ಆರ್ಥಿಕ ನೀತಿ ವಿರುದ್ಧ ವಾಗ್ಬಾಣ

7
ಹಣಕಾಸು ಸಂಸ್ಥೆ ದುರ್ಬಲಗೊಳಿಸಿದ ಮೋದಿ: ರಾಹುಲ್‌ ಆಕ್ರೋಶ

ಆರ್ಥಿಕ ನೀತಿ ವಿರುದ್ಧ ವಾಗ್ಬಾಣ

Published:
Updated:

ದಾವಣಗೆರೆ: ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಜಿಎಸ್‌ಟಿ, ನೋಟು ಅಮಾನ್ಯೀಕರಣ ನೀತಿಗಳಿಂದಾಗಿ ದೇಶದ ಅತಿ ಪ್ರಮುಖ ಸಂಸ್ಥೆಗಳು ದುರ್ಬಲಗೊಂಡವು ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.ಜನಾಶೀರ್ವಾದ ಯಾತ್ರೆಯ ಎರಡನೇ ದಿನವಾದ ಬುಧವಾರ ನಗರದಲ್ಲಿ ಅವರು ವರ್ತಕರ ಜೊತೆ 55 ನಿಮಿಷ ಸಂವಾದ ನಡೆಸಿದರು. ಪ್ರಶ್ನೆಗಳಿಗೆ ಉತ್ತರ ನೀಡುವ ಹಾದಿಯಲ್ಲಿ ಮೋದಿ ಅವರ ಆರ್ಥಿಕ ನೀತಿಗಳ ವಿರುದ್ಧ ವಾಗ್ಬಾಣಗಳನ್ನು ಎಸೆಯುತ್ತಾ ಹೋದರು.‘ಆರ್‌ಬಿಐ ಗವರ್ನರ್‌, ಸಂಪುಟ ಸಹೋದ್ಯೋಗಿಗಳನ್ನೇ ಕತ್ತಲಲ್ಲಿಟ್ಟು ಘೋಷಣೆ ಮಾಡಿದ ನೋಟು ಅಮಾನ್ಯೀಕರಣ ನಿರ್ಧಾರದಿಂದ ಆರ್‌ಬಿಐ ದುರ್ಬಲಗೊಂಡಿತು. 60 ವರ್ಷಗಳಿಂದ ಕಟ್ಟಿ ಬೆಳೆಸಿದ್ದ ಬ್ಯಾಂಕಿಂಗ್‌ ವ್ಯವಸ್ಥೆಯ ಬೆನ್ನೆಲುಬು ಒಂದೇ ದಿನಕ್ಕೆ ಮುರಿದುಹೋಯಿತು. ಇಂಥ ಸಂಸ್ಥೆಗಳ ಮೇಲಿನ ಗೌರವ ಕಡಿಮೆಯಾದ ಪರಿಣಾಮ ನೀರವ್‌ ಮೋದಿ, ಲಲಿತ್‌ ಮೋದಿ, ವಿಜಯ್‌ ಮಲ್ಯ, ಮೆಹುಲ್ ಚೋಕ್ಸಿ ಮೊದಲಾದ ಉದ್ಯಮಿಗಳು ಕೋಟ್ಯಂತರ ರೂಪಾಯಿ ಸಾಲ ಬಾಕಿಯಿಟ್ಟು ಪಲಾಯನ ಮಾಡಿದರು’ ಎಂದು ವಿಶ್ಲೇಷಿಸಿದರು.

‘ಕೆಲವೇ ಉದ್ಯಮಿಗಳಿಂದ ದೇಶದ ಅಭಿವೃದ್ಧಿ ಸಾಧ್ಯ ಎಂಬುದು ಮೋದಿ ಅವರ ನಂಬಿಕೆಯಾಗಿದೆ. ಆದರೆ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳೂ ದೇಶದ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ಹೊಂದಿವೆ. ಉದ್ಯೋಗಾವಕಾಶಗಳನ್ನು ಸೃಜಿಸುವಲ್ಲಿ ಇವುಗಳ ಕೊಡುಗೆ ಗಣನೀಯವಾದುದು. ಅವರಿಗೆ ಒತ್ತಡ ಹಾಕದೇ ಕಾರ್ಯ ನಿರ್ವಹಿಸಲು ಬಿಡಬೇಕು’ ಎಂದರು.ಇದಕ್ಕೆ ಮೊದಲು ಅಸಂಘಟಿತ ಕಾರ್ಮಿಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

‘ಸಿಂಗ್‌, ವಿರೋಧ ಪಕ್ಷದ ಸಲಹೆ ಕೇಳುತ್ತಿದ್ದರು’

‘ನನ್ನ ತಾಯಿ ನಂತರ ನಾನು ಕಾಂಗ್ರೆಸ್‌ ಅಧ್ಯಕ್ಷನಾಗಿದ್ದೇನೆ. ನಾವೂ ಶೇ 20ರಷ್ಟು ಜನರ ಪ್ರತಿನಿಧಿಗಳು. ನಾಲ್ಕು ವರ್ಷಗಳ ಅವಧಿಯಲ್ಲಿ ಪ್ರಧಾನಿ ಮೋದಿ, ನಮ್ಮನ್ನು ಕರೆದು ಒಮ್ಮೆಯೂ ಸಲಹೆ ಕೇಳಿಲ್ಲ. ಎದುರಾದಾಗ ನಮಸ್ಕಾರ್‌, ಕೈಸೇ ಹೇ, ಟೀಕ್‌ ಹೂಂ, ಥ್ಯಾಂಕ್ಯೂ’ ಇಷ್ಟೇ ಶಬ್ದಗಳನ್ನು ಬಳಸಿದ್ದಾರೆ’ ಎಂದು ರಾಹುಲ್‌ ಹೇಳಿದರು. ‘ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದಾಗ, ಪ್ರಮುಖ ಸಂದರ್ಭಗಳಲ್ಲಿ ಆಗಿನ ವಿರೋಧ ಪಕ್ಷದ ನಾಯಕ ಎಲ್‌.ಕೆ. ಅಡ್ವಾಣಿ ಅವರ ಸಲಹೆಗಳನ್ನು ಪಡೆಯುತ್ತಿದ್ದರು. ಮೋದಿ, ಕಾಂಗ್ರೆಸ್‌ ನಾಯಕರನ್ನು ಮಾತ್ರವಲ್ಲ, ಇತರ ವಿರೋಧ ಪಕ್ಷಗಳ ನಾಯಕರನ್ನೂ ಸರಿಯಾಗಿ ನಡೆಸಿಕೊಂಡಿಲ್ಲ ಎಂದರು.

‘ಪ್ರತ್ಯೇಕ ಧರ್ಮ ವಿಷಯ ಹೊಸದಲ್ಲ’

ವಿದ್ಯಾರ್ಥಿನಿಯೊಬ್ಬಳು ಲಿಂಗಾಯತ ಧರ್ಮ ಪ್ರತ್ಯೇಕಗೊಳಿಸುವ ಅಗತ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ತಕ್ಷಣ ರಾಹುಲ್‌, ಅದಕ್ಕೆ ಸಿದ್ದರಾಮಯ್ಯ ಉತ್ತರಿಸುತ್ತಾರೆ ಎಂದು ಅವರಿಗೆ ಮೈಕ್‌ ಕೊಟ್ಟರು. ‘ಇದು ಹೊಸ ವಿಷಯವಲ್ಲ. 850 ವರ್ಷಗಳ ಹಿಂದೆಯೇ ಬಸವಣ್ಣ ಅವರ ಕಾಲದಲ್ಲಿ ಲಿಂಗಾಯತ ಧರ್ಮ ಅಸ್ತಿತ್ವದಲ್ಲಿತ್ತು. ಇದನ್ನೇನೂ ನಮ್ಮ ಸರ್ಕಾರ ಹೊಸದಾಗಿ ಮಾಡಿಲ್ಲ. ವೀರಶೈವ ಮಹಾಸಭಾದಿಂದ ನನ್ನನ್ನು ಸನ್ಮಾನಿಸುವ ಸಂದರ್ಭದಲ್ಲಿ ಪ್ರತ್ಯೇಕ ಧರ್ಮದ ಬಗ್ಗೆ ಮನವಿ ಕೊಡಲಾಗಿತ್ತು. ಮಾತೆ ಮಹಾದೇವಿ ಅವರೂ ಬೀದರ್‌ನಲ್ಲಿ ಸಭೆ ಮಾಡಿ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕು ಎಂದು ಮನವಿ ಮಾಡಿದ್ದರು. ವಿರಕ್ತ, ಗುರು ಪರಂಪರೆಯವರು, ನಿವೃತ್ತ ಐಎಎಸ್‌ ಅಧಿಕಾರಿ ಜಾಮದಾರ ಮನವಿ ಕೊಟ್ಟರು. ಐದು ಪ್ರತ್ಯೇಕ ಪ್ರಸ್ತಾವಗಳು ಬಂದ ಕಾರಣ ಇದನ್ನು ಅಲ್ಪಸಂಖ್ಯಾತರ ಆಯೋಗಕ್ಕೆ ಒಪ್ಪಿಸಲಾಯಿತು. ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್‌ ನೇತೃತ್ವದ ತಜ್ಞರ ಸಮಿತಿ ರಚಿಸಲಾಯಿತು. ಸಮಿತಿ ನೀಡಿದ ವರದಿಯನ್ನು ಸಂಪುಟ ಸಭೆ ಅಂಗೀಕರಿಸಿದ್ದು, ಕೇಂದ್ರಕ್ಕೆ ಕಳುಹಿಸಿಕೊಟ್ಟಿದೆ’ ಎಂದು ಮುಖ್ಯಮಂತ್ರಿ ದೀರ್ಘ ವಿವರಣೆ ನೀಡಿದರು.

ಬೆಣ್ಣೆದೋಸೆಗೆ ಮನಸೋತರು

ದಾವಣಗೆರೆ: ಇಲ್ಲಿನ ಪಿ.ಜೆ ಬಡಾವಣೆಯಲ್ಲಿರುವ ವಿಜಿ ಬೆಣ್ಣೆದೋಸೆ ಹೋಟೆಲ್‌ನಲ್ಲಿ ಬುಧವಾರ ರಾಹುಲ್‌ ಬೆಣ್ಣೆದೋಸೆ ಸವಿದರು. ಜತೆಗೆ ಪಕ್ಕದಲ್ಲಿದ್ದ ಪದ್ದು ಕಾಫಿ ಬಾರ್‌ನಿಂದ ಕಾಫಿ ತರಿಸಿಕೊಂಡು ರಸ್ತೆ ಮಧ್ಯದಲ್ಲೇ ನಿಂತು ಕುಡಿದರು.ಕಾಂಗ್ರೆಸ್‌ನ ಇತರ ಮುಖಂಡರೂ ರಾಹುಲ್‌ ಜತೆ ಬೆಣ್ಣೆದೋಸೆ ತಿಂದರು. ಬೆಣ್ಣೆದೋಸೆ ರುಚಿಗೆ ಮನಸೋತ ರಾಹುಲ್‌ ‘ಬಹುತ್ ಅಚ್ಛಾ ಹೈ’ (ತುಂಬಾ ಚೆನ್ನಾಗಿದೆ) ಎಂದು ಶ್ಲಾಘಿಸಿದರು ಎಂದು ಹೋಟೆಲ್‌ ಮಾಲೀಕ ವಿಜಯ್‌ ‘ಪ್ರಜಾವಾಣಿ’ಗೆ ತಿಳಿಸಿದರು.‘ರಾಹುಲ್‌ ಗಾಂಧಿ, ಸಿದ್ದರಾಮಯ್ಯನವರಂಥ ನಾಯಕರೆಲ್ಲರೂ ಅನಿರೀಕ್ಷಿತವಾಗಿ ನಮ್ಮ ಹೋಟೆಲ್‌ಗೆ ಭೇಟಿ ನೀಡಿದ್ದು ಖುಷಿ ತಂದಿದೆ. ಬಂದವರಿಗೆಲ್ಲ ಬೆಣ್ಣೆದೋಸೆ, ಖಾಲಿದೋಸೆ ಸೇರಿದಂತೆ 25 ದೋಸೆ ಹಾಕಿಕೊಟ್ಟೆ' ಎಂದು ವಿಜಯ್‌ ಹೇಳಿದರು. ಇದೇ ವೇಳೆ ಹೋಟೆಲ್‌ ಸಿಬ್ಬಂದಿ ರಾಹುಲ್‌ ಜತೆ ಫೋಟೊ ತೆಗೆಸಿಕೊಂಡರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry