ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಸ್ಪತ್ರೆಯಲ್ಲಿ ಕುಡಿಯುವ ನೀರಿನ ಸಮಸ್ಯೆ

ಮೂರರಲ್ಲಿ ಎರಡೂ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಯಲ್ಲಿ
Last Updated 5 ಏಪ್ರಿಲ್ 2018, 8:09 IST
ಅಕ್ಷರ ಗಾತ್ರ

ಚಿತ್ರದುರ್ಗ:‘ನಮ್ಮ ಯಜಮಾನ್ರಿಗೆ ಶಸ್ತ್ರಚಿಕಿತ್ಸೆ ಆಗಿದೆ. ಆಸ್ಪತ್ರೆಗೆ ಬಂದು ಐದು ದಿನ ಆಯ್ತು, ಇಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಒಂದು ಲೀಟರ್ ಬಾಟಲಿ ತುಂಬುವುದಕ್ಕೆ ಗಂಟೆಗಟ್ಟಲೇ ಕಾಯಬೇಕು. ಈಗಿರುವ ಬಿಸಿಲಿನ ಜಳಕ್ಕೆ ದಾಹ ನೀಗುತ್ತಿಲ್ಲ. ನೀರಿಗಾಗಿ ಜಿಲ್ಲಾ ಆಸ್ಪತ್ರೆಯಲ್ಲೂ ಅಲೆದಾಡುವಂತಾಗಿದೆ’ಇದು ಹೊಸದುರ್ಗದ ರತ್ನಮ್ಮ ಅವರ ಅಳಲು. ಜಿಲ್ಲಾಸ್ಪತ್ರೆಗೆ ರತ್ನಮ್ಮರಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಪ್ರತಿನಿತ್ಯ ಬರುವ ಸಾವಿರಾರು ಮಂದಿಯ ಸ್ಥಿತಿಯೂ ಇದೇ ಆಗಿದೆ. ರೋಗಿಗಳು ಅವರ ಸಂಬಂಧಿಕರು ಕುಡಿಯುವ ನೀರಿಗಾಗಿ ಆಸ್ಪತ್ರೆಯಲ್ಲಿ ಪರದಾಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ಶುದ್ಧ ನೀರಿನ ಮೂರು ಘಟಕಗಳಿವೆ. ಆದರೆ ಅದರಲ್ಲಿ ಎರಡು ದುರಸ್ತಿಯಲ್ಲಿ ಇರುವುದರಿಂದ ಸಮಸ್ಯೆ ಉಂಟಾಗಿದೆ.

‘ನಾವು ಹೆರಿಗೆ ಮಾಡಿಸುವುದಕ್ಕೆ ಬಂದಿದ್ದೇವೆ. ಇವತ್ತಿಗೆ ಮೂರು ದಿನವಾಯ್ತು. ಇಲ್ಲಿ ಕುಡಿಯಲು ನೀರಿನ ಸಮಸ್ಯೆ ಎದುರಾಗಿದೆ. ಶ್ರೀಮಂತರು ₹ 20 ಕೊಟ್ಟು 1 ಲೀಟರ್ ಫಿಲ್ಟರ್ ನೀರು ಕುಡಿಯುತ್ತಾರೆ. ನಮ್ಮ ಬಳಿ ಹಣವಿಲ್ಲ. ಬಡವರು ಪ್ರತಿಯೊಂದಕ್ಕೆ ದುಡ್ಡು ಕೊಡೋಕೆ ಆಗುತ್ತಾ? ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗಾಗಿ ವಿವಿಧ ರೀತಿಯ ಸೌಲಭ್ಯಗಳಿವೆ. ಆದರೆ, ಕುಡಿಯವ ನೀರಿನ ಸೌಕರ್ಯ ಸರಿಯಾಗಿ ಇಲ್ಲ’ ಎಂದು ಹಿರಿಯೂರಿನ ಮಹಿಳೆಯೊಬ್ಬರು ಬೇಸರದ ವ್ಯಕ್ತಪಡಿಸಿದರು.

‘ಕಳೆದ ಹದಿನೈದು ದಿನದಿಂದ ನಾವು ಆಸ್ಪತ್ರೆಯಲ್ಲಿದ್ದೇವೆ. ನನ್ನ ತಂಗಿಗೆ ಕಾಲಿನ ಶಸ್ತ್ರಚಿಕಿತ್ಸೆ ಆಗಿದೆ. ಇಲ್ಲಿನ ಆಸ್ಪತ್ರೆಯ ರೋಗಿಗಳಿಗೆ ಮತ್ತು ಅವರ ಸಂಬಂಧಿಕರಿಗೆ ಕುಡಿಯುವ ನೀರಿನ ಅಭಾವ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಏನ್ಮಾಡೋದು ಅಂಥ ತೋಚುತ್ತಿಲ್ಲ. ಈ ಕುರಿತು ಆಸ್ಪತ್ರೆ ಸಿಬ್ಬಂದಿಗಳಿಗೆ ವಿಷಯ ತಿಳಿಸಿದರೂ ಯಾವುದೇ ಪ್ರಯೋಜವಾಗಿಲ್ಲ’ ಎನ್ನುತ್ತಾರೆ ಐಮಂಗಲದ ರಾಜಣ್ಣ.

ಜಿಲ್ಲಾ ಆಸ್ಪತ್ರೆಯಲ್ಲಿ ಒಟ್ಟು ಮೂರು ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಒಂದರಲ್ಲಿ ಸಣ್ಣದಾಗಿ ನೀರು ಬರುತ್ತಿದೆ. ಎರಡು ದುರಸ್ತಿಯಲ್ಲಿವೆ. ವಿಧಾನಪರಿಷತ್ ಸದಸ್ಯ ರಘು ಆಚಾರ್ ತಮ್ಮ ಅನುದಾನದಲ್ಲಿ ಹಾಕಿಸಿರುವ ಆರ್.ಒ ಕೆಲಸ ಮಾಡುತ್ತಿಲ್ಲ ಎಂಬುದಾಗಿ ಸಂಬಂಧಪಟ್ಟವರ ಗಮನಕ್ಕೆ ಆಸ್ಪತ್ರೆಯ ಸಿಬ್ಬಂದಿಯೇ 10 ದಿನದಿಂದ ಸಂಪರ್ಕಿಸಿದರೂ ಪ್ರಯೋಜನವಾಗಿಲ್ಲ. ನಿರ್ವಹಣೆಯ ಕೊರತೆ ಕಾರಣದಿಂದಾಗಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ.

ಈ ಮೊದಲು ನಾವು ಆಸ್ಪತ್ರೆಯ ಮುಂಭಾಗದಲ್ಲಿರುವ ಪಾರ್ಕಿನಲ್ಲಿ ನೀರು ತರಲಾಗುತ್ತಿತ್ತು. ಈಗ ಪಾರ್ಕಿನಲ್ಲಿರುವ ಮೋಟಾರ್ ಸುಟ್ಟು ಹೋಗಿರುವುದರಿಂದ ಅಲ್ಲಿಯೂ ಸಹ ನೀರು ಸಿಗುತ್ತಿಲ್ಲ. ಚುನಾವಣೆ ಬಂದಿರುವುದರಿಂದ ರೋಗಿಗಳ ಅಳಲನ್ನು ಜನಪ್ರತಿನಿಧಿಗಳೂ ಕೇಳಿಸಿಕೊಳ್ಳುತ್ತಿಲ್ಲ. ಅಧಿಕಾರಿಗಳೂ ಕೇಳುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT