ಮಂಗಳವಾರ, ಆಗಸ್ಟ್ 11, 2020
21 °C
ಕಾಲುವೆಗೆ ಬಾರದ ನೀರು: ಒಣಗುತ್ತಿರುವ ಬೆಳೆ

ರೈತರ ಉಪವಾಸ ಸತ್ಯಾಗ್ರಹ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈತರ ಉಪವಾಸ ಸತ್ಯಾಗ್ರಹ ಆರಂಭ

ಬಳ್ಳಾರಿ: ‘ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಏ 15ರವರೆಗೆ ನೀರು ಹರಿಸಬೇಕು’ ಎಂದು ಆಗ್ರಹಿಸಿ ರೈತ ಸಂಘ–ಹಸಿರು ಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ರೈತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಬುಧವಾರದಿಂದ ಅನಿರ್ದಿಷ್ಟ ಅವಧಿಯ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದರು.‘ಮಾ 31ರಿಂದ ಕಾಲುವೆಯಲ್ಲಿ ನೀರು ಬಂದ್‌ ಆಗಿದೆ. ಬೆಳೆಗಳು ಒಣಗುತ್ತಿವೆ. ಕೂಡಲೇ ನೀರು ಹರಿಸಬೇಕು. ಏ 10ರವರೆಗೂ ನಿಲ್ಲಿಸಬಾರದು’ ಎಂದು ಆಗ್ರಹಿಸಿ ರೈತರು ಏ.2ರಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿದ್ದರು. ಆ ಸಂದರ್ಭದಲ್ಲಿ ಚರ್ಚಿಸಿದ್ದ ಜಿಲ್ಲಾಧಿಕಾರಿ ಡಾ.ರಾಮಪ್ರಸಾದ್‌ ಮನೋಹರ್, ‘ದಿನವೂ 200 ಕ್ಯುಸೆಕ್‌ನಂತೆ ಐದು ದಿನ ಮಾತ್ರ ನೀರು ಹರಿಸಲಾಗುವುದು’ ಎಂದು ಹೇಳಿದ್ದರು. ಅವರ ಭರವಸೆಯನ್ನು ಒಪ್ಪದ ರೈತರು ಕಾಲುವೆಗೆ ನೀರು ಹರಿಸುವವರೆಗೂ ಉಪವಾಸ ನಡೆಸಲು ನಿರ್ಧರಿಸಿದ್ದರು.

‘ಕಾಲುವೆ ವ್ಯಾಪ್ತಿಯ ಹೊಸಪೇಟೆ, ಸಿರುಗುಪ್ಪ ಮತ್ತು ಬಳ್ಳಾರಿ ತಾಲ್ಲೂಕಿನ ಸುಮಾರು 1.32 ಲಕ್ಷ ಎಕರೆಯಲ್ಲಿ ಭತ್ತವನ್ನು ಬೆಳೆಯಲಾಗಿದೆ. ಕಾಳು ಕಟ್ಟುವ ಹಂತಕ್ಕೆ ಬಂದಿರುವಾಗಲೇ ನೀರು ದಕ್ಕದಂತಾಗಿದೆ. ತುಂಗಭದ್ರಾ ಆಡಳಿತ ಮಂಡಳಿ ಕಾಲುವೆಗೆ ನೀರು ಹರಿಸುತ್ತಿಲ್ಲ. ಈಗ ಹರಿಸಿದರೆ ಶೇ 60ರಷ್ಟು ಬೆಳೆ ಮಾತ್ರ ಕೈಗೆ ದಕ್ಕುತ್ತದೆ. ಇಂಥ ಪರಿಸ್ಥಿತಿಯಲ್ಲೂ ಕನಿಷ್ಠ ಹತ್ತು ದಿನ ನೀರು ಹರಿಸಲು ನಿರಾಕರಿಸುವುದು ಅಮಾನವೀಯ’ ಎಂದು ಮುಖಂಡ ಚಾಗನೂರು ಮಲ್ಲಿಕಾರ್ಜುನರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.