ಸ್ಪರ್ಧಿಸಿದ್ದು 94, ಠೇವಣಿ ಉಳಿದದ್ದು 17 ಮಂದಿಯದ್ದು ಮಾತ್ರ..!

7
2013 ವಿಧಾನಸಭಾ ಚುನಾವಣೆ: ಹಲವು ಮಾಜಿ ಶಾಸಕರದ್ದೂ ಸೇರಿ ಸ್ಪರ್ಧಿಸಿದ್ದ ಎಲ್ಲ ಪಕ್ಷೇತರರ ಠೇವಣಿ ನಷ್ಟ

ಸ್ಪರ್ಧಿಸಿದ್ದು 94, ಠೇವಣಿ ಉಳಿದದ್ದು 17 ಮಂದಿಯದ್ದು ಮಾತ್ರ..!

Published:
Updated:

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಗೆ 2013ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಒಟ್ಟು 94 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅದರಲ್ಲಿ, 17 ಮಂದಿ ಮಾತ್ರ ಠೇವಣಿ ಉಳಿಸಿಕೊಂಡಿದ್ದಾರೆ. ಮಾಜಿ ಶಾಸಕರು, ವಿವಿಧ ಪಕ್ಷಗಳಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಮಾತ್ರವಲ್ಲ, ಪಕ್ಷೇತರರೂ ಪಟ್ಟಿಯಲ್ಲಿದ್ದಾರೆ.ಹುಬ್ಬಳ್ಳಿ– ಧಾರವಾಡ ಸೆಂಟ್ರಲ್‌ ಕ್ಷೇತ್ರದಲ್ಲಿ 19 ಮಂದಿ ಸ್ಪರ್ಧಿಸಿದ್ದರು. ಏಳು ಮಂದಿ ವಿವಿಧ ಪಕ್ಷಗಳಿಂದ ಸ್ಪರ್ಧಿಸಿದ್ದರೆ, 12 ಮಂದಿ ಪಕ್ಷೇತರರು ಕಣದಲ್ಲಿದ್ದರು. ಬಿಜೆಪಿಯ ಜಗದೀಶ ಶೆಟ್ಟರ್, ಕಾಂಗ್ರೆಸ್‌ ಮಹೇಶ ನಾಲವಾಡ ಮಾತ್ರ ಠೇವಣಿ ಉಳಿಸಿಕೊಂಡಿದ್ದು, ಉಳಿದವರ ಠೇವಣಿ ನಷ್ಟವಾಗಿತ್ತು.

ಹುಬ್ಬಳ್ಳಿ–ಧಾರವಾಡ ಪೂರ್ವ ಕ್ಷೇತ್ರದಲ್ಲಿ 9 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಏಳು ಮಂದಿ ವಿವಿಧ ಪಕ್ಷಗಳಿಂದ ಸ್ಪರ್ಧಿಸಿದ್ದರೆ, ಇಬ್ಬರು ಪಕ್ಷೇತರರು ಕಣದಲ್ಲಿದ್ದರು. ಕಾಂಗ್ರೆಸ್‌ನ ಪ್ರಸಾದ ಅಬ್ಬಯ್ಯ, ಬಿಜೆಪಿಯ ವೀರಭದ್ರಪ್ಪ ಹಾಲಹರವಿ, ಕೆಜೆಪಿಯಿಂದ ಸ್ಪರ್ಧಿಸಿದ್ದ ಶಂಕರಪ್ಪ ಬಿಜವಾಡ ಠೇವಣಿ ಉಳಿಸಿಕೊಂಡರೆ, ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ ಹನುಮಂತಪ್ಪ ಆಲ್ಕೋಡ ಸೇರಿದಂತೆ ಉಳಿದವರೆಲ್ಲರೂ ಠೇವಣಿ ಕಳೆದುಕೊಂಡಿದ್ದರು.

ಹುಬ್ಬಳ್ಳಿ–ಧಾರವಾಡ ಸೆಂಟ್ರಲ್‌ ಕ್ಷೇತ್ರದಲ್ಲಿ 18 ಮಂದಿ ಸ್ಪರ್ಧಿಸಿದ್ದರು. ಹತ್ತು ಮಂದಿ ವಿವಿಧ ಪಕ್ಷಗಳಿಂದ ಸ್ಪರ್ಧಿಸಿದ್ದರೆ, ಎಂಟು ಮಂದಿ ಪಕ್ಷೇತರರಾಗಿದ್ದರು. ಬಿಜೆಪಿಯ ಅರವಿಂದ ಬೆಲ್ಲದ, ಕಾಂಗ್ರೆಸ್‌ನ ಎಸ್‌.ಆರ್‌. ಮೋರೆ, ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮೊಹಮ್ಮದ್‌ ಇಸ್ಮಾಯಿಲ್ ತಮಟಗಾರ ಠೇವಣಿ ಉಳಿಸಿಕೊಂಡರೆ, ಕೆಜೆಪಿಯಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ ಮೋಹನ ಲಿಂಬಿಕಾಯಿ ಸೇರಿದಂತೆ 15 ಮಂದಿ ಠೇವಣಿ ಕಳೆದುಕೊಂಡಿದ್ದರು.

ಕಲಘಟಗಿ ಕ್ಷೇತ್ರದಿಂದ 8 ಮಂದಿ ಸ್ಪರ್ಧಿಸಿದ್ದರು. ಐವರು ವಿವಿಧ ಪಕ್ಷಗಳಿಂದ, ಮೂವರು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಕಾಂಗ್ರೆಸ್‌ನ ಸಂತೋಷ ಲಾಡ್‌, ಕೆಜೆಪಿಯ ಸಿ.ಎಂ. ನಿಂಬಣ್ಣವರ ಠೇವಣಿ ಉಳಿಸಿಕೊಂಡರೆ, ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ ಪಿ.ಸಿ. ಸಿದ್ಧನಗೌಡರ, ಬಿಜೆಪಿಯಿಂದ ಸ್ಪರ್ಧಿಸಿದ್ದ ಈರಪ್ಪ ಸಾಲಗಾರ ಸೇರಿದಂತೆ ಉಳಿದವರ ಠೇವಣಿ ನಷ್ಟವಾಗಿತ್ತು.

ಧಾರವಾಡ ಕ್ಷೇತ್ರದಿಂಂದ 13 ಮಂದಿ ಸ್ಪರ್ಧಿಸಿದ್ದರು. ಕಾಂಗ್ರೆಸ್‌ನ ವಿನಯ ಕುಲಕರ್ಣಿ, ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಅಮೃತ ದೇಸಾಯಿ ಠೇವಣಿ ಉಳಿಸಿಕೊಂಡಿದ್ದರೆ, ಬಿಜೆಪಿಯಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ ಸೀಮಾ ಮಸೂತಿ ಸೇರಿದಂತೆ ಉಳಿದವರೆಲ್ಲ ಠೇವಣಿ ಕಳೆದುಕೊಂಡಿದ್ದರು.

ಕುಂದಗೋಳ ಕ್ಷೇತ್ರದಿಂದ 11 ಮಂದಿ ಸ್ಪರ್ಧಿಸಿದ್ದರು. ಕಾಂಗ್ರೆಸ್‌ನ ಸಿ.ಎಸ್‌. ಶಿವಳ್ಳಿ, ಬಿಜೆಪಿಯ ಎಂ.ಆರ್‌. ಪಾಟೀಲ, ಕೆಜೆಪಿ ಎಸ್‌.ಐ. ಚಿಕ್ಕನಗೌಡ್ರ ಠೇವಣಿ ಉಳಿಸಿಕೊಂಡರೆ, ಉಳಿದವರು ಠೇವಣಿ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದರು.

ನವಲಗುಂದ ಕ್ಷೇತ್ರದಿಂದ 16 ಮಂದಿ ಸ್ಪರ್ಧಿಸಿದ್ದರು. ಜೆಡಿಎಸ್‌ನ ಎನ್‌.ಎಚ್. ಕೋನರಡ್ಡಿ, ಬಿಜೆಪಿಯ ಶಂಕರ ಪಾಟೀಲ ಮುನೇನಕೊಪ್ಪ, ಕಾಂಗ್ರೆಸ್‌ನ ಕೆ.ಎನ್‌. ಗಡ್ಡಿ ಠೇವಣಿ ಉಳಿಸಿಕೊಂಡಿದ್ದರೆ, ಕೆಜಿಪಿಯಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ ಆರ್‌. ಶಿರಿಯಣ್ಣವರ ಸೇರಿದಂತೆ ಉಳಿದವರೆಲ್ಲ ಠೇವಣಿ ಕಳೆದುಕೊಂಡಿದ್ದರು. ಎಲ್ಲ 41 ಮಂದಿ ಪಕ್ಷೇತರ ಅಭ್ಯರ್ಥಿಗಳ ಠೇವಣಿ ನಷ್ಟವಾಗಿತ್ತು ಎಂಬುದು ಗಮನಾರ್ಹ.

ಠೇವಣಿ ಉಳಿಯಲು ಎಷ್ಟು ಮತ ಪಡೆಯಬೇಕು  :

ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಯೊಬ್ಬರ ಠೇವಣಿ ಉಳಿಯಬೇಕು ಎಂದರೆ ಒಟ್ಟು ಚಲಾವಣೆಯಾದ ಮತದಲ್ಲಿ ಒಂದನೇ ಆರರಷ್ಟು ಮತಗಳನ್ನು ಕಡ್ಡಾಯವಾಗಿ ಪಡೆಯಬೇಕು. ಉದಾಹರಣೆಗೆ 1 ಲಕ್ಷ ಮತ ಚಲಾವಣೆಯಾಗಿದ್ದರೆ, 16,666 ಮತ ಪಡೆದರೆ ಮಾತ್ರ ಠೇವಣಿ ಉಳಿಯುತ್ತದೆ.ಸಾಮಾನ್ಯ ಅಭ್ಯರ್ಥಿಗೆ ₹ 10, 000 ಹಾಗೂ ಎಸ್‌ಸಿ, ಎಸ್‌ಟಿ ಅಭ್ಯರ್ಥಿಗೆ ₹ 5,000 ಠೇವಣಿ ಇದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry