7
ಎರಡರ ಪೈಕಿ ಒಂದು ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ

ಶಿರೂರ ಗ್ರಾಮಸ್ಥರ ಪರದಾಟ

Published:
Updated:
ಶಿರೂರ ಗ್ರಾಮಸ್ಥರ ಪರದಾಟ

ಕುಂದಗೋಳ: ತಾಲ್ಲೂಕಿನ ಶಿರೂರ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿರುವುದರಿಂದ ಗ್ರಾಮಸ್ಥರು ಕುಡಿಯುವ ನೀರಿಗೆ ಪರದಾಡುವಂತಾಗಿದೆ.ಸುಮಾರು 5 ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ನಿತ್ಯ ಬಳಕೆ ನೀರಿಗಾಗಿ 3 ಕೊಳವೆ ಬಾವಿಗಳಿವೆ. ಆದರೆ, ಕೊಳವೆಬಾವಿ ನೀರು ಸವಳಾಗಿರುವುದರಿಂದ  ಕುಡಿಯಲು ಯೋಗ್ಯವಿಲ್ಲ. ಕುಡಿಯುವುದಕ್ಕಾಗಿ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದವು. ಆದರೆ, ಕಳೆದ ಒಂದು ವಾರದಿಂದ ಒಂದು ಘಟಕ ಸ್ಥಗಿತಗೊಂಡಿದ್ದರಿಂದ, ಕಾರ್ಯ ನಿರ್ವಹಿಸುವ ಇನ್ನೊಂದು ಘಟಕವನ್ನೇ ಗ್ರಾಮಸ್ಥರು ಆಶ್ರಯಿಸಬೇಕಾಗಿದ್ದು, ದೆ. ಹೀಗಾಗಿ ಗ್ರಾಮಸ್ಥರಿಗೆ ಕುಡಿಯುವ ನೀರು ಸಮರ್ಪಕವಾಗಿ ಸಿಗುತ್ತಿಲ್ಲ. ಪಕ್ಕದ ಸಂಶಿ ಹಾಗೂ ಕುಂದಗೋಳ ಪಟ್ಟಣಕ್ಕೆ ಹೋಗಿ ಚಕ್ಕಡಿ, ದ್ವಿಚಕ್ರ ವಾಹನಗಳಲ್ಲಿ ಕುಡಿಯುವ ನೀರು ತರುವ ಪರಿಸ್ಥಿತಿ ಗ್ರಾಮಸ್ಥರದ್ದು.‘ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಾಗುತ್ತಿದ್ದು ಎಷ್ಟು ನೀರು ಕುಡಿದರೂ ದಾಹ ಇಂಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಒಂದು ಘಟಕ ಬಂದಾಗಿ ಎಂಟು ದಿನ ಆಗಿದೆ. ಇನ್ನೊಂದು ನೀರಿನ ಘಟಕದಲ್ಲಿ ಎರಡು ಕೊಡ ನೀರಿಗಾಗಿ ಗಂಟೆಗಟ್ಟಲೆ ಕಾಯಬೇಕು’ ಎಂದು ಗ್ರಾಮಸ್ಥ ಮಾಬುಸಾಬ್‌ ರಾಜೇಖಾನವರ ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಹಗಲಿನಲ್ಲಿ ಕರೆಂಟ್‌ ಇರುವುದಿಲ್ಲ. ಹೀಗಾಗಿ ರಾತ್ರಿಯೇ ಕುಡಿಯುವ ನೀರು ಹಿಡಿದುಕೊಳ್ಳುವ ಪರಿಸ್ಥಿತಿ ಇದೆ. ಬೈಕ್‌, ಇತರ ವಾಹನಗಳನ್ನು ಹೊಂದಿರುವವರು ಪಕ್ಕದ ಸಂಶಿ, ಕುಂದಗೋಳಕ್ಕೆ ಹೋಗಿ ನೀರು ತರ್ತಾರ. ನಮಗೆ ಇರುವ ಒಂದೇ ಘಟಕದಿಂದ ನೀರು ಒಯ್ಯಬೇಕಾದ ಅನಿವಾರ್ಯತೆ ಇದೆ’ ಎಂದೂ ಅವರು ಹೇಳಿದರು. ಶುದ್ಧ ಕುಡಿಯುವ ನೀರಿನ ಘಟಕದ ದುರಸ್ತಿ ಕುರಿತಂತೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿಯ ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಅಧಿಕಾರಿ ಎಸ್‌.ಆರ್‌.ವೀರಕರ, ‘ಘಟಕ ಸ್ಥಗಿತಗೊಂಡಿರುವುದು ನನಗೆ ಸಂಬಂಧಿಸಿದ್ದಲ್ಲ. ಈ ಬಗ್ಗೆ ಗ್ರಾಮ ಪಂಚಾಯಿತಿಯಲ್ಲಿ ವಿಚಾರಿಸಿ’ ಎಂದು ಉತ್ತರಿಸಿದರು.

ಪಿಡಿಒ ಸುನೀಲ್ ಕಾಂಬಳೆ ಪ್ರತಿಕ್ರಿಯಿಸಿ ‘ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ಈ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಿದ್ದು, ಈ ವರೆಗೂ ಕಟ್ಟಡವನ್ನು ಗ್ರಾಮ ಪಂಚಾಯ್ತಿಗೆ ಹಸ್ತಾಂತರಿಸಿಲ್ಲ’ ಎಂದರು.‘ಈ ಮೊದಲು ಎರಡು ಸಲ ಈ ಘಟಕವನ್ನು ಪಂಚಾಯಿತಿಯೇ ದುರಸ್ತಿ ಮಾಡಿತ್ತು. ಆದರೆ ಘಟಕದಲ್ಲಿ ಕಂಡು ಬಂದಿರುವ ತಾಂತ್ರಿಕ ತೊಂದರೆ ದುರಸ್ತಿಗೆ ₹ 80 ಸಾವಿರ ವೆಚ್ಚ ತಗಲುವುದರಿಂದ ನಿಗಮವೇ ಈ ದುರಸ್ತಿ ಕಾರ್ಯವನ್ನು ಮಾಡಬೇಕು’ ಎಂದೂ ಹೇಳಿದರು.

ಅಶೋಕ ಘೋರ್ಪಡೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry