ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

16 ಶುದ್ಧ ನೀರಿನ ಘಟಕಗಳಿಗೆ ಬೀಗ

ನೀತಿ ಸಂಹಿತೆ ಉಲ್ಲಂಘನೆ ಆರೋಪ
Last Updated 5 ಏಪ್ರಿಲ್ 2018, 7:09 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಶಾಸಕ ಡಾ.ಕೆ.ಸುಧಾಕರ್ ಅವರ ಸಾಯಿಕೃಷ್ಣಾ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರದಲ್ಲಿ ನಿರ್ಮಿಸಿರುವ ‘ಅಮೃತಗಂಗೆ’ ಶುದ್ಧ ಕುಡಿಯುವ ನೀರಿನ 16 ಘಟಕಗಳಿಗೆ ಚುನಾವಣಾಧಿಕಾರಿಗಳು ಬುಧವಾರ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಬೀಗ ಹಾಕಿದರು.ಸಹಾಯಕ ಚುನಾವಣಾಧಿಕಾರಿ ಕೆ.ನರಸಿಂಹಮೂರ್ತಿ, ನಗರಸಭೆ ಆಯುಕ್ತ ಉಮಾಕಾಂತ್ ಅವರ ನೇತೃತ್ವದ ತಂಡದ ಸಿಬ್ಬಂದಿ ನಗರದಾದ್ಯಂತ ಸಂಚರಿಸಿ ಘಟಕಗಳಿಗೆ ಬೀಗ ಹಾಕಿ, ಸೀಲ್ ಮಾಡಿತು. ಅಧಿಕಾರಿಗಳ ಈ ಕ್ರಮ ಖಂಡಿಸಿ ನಗರ ಪೊಲೀಸ್ ಠಾಣೆ ಬಳಿ ಇರುವ ಘಟಕದ ಎದುರು ಶಾಸಕರ ಬೆಂಬಲಿಗರು, ನಾಗರಿಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಸುಧಾಕರ್, ‘ನೀತಿ ಸಂಹಿತೆ ನೆಪವಾಗಿಟ್ಟುಕೊಂಡು ಅಧಿಕಾರಿಗಳು ಒಂದು ತಿಂಗಳ ಎಲ್ಲರ ಮೇಲೆ ಸವಾರಿ ಮಾಡಬಹುದು ಎಂದು ಭಾವಿಸಿಕೊಂಡಂತಿದೆ. ಕುಡಿಯುವ ನೀರಿನ ಘಟಕಗಳಿಗೆ ಬೀಗ ಹಾಕುವುದು ಅಮಾನವೀಯ ಕ್ರಮ. ಚುನಾವಣೆ ಆಯೋಗ ಜನಪರವಾಗಿದ್ದರೆ ಮಾತ್ರ ಅದಕ್ಕೆ ಗೌರವವಿರುತ್ತದೆ. ಜಿಲ್ಲೆಯ ಚುನಾವಣಾಧಿಕಾರಿಗಳ ವಿರುದ್ಧ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅವರಿಗೆ ದೂರು ಸಲ್ಲಿಸುತ್ತೇನೆ’ ಎಂದು ಹೇಳಿದರು.

ಈ ಕುರಿತು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಶಿವಸ್ವಾಮಿ ಅವರನ್ನು ಕೇಳಿದರೆ, ‘ಅಮೃತಗಂಗೆ ಘಟಕಗಳಲ್ಲಿ ರಿಯಾಯಿತಿ ದರದಲ್ಲಿ ನೀರು ವಿತರಿಸುವುದು ಮತ್ತು ಉಚಿತವಾಗಿ ಸ್ಮಾರ್ಟ್ ನೀಡುವ ಮೂಲಕ ಮತದಾರರಿಗೆ ಆಮಿಷ ಒಡ್ಡಲಾಗುತ್ತಿದೆ ಎಂದು ನೀತಿ ಸಂಹಿತೆ ಉಲ್ಲಂಘನೆ ನಿಯಂತ್ರಣ ಕೊಠಡಿಗೆ ದೂರುಗಳು ಬಂದಿದ್ದವು. ಹೀಗಾಗಿ ಘಟಕಗಳಿಗೆ ಬೀಗ ಹಾಕಿಸಲಾಗಿದೆ’ ಎಂದು ತಿಳಿಸಿದರು.

‘ನೀತಿ ಸಂಹಿತೆ ಜಾರಿಯಲ್ಲಿ ಇರುವಾಗ ಪ್ರಮುಖ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುವ ವ್ಯಕ್ತಿಗೆ ಸಂಬಂಧಿಸಿದ ಸಂಸ್ಥೆ ಅಥವಾ ಟ್ರಸ್ಟ್‌ ಮೂಲಕ ಯಾವುದನ್ನೇ ಆದರೂ ರಿಯಾಯಿತಿ ಅಥವಾ ಉಚಿತವಾಗಿ ನೀಡುವುದು ಮತದಾರರಿಗೆ ಆಮಿಷ ಒಡ್ಡಿದಂತಾಗುತ್ತದೆ. ಹೀಗಾಗಿ ಕಾನೂನು ಪ್ರಕಾರ ಕ್ರಮಕೈಗೊಂಡಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT