ನ್ಯಾಯಾಂಗ ನಿಂದನೆ ಪ್ರಕರಣ ಕೈಬಿಟ್ಟ ಹೈಕೋರ್ಟ್‌

7
ಕ್ಷಮೆ ಕೋರಿದ ಹುಬ್ಬಳ್ಳಿಯ ಕಿಮ್ಸ್‌ ನಿರ್ದೇಶಕ

ನ್ಯಾಯಾಂಗ ನಿಂದನೆ ಪ್ರಕರಣ ಕೈಬಿಟ್ಟ ಹೈಕೋರ್ಟ್‌

Published:
Updated:

ಧಾರವಾಡ: ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್‌) ನಿರ್ದೇಶಕ ಡಾ.ದತ್ತಾತ್ರೇಯ ಬಂಟ್‌ ಅವರು ಬೇಷರತ್ ಕ್ಷಮೆ ಕೋರಿದ್ದರಿಂದ ಪ್ರಕರಣ ಕೈಬಿಟ್ಟ ಹೈಕೋರ್ಟ್‌, ದೂರು ಇತ್ಯರ್ಥಗೊಳಿಸಿತು. ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಸೇವಾ ಜ್ಯೇಷ್ಠತೆ ಪಟ್ಟಿ ಪ್ರಕಟಿಸುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದ್ದೀರಿ, ಅಲ್ಲದೇ ಪಟ್ಟಿ ಪ್ರಕಟಿಸಿರುವ ಕ್ರಮವನ್ನು ಸಮರ್ಥನೆ ಮಾಡಿಕೊಳ್ಳುವ ಮೂಲಕ ಅದನ್ನು ದೃಢೀಕರಿಸಿದ್ದೀರಿ. ನಿಮ್ಮ ವಿರುದ್ಧ ಯಾಕೆ ದೋಷಾರೋಪ ಪಟ್ಟಿ ಸಿದ್ಧಪಡಿಸಿ ಕ್ರಮ ಕೈಗೊಳ್ಳಬಾರದು ಎಂದು ಬಂಟ್ ಅವರನ್ನು ಖಾರವಾಗಿ ಪ್ರಶ್ನಿಸಿತು.

ನ್ಯಾಯಾಂಗ ನಿಂದನಾ ದೂರಿನ ವಿಚಾರಣೆ ಸಂದರ್ಭದಲ್ಲಿ ನ್ಯಾಯಪೀಠದ ಮುಂದೆ ಹಾಜರಿದ್ದ ಕಿಮ್ಸ್‌ ನಿರ್ದೇಶಕರನ್ನು ಮೌಖಿಕವಾಗಿ ನ್ಯಾಯಮೂರ್ತಿ ರವಿ ಮಳಿಮಠ ಮತ್ತು ಎಸ್‌.ಜಿ.ಪಂಡಿತ ಅವರಿದ್ದ ವಿಭಾಗೀಯ ಪೀಠ ತರಾಟೆಗೆ ತೆಗೆದುಕೊಂಡಿತು. ಡಾ.ಬಂಟ್‌ ಅವರು, ಕ್ಷಮೆ ಕೇಳಿ, ಪ್ರಕಟಿಸಿದ್ದ ಸೇವಾ ಜ್ಯೇಷ್ಠತಾ ಪಟ್ಟಿ ಹಿಂಪಡೆಯುವುದಾಗಿ ನ್ಯಾಯಪೀಠದ ಮುಂದೆ ಪ್ರಮಾಣಪತ್ರ ಸಲ್ಲಿದ್ದರಿಂದ ವಿಚಾರಣೆ ಕೈಬಿಟ್ಟಿತು.

ಏನಿದು ಪ್ರಕರಣ?: 2014 ರಲ್ಲಿ ಕಿಮ್ಸ್‌ನ ನೇತ್ರ ವಿಭಾಗದ ಸಿಬ್ಬಂದಿಯ ಸೇವಾ ಜ್ಯೇಷ್ಠತಾ ಪಟ್ಟಿ ಪ್ರಕಟಿಸಲಾಗಿತ್ತು. ಅದರನ್ವಯ ಡಾ. ದಮಯಂತಿ ಸುರಣಗಿ ಹಿರಿಯ ಸಹಾಯಕ ಪ್ರಾಧ್ಯಾಪಕರಾಗಿದ್ದರು. ಹೀಗಾಗಿ, ಪದೋನ್ನತಿ ನೀಡುವಂತೆ ಕೋರಿ ಮನವಿ ಸಲ್ಲಿಸಿದ್ದರು. ಆದರೆ, ಕಿಮ್ಸ್‌ ನಿರ್ದೇಶಕರು ಪದೋನ್ನತಿ ನಿರಾಕರಿಸಿದ್ದಲ್ಲದೇ ಹೊಸ ಪಟ್ಟಿ ಪ್ರಕಟಿಸಿದ್ದರು. ಪದೋನ್ನತಿ ನಿರಾಕರಣೆ ಮತ್ತು ಹೊಸ ಪಟ್ಟಿ ಪ್ರಕಟಿಸಿದ ಕ್ರಮವನ್ನು ಪ್ರಶ್ನಿಸಿ ಡಾ.ದಮಯಂತಿ ಹೈಕೋರ್ಟನಲ್ಲಿ ರಿಟ್‌ ಅರ್ಜಿ ದಾಖಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿ ಜ್ಯೇಷ್ಠತಾ ಪಟ್ಟಿಗೆ ಕಳೆದ ಜನವರಿ 9 ರಂದು ಏಕಸದಸ್ಯಪೀಠ ಮಧ್ಯಂತರ ತಡೆ ನೀಡಿತ್ತು. ತಡೆಯಾಜ್ಞೆ ಜಾರಿಯಲ್ಲಿರುವಾಗಲೇ ಡಾ.ದಮಯಂತಿ ಅವರ ಸೇವಾ ಜ್ಯೇಷ್ಠತಾ ಕಡೆಗಣಿಸಿ ಮತ್ತೊಮ್ಮೆ ಜ್ಯೇಷ್ಠತಾ ಪಟ್ಟಿ ಪ್ರಕಟಿಸಿದ್ದ ನಿರ್ದೇಶಕರ ಕ್ರಮದ ವಿರುದ್ಧ ನ್ಯಾಯಾಂಗ ನಿಂದನೆ ಎಂದು ದೂರು ದಾಖಲಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry