು ಅಂದುಕೊಂಡಿವಿ.

ಒಂದೆರಡು ದಿನದ ಪ್ರವಾಸ ನಮ್ಮದು. ಮಕ್ಕಳು ಎಂಜಾಯ್‌ ಮಾಡ್ಲಿಕ್ಕೆ ಅಲ್ಲಿ ವಾಟರ್‌ ಫಾಲ್ಸ್, ಸಾಕಷ್ಟು ವಾಟರ್‌ ಗೇಮ್‌ಗಳನ್ನು ಆಡಬಹುದು. ಗಾರ್ಡನ್‌ ಕೂಡ ಇದೆ. ಕೊಲ್ಹಾಪುರ ಮಹಾಲಕ್ಷ್ಮೀ ದೇವಸ್ಥಾನ ನೋಡಿ, ಖುಷಿಯಾಗಿ ಕುಟುಂಬದ ಜೊತೆ ಸಮಯ ಕಳಿಲಿಕ್ಕೆ ಇದು ಸೂಕ್ತ ಅನಿಸಿದೆ ಎಂದು ತಮ್ಮ ರಜಾದಿನದ ಯೋಜನೆಗಳನ್ನು ಜಯಗನರದ ನಿವಾಸಿ ಬೇಬಿ ರಾಜಶೇಖರ್‌ ಹಂಚಿಕೊಂಡಿದ್ದಾರೆ.

ಮೂಲತ: ನಾವು ಬಾಗಲಕೋಟೆ ಜಿಲ್ಲೆಯವರು. ತವರು ಮನೆ ನೆಪದಾಗ ಈ ಬ್ಯಾಸಿಗೆ ರಜಾದಿನಗಳನ್ನ ಅಲ್ಲೆ ಕಳಿಬೇಕು, ಮಕ್ಕಳಿಗೆ ಅಲ್ಲಿನ ಐತಿಹಾಸಿಕ ಸ್ಥಳಗಳನ್ನು ತೋರಿಸಬೇಕು ಅಂದುಕೊಂಡಿದ್ದೀವಿ. ಆಲಮಟ್ಟಿಯ ಉದ್ಯಾನವನ, ಲಾಲಬಹದ್ದೂರ್‌ ಶಾಸ್ತ್ರೀ ಆಣೆಕಟ್ಟು, ಬದಾಮಿ, ಪಟ್ಟದಕಲ್ಲು, ಐಹೊಳೆ, ಮೇಣಬಸದಿ, ಹಂಪಿ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ ಹೀಗೆ ಹತ್ತಾರು ಐತಿಹಾಸಿಕ ಸ್ಥಳಗಳನ್ನು ತೋರಿಸಬೇಕು ಅಂದುಕೊಂಡ್ಡಿವಿ.

ಮಕ್ಕಳು ಪಠ್ಯದಲ್ಲಿ ಓದುವ ಇತಿಹಾಸ ಅಷ್ಟಕ್ಕೆ ಸೀಮಿತ ಆಗದೆ, ಅದನ್ನ ಕಣ್ಣಾರೆ ನೋಡಿ ಇನ್ನೂ ಹೆಚ್ಚಿನದನ್ನು ತಿಳಿದುಕೊಳ್ಳಬೇಕು. ಪಾರಂಪರಿಕ ಕಟ್ಟಡಗಳ ಪರಿಚಯ ಅವರಿಗೆ ಮಾಡಿಕೋಡಬೇಕು. ರಜಾದಿನಗಳು ಕೇವಲ ಮೋಜು ಮಸ್ತಿಗಷ್ಟೆ ಸೀಮಿತ ಆಗದೆ, ಅವರ ವಿದ್ಯಾಭ್ಯಾಸಕ್ಕೂ ಸಹಾಯ ಆಗಬೇಕು ಅನ್ನೋ ವಿಚಾರದಿಂದ ಈ ವರ್ಷದ ರಜಾದಿನಗಳನ್ನು ಐತಿಹಾಸಿಕ ತಾಣಗಳನ್ನು ನೋಡಲು ಮೀಸಲಿಟ್ಟಿದ್ದೇವೆ ಎಂದು ತಮ್ಮ ರಜಾದಿನಗಳ ಪ್ರವಾಸದ ಕುರಿತು ರಾಜರಾಜೇಶ್ವರಿ ನಗರದ ನಿವಾಸಿ ಪವಿತ್ರಾ ಕಿರಣ್ ವರಪ್ಯಾಟಿ ವಿವರಿಸಿದರು.

ನನ್ನ ಮಕ್ಕಳು ನವೀತಾ ಮತ್ತು ಹಾಕೇಶ್‌ಗೆ ನೀರು, ಸಿನಿಮಾ, ಪ್ರಾಣಿಗಳನ್ನು ನೋಡೊ ಹುಚ್ಚು ಜಾಸ್ತಿ. ಹಾಗಾಗಿ ಕಳೆದ ವರ್ಷ ಅವರನ್ನು  ಹೈದ್ರಾಬಾದ್‌ನ ರಾಮೋಜಿ ಫಿಲ್ಮಂ ಸಿಟಿ ನೋಡಲು ಕರೆದುಕೊಂಡು ಹೋಗಿದ್ದೆ. ಅಲ್ಲಿನ ಸಿನಿಮಾ ಚಿತ್ರೀಕರಣ, ಸಿನಿಮಾ ಸೆಟ್‌ಗಳನ್ನು, ಅದರಲ್ಲೂ ಬಾಹುಬಲಿ ಸಿನಿಮಾ ಸೆಟ್‌ನ್ನು ಮುಟ್ಟಿ ನಾಯಕ–ನಾಯಕಿನಂತೆ ನಟಿಸುತ್ತ ಮಕ್ಕಳು ಖುಷಿಪಟ್ಟರು.

ವಾಟರ್‌ಗೇಮ್‌, ಕೃತಕ ಹಳ್ಳಿ ವಾತಾವರಣ ಮತ್ತು ಕಲಾಶಿಲ್ಪಗಳು,  ರೈಲು ಆಟ, ಜಪಾನಿಸ್‌ ಗಾರ್ಡನ್‌, ಬಟರ್ ಫ್ಲೈ ಪಾರ್ಕ್ ಹೀಗೆ ಹತ್ತಾರು ಸ್ಥಳಗಳನ್ನು ವೀಕ್ಷಿಸಿ ತುಂಬಾ ಆನಂದಪಟ್ಟರು. ಕಡಿಮೆ ಸಮಯದಲ್ಲಿ ಹೆಚ್ಚೆಚ್ಚು ನೋಡುವ, ಆನಂದಿಸುವ ಅವಕಾಶ ಇಲ್ಲಿದೆ. ಹಾಗಾಗಿ ಈ ಬಾರಿನೂ ಮತ್ತೊಮ್ಮೆ ಅಲ್ಲಿಗೆ ಹೋಗುವ ಯೋಜನೆ ಇದೆ ಎನ್ನುತ್ತಾರೆ ಶಿವಾಜಿ ನಗರದ ನಿವಾಸಿ ಕನ್ನನ್‌ ಅವರು. 

ಬೇಸಿಗೆ ರಜೆಗೆ ಮಕ್ಕಳ ಮೊದಲ ಆಯ್ಕೆ ಅಜ್ಜಿ ಮನೆ. ನಂತರ ಅಲ್ಲಿಂದ ಊಟಿಗೆ ಹೋಗುವ ಯೋಚನೆ ಇದೆ. ರಜೆಯ ದಿನಗಳನ್ನು ಬಲು ಮಜವಾಗಿ ಕಳೆಯಲು ಮತ್ತು ಪ್ರಕತಿ ಸೌಂದರ್ಯವನ್ನು ಸವಿಯಲು ಊಟಿ ಹೇಳಿ ಮಾಡಿಸಿದಂತಹ ವಾತಾವರಣ.

ಮಕ್ಕಳಿಗೆ ಪ್ರಕೃತಿ, ಉದ್ಯಾನವನ, ಬೆಟ್ಟ, ಗುಡ್ಡ, ನೀರು, ಪ್ರಾಣಿ–ಪಕ್ಷಿ ಪ್ರಪಂಚ ಅಂದ್ರೆ ಅವರಿಗೆ ಚಿಕ್ಕಂದಿನಿಂದಲೂ ತುಂಬಾ ಇಷ್ಟ. ಹಾಗಾಗಿ ಈ ಬಾರಿ ಊಟಿ ಪ್ರವಾಸ, ಮತ್ತು ಕೇರಳದ ಮುನ್ನಾರಕ್ಕೆ ಹೋಗುವ ಯೊಜನೆ ಇದೆ. ಅದಕ್ಕೆಲ್ಲ ತಯಾರಿಗಳು ನಡೆಯುತ್ತಿವೆ ಎನ್ನುತ್ತಾರೆ ಎಜಿಎಸ್‌ ಲೇಜೌಟ್‌ ನಿವಾಸಿ ಲಕ್ಷ್ಮೀ ಉಜಿರೆ ಅವರು.

ಖುಷಿಯಾಗಿರೋದು ನಮ್ಮ ಉದ್ದೇಶ

ಪ್ರತಿವರ್ಷವೂ ಮಕ್ಕಳನ್ನು ಬೇಸಿಗೆ ರಜೆಗೆ ದೂರದ ಊರುಗಳಿಗೆ ಕರೆದುಕೊಂಡು ಹೋಗ್ತೀವಿ. ಈ ಸಲ ಕೊಲ್ಹಾಪುರ, ಮಹಾಬಲೇಶ್ವರ, ಅಕ್ಲೋಜ್ ವಾಟರ್‌ ಫಾಲ್ಸ್ ನೋಡಲು ಹೋಗಬೇಕು ಅಂದುಕೊಂಡಿದ್ದೀವಿ. ಪ್ರವಾಸಕ್ಕೆ ಅಂತ ಹೆಚ್ಚು ದಿನ ಮೀಸಲಿಡಲು ಆಗದು. ವಾಟರ್‌ಫಾಲ್ಸ್ ಇದ್ದರೆ ಮಕ್ಕಳು ಚೆನ್ನಾಗಿ ಎಂಜಾಯ್‌ ಮಾಡ್ತಾರೆ. ಸಾಕಷ್ಟು ವಾಟರ್‌ ಗೇಮ್‌ಗಳನ್ನು ಆಡಬಹುದು. ಕೊಲ್ಹಾಪುರ ಮಹಾಲಕ್ಷ್ಮೀ ದೇವಸ್ಥಾನ ಮಕ್ಕಳಿಗೂ ಇಷ್ಟವಾಗುತ್ತೆ. ಕುಟುಂಬದ ಜೊತೆ ಸಮಯ ಕಳೆಯುವುದು, ಖುಷಿಯಾಗಿರುವುದು ನಮ್ಮ ಪ್ರವಾಸದ ಮುಖ್ಯ ಉದ್ದೇಶ.

–ಬೇಬಿ ರಾಜಶೇಖರ್‌, ಜಯನಗರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.